ಪರಾಭವ ಭಾವನಾ – 19 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ಫಿಲಿಪ್‌ ನ ಸಹಚರರಿಗೆ ಎಷ್ಟು ಹುಡುಕಿದರೂ ಅಪ್ರಮೇಯನ ಹತ್ತಿರವಿದ್ದ ವಿಗ್ರಹಗಳನ್ನು ಪತ್ತೆಹಚ್ಚಲಾಗಿಲ್ಲ ಅಷ್ಟೇಕೆ ಇಂಟರ್‌ಪೋಲ್‌ ಅಧಿಕಾರಿಯಾದ ಶ್ಯಾಮ್ ಗೆ ಕೂಡ. ಅಪ್ರಮೇಯನನ್ನು ಕೊಲ್ಲುವುದು ಸುಲಭವಲ್ಲ ಎಂದು ಫಿಲಿಪ್ ನಿಗೆ ಅರ್ಥವಾಗಿದೆ. ಇತ್ತ ಅಪ್ರಮೇಯನೂ ಮಾನಸಿಕವಾಗಿ ಸಾವಿಗೆ ಸಿದ್ಧನಾಗಿದ್ದಾನೆ. ಮುಂದೆ…

–ಹತ್ತೊಂಬತ್ತು–

ನಾಯಕ್‌ ಶತಪಥ ತಿರುಗುತ್ತಿದ್ದ. ಅವನಿಗೆ ಆಲ್ಬೆರ್ತೋ ಗಾರ್ಸಿಯಾನ ಹಣವನ್ನು ಮರಳಿಸುವ ವಿಷಯದಲ್ಲಿ ಚಿಂತೆ ಹತ್ತಿತ್ತು. ಫಿಲಿಪ್‌ ಸ್ಟೋನ್‌ಬ್ರಿಡ್ಜ್‌ ಇಂಗ್ಲೆಂಡಿನಿಂದ ಬಂದಿದ್ದೇನೋ ಹೌದು. ಅವನ ಜೊತೆಗೆ ತನ್ನ ಗುಂಪಿನ ಅತ್ಯಂತ ಚಾಲಾಕಿ ಹೆಣ್ಣು ನೀಲಂ ಕೂಡ ಇರುವುದೂ ಹೌದು. ಆದರೆ ಇದುವರೆಗೆ ಒಬ್ಬ ಸನ್ಯಾಸಿಯ ಬಳಿ ಇರುವ ಮೂರು ವಿಗ್ರಹಗಳನ್ನು ಸೆಳೆದುಕೊಳ್ಳುವುದಕ್ಕಾಗಿಲ್ಲವಲ್ಲಾ!

ಪುಣ್ಯವೇನೆಂದರೆ ಆಲ್ಬೆರ್ತೋ ಗ್ರಾಸಿಯಾ ತನ್ನ ದೇಶ ಬಿಟ್ಟು ಹೊರಗೆ ಬರಲಾರ. ಅವನ ಪಾಸ್‌ಪೋರ್ಟನ್ನು ಅವನ ದೇಶ ಮುಟ್ಟುಗೋಲು ಹಾಕಿದೆ. ಆದರೂ ಅವನು ತಾನಿರುವ ಜಾಗಕ್ಕೆ ಕಿರೀಟವಿಲ್ಲದ ರಾಜನಂತಿದ್ದ. ಆದರೆ ಅವನು ಬರದಿದ್ದರೂ ಅವನ ಗುಂಪಿನ ಬಾಡಿಗೆ ಹಂತಕರನ್ನು ಕಳಿಸಿ ತನ್ನನ್ನು ಮುಗಿಸಲು ಹೆಚ್ಚು ದಿನ ಬೇಕಿಲ್ಲ.

ಈ ಫಿಲಿಪ್‌ ಯಾಕೆ ಇನ್ನೂ ಆ ಸ್ವಾಮಿಯ ಬಳಿಗೆ ತಲುಪಿಲ್ಲ?

ನೀಲಂಗೆ ಫೋನ್‌ ಮಾಡಿದ ನಾಯಕ್.‌

“ಹೊರಟಿದ್ದೇವೆ ಮಿ. ನಾಯಕ್!‌ ಆದರೆ ಒಂದು ಸಮಸ್ಯೆ ಬಂದಿದೆ” ಎಂದಳು ನೀಲಂ.

“ಏನದು?” ಎಂದ ಕಿರಿಕಿರಿಗೊಳ್ಳುತ್ತಲೇ.

“ಮಿ. ಫಿಲಿಪ್‌ ಭಾರತೀಯನಂತೆ ಕಾಣಿಸಲು ಅವರ ಮೈಗೆ ಬ್ರೌನ್‌ ಟ್ಯಾನ್‌ ಬಳಿದುಕೊಂಡಿದ್ದಾರೆ. ಆದರೆ ಅವರ ಕಣ್ಣುಗಳು ಸಾಗರದ ನೀಲಿ ಬಣ್ಣದ್ದು. ಅವನ್ನು ನೋಡಿದರೆ ಯಾರು ಬೇಕಾದರೂ ಇವರು ಭಾರತೀಯ ಅಲ್ಲ ಅಂತ ಕಂಡುಹಿಡಿದುಬಿಡ್ತಾರೆ. ಅದಕ್ಕೇ ಹತ್ತಿರದ ದೊಡ್ಡ ಊರಲ್ಲಿ ಬ್ರೌನ್‌ ಬಣ್ಣದ ಕಾಂಟ್ಯಾಕ್ಟ್‌ ಲೆನ್ಸ್‌ ಕೊಳ್ಳಲು ಹೋಗ್ತಿದ್ದೀವಿ” ಎಂದಳು.

ನಾಯಕ್‌ ಕ್ಷಣಕಾಲ ಸಿಟ್ಟಾದರೂ ನಂತರ ಅದನ್ನು ನುಂಗಿಕೊಂಡ.

ನೀಲಂ ಹೇಳಿದ್ದರಲ್ಲಿ ಸತ್ಯ ಇಲ್ಲದಿಲ್ಲ. ತಲೆಗೆ ಕಪ್ಪು ಬಣ್ಣ ಬಳಿದು ಚಿನ್ನದ ಬಣ್ಣ ಕಾಣದಂತೆ ಮಾಡಬಹುದು. ಈಗ ಮಾಡಿಯೂ ಇದ್ದಾನೆ ಫಿಲಿಪ್.‌ ಮೈಗೆಲ್ಲಾ ಕಂದು ಬಣ್ಣದ ಟ್ಯಾನ್‌ ಬಳಿದುಕೊಂಡು ಅವನ ಚರ್ಮದ ಬಿಳಿಯ ಬಣ್ಣ ಕಾಣಿಸದಂತೆ ಮಾಡಿಕೊಂಡಿದ್ದಾನೆ. ಆದರೆ ಇವುಗಳ ಜೊತೆಗೆ ಕಣ್ಣುಗಳ ಪಾಪೆಗಳು ಕೂಡ ಕಪ್ಪಾಗಿದ್ದರೆ ಒಳ್ಳೆಯದು. ಫಿಲಿಪ್‌ನ ಕಡು ನೀಲಿ ಬಣ್ಣದ ಕಣ್ಣುಗಳು ಕಂದು ಬಣ್ಣದ ಮುಖದಲ್ಲಿ ಅತ್ಯಂತ ವಿಚಿತ್ರವಾಗಿ ಕಾಣುತ್ತವೆ. ಮತ್ತು ಸುಲಭವಾಗಿ ಅವನು ಸಿಕ್ಕಿಕೊಳ್ಳುವ ಅವಕಾಶವಿದೆ.

ಅವನನ್ನು ಕಳವಳಕ್ಕೀಡು ಮಾಡುವ ಮತ್ತೊಂದು ಸುದ್ದಿ ಅವನ ಕಿವಿ ಮುಟ್ಟಿತ್ತು. ಇಂಟರ್‌ಪೋಲ್‌ನಿಂದ ಯಾರೋ ಸ್ಯಾಮ್‌ ಅನ್ನುವ ಮನುಷ್ಯ ಫಿಲಿಪ್‌ನ ಹಿಂದೆ ಬಿದ್ದಿರಬಹುದು ಎಂಬ ಶಂಕೆ.

ಹೌದು, ಹೇಗೆ ಇಂಟರ್‌ಪೋಲ್‌ನವರಿಗೆ ಅವರದೇ ಆದ ಇಂಟೆಲ್‌ (ರಹಸ್ಯ ಸುದ್ದಿ) ನೀಡುವ ಗುಂಪಿದೆಯೋ ಹಾಗೆಯೇ ನಾಯಕ್‌ನಂತಹ ದೊಡ್ಡ ಪ್ರಮಾಣದ ಕಳ್ಳರಿಗೆ ಅವರದೇ ಆದ ನೆಟ್‌ವರ್ಕ್‌ ಇತ್ತು. ಅವರುಗಳು ಕೂಡ ಸರ್ಕಾರ ಮತ್ತು ತಮ್ಮ ಪ್ರತಿಸ್ಪರ್ಧಿಗಳ ವಿಷಯವನ್ನು ಸಂಗ್ರಹ ಮಾಡಿ ನಾಯಕ್‌ನಿಗೆ ಕಳಿಸುತ್ತಿರುತ್ತಾರೆ.

ಹಾಗೆ ಬಂದ ಸುದ್ದಿಯೇ ಸ್ಯಾಮ್‌ ಎಂಬ ಇಂಟರ್‌ಪೋಲ್‌ ಅಧಿಕಾರಿ ಫಿಲಿಪ್‌ನ ಹಿಂದೆ ಇರುವನೆಂಬುದು.

ಈ ವಿಷಯ ತಿಳಿದೊಡನೆ ನೀಲಂಗೆ ಫೋನ್‌ ಮಾಡಿದ ನಾಯಕ್.‌

“ಯಸ್‌ ಮಿ. ನಾಯಕ್!‌ ನಾವು ಕಾಂಟ್ಯಾಕ್ಟ್‌ ಲೆನ್ಸ್‌ ಅಂಗಡಿಯ ಬಾಗಿಲಲ್ಲೇ ಇದ್ದೇವೆ. ಇನ್ನೇನು ಅಂಗಡಿ ತೆರೆಯುತ್ತದೆ” ಎಂದಳು ನೀಲಂ. ಅವಳಿಗೆ ಈ ನಾಯಕ್‌ ಮತ್ತೆ ಮತ್ತೆ ಫೋನ್‌ ಮಾಡುವುದು ಅವಳ ಬುದ್ಧಿವಂತಿಕೆಗೆ ಅವಮಾನ ಎಂಬ ಭಾವನೆ.

“ಆ ವಿಷಯ ನೀವು ನೋಡ್ಕೊಳ್ಳುವಿರಿ ಅನ್ನೋ ನಂಬಿಕೆ ನನಗಿದೆ. ಆದರೆ… “ ಎಂದು ಹೇಳಿ, ಕೆಲವು ಕ್ಷಣಗಳ ಮೌನದ ನಂತರ, “ಇಂಟರ್‌ಪೋಲ್‌ ನಿಮ್ಮ ಹಿಂದೆ ಬಿದ್ದಿರಬಹುದು. ಎಚ್ಚರ!” ಎಂದ.

ಒಂದು ಕ್ಷಣ ಬೆದರಿದ ನೀಲಂ ಚೇತರಿಸಿಕೊಂಡು, “ಯಾರೂಂತ ನಿಮಗೆ ತಿಳಿದಿದೆಯಾ ಮಿ.ನಾಯಕ್?”‌ ಎಂದಳು.

“ಯಾರೋ ಸ್ಯಾಮ್‌ ಅಂತೆ. ಬೇರೇನೂ ವಿವರ ತಿಳಿಯದು” ಎಂದ ನಾಯಕ್.‌

ಆ ವಿಷಯವನ್ನು ಅವಳು ಆಗಲೇ ಒಮ್ಮೆ ಫಿಲಿಪ್‌ಗೆ ಹೇಳಿದ್ದರೆ ಒಳಿತಾಗುತ್ತಿತ್ತೇನೋ… ಹೇಗೂ ಅವನಿಗೆ ಇಂಟರ್‌ಪೋಲ್‌ನಲ್ಲಿ ಅನೇಕರು ಗೊತ್ತಿದ್ದರು.

ಆದರೆ ವಿನಾಶಕಾಲೇ ವಿಪರೀತ ಬುದ್ಧಿಃ ಎನ್ನುವಂತೆ ಅವಳು ಆ ವಿಷಯವನ್ನು ಫಿಲಿಪ್‌ನಿಗೆ ಹೇಳದೇ ಉಡಾಫೆ ಮಾಡಿಬಿಟ್ಟಳು.

ಇದರಿಂದ ಅವರ ಕೆಲಸ ಮುಂದುವರೆಯಲು ಹೆಚ್ಚಿನ ಕಷ್ಟವಾಗಿತ್ತು.

ಇವ್ಯಾವುದರ ಪರಿವೆಯೂ ಇಲ್ಲದೇ ಅಪ್ರಮೇಯ ತನ್ನ ಶಿಷ್ಯರೊಂದಿಗೆ ತನ್ನ ಪ್ರಯಾಣ ಮುಂದುವರೆಸಿದ್ದ.

ಡ್ರೈವರ್‌ ಶ್ಯಾಮ್‌ ಅಪ್ರಮೇಯನಿಗೆ “ನಾವು ಈಗ ದೆಹಲಿಯ ದಾರಿಯಲ್ಲಿ ಹೋಗುತ್ತಿದ್ದೇವೆ. ನಡುವೆ ಎಲ್ಲಾದರೂ ಗುಡಿ ಕಂಡರೆ ನೀವು ಖಂಡಿತ ಇಳಿದು ದರ್ಶನ ಮಾಡಬಹುದು. ಆದರೆ ರೂಟು ಬದಲಾಯಿಸುವುದರಿಂದ ನನಗೆ ಕಷ್ಟ” ಎಂದ.

ʼಅಂದರೆ ಇವನು ಮರಳಿ ಹೋಗಬೇಕೋ ಏನೋ… ಪರವಾಗಿಲ್ಲ. ಈ ರಸ್ತೆಯಲ್ಲಿ ಸಿಗುವ ಗುಡಿಗಳ ದರ್ಶನ ಮಾಡಿಕೊಂಡು ನಂತರ ಜೋಷಿಮಠ ತಲುಪಿ ಮೂರು ವಿಗ್ರಹಗಳ ಭದ್ರತೆಗೆ ಏನಾದರೂ ವ್ಯವಸ್ಥೆ ಮಾಡಬೇಕುʼ ಎಂದುಕೊಂಡ ಅಪ್ರಮೇಯ.

ಆದರೆ ಶ್ಯಾಮ್‌  ತನ್ನ ಕಷ್ಟ ಅದಲ್ಲವೆಂದೂ, ಅವರು ರೂಟ್‌ ಬದಲಾಯಿಸಿದರೆ ಹೆಚ್ಚುವರಿ ಭದ್ರತೆ ಸಿಗಲಾರದೇ ಹೋಗುವುದೆಂದೂ ಆಲೋಚಿಸುತ್ತಿದ್ದ.

ಈ ಸಂಜೆ ಅವರಿಗೆ ಒಂದು ದೊಡ್ಡ ಮಹಾವಿಷ್ಣುವಿನ ಗುಡಿಯು ಎದುರಾಯಿತು.

“ನಾರಾಯಣ ನಾರಾಯಣ” ಎನ್ನುತ್ತಾ ಇಳಿದ ಅಪ್ರಮೇಯ.

ಒಬ್ಬ ಶಿಷ್ಯ ಮೆಲ್ಲನೆ ಕಾರಿಳಿದು ದೇವಸ್ಥಾನದ ಪಕ್ಕಕ್ಕೆ ಹೋದ.

ಅವನು ನಾಯಕ್‌ಗೇ ಫೋನ್‌ ಮಾಡಿದ. ನಾಯಕ್‌ ಅವನನ್ನು ನೀಲಂಳನ್ನು ಸಂಪರ್ಕಿಸಲು ಹೇಳಿದ. ಅವಳೊಂದಿಗೆ ಮಾತಾಡಿದಾಗ ಅವರು ನೂರು ಕಿಮೀ ದೂರದ ನಗರದಲ್ಲಿರುವುದಾಗಿ ಹೇಳಿದಳು ನೀಲಂ.

“ನಿಮ್ಮ ಜಿಪಿಎಸ್‌ ಆನ್‌ ಆಗಿರಲಿ. ಲೊಕೇಷನ್‌ ವಾಟ್ಸ್ಯಾಪ್‌ನಲ್ಲಿ ಷೇರ್‌ ಮಾಡಿ. ನಾವು ಬೇಗನೆ ಬರುತ್ತೇವೆ” ಎಂದು ಹೇಳಿ ಲೈನ್‌ ಕಟ್‌ ಮಾಡಿದಳು ನೀಲಂ. ಶಿಷ್ಯ ಬೇಗನೆ ತನ್ನ ಗುರುವನ್ನು ಸೇರಿಕೊಂಡಿದ್ದ.

ಆದರೆ ಡ್ರೈವರ್‌ ಶ್ಯಾಮ್‌ ಈ ವಿಷಯವನ್ನು ತನ್ನ ಫೋನಿನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ.

ನಾಯಕ್‌ನ ನಂಬರ್‌ ತನ್ನ ಟ್ಯಾಬ್‌ನಲ್ಲಿದ್ದ ಡೇಟಾಬೇಸ್‌ನಲ್ಲಿ ಹಾಕಿ ಅವನಾರೆಂದು ಪತ್ತೆ ಹಚ್ಚಿದ!

ಓಹೋ! ಇವನಾ ಈ ವಿಗ್ರಹ ಚೋರಿಯ ಹಿಂದೆ ಇರುವವನು? ಇವನು ಡ್ರಗ್‌ ಪೆಡ್ಲರ್‌ ಎಂದು ಅನುಮಾನಿತನಾಗಿರುವ ಕುಳವಲ್ಲವಾ? ಇವನೇಕೆ ಈ ದಂಧೆಗೆ ಇಳಿದಿದ್ದಾನೆ? ಎಂದು ಯೋಚಿಸಿ ಕೊನೆಗೆ ತನ್ನ ಹೆಡ್‌ಕ್ವಾರ್ಟರ್ಸ್‌ ಇದ್ದ ಲಿಯೋಗೆ ಫೋನ್‌ ಮಾಡಿದ.

ಹೌದು, ಡ್ರೈವರ್‌ ಶ್ಯಾಮ್‌ ಇಂಟರ್‌ಪೋಲ್‌ ಅಧಿಕಾರಿಯಾದ ಸ್ಯಾಮ್!

ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಪೊಲೀಸ್‌ ಆರ್ಗನೈಸೇಷನ್‌ (ಇಂಟರ್‌ಪೋಲ್)‌ ಫ್ರಾನ್ಸ್‌ನ ಲಿಯೋನ್‌ (ಎಲ್‌ ಯೈ ಓ ನ್) ನಗರದಲ್ಲಿದೆ. ಸ್ಯಾಮ್‌ ಅಲ್ಲಿರುವ ಭಾರತೀಯ ಅಧಿಕಾರಿ. ಅವನು ಇಂತಹ ಕೇಸ್‌ಗಳು ಬಂದಾಗ ತನ್ನ ದೇಶದ ನೆಲದಲ್ಲಿ ಅಡಿ ಇಡುವ ಆಸೆ ವ್ಯಕ್ತಪಡಿಸಿ ಭಾರತಕ್ಕೆ ಬರುತ್ತಾನೆ.

ಅವನನ್ನು ಅಪ್ರಮೇಯ ಸ್ವಾಮಿಯ ರಕ್ಷಣೆಗೆ ನಿಯೋಜಿಸಲ್ಪಟ್ಟಾಗ ಬಹಳ ಸಂತೋಷದಿಂದ ಭಾರತಕ್ಕೆ ಬಂದಿದ್ದ.

ವಿಶಾಖಪಟ್ಟಣಂನಲ್ಲಿ ಸ್ವಾಮಿಯನ್ನು ರಿಸೆಪ್ಶನ್‌ನಲ್ಲಿ ನೋಡಿದ್ದ. ಸ್ವಾಮಿ ತನ್ನ ಮುಖವನ್ನು ನೆನಪಲ್ಲಿಟ್ಟಿರಬಹುದೆಂಬ ಅನುಮಾನ ಬಂದಿದ್ದರಿಂದ ತನ್ನ ಕ್ಲೀನ್‌ ಷೇವನ್‌ ಮುಖದ ಮೇಲೆ ಒಂದು ದಪ್ಪ ಮೀಸೆ ಅಂಟಿಸಿಕೊಂಡಿದ್ದ. ಆದರೂ ಸ್ವಾಮಿ ಅಪ್ರಮೇಯನಿಗೆ ಅನುಮಾನ ಬಂದಿತ್ತೆಂದು ಅವನಿಗೆ ಅರ್ಥವಾಗಿತ್ತು.

ಅವನು ಅಪ್ರಮೇಯ ಸ್ವಾಮಿಯ ಬಗ್ಗೆ ಅಲ್ಲದೇ ಆತನ ಗುರು ಕುಮಾರಾನಂದ ಸ್ವಾಮಿಯ ಬಗ್ಗೆಯೂ ಅರಿತಿದ್ದ.

ಅವರಿಬ್ಬರೂ ಅಪ್ಪಟವಾದ ನಿಜ ಸ್ವಾಮಿಗಳೆಂದು ಅರ್ಥವಾಗಿದ್ದರಿಂದ ಅಪ್ರಮೇಯನ ರಕ್ಷಣೆಗೆ ಬಂದಿದ್ದ.

ಅವನು ಅಪ್ರಮೇಯನ ಶಿಷ್ಯನ ಫೋನ್‌ ಜೊತೆಗೆ ತನ್ನ ಫೋನ್‌ ಪೇರ್‌ (ಜೋಡಿ) ಮಾಡಿ ಅವನಿಗೆ ಬರುವ ಎಲ್ಲ ಕರೆಗಳನ್ನೂ, ಅವನು ಮಾಡುವ ಎಲ್ಲ ಕರೆಗಳನ್ನೂ ತನ್ನ ಮೊಬೈಲ್‌ ಮತ್ತು ಟ್ಯಾಬ್‌ನಲ್ಲಿ ಕೇಳಿ, ಧ್ವನಿಮುದ್ರಿಸಿಕೊಳ್ಳಬಲ್ಲವನಾಗಿದ್ದ.

ಈಗ ಈ ಫಿಲಿಪ್‌ ಬಂದರೆ ಸ್ವಾಮಿಗಳನ್ನು ಕಾಪಾಡುವುದು ಹೇಗೆ? ಎಂಬ ಚಿಂತೆ ಅವನನ್ನು ದುಂಬಿಯಂತೆ ಕೊರೆಯುತ್ತಿತ್ತು.

ಅವನು ಹೇಗೂ ಬಿಳುಪು ತೊಗಲಿನವನು. ಖಂಡಿತ ತಕ್ಷಣವೇ ಕಂಡುಹಿಡಿಯಬಹುದು. ಆದರೆ ಅವನು ಸ್ನೈಪರ್‌ ಕೂಡ. ಅಂದರೆ ಬಹಳ ದೂರದಿಂದ ಟೆಲಿಸ್ಕೋಪ್‌ ಅಳವಡಿಸಿದ, ಸೈಲೆನ್ಸರ್‌ ಹಚ್ಚಿದ ರೈಫಲ್‌ನಿಂದ ಗುಂಡು ಹಾರಿಸಬಲ್ಲ.

ತಾನು ಅದಕ್ಕೆ ಆಸ್ಪದ ಕೊಡಬಾರದೆಂದರೆ ಸ್ವಾಮಿ ಅಪ್ರಮೇಯನನ್ನು ಒಂಟಿಯಾಗಿ ಯಾವುದೇ ಎತ್ತರದ ಜಾಗದಲ್ಲಿ ಬಿಡಕೂಡದು. ಹಾಗಾದಾಗ ಮಾತ್ರ ಫಿಲಿಪ್‌ ಸ್ನೈಪರ್‌ ಬಳಸಲಾರ. ಆಗ ಅವನಿಗಿರುವ ಮತ್ತೊಂದು ಆಯ್ಕೆ ಎಂದರೆ ಹತ್ತಿರದಿಂದ ಕೊಲ್ಲುವುದು.

ಇದು ಸ್ವಲ್ಪ ಎಚ್ಚರಿಕೆ ವಹಿಸಬೇಕಾದ ಕೆಲಸ. ಅವನು ಬಿಳಿತೊಗಲಿನೊಂದಿಗೇ ಬಂದರೆ ತಾನು ಕಂಡುಹಿಡಿಯಬಲ್ಲ. ಏಕೆಂದರೆ ಸ್ಯಾಮ್‌ ಫಿಲಿಪ್‌ ಸ್ಟೋನ್‌ಬ್ರಿಡ್ಜ್‌ನ ಪಟಗಳನ್ನು ನೋಡಿದ್ದಾನೆ.

ಆದರೆ ಫಿಲಿಪ್‌ ವೇಷ ಮರೆಸಿಕೊಂಡು ಬಂದರೆ?

ಹೌದೂ, ವೇಷ ಮರೆಸುವುದು ಹೇಗೆ? ಬಹುಶಃ ಮೈಗೆ ಕಂದು ಬಣ್ಣ ಬಳಿದುಕೊಳ್ಳಬಹುದು. ತಲೆಗೆ ಪೇಟಾ ಅಥವಾ ಟೋಪಿ ಧರಿಸಬಹುದು. ಅವನು ಮುಚ್ಚಿಡಲಾಗದ್ದು ಅವನ ಆರೂಕಾಲಡಿ ಎತ್ತರ ಮತ್ತು ಅವನ ನೀಲಿ ಕಣ್ಣುಗಳು. ಹೌದು ಅವನನ್ನು ತಾನು ಬಹಳ ಎಚ್ಚರಿಕೆಯಿಂದ ಕಂಡುಹಿಡಿಯಬೇಕು.

ಇವನನ್ನು ದೇವಸ್ಥಾನದ ಹೊರಗೆ ಆಲೋಚಿಸಲು ಬಿಟ್ಟು ಅಪ್ರಮೇಯ ತನ್ನ ಶಿಷ್ಯರೊಂದಿಗೆ ಒಳಗೆ ಪ್ರವೇಶಿಸಿದ್ದ.

ನಾಲ್ಕು ಕೈಗಳ, ಶಂಖ, ಚಕ್ರ, ಗದೆ ಮತ್ತು ಪದ್ಮಗಳೊಂದಿಗೆ ಅಲಂಕೃತನಾದ ನಾರಾಯಣ.

ಅಪ್ರಮೇಯನ ಭಕ್ತಿ ಉಕ್ಕಿ ಬಂದು “ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನ ಗಮ್ಯಂ ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ” ಎಂದು ಕಲ್ಯಾಣಿ ರಾಗದಲ್ಲಿ ಹಾಡಿದ.

ಎಂದಿನಂತೆ ಅವನ ಮಧುರ ಗಾಯನಕ್ಕೆ, ಅವನ ಧೀಮಂತ ನಿಲುವಿಗೆ ಜನ ಅವನನ್ನು ಸುತ್ತುವರಿದರು.

ಅಲ್ಲಿಯೇ ಒಂದು ಕಡೆ ಕುಳಿತ.

ಮೊದಲೊಂದು ಶ್ಲೋಕ ಹೇಳಿದ.

“ಭಗವಾನ್ ಕೃಷ್ಣ ಏವಾಸಿ ಕೃಷ್ಣನಾರಾಯಣೋಽಸಿ ಚ|

ಅನಾದಿ ಶ್ರೀಕೃಷ್ಣನಾರಾಯಣಸ್ತ್ವಂ ಪರಮೇಶ್ವರಃ”

ಅಲ್ಲಿದ್ದ ನಾರಾಯಣ ದೇವರ ಅರ್ಚಕರೂ ಅಚ್ಚರಿಯಿಂದ ಅಪ್ರಮೇಯನತ್ತ ತಿರುಗಿ, “ಸ್ವಾಮೀ, ಇದು ಯಾವುದು ಶ್ಲೋಕ? ನಾನು ಕೇಳಿದಂತಿಲ್ಲ” ಎಂದರು.

“ಇದು ನಾರಾಯಣ ಸಹಸ್ರನಾಮದಿಂದ ಆರಿಸಿದ ಶ್ಲೋಕ. ಸಾಮಾನ್ಯವಾಗಿ ನಾವೆಲ್ಲರೂ ವಿಷ್ಣು ಸಹಸ್ರನಾಮದ ಬಗ್ಗೆ ಮಾತ್ರ ಅರಿತಿದ್ದೇವೆ. ವಿಶೇಷವೆಂದರೆ ಮಹಾಭಾರತದ ವಿಷ್ಣು ಸಹಸ್ರನಾಮದಂತೆ ಪದ್ಮಪುರಾಣ, ಗರುಡಪುರಾಣ ಮತ್ತು ಸ್ಕಂದಪುರಾಣಗಳಲ್ಲಿ ಕೂಡ ಒಂದೊಂದು ವಿಷ್ಣು ಸಹಸ್ರನಾಮವಿದೆ” ಎಂದ ಅಪ್ರಮೇಯ.

“ನಮಗೆ ಮಹಾಭಾರತದ ಶ್ರೀ ವಿಷ್ಣು ಸಹಸ್ರನಾಮದ ಹಿನ್ನೆಲೆ ಮತ್ತು ವಿವರ ಹೇಳುವಿರಾ ಸ್ವಾಮೀ?” ಎಂದನೊಬ್ಬ ಭಕ್ತ.

“ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ|

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್||‌” ಎಂದು ಕಣ್ಮುಚ್ಚಿ ಶ್ಲೋಕವನ್ನುಚ್ಚರಿಸಿ, “ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು ಎನ್ನುತ್ತಾನೆ ಶ್ರೀಮನ್ನಾರಾಯಣ ತನ್ನ ಕೃಷ್ಣಾವತಾರದಲ್ಲಿ, ಭಗವದ್ಗೀತೆಯಲ್ಲಿ” ಎಂದ ಅಪ್ರಮೇಯ.

ಎಲ್ಲರೂ ತದೇಕಚಿತ್ತರಾಗಿ ಅವನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದರು.

“ಮಹಾಭಾರತದ ಅನುಶಾಸನಪರ್ವದಲ್ಲಿ ಒಂದು ವಿಶಿಷ್ಟ ಅಧ್ಯಾಯವಿದೆ. ಭೀಷ್ಮರು ಶರಶಯ್ಯೆಯಲ್ಲಿ ಮಲಗಿದ್ದಾರೆ. ಅವರಿನ್ನೂ ದೇಹವನ್ನು ತೊರೆದಿಲ್ಲ. ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಇಚ್ಛಾಮರಣದ ಶಕ್ತಿ ಇರುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನು ಯುಧಿಷ್ಠಿರನನ್ನು ಭೀಷ್ಮರ ಬಳಿಗೆ ಹೋಗಿ ಅವರಿಂದ ರಾಜಕೀಯ ತಂತ್ರಗಳನ್ನು ಕಲಿ ಎಂದು ಹೇಳುತ್ತಾನೆ. ಅವನು ಹೋದಾಗ ಭೀಷ್ಮರು ನಾನು ಶ್ರೀಕೃಷ್ಣನನ್ನು ನೋಡಬೇಕೆನ್ನುತ್ತಾರೆ. ಶ್ರೀಕೃಷ್ಣ ಅವರ ವಿನಂತಿಯನ್ನು ಮನ್ನಿಸಿ ಅವರ ಬಳಿಗೆ ಹೋಗುತ್ತಾನೆ” ಎಂದು ಹೇಳಿ ಸಭಿಕರನ್ನೊಮ್ಮೆ ನೋಡಿದರು.

ಎಲ್ಲರೂ ತಲ್ಲೀನತೆಯಿಂದ ಅವನನ್ನೇ ನೋಡುತ್ತಿದ್ದರು.

“ಆಗ ಭೀಷ್ಮ ಶ್ರೀಕೃಷ್ಣನ ಎದುರಿಗೇ ಅವನ ಮೂಲರೂಪವಾದ ವಿಷ್ಣುವನ್ನು ಸ್ತುತಿಸಿ ಅವನ ಒಂದು ಸಾವಿರ ಗುಣವಾಚಕಗಳನ್ನು ಹಾಡುತ್ತಾರೆ. ಇದೇ ಶ್ರೀವಿಷ್ಣು ಸಹಸ್ರನಾಮ. ಇದು ಎಷ್ಟು ಪ್ರಸಿದ್ಧವೆಂದರೆ ಸಹಸ್ರನಾಮ ಎಂದರೇನೇ ವಿಷ್ಣು ಸಹಸ್ರನಾಮ. ಉಳಿದೆಲ್ಲಕ್ಕೂ ಆ ದೇವ ದೇವಿಯರ ಹೆಸರು ಹೇಳಿ ಸಹಸ್ರನಾಮ ಎಂದು ಹೇಳಬೇಕಾಗುತ್ತದೆ. ಉದಾಹರಣೆಗೆ ಲಲಿತಾ ಸಹಸ್ರನಾಮ, ಗಣೇಶ ಸಹಸ್ರನಾಮ. ಆದರೆ ಸಹಸ್ರನಾಮ ಎಂದರೆ  ಶ್ರೀವಿಷ್ಣು ಸಹಸ್ರನಾಮ” ಎಂದು ಹೇಳಿ ತನ್ನ ಶಿಷ್ಯರಿಗೆ ಸನ್ನೆ ಮಾಡಿದ ಅಪ್ರಮೇಯ.

“ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ

ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ ||” ಎಂದು ಐವರೂ ಒಟ್ಟಿಗೇ ಉಚ್ಚರಿಸಲಾರಂಭಿಸಿದರು. ಜೊತೆಗೆ ಅಲ್ಲಿ ಕುಳಿತಿದ್ದ ಅನೇಕರು ಅದನ್ನು ತಾವೂ ಹೇಳತೊಡಗಿದರು.

ನೂರಾ ಆರು ಶ್ಲೋಕಗಳನ್ನು ಹೇಳಿ ಕೊನೆಗೆ “ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ ರಥಾಂಗಪಾಣಿ ರಕ್ಷೋಭ್ಯಃ ಸರ್ವಪ್ರಹರಣಾಯುಧಃ” ಎಂದು ಹೇಳಿ ಸಹಸ್ರನಾಮವನ್ನು ಮುಗಿಸಿದರು.

ಅಷ್ಟು ಜನ ಒಟ್ಟಿಗೆ ಹೇಳಿದ್ದರಿಂದಲೋ ಏನೋ ಅಲ್ಲೊಂದು ಸ್ಪಂದನ ಉಂಟಾಗಿತ್ತು. ಅದು ಮನಸ್ಸಿಗೆ ಬಹಳವೇ ಮುದ ನೀಡಿತ್ತು ಅಲ್ಲಿದ್ದವರಿಗೆಲ್ಲಾ.

ಆದರೆ ಅಪ್ರಮೇಯನನ್ನು ಕೊಂದಾದರೂ ಆ ರಾಮ, ಕೃಷ್ಣ ಮತ್ತು ನರಸಿಂಹ ವಿಗ್ರಹಗಳನ್ನು ಕೊಂಡೊಯ್ಯಲು ವೇಗವಾಗಿ ಆ ಊರಿಗೆ ಬಂದಿದ್ದರು ನಾಯಕ್‌ನ ಶಿಷ್ಯೆ ನೀಲಂ ಮತ್ತು ಇಂಗ್ಲೆಂಡಿನಿಂದ ಬಂದ ಶಾರ್ಪ್‌ ಶೂಟರ್‌ ಫಿಲಿಪ್‌ ಸ್ಟೋನ್‌ಬ್ರಿಡ್ಜ್.‌

ಮನುಷ್ಯರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಅದೂ ಆ ದುರುಳರಿಗೆ ಸಂಬಂಧಿಸದ ಮೂರು ವಿಗ್ರಹಗಳನ್ನು ಪಡೆಯಲು ಒಬ್ಬ ಸತ್ಪಾತ್ರನ ಕೊಲೆಯಾಗಬೇಕೇ?

ಇದೆಲ್ಲಿಯ ‍ನ್ಯಾಯ!!!

ಮುಂದುವರೆಯುವುದು…

   ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *