ಪಾಂಚಾಲಿ

ಪಾಂಚಾಲಿ

ಪಾಂಚಾಲಿ ಪಾಂಚಾಲಿ ಎಂದು
ಪಂಚಭೂತಗಳಿಗೆ ಪರಿಚಯಿಸಿದಿರಿ
ನನ್ನನ್ನು, ಯಾರಿಗೆ ಬೇಕು
ಈ ಪಾಂಚಾಲಿಯ ಪಟ್ಟ

ಸಂತಾನದ ಬೀಜ ಬಿತ್ತುವ
ಅವಸರದಲಿ, ಬಯಕೆಗಳಿಗೆ
ಬೆಂಕಿ ಇಟ್ಟು, ಕಾಮದ ಕಾವಿನಲ್ಲಿ
ಬೆಚ್ಚಗೆ ಬದುಕಿದವರೈವರು

ಒಬ್ಬೊಬ್ಬನಿಗೂ ಹಲವು ರಾತ್ರಿಗಳ ಹಸಿವು
ಗಂಡರೆಂಬ ಗಂಡುತನದ ಹಠದಲ್ಲಿ
ಮಿಂಡರಂತೆ ಉಂಡುಂಡು ಹೋಗುವಾಗ
ಈ ಹೆಣ್ಣುತನಕ್ಕೆ ಹೇಸುತಿದೆ ಮನವು

ಹೆಣ್ಣೆಂಬುದರಿಯದೆ ಹಣ್ಣಿನಂತೆ
ಹಂಚಿಕೊಂಡು ಹೀರಿದವರು ನೀವು
ಮೋಜಿಗಾಗಿ ಜೂಜಾಡಿ, ನನ್ನ ಜನ್ಮವನು
ಜಾಲಾಡಿ ಜಾರಿಕೊಂಡವರು ನೀವು

ಬಂಧಿಸಿದ ಬೇಡಿಯೊಳಗೆ ಬೆಂದವಳು ನಾನು
ವಿವಸ್ತ್ರಗೊಳಿಸಿದರು ಶಸ್ತ್ರವನ್ನೆತ್ತದೆ
ಷಂಡರಾಗಿ ತಲೆತಗ್ಗಿಸಿ ಕುಳಿತ
ನಿರಾಯುಧ ನಿರ‍್ವೀರ‍್ಯರು ನೀವು

ಅಂದು ಶೈಯ್ಯಾಗ್ರಹದಲ್ಲಿ ಸೂಳೆಯಾಗಿ
ಜೀವ ಸವಿಸಿದವಳು ನಾನು
ಇಂದು ಸಾಹಿತ್ಯಕ್ಕೆ ಮಾತ್ರ
ಸೀಮಿತವಾಗಿ ಉಳಿದವಳು ನಾನು

ರಾಹುಲ ಕಾಂಬಳೆ
ಅತಿಥಿ ಉಪನ್ಯಾಸಕರು
ಸಿ. ಎಮ್. ಮನಗೂಳಿ ಪದವಿ ಮಹಾವಿದ್ಯಾಲಯ,
ಸಿಂದಗಿ – 586 128
ಮೊ: 7975298185

Related post