ಪರಾಭವ ಭಾವನಾ – 12 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ಅಪ್ರಮೇಯ ಮತ್ತು ಶಿಷ್ಯರು ನಾಗ ಗಾಂಧಾರಿಯನ್ನು ಬಿಟ್ಟು ವಿಶಾಖಪಟ್ಟಣಕ್ಕೆ ತೆರಳಿದರು. ಎಂದಿನಂತೆ ಪ್ರವಚನ ಕೊಟ್ಟ ಅಪ್ರಮೇಯ ಪುರಂದರ ದಸರಾ ಕೀರ್ತನೆಗಳನ್ನು ಹೊಗಳಿ ಅದರ ಮಹಾತ್ಮೆಯನ್ನು ವಿವರಿಸಿದ. ಅಷ್ಟರಲ್ಲಿ ಕುಖ್ಯಾತ ವಿಗ್ರಹಗಳ ಕಳ್ಳಸಾಗಣೆದಾರ ಫಿಲಿಪ್ ಹೈದರಾಬಾದ್ ಗೆ ಬಂದಿಳಿದ. ಮುಂದೆ…

-ಹನ್ನೆರಡು-

ಹೊಟೇಲ್‌ ‘ದಸಪಲ್ಲಾ’ ಸಾಕಷ್ಟು ದೊಡ್ಡ ಹೊಟೇಲ್.

ಸಂಜೆ ಎಂಟು ದಾಟಿತ್ತು ಅವರು ವೈಝಾಗ್‌ ಅಥವಾ ವಿಶಾಖಪಟ್ಟಣಂ ತಲುಪಿದಾಗ. ಬ್ರಿಟಿಷರು ನಮ್ಮ ದೇಶವನ್ನಾಳುತ್ತಿದ್ದ ಕಾಲದಲ್ಲಿ ವಿಶಾಖಪಟ್ಟಣಂ ಎಂದು ಹೇಳಲು ಅವರ ನಾಲಗೆ ಹೊರಳದಿದ್ದುದರಿಂದ ಬಹುಶಃ ವೈಝಾಗ್‌ ಎಂಬ ತುಂಡು ಹೆಸರನ್ನಿಟ್ಟಿದ್ದಿರಬೇಕು.

ಸೆರಿಂಗ್‌ಪಟ್ಟಾಂ,  ಅಲ್ಲೆಪ್ಪಿ, ಟ್ರಿವೇಂಡ್ರಂ (ಶ್ರೀರಂಗಪಟ್ಟಣ, ಅಲಪ್ಪುಳಾ, ತಿರುವನಂದಪುರಂ) ಇದೇ ರೀತಿಯ ಅಪಭ್ರಂಶಗಳು. ಬಹಳ ಊರುಗಳ ಹೆಸರನ್ನು ಅಧಿಕೃತವಾಗಿ ಮತ್ತೆ ಹಳೆಯ ರೀತಿಗೇ ಬದಲಾಯಿಸಲಾಗಿದೆ, ವಿಶಾಖಪಟ್ಟಣಂ ಕೂಡ ಸೇರಿ!

ರಾತ್ರಿ ಮಲಗಿದಾಗ ಅಪ್ರಮೇಯನಿಗೆ ವಿಚಿತ್ರ ಕನಸು ಬಿದ್ದಿತು. ಅದು ನಿಜವಾಗಿ ನಡೆಯುತ್ತಿರುವುದೇನೋ ಎಂಬಂತೆ ಅನಿಸಿತ್ತವನಿಗೆ ಆ ಕನಸು ಬೀಳುತ್ತಿರುವವರೆಗೂ.

ಅವನು ದನುಷ್ಕೋಟಿಯಲ್ಲಿ ಗುರುಗಳ ಶವವನ್ನು ಎರಡೂ ಕೈಗಳಲ್ಲಿ ಎತ್ತಿಕೊಂಡು ಸಮುದ್ರದೊಳಗೆ ನಡೆಯುತ್ತಾನೆ. ಅಲ್ಲಿ ಅವನಿಗೆ ಮೂರು ಬಣ್ಣದ ಸಮುದ್ರಗಳು ಕಾಣುತ್ತವೆ. ಬಂಗಾಳ ಕೊಲ್ಲಿ, ಇಂಡಿಯನ್‌ ಓಷನ್‌ ಮತ್ತು ಅರಬ್ಬೀ ಸಮುದ್ರ ಮೂರೂ ಇಲ್ಲಿ ಸಂಗಮವಾಗುತ್ತಿವೆ!

ಸುಮಾರು ಒಂದು ಮೈಲಿ ಸಮುದ್ರದೊಳಗೇ ನಡೆದ ಮೇಲೆ ಗುರುಗಳ ಶವಕ್ಕೆ ಜಲಸಮಾಧಿ ನೀಡುತ್ತಾನೆ. ದುಃಖದಿಂದಿದ್ದ ಆ ಸಮಯದಲ್ಲಿ ಬಳೆಗಳನ್ನು ಧರಿಸಿದ್ದ ಕೈಗಳೆರಡು ಅವನನ್ನು ನೀರಿನೊಳಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತವೆ. ಗಾಬರಿಯಿಂದ ಹಿಂದಕ್ಕೆ ತಿರುಗಿದಾಗ ಮುಖವಾಡ ಧರಿಸಿದ ಒಬ್ಬ ಅಪರಿಚಿತ ತನ್ನ ಕೈಲಿದ್ದ ದೊಡ್ಡ ಕತ್ತಿಯನ್ನು ಅಪ್ಪುವಿನ ಕುತ್ತಿಗೆಯ ಕಡೆಗೆ ಬೀಸುತ್ತಾನೆ. ಅವನಿಂದ ತಪ್ಪಿಸಿಕೊಳ್ಳಲು ಬಾಗಿದಾಗ ಎಲ್ಲಿಂದಲೋ ಗುಂಡೊಂದು ಬಂದು ಅವನ ಎದೆಯನ್ನು ಹೊಗುತ್ತದೆ. ನಾರಾಯಣಾ ಎಂದು ಚೀರುತ್ತಾ ಕೆಳಗೆ ಬೀಳವಂತಾದಾಗ ದೃಢವಾದ ಬಾಹುಗಳೆರಡು ಅವನನ್ನು ಎತ್ತಿಕೊಂಡು ಸಮುದ್ರತಟದ ಮೇಲೆ ಮಲಗಿಸುತ್ತದೆ.

ಮಹಾ ಹರಿಭಕ್ತ ಶಿರೋಮಣಿ ಪ್ರಹ್ಲಾದನನ್ನು ಅವನ ತಂದೆಯ ಭಟರು ಬೆಟ್ಟದ ಮೇಲಿನಿಂದ ನೀರಿಗೆ ಎಸೆದಾಗ ಪ್ರಹ್ಲಾದನನ್ನು ತನ್ನೆರಡೂ ಕೈಗಳಿಂದ ಹಿಡಿದು ದಡದಲ್ಲಿ ಮಲಗಿಸಿದ ನಾರಾಯಣನ ಬಾಹುಗಳೇ ತನ್ನನ್ನು ದಡ ಮುಟ್ಟಿಸಿದಂತೆ ಕನಸು ಬಿದ್ದಿತ್ತು.

ಬೆವರುತ್ತಾ ಕಣ್ಣು ಬಿಟ್ಟ ಅಪ್ರಮೇಯ.

ಅವನು ತನ್ನ ರೂಮಿನ ಹಾಸಿಗೆಯ ಮೇಲೇ ಮಲಗಿದ್ದ.

ಆಶ್ರಮದಲ್ಲಿ ಅವನು ಚಾಪೆಯ ಮೇಲೆ ಮಲಗುತ್ತಿದ್ದುದು. ಗುರುಗಳನ್ನೊಮ್ಮೆ ಕೇಳಿದ್ದ. ನಾವು ಹೊರಗಡೆ ಹೋದಾಗ ನಮ್ಮ ಚಾಪೆ, ಕೃಷ್ಣಾಜಿನ ಎಲ್ಲವನ್ನೂ ಒಯ್ಯಬೇಕೇ ಎಂದು.

ಆಗ ಅವನ ಗುರುಗಳಾದ ಕುಮಾರಾನಂದಸ್ವಾಮಿಗಳು ಮುಗುಳ್ನಕ್ಕು, “ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ

ಅರ್ಥಾತ್‌ ಯಾರು ಎಲ್ಲವೂ ದೇವರಿಗೇ ಅರ್ಪಿತ ಎನ್ನುವ ಭಾವದಿಂದ ಅಸಂಗವಾಗಿ ಕರ್ಮವನ್ನು ಮಾಡುತ್ತಿರುವನೋ ಅಂತಹವನಿಗೆ ತಾವರೆ ಎಲೆಯು ನೀರಿನಿಂದ ಒದ್ದೆಯಾಗದೆ ಹೇಗೆ ಇರುತ್ತದೋ ಹಾಗೆಯೇ ಪಾಪದ ಅಂಟಿಲ್ಲದೆ ಇರುವನು. ಹಾಗೆಯೇ ನಾವು ಇರುವ ಜಾಗದಲ್ಲಿ ನಮ್ಮ ದೈನಂದಿನ ಜೀವನದ ವಸ್ತುಗಳಿಲ್ಲದಿದ್ದರೆ ಏನಿದೆಯೋ ಅದನ್ನು ನಮ್ಮದಲ್ಲ ಎಂಬಂತೆ ಅವನ್ನು ಬಳಸಿದರೆ ಅದು ಪಾಪವಲ್ಲ” ಎಂದರು.

ತಕ್ಷಣ ಅಪ್ಪುವಿಗೆ ಶಂಕರ ಭಗವತ್ಪಾದರ ಭಜಗೋವಿಂದಂನ ಒಂದು ಶ್ಲೋಕ ನೆನಪಾಯಿತು.

“ನಲಿನೀದಲಗತಜಮಮತಿತರಲಮ್‌

ತದ್ವಾಜ್ಜೀವಿತಮತಿಶಯಚಪಲಮ್‌

ವಿದ್ಧಿ ವ್ಯಾಧ್ಯಾಭಿಮಾನಗ್ರಸ್ತಂ

ಲೋಕಂ ಶೋಕಹತಂ ಚ ಸಮಸ್ತಂ” ಎಂದು ಹಾಡಿದ.

“ಇದು ಅದೇ ಅರ್ಥವನ್ನು ಸಂಪೂರ್ಣವಾಗಿ ಕೊಡದಿದ್ದರೂ ಪರವಾಗಿಲ್ಲ. ನಾವು ಜಲದ ಬಿಂದುವಿನಂತೆ ಇರಬೇಕು. ಈ ಹಾಸಿಗೆ, ದಿಂಬುಗಳು ನಮಗೆ ಸರಿಹೋಗದಿದ್ದರೂ ನಮ್ಮ ಜೀವನವನ್ನು ಉಳಿಸಿಕೊಳ್ಳಲು ನಮ್ಮ ಧರ್ಮವನ್ನು ನಾಲ್ಕು ಕಡೆ ಹರಡಲು ನಾವು ಎಲ್ಲೆಲ್ಲೋ ಓಡಾಡಬೇಕಾಗುತ್ತದೆ. ಆಗ ಸಂಸಾರವನ್ನು ಕಟ್ಟಿಕೊಂಡಂತೆ ನಮ್ಮ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೊರಟರೆ ಕಾಶಿಗೆ ಹೋಗುವಾಗ ಬೆಕ್ಕನ್ನು ಕಟ್ಟಿಕೊಂಡು ಹೊರಟಂತೆ. ನಮ್ಮ ನಿಯಂತ್ರಣದಲ್ಲಿರುವುದು ನಮ್ಮ ಆಹಾರ ಸೇವನೆ. ಅದನ್ನು ನಾವು ಕಡ್ಡಾಯವಾಗಿ ಮಾಡಬಹುದು. ಎಲ್ಲಿ ಏನು ಸಿಗದಿದ್ದರೂ ಫಲ ಮತ್ತು ಕ್ಷೀರಗಳು ಸಿಗುತ್ತವೆ” ಎಂದಿದ್ದರು. ಇದು ಅವನು ಆಶ್ರಮ ಸೇರಿದ ಹೊಸತರಲ್ಲಿ ನಡೆದಿದ್ದ ಸಂಭಾಷಣೆ.

ಈಗ ವಿಶಾಖಪಟ್ಟಣದ ದಸಪಲ್ಲ ಹೊಟೇಲ್‌ನಲ್ಲಿ ಮಲಗಿದಾಗ ಗುರುಗಳ ಈ ಮಾತುಗಳು ನೆನಪಾದವು.

ಹೌದು, ತಾನು ಈ ಎಲ್ಲ ಸೌಕರ್ಯಗಳಿಗೂ ಅತೀತ. ಉಪಯೋಗಿಸಲೇಬೇಕಾದ ಪರಿಸ್ಥಿತಿ ಬಂದಾಗ ಹೆಚ್ಚು ಕಿರಿಕಿರಿಗೊಳ್ಳದೇ ಬಳಸುತ್ತಾನೆ. ಅನುಕೂಲಗಳಿಲ್ಲದಿದ್ದರೆ ಬೇಸರವಿಲ್ಲ. ಬಹುಶಃ ತಾವರೆ ಎಲೆಯ ಮೇಲಿನ ನೀರಿನ ಹನಿ ಹೇಗೆ ಅದಕ್ಕೆ ಅಂಟದೇ ಇರುವುದೋ ಆ ರೀತಿಯೇ ಇದ್ದ ಅಪ್ಪು.

ಮರುದಿನ ಬೆಳಗ್ಗೆಯೇ ಬಂದಿದ್ದರು ವೈಝಾಗ್‌ನಲ್ಲಿ ಪ್ರವಚನ ಏರ್ಪಡಿಸಿದ್ದವರು.

ಇಂದೇಕೋ ಶ್ರೀಕೃಷ್ಣನು ಅಪ್ರಮೇಯನನ್ನು ಕಾಡುತ್ತಿದ್ದ. ಅವನದೇ ನೆನಪು ಬೆಳಗ್ಗಿನಿಂದ. ಬಹುಶಃ ಆ ಕನಸು ಬಿದ್ದಿದ್ದರಿಂದ ಇರಬಹುದು. ತನ್ನನ್ನು ಭವಸಾಗರದಿಂದ ಎತ್ತಿದ ತೋಳುಗಳ ಬಗ್ಗೆ ನೆನೆಯುತ್ತಾ ಪ್ರವಚನ ನಡೆಯಲಿದ್ದ ಹಾಲ್‌ಗೆ ಕಾರಿನಲ್ಲಿ ಹೊರಟ.

ಇಬ್ಬರು ಶಿಷ್ಯರು ಆರೋಗ್ಯ ಸರಿಯಿಲ್ಲವೆಂದು ನಿಂತುಬಿಟ್ಟರು. ಅವರ ಬಗ್ಗೆ ಅನುಕಂಪ ಉಕ್ಕಿ ಬಂದಿತು ಅಪ್ಪುವಿಗೆ. ಬಹುಶಃ ಈ ನಿರಂತರ ಪ್ರಯಾಣ, ಅಲೆದಾಟ ಅವರಿಗೆ ಆಯಾಸ ಉಂಟುಮಾಡಿ, ಆರೋಗ್ಯವನ್ನು ಒಂದಿಷ್ಟು ಕುಂಠಿತಗೊಳಿಸಿಬಹುದೆಂಬ ಅನುಮಾನ ಬಂದಿತು.

“ನೀವು ವಿಶ್ರಾಂತಿ ತೆಗೆದುಕೊಳ್ಳಿ” ಎಂದವನು ಏನೋ ಆಲೋಚಿಸಿ, “ಉಳಿದ ಇಬ್ಬರು ಕೂಡ ಬರುವುದು ಬೇಡ. ಮಲಗಿದವರಿಗೆ ಏನಾದರೂ ಸಹಾಯ ಬೇಕಾದೀತು. ನಾನು ಒಬ್ಬನೇ ಹೋಗುತ್ತೇನೆ” ಎಂದು ಹೊರಟಿದ್ದ.

ಒಬ್ಬ ಶಿಷ್ಯ ಖುಷಿಯಾಗಿಬಿಟ್ಟ. ಇವತ್ತು ತಾನು ನಾಯಕ್‌ನ ಜೊತೆಗೇ ಮಾತಾಡಿ ಹೇಳಬೇಕು.

ಮತ್ತೊಬ್ಬ ಶಿಷ್ಯ ಗುರುಗಳ ಲಗೇಜು ಪರೀಕ್ಷಿಸಲು ಒಳ್ಳೆಯ ಸಮಯ ಎಂದುಕೊಂಡ.

ಪ್ರವಚನದ ಹಾಲ್‌ ಕಿಕ್ಕಿರಿದು ತುಂಬಿತ್ತು. ಅಪ್ರಮೇಯನಿಗೆ ಇದೇ ಅಚ್ಚರಿ ತರುತ್ತಿದ್ದುದು. ಒಬ್ಬ ಸಿನಿಮಾ ನಟ ಬಂದರೆ ಅಥವಾ ಸಿನಿಮಾ ಗಾಯಕ ಬಂದರೆ ಸೇರುವುದಕ್ಕಿಂತ ಹೆಚ್ಚು ಜನ ತನ್ನ ಪ್ರವಚನಕ್ಕೆ… ಊಹೂಂ… ತನ್ನ ಎಂಬ ಸ್ವಾರ್ಥ ಬೇಡ. ದೇವರ ಹೆಸರು ಕೇಳಲಿಕ್ಕೆ, ಜೊತೆಯಲ್ಲಿ ಅವನ ನಾಮ ಹೇಳಲಿಕ್ಕೆ ಬಂದವರು ಇವರೆಲ್ಲಾ.

“ಸಭೆಗೆ ನಮಸ್ಕಾರ. ನಾನು ಕನ್ನಡದಲ್ಲಿ ಮಾತಾಡುವಷ್ಟು ಚೆನ್ನಾಗಿ ತೆಲುಗು ಮಾತಾಡಲು ಬರುವುದಿಲ್ಲವಾದರೂ ನಿಮಗೆ ಅರ್ಥ ಆಗುವ ಹಾಗೆ ಮಾತಾಡಬಲ್ಲೆ. ಒಂದು ವೇಳೆ ನಿಮಗೆ ನನ್ನ ತೆಲುಗು ಬೇಡವೆನಿಸಿದರೆ, ನಿಮ್ಮಲ್ಲಿ ತೆಲುಗು ಮತ್ತು ಕನ್ನಡ ಚೆನ್ನಾಗಿ ಬಲ್ಲವರು ಮುಂದೆ ಬನ್ನಿ. ಎಲ್ಲಿ ನನ್ನ ತೆಲುಗು ನಿಮಗೆ ಅರ್ಥವಾಗುವುದಿಲ್ಲವೋ ಆಗ ಅವರು ನಿಮಗೆ ನಿಮಗೆ ಅರ್ಥವಾಗುವ ತೆಲುಗಿನಲ್ಲಿ ಹೇಳಲಿ” ಎಂದ.

ಎಲ್ಲರೂ ತಲೆದೂಗಿದರು. ಐವತ್ತರ ಒಬ್ಬ ಗಂಡಸು ಬಂದು ಹತ್ತಿರದಲ್ಲಿ ಕುಳಿತ.

ವೇದಿಕೆಯ ಹಿಂದೆ ಇದ್ದ ಶ್ರೀಕೃಷ್ಣನ ಪಟವನ್ನು ಕಂಡು ಅಪ್ಪುವಿನ ಮುಖದ ಮೇಲೆ ನಗೆ ಹರಡಿತು. ಇದಲ್ಲವೇ ಶುಭಸೂಚನೆ ಎಂದರೆ! ತಾನಿಂದು ಶ್ರೀಕೃಷ್ಣನ ಬಗ್ಗೆ ಮಾತಾಡಲು ಆಲೋಚಿಸಿದ್ದಕ್ಕೂ, ಇಲ್ಲಿ ಕೇವಲ ಒಂದು ದೊಡ್ಡ ಶ್ರೀಕೃಷ್ಣನ ಪಟ ಇರುವುದಕ್ಕೂ ಏನೋ ಅವಿನಾಭಾವ ಬಂಧ!

“ನಮಾಮಿ ನಾರಾಯಣ ಪಾದ ಪಙ್ಕಜಂ

ಕರೋಮಿ ನಾರಾಯಣ ಪೂಜನಂ ಸದಾ

ವದಾಮಿ ನಾರಾಯಣ ನಾಮ ನಿರ್ಮಲಂ

ಸ್ಮರಾಮಿ ನಾರಾಯಣ ತತ್ವಮವ್ಯಯಂ” ಎಂದು ಶುದ್ಧ ಧನ್ಯಾಸಿ ರಾಗದಲ್ಲಿ ಹಾಡಿದ.

“ಎಲ್ಲಿ ನನ್ನ ಜೊತೆ ಹೇಳಿ” ಎಂದು ಹೇಳಿ ಪ್ರತಿ ಸಾಲನ್ನೂ ನಿಧಾನವಾಗಿ ಹಾಡಿದ. ಇಡೀ ಸಭಾಂಗಣವು ಅವನೊಂದಿಗೆ ಈ ಶ್ಲೋಕವನ್ನು ಹೇಳಿತು.

“ಇದು ಕುಲಶೇಖರ ಆಳ್ವಾರ್‌ ವಿರಚಿತ ಮುಕುನ್ದ ಮಾಲೆಯ ಒಂದು ಶ್ಲೋಕ. ಇದರ ಅರ್ಥ ನಾನು ಸದಾ ನಾರಾಯಣನ ಚರಣ ಕಮಲಗಳಿಗೆ ನಮಿಸುತ್ತೇನೆ. ನಾನು ಸದಾ ನಾರಾಯಣನ ಪೂಜೆಯನ್ನು ಮಾಡುತ್ತೇನೆ. ನಾನು ನಾರಾಯಣದ ನಿರ್ಮಲವಾದ ನಾಮವನ್ನು ಸದಾ ಹೇಳುತ್ತೇನೆ. ಅವ್ಯಯನಾದ ನಾರಾಯಣನ ತತ್ವವನ್ನು ಸ್ಮರಿಸುತ್ತೇನೆ ಎಂದಿದ್ದಾರೆ ಕುಲಶೇಖರರು”

“ಗೀತಾಧ್ಯಾನದಲ್ಲಿ ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ಎಂದಿದ್ದಾರೆ ವ್ಯಾಸರು. ವಸುದೇವನ ಮಗ, ಕಂಸ, ಚಾಣೂರರನ್ನು ಕೊಂದವನು, ದೇವಕಿಗೆ ಅತ್ಯಂತ ಆನಂದವನ್ನು ನೀಡಿದವನು. ಇಂತಹ ಜಗದ್ಗುರುವಾದ ಕೃಷ್ಣನಿಗೆ ನನ್ನ ವಂದನೆಗಳು”

“ಅವನು ಜಗದ್ಗುರು ಹೇಗೆ? ಅವನು ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯು ಜೀವನಕ್ಕೆ ಅತಿ ಅವಶ್ಯಕವಾಗಿ ಬೇಕಾದ ಪಾಠ. ಇಂತಹ ಪಾಠವನ್ನು ಜಗತ್ತಿಗೆ ಕೊಟ್ಟವನು ಜಗದ್ಗುರುವಲ್ಲದೇ ಮತ್ತೇನು?”

ಹೀಗೆ ಅನೇಕ ವಿಷಯಗಳನ್ನು ಹೇಳುತ್ತಾ ಹೋದ ಅಪ್ರಮೇಯ.

ನಡುವೆ ಜನರಿಗೆ ಬೇಸರವಾಗದಿರಲು “ನಿಮಗೆ ಎಚ್ಚರ ಮಾಡಲು ಒಂದು ಭಜನೆ ಮಾಡೋಣ” ಎಂದು ನಗುತ್ತಾ ಹೇಳಿ “ಕೃಷ್ಣ ಕೃಷ್ಣ ಮುಕುಂದಾ ಜನಾರ್ದನಾ ಕೃಷ್ಣ ಗೋವಿಂದ ನಾರಾಯಣ ಹರೀ ಅಚ್ಯುತಾನಂತ ಗೋವಿಂದ ಮಾಧವಾ ಸಚ್ಚಿದಾನಂದ ನಾರಾಯಣ ಹರಿ” ಎಂದು ಒಮ್ಮೆ ಹೇಳಿ “ಎಲ್ಲರೂ ನನ್ನ ಜೊತೆಗೆ ಹಾಡಿ” ಎಂದು ಹಾಡಿಸಿದ.

ಸುಮಾರು ಹನ್ನೆರಡವರೆಗೂ ನಡೆದಿತ್ತು ಅಪ್ರಮೇಯನ ಪ್ರವಚನ. ನಡುನಡುವೆ ಶ್ಲೋಕ, ಮಧ್ಯೆ ಮಧ್ಯೆ ಹಾಡು, ಮಾತು. ಕೆಲವೊಮ್ಮೆ ಕೆಲವು ಮಕ್ಕಳನ್ನು ಕರೆದು ವೇದಿಕೆಯ ಮೇಲೆ ನಿಲ್ಲಿಸಿ ಹಾಡೆನ್ನುತ್ತಿದ್ದ.

ಆ ಸಮಯದಲ್ಲಿ ಇಂಟರ್‌ಪೋಲ್‌ ಏಜೆಂಟ್‌ ಸ್ಯಾಮ್‌ ವೈಝಾಗ್‌ ವಿಮಾನ ನಿಲ್ದಾಣದಿಂದ ಹೊಟೇಲ್‌ ದಸಪಲ್ಲಾಗೆ ಕ್ಯಾಬ್‌ನಲ್ಲಿ ಬರುತ್ತಿದ್ದ.

ಅವನು ಬಂದ ನಂತರ ಏನಾಗುವುದೋ ಈಗಲೇ ಹೇಳಲಾಗದು.

“ಭಗವಂತನ ನಾಮಸ್ಮರಣೆ ಬಹಳ ಮುಖ್ಯ. ಮಹಾಭಾರತದಲ್ಲಿ ಭೀಷ್ಮರು ಶರಶಯ್ಯೆಯಲ್ಲಿ ಮಲಗಿದ್ದಾಗ ಅವರನ್ನು ನೋಡಲು ಬಂದ ಶ್ರೀಕೃಷ್ಣನ ಸಮಕ್ಷಮದಲ್ಲೇ ಶ್ರೀವಿಷ್ಣು ಸಹಸ್ರನಾಮ ಪಠಿಸಿದರು.

ಯುದ್ಧ ಮಾಡಲು ಹಿಮೆಟ್ಟಿದ್ದ ಅರ್ಜುನನ ಮನಸ್ಸಿನ ವಿಷಾದವನ್ನು ಹೊಡೆದೋಡಿಸಿ ಭಗವದ್ಗೀತೆಯ ಮೂಲಕ ಅವನಿಗೆ ಕರ್ಮ, ಭಕ್ತಿ ಮತ್ತು ಜ್ಞಾನ ಯೋಗಗಳ ಬಗ್ಗೆ ಹೇಳಿದ ಶ್ರೀಕೃಷ್ಣ. ಮಹಾಭಾರತದ ಯುದ್ಧ ಮುಗಿದು ಕೃಷ್ಣ ಇನ್ನೇನು ದ್ವಾರಕೆಗೆ ಹಿಂದಿರುಗಲಿದ್ದಾಗ ನನಗೆ ಭಗವದ್ಗೀತೆ ಮರೆತುಹೋಗಿದೆ, ಮತ್ತೊಮ್ಮೆ ಹೇಳು ಕೃಷ್ಣಾ ಎನ್ನುತ್ತಾರೆ ಅರ್ಜುನ. ಅಯ್ಯೋ ದಡ್ಡ ಅರ್ಜುನಾ, ಆ ಗುಹ್ಯ ಪಾಠವನ್ನು ನಾನೇ ಮತ್ತೊಮ್ಮೆ ಹೇಳಲಾರೆ ಎಂದು ಭಗವದ್ಗೀತೆಯನ್ನು ಅನುಸರಿಸಿದ ಅನುಗೀತೆಯನ್ನು ಹೇಳುತ್ತಾನೆ ಕೃಷ್ಣ. ಈ ಸಲ ಗಂಡ ಹೆಂಡತಿಯ ಸಂವಾದ, ಗುರು ಶಿಷ್ಯರ ಸಂವಾದ ಇತ್ಯಾದಿ ರೂಪಗಳಲ್ಲಿ ಗೀತೆಯನ್ನು ಬೇರೆ ರೀತಿ ಹೇಳುತ್ತಾನೆ.

ದ್ವಾಪರಯುಗ ಇನ್ನೇನು ಮುಗಿಯಲಿದ್ದಾಗ ತನ್ನ ಅವತಾರ ಸಮಾಪ್ತಕ್ಕೆ ಮೊದಲು ಶ್ರೀಕೃಷ್ಣ ಯಾದವರಲ್ಲಿ ಒಬ್ಬನಾದ ಉದ್ಧವನನ್ನು ಕರೆದು ʼನೀನು ಇಲ್ಲಿಂದ ಹೊರಟುಬಿಡು. ಯಾದವೀ ಕಲಹ ನಡೆದು ಎಲ್ಲರೂ ನಾಶವಾಗುತ್ತಾರೆ. ನಿನಗೊಂದು ಉಪದೇಶ ಮಾಡುತ್ತೇನೆ. ಇದನ್ನು ನೀನು ಜನರಿಗೆ ಹಂಚುʼ ಎಂದು ಹೇಳಿದ ಉಪದೇಶವೇ ಉದ್ಧವ ಗೀತೆ. ಇದರಲ್ಲಿ ತತ್ವವಿದೆ, ಮಹೋನ್ನತ ಕವಿತೆಗಳಿವೆ, ಹೇಗೆ ಜೀವಿಸಬೇಕೆಂಬ ಮಾರ್ಗದರ್ಶನವಿದೆ. ಪಾರಮಾರ್ಥಿಕವಾಗಿ ಹೇಗೆ ಉದ್ಧಾರವಾಗಬಹುದೆಂಬ ಪ್ರಜ್ಞೆಯ ಬಗ್ಗೆ ವಿವರವಿದೆ” ಎಂದ ಅಪ್ಪು.

“ಸ್ವಾಮೀ… ನಮಗೆ ಕೇವಲ ಒಂದೆರಡು ವಾಕ್ಯಗಳಲ್ಲಿ ಉದ್ಧವ ಗೀತೆಯ ಬಗ್ಗೆ ಹೇಳುವಿರಾ?” ಎಂದು ಕೇಳಿದರೊಬ್ಬ ಅರವತ್ತರ ವಯಸ್ಸಿನವರು.

“ಇದು ಭಾಗವತದ ೧೧ನೇ ಸ್ಕಂದದ ೬ರಿಂದ ೨೯ನೇ ಅಧ್ಯಾಯದವರೆಗೂ ವಿವರಿಸಲ್ಪಟ್ಟಿದೆ. ಒಂದು ಕಡೆ ಭಗವಂತ ಯಾರು ಒಳ್ಳೆಯತನವೇ ಮೈವೆತ್ತಂತವರು, ಧರ್ಮಿಷ್ಠರು ನನ್ನ ಮೇಲೆಯೇ ಕೇಂದ್ರೀಕರಿಸುವರೋ ಅವರು ಹಸಿವು, ಬಾಯಾರಿಕೆ, ಗೊಂದಲ, ಆರೋಗ್ಯಹೀನತೆ, ದುಃಖ  ಮತ್ತು ಸಾವು ಎಂಬ ಈ ಆರು ಅಲೆಗಳಿಂದ ಮುಕ್ತರಾಗಿ ಪರಿಶುದ್ಧ ಅಸ್ತಿತ್ವವನ್ನು ಹೊಂದುತ್ತಾರೆ” ಎಂದು ತನ್ನ ಪ್ರವಚನ ಮುಗಿಸಿದ ಅಪ್ಪು “ಕೊನೆಯ ಮಾತು ಹೇಳುತ್ತೇನೆ. ನಾನು ನಿಮಗೆ ಕೊಟ್ಟಿರುವುದು ಒಂದು ಚಮಚೆಯಷ್ಟು ವಿಷಯ. ನೀವು ಆ ವಿಷಯವಾಗಿ ಎಷ್ಟು ಬೇಕೋ ಅಷ್ಟು ಗಹನವಾಗಿ ಅಭ್ಯಾಸ ಮಾಡಬಹುದು” ಎಂದು ಹೇಳಿ ನಂತರ ಕಣ್ಮುಚ್ಚಿ

“ಕೃಷ್ಣಾಯ ವಾಸುದೇವಾಯ

ದೇವಕೀ ನಂದನಾಯಚ

ನಂದಗೋಪ ಕುಮಾರಾಯ

ಶ್ರೀಕೃಷ್ಣಾಯ ಮಂಗಳಂ” ಎಂದು ರಾಗವಾಗಿ ಹಾಡಿದ.

ಅವನ ಮನಸ್ಸು ಒಂದು ರೀತಿ ಶಾಂತವಾಗಿತ್ತು.

ವ್ಯವಸ್ಥಾಪಕರು ಶಾಲು ಹೊದೆಸುವೆನೆಂದೂ, ಹಾರ ಹಾಕುವೆವೆಂದೂ ಅಂದಾಗ ಅವನ್ನು ನಿರಾಕರಿಸಿ, ಹಣ್ಣುಗಳ ಬುಟ್ಟಿಯೊಂದನ್ನು ಮಾತ್ರ ಪ್ರೀತಿಯಿಂದ ಸ್ವೀಕರಿಸಿದ.

“ಇಲ್ಲಿ ಇರುವ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೇಗೆ ಹೋಗಬೇಕು?” ಎಂದು ಕೇಳಿದ ಅಪ್ಪು.

“ಓ, ಅಲ್ಲಿಗೆ ನಾನೇ ಕರೆದೊಯ್ಯುವೆ” ಎಂದು ವ್ಯವಸ್ಥಾಪಕ ತನ್ನ ಕಾರು ಹತ್ತಲು ಅಪ್ಪುವಿಗೆ ಸಹಾಯ ಮಾಡಿ ತಾನು ಕಾರು ನಡೆಸಿದ.

ಕೃಷ್ಣನ ದೇವಸ್ಥಾನ ಸಾಕಷ್ಟು ದೊಡ್ಡದಾಗಿತ್ತು.  ರಾಧಾ ದಾಮೋದರರ ವಿಗ್ರಹಗಳು ಬಿಳಿಯ ಶಿಲೆಯಲ್ಲಿ ಮಾಡಲ್ಪಟ್ಟಿದ್ದು ಬಹಳ ಮನೋಹರವಾಗಿದ್ದವು. ದಾಮ ಎಂದರೆ ಹಗ್ಗ. ಉದರ ಎಂದರೆ ಹೊಟ್ಟೆ. ಯಶೋದೆ ಹಗ್ಗವನ್ನು ತುಂಟಕೃಷ್ಣನ ಹೊಟ್ಟೆಗೆ ಕಟ್ಟಿಹಾಕಿದ್ದರಿಂದ ಅವನಿಗೆ ದಾಮೋದರನೆಂದು ಹೆಸರು ಎಂದು ನೆನೆದ ಅಪ್ರಮೇಯ.

ದಸಪಲ್ಲಾ ಹೊಟೇಲ್‌ಗೆ ವಾಪಸ್‌ ಬಂದಾಗ ಅಪ್ಪುವಿಗೆ ಎದುರಾಗಿ ಒಬ್ಬ ಆಕರ್ಷಕ ಯುವಕ ಬಂದ. ಸುಮಾರು ಮೂವತ್ತರ ವಯಸ್ಸು. ಕಪ್ಪಗಿನ ಮಿರಮಿರ ಮಿಂಚುವ ಗುಂಗುರು ಕೂದಲು, ಕ್ಲೀನ್‌ ಶೇವ್‌ ಆಗಿದ್ದ ಮುಖ, ಸ್ವಲ್ಪ ಶ್ಯಾಮಲ ವರ್ಣ, ಆರಡಿ ಎತ್ತರ, ಉದ್ದನೆಯ ಮೂಗು, ನೀಟಾಗಿದ್ದ ಸೂಟ್…‌

ಅಪ್ಪುವಿಗೆ ಅವನನ್ನು ಕಂಡು ಆಧುನಿಕ ವೇಷದಲ್ಲಿರುವ ಕೃಷ್ಣನಂತೆ ತೋರಿತು. ಕೊಳಲೊಂದೇ  ಇಲ್ಲ ಎಂದುಕೊಂಡು ಮುಗುಳ್ನಕ್ಕ.

ಏನಾಗಿದೆ ತನಗೆ? ಹೀಗೆಲ್ಲಾ ಏಕೆ ಯೋಚಿಸುತ್ತಿದ್ದೇನೆ?

ಕೃಷ್ಣ ಧ್ಯಾನ, ಕೃಷ್ಣ ಪ್ರವಚನ, ಕೃಷ್ಣ ದರ್ಶನ ತನ್ನನ್ನು ಈ ಪರಿಸ್ಥಿತಿಗೆ ತಂದಿರಬೇಕು ಎಂದು ಮತ್ತೆ ಮುಗುಳ್ನಕ್ಕಾಗ “ನಮಸ್ತೇ ಸ್ವಾಮೀ” ಎಂದ ಆ ಯುವಕ. ಅವನ ಗಂಭೀರವಾದ ಆಳವಾದ ಧ್ವನಿಯನ್ನು ಕೇಳಿ, ಅವನ ನಗುವ ಕಣ್ಣುಗಳನ್ನು ಕಂಡು ತಾನೂ ಮುಗುಳ್ನಗದೇ ಇರಲಾಗಲಿಲ್ಲ ಅಪ್ರಮೇಯನಿಗೆ.

“ನಮಸ್ಕಾರ” ಎಂದು ಹೇಳಿ ತನ್ನ ರೂಮಿನತ್ತ ಹೊರಟುಹೋದ ಅಪ್ಪು.

ಅವನನ್ನೇ ಸಾಲೋಚನಾಭರಿತನಾಗಿ ನೋಡುತ್ತ ನಿಂತ ಈ ಯುವಕ.

ಇತ್ತ ನಾಗ ಗಾಂಧಾರಿ ಉರಿಯುತ್ತಿದ್ದಳು.

ಅವಳಿಗೆ ಹೊಟೇಲ್‌ ಬೋರ್ಡ್‌ನಿಂದ ಲ್ಯಾಂಡ್‌ಲೈನಿಗೆ ಫೋನ್‌ ಬಂದಿತ್ತು.

“ನಮಸ್ಕಾರ ಮೇಡಂ. ನಾನು ಅಪ್ಪೂ ಸ್ವಾಮಿಯ ಶಿಷ್ಯ” ಎಂದಿತೊಂದು ಧ್ವನಿ.

“ಯಾರು ನಾಲ್ಕು ಜನರಲ್ಲಿ?” ಎಂದಳು.

“ಅದು ನಿಮಗೆ ಬೇಕಿಲ್ಲ” ಎಂದವನು ಅವಳಿಗೆ ಸಿಟ್ಟು ಹತ್ತಿರಬಹುದೆಂಬ ಅರಿವಾಗದೇ “ನನಗೆ ನಿಮ್ಮಿಂದ ಒಂದು ಸಹಾಯ ಬೇಕು. ಆದರೆ ಅಪ್ಪೂ ಸ್ವಾಮಿಗೆ ಆ ವಿಷಯ ತಿಳಿಯಕೂಡದು” ಎಂದ.

ಸಿಟ್ಟಿನಿಂದ ಫೋನಿಡಹೋದವಳು ಕುತೂಹಲದಿಂದ “ಏನು ಸಹಾಯ? ಸ್ವಾಮಿಗೆ ಯಾಕೆ ಗೊತ್ತಾಗಕೂಡದು?” ಎಂದಳು.

“ನಿಮಗೆ ಬಹೂತ್‌ ದುಡ್ಡು ಸಿಕ್ತದೆ” ಎಂದ ಕ್ಲುಪ್ತವಾಗಿ.

“ಓಹೋ… ಏನು ಮಾಡಬೇಕು ನಾನು?” ಎಂದಳು ಕಿರಿಕಿರಿಗೊಳ್ಳುತ್ತಲೇ.

“ಅಪ್ಪೂ ಸ್ವಾಮೀ ಹತ್ತಿರ ಇರೋ ವಿಗ್ರಹಗಳನ್ನು ಕದ್ದು ನನಗೆ ಕೊಡಬೇಕು” ಎಂದ.

ನಾಗ ಗಾಂಧಾರಿ ಉತ್ತರಿಸುವ ಮೊದಲೇ ಫೋನ್‌ ಲೈನ್‌ ಕಟ್‌ ಆಗಿತ್ತು!

ಮುಂದುವರೆಯುವುದು…

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *