ಪಾರು ಹೇಳಿದ ಕಥೆಗಳು ಕಥೆ-೬

— ತಪ್ಪಾಯಿತು ಕ್ಷಮಿಸಿಬಿಡಿ —

ಮಕ್ಕಳು ಅಜ್ಜಿ-ತಾತನ ಮನೆಗೆ ಬೇಸಿಗೆ ರಜಕ್ಕೆ ಹೋಗಿದ್ದಾರೆ. ಅವರನ್ನು ಕರೆತರಲು ಪಾರು ಎಷ್ಟೋ ದಿವಸಗಳ ಬಳಿಕ ಕೆಂಪು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಳೆ.

ಬಸ್ಸಿನಲ್ಲಿ ಕುಳಿತ ಪಾರುವಿನ ಕಣ್ಣಿಗೆ, ಸೀಟುಗಳ ಒರಗು ಹಾಸಿನ ಮೇಲೆ, ಹಾಯ್ ನಾನು ಸ್ನೇಹ, ಕಾಲ್ ಮೀ ವೆನ್ ಯುವರ್ ಫ್ರೀ ಎಂಬ ಬರವಣಿಗೆ ಮತ್ತು ನಂಬರ್ ಕಾಣಿಸಿತು. ಅದನ್ನು ಕಂಡ ಪಾರು ಮುಗುಳ್ನಕ್ಕಳು.

ಪಾರು ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳು….

ಪಾರು ಸ್ಕೂಲಿಗೆ ತನ್ನ ಊರಿನಿಂದ ಪಕ್ಕದೂರಿಗೆ ಹೋಗಬೇಕಿತ್ತು. ದಿನಾಲು ಕೆಂಪು ಬಸ್ಸಿನ ಪ್ರಯಾಣ, ಯಾವಾಗಲೂ ಗೆಳತಿಯರ ನೋಡಗೂಡಿ ನಕ್ಕುನಗಿಸಿ ಕೊಂಡು ಮಾತುಗಳಲ್ಲಿ ಮುಳುಗಿದ್ದ ಹುಡುಗಿಯರ ಗುಂಪೇ ಸ್ಕೂಲಿಗೆ ಹೋಗುತ್ತಿತ್ತು. ಆಗ ಕಿಟಕಿಯ ಮೇಲೆ ಸೀಟಿನ ಹಿಂಬದಿಯಲ್ಲಿ ” ನಾನು ಪ್ರಿಯಾ, ಸ್ನೇಹ, ಕಾಲ್ ಮಿ ನಿಮಗೆ ಬೇಜಾರಾದರೆ ನನಗೆ ಕರೆ ಮಾಡಿ. ಐಯಾಮ್ ಯುವರ್ ಫ್ರೆಂಡ್”. ಎಂದು ಬರೆದುದ್ದನ್ನೆಲ್ಲಾ, ಓದುವಾಗ ಪಾರುವಿಗೆ ಎಂಥದ್ದೋ ಕುತೂಹಲ ಇದು ಯಾರ ಫೋನ್ ನಂಬರ್ ಗಳು ನಿಜವಾಗಲೂ ಅವರದೇ ನಂಬರ್ ಗಳ ಅಥವಾ ಜನ ಕೀಟಲೆಗಾಗಿ ಬರೆದಿರುವುದಾ? ಜನರು ನಿಜವಾಗಲೂ ಇವರಿಗೆ ಕಾಲ್ ಮಾಡುತ್ತಾರಾ? ಎಂಬ ಪ್ರಶ್ನೆಗಳು ಕಾಡುತ್ತಿದ್ದವು ನಾನು, ಯಾರದಾದರೂ, ಫೋನ್ ನಂಬರ್ ಬರೆದು ನೋಡಬೇಕು ಎಂಬ ಹುಚ್ಚು ಯೋಚನೆಗಳೆಲ್ಲಾ, ಬಂದಿದ್ದವು.

ಅಂದು ಸೋಮವಾರ ಶಾಲೆಗೆ ಬೇಗ ಹೋಗಬೇಕು

ಆದರೆ ಎಂದಿನಂತೆ ಯಾವಾಗಲೂ ಕೀಟಲೆ ಮಾಡುತ್ತಿದ್ದ ಚಿಕ್ಕಪ್ಪನಿಂದಾಗಿ, 30 ನಿಮಿಷ ತಡವಾಗಿದೆ. ಪಾರುವಿನ ಗೆಳತಿಯರೆಲ್ಲಾ, ಹೋಗಿಯಾಗಿತ್ತು ಗಾಬರಿಯಿಂದ ಬಸ್ ಸ್ಟಾಪಿಗೆ ಬಂದ ಪಾರು ಶಾಲೆಗೆ ಹೋಗುವ ಬಸ್ಸನ್ನು ಹತ್ತಿ ಕುಳಿತಳು. “ಈ ಚಿಕ್ಕಪ್ಪ ಯಾವಾಗಲೂ ಹೀಗೆ ನನ್ನ ಪಾಡಿಗೆ ನಾನಿದ್ದರೂ ಜಗಳಕ್ಕೆ ಬರುತ್ತಾರೆ ಸುಮ್ಮಸುಮ್ಮನೆ ಬೈಯ್ಯುತ್ತಾರೆ, ಯಾವಾಗಲೂ ಪೆದ್ದಿ ಪೆದ್ದಿ ಎನ್ನುತ್ತಾರೆ.” ಇವತ್ತು ನನ್ನ ಬಳಿ ವಾದ ಮಾಡಿ ಜಗಳವಾಡಿದರು. ಶಾಲೆಗೆ ತಡವಾಯಿತು. ಹೇಗಾದರೂ ಮಾಡಿ ಈ ಚಿಕ್ಕಪ್ಪನಿಗೆ ಸರಿಯಾಗಿ ಪಾಠ ಕಲಿಸಬೇಕು ಇನ್ನೊಮ್ಮೆ ನನ್ನ ಸುದ್ದಿಗೆ ಬರಬಾರದು ಎಂದು ಯೋಚಿಸುತ್ತಿದ್ದ ಪಾರುವಿಗೆ ‘ ಹಾಯ್, ಐ ಯ್ಯಾಮ್ ಸ್ನೇಹ ಪ್ಲೀಸ್, ಕಾಲ್ ಮಿ’ ಎಂಬ ಬರವಣಿಗೆ ಕಾಣಿಸಿತು.
ಹಾ! ಇದೇ ಸರಿ ಎಂದು ಕೊಂಡ ಪಾರು, ಒಂದು ನಿಮಿಷವೂ ತಡಮಾಡದೆ ‘ ಹಾಯ್ ಐಯಾಮ್ ರೋಸಿ ಕಾಲ್ ಮಿ ಲೆಟ್ಸ್ ಬಿ ಫ್ರೆಂಡ್ಸ್’ ಎಂದು ವೈಟ್ನರ್ ನಲ್ಲಿ ತನ್ನ ಚಿಕ್ಕಪ್ಪನ ನಂಬರನ್ನು ಬರೆದು ಏನೋ ಸಾಧಿಸಿದ ಮನೋಭಾವದಿಂದ ತನ್ನ ಶಾಲೆಯ ಸ್ಟಾಪ್ನಲ್ಲಿ ಇಳಿದಳು. ಇದೆಲ್ಲಾ ನಡೆದು ಎರಡುಮೂರು ವಾರಗಳು ಆಗಿರಬಹುದು ಪಾರು ಇದನ್ನು ಮರತೇ ಬಿಟ್ಟಿದ್ದಳು.
ಶಾಲೆಯಿಂದ ಗೆಳತಿಯರೊಡನೆ ಹರಟುತ್ತಾ ಪಾರು ಮನೆಗೆ ಬಂದಳು. ಮನೆಯಲ್ಲಿ ಚಿಕ್ಕಪ್ಪ ,ಚಿಕ್ಕಮ್ಮನಿಗೆ ಜೋರು ಜಗಳ ಚಿಕ್ಕಮ್ಮ ಜೋರಾಗಿ” ರಾತ್ರಿ ಹಾಯ್ ರೋಜಿ ಮಾತಾಡು, ಎಂದೆಲ್ಲಾ ಕರೆಗಳು ಬರುತ್ತವೆ. ಯಾರು ಆ ರೋಜಿ ಎರಡು ವಾರಗಳಿಂದ ಇದೇ ಗೋಳು’ ಎಂದು ಚಿಕ್ಕಮ್ಮ , ಚಿಕ್ಕಪ್ಪನಿಗೆ ಬಯ್ಯುತ್ತಾ, ಅಳುತ್ತಿದ್ದರು. ತವರು ಮನೆಗೆ ಹೋಗುವುದಾಗಿ ಹೇಳುತ್ತಿದ್ದಳು. ಇತ್ತ ಚಿಕ್ಕಪ್ಪ” ನನಗೇನು ಗೊತ್ತಿಲ್ಲಾ ಈ ರೀತಿಯ ಫೋನ್ಗಳು ಬರುತ್ತಲೇ ಇವೆ ಒಂದೇ ನಂಬರ್ ನಿಂದ ಬರುವುದಿಲ್ಲ” ಎಂದು ಸಪ್ಪೆ ಮೋರೆ ಹಾಕಿ ನಿಂತಿದ್ದಾರೆ.
ಇದನ್ನೆಲ್ಲಾ ಕಂಡ ಪಾರು ವಿಗೆ ಎರಡು ನಿಮಿಷ ಗಾಬರಿಯಾಯಿತು. ಚಿಕ್ಕಮ್ಮ ಮನೆ ಬಿಟ್ಟು ಹೋದರೆ ಅದಕ್ಕೆ ನಾನೇ ಕಾರಣ ಎನಿಸಿತು.ಮನೆಯವರೆಲ್ಲಾ, ಅಲ್ಲೇ ಇದ್ದುದ್ದರಿಂದ ಏನೂ ಹೇಳದೇ ಹಾಗೇ, ಒಳಗೆ ಹೋದಳು. ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಬೆಳಗ್ಗೆ ಎದ್ದವಳೆ ಅಪ್ಪನ ಮುಂದೆ ಹೋಗಿ ಎಲ್ಲಾ ಹೇಳಿ ” ತಪ್ಪಾಯಿತು ಕ್ಷಮಿಸಿಬಿಡಿ” ಎಂದಳು. ಪಾರುವಿನ ಅಪ್ಪಾ, ಕೋಪದಲ್ಲಿದ್ದರು ಸಹ ನಕ್ಕು ಬಿಟ್ಟರು.ಪಾರು ಅಪ್ಪನ‌ ಬಳಿ ಹೇಳಿದ ಬಳಿಕ ನಿರಾಳಳಾದಳು.ಮನೆಯವರಿಗೆಲ್ಲಾ, ವಿಷಯ ತಿಳಿದು ನಕ್ಕರು. ಪಾರು ಚಿಕ್ಕಪ್ಪನ ಬಳಿಯೂ ‘ತಪ್ಪಾಯ್ತು ಕ್ಷಮಿಸಿ ಬಿಡಿ’ ಎಂದಳು. ಅವಳ ಚಿಕ್ಕಪ್ಪನ ಮುಖ ಮಾತ್ರ ಇಂಗು ತಿಂದ ಮಂಗನಂತಾಗಿತ್ತು.

ದಿವ್ಯ.ಎಲ್.ಎನ್.ಸ್ವಾಮಿ

ಶೀರ್ಷಿಕೆ ಚಿತ್ರ ಕೃಪೆ : ಎಸ್ ಇಳೆಯರಾಜ

Related post

Leave a Reply

Your email address will not be published. Required fields are marked *