ಆಗುವುದೆಲ್ಲಾ ಒಳ್ಳೆಯದಕ್ಕೆ
ವೀಣಾ, ಈಗ ಸಿರ್ಸಿಸಿಯಲ್ಲಿದ್ದಾಳೆ. ಮಾರಿಕಾಂಬಾ ಜಾತ್ರೆಗೆ, ಪಾರು ಬಾ ಎಂದು ಒಂದೇ ಸಮನೆ ಕರೆದಿದ್ದಳು.
ಪಾರೂಗೂ ಸಂಭ್ರಮ ಅವಳು ಮಕ್ಕಳೊಡನೆ ಸಿರ್ಸಿಗೆ ಹೊರಟಳು.
ಅವಳು ಹೋದ ದಿನದಿಂದ ಜಾತ್ರೆಯ ಸಂಭ್ರಮ,ತೇರು,ಜನ ಜಂಗುಳಿ, ಇದ್ದಕ್ಕಿದ್ದಂತೆ ಮೋಡ ಆವರಿಸಿ ಅಕಾಲ ಭಾರಿ ಮಳೆ ಗಾಳಿ, ಸಿಡಿಲು ಗುಡುಗು ಪ್ರಾರಂಭವಾಯಿತು. ಜನ ದಟ್ಟಣೆ ಕಡಿಮೆಯಾಯಿತು. ಪಾರುವು ವೀಣಾಳ ಮನೆ ಸೇರಿದಳು.
ಆ ಮಳೆಗೆ ಜಾತ್ರೆಗೆ ಹಾಕಿದ್ದ ಸಣ್ಣಪುಟ್ಟ ಅಂಗಡಿ-ಮುಗ್ಗಟ್ಟುಗಳೆಲ್ಲಾ ಅಸ್ತವ್ಯಸ್ತವಾಯಿತು. ನೋಡುನೋಡುತ್ತಿದ್ದಂತೆ ಜಾತ್ರೆಯ ಗದ್ದುಗೆ ಮಂಟಪಕ್ಕೆ ಹಾನಿಯಾಯಿತು. ಇದರಿಂದ ಜನರು ಗಾಬರಿಯಾದರು, ಈಗಿನ್ನು ಕೊರೋನಾ ಹಾವಳಿಯಿಂದ ತತ್ತರಿಸಿದ ಜನ ಹೆದರಿದರು ಆದರೆ ವೀಣಾ, ಪೋಲಿಸ್ ಇನ್ಸ್ಪೆಕ್ಟರ್ ತಾನೇ ಪ್ರಕೃತಿ ವಿಕೋಪ ಅಷ್ಟೇ ಎಂದು ಯಾರು ಹೆದರ ಬಾರದೆಂದು ಧೈರ್ಯ ಹೇಳುತ್ತಿದ್ದಳು. ಇದನ್ನೆಲ್ಲಾ ನೋಡುತ್ತಿದ್ದ ಪಾರುವಿಗೆ ಹಳೆಯ ಘಟನೆಯೊಂದು ನೆನಪಾಯ್ತು.
ಒಂದು ದಿನ ಪೂಜಾರಪ್ಪ ನವರು ಹೋಗಿ ದೇವಸ್ಥಾನದ ಬಾಗಿಲು ತೆಗೆಯುತ್ತಾರೆ. ಅವರ ಜೊತೆ ಊರಿನ ಹಿರಿಯರೊಬ್ಬರು ಇದ್ದರು. ದೇವಿಯ ಮುಖ ಕಪ್ಪಿಟ್ಟಿದೆ. ಅವರಿಗೆ ಗಾಬರಿಯಾಯಿತು ಸುತ್ತಲೂ ನೋಡಿದರು ಏನಾಗಿದೆ, ಎಂದು ಅವರಿಗೆ ತಿಳಿಯಲಿಲ್ಲ, ಊರಿನ ಹಿರಿಯರು ಗಾಬರಿಯಾದರು ಅಷ್ಟೇ, ಏನಾಗಿದೆ? ಎಂದು ತಿಳಿಯುವ ಮುನ್ನವೇ ದೇವಸ್ಥಾನದ ಅಂಗಳದ ತುಂಬಾ ಊರಿನ ಜನ ಸೇರಿದರು.
ಹೊಲಗಳಲ್ಲಿ ಕೆಲಸ ಮಾಡುತ್ತಿದ್ದವರು, ಮನೆಯ ಹೆಂಗಸರು, ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದವರು, ಊರಿನ ಕಟ್ಟೆಯ ಮೇಲೆ ಕೂತು ಪಟ್ಟಂಗ ಹೊಡೆಯುತ್ತಿದ್ದವರು, ಮಕ್ಕಳು ಮುದುಕರು ಎಲ್ಲರೂ ಅವರವರ ಕೆಲಸಗಳನ್ನು ಅಲ್ಲಲ್ಲೇ ಬಿಟ್ಟು ದೇವಿಯ ಗುಡಿಯ ಮುಂದೆ ಸೇರಿದರು. ಅಷ್ಟೊಂದು ಜನ ಸೇರಿದರು ಆ ಸ್ಥಳ ಸದ್ದಿಲ್ಲದೆ ಮೌನವಾಗಿತ್ತು. ಅಲ್ಲಲ್ಲಿ ಪಿಸು ಪಿಸು ಮಾತು ಬಿಟ್ಟರೆ ಇನ್ನೇನು ಸದ್ದಿಲ್ಲ. ಜನರೆಲ್ಲಾ ಗಾಬರಿಯಾಗಿ ಊರಿಗೆ ಏನು ಆತಂಕ ಕಾದಿದೆಯೋ ಎಂದು ಕೊಂಡರು
ಪೂಜಾರಪ್ಪನಂತು ಸದ್ದಿಲ್ಲದೆ ಸರಿದು ನಿಂತಿದ್ದರು. ಅವರ ಮನೆಯವರೆಲ್ಲಾ ಪಕ್ಕದಲ್ಲಿ ನಿಂತಿದ್ದರು. ಯಾರಿಗೂ ಏನೂ, ಮಾಡಲು ತೋಚುತ್ತಿಲ್ಲ.
ಆಗ ಯಾರೋ ಆ ಊರಿನಲ್ಲಿದ್ದ ಸಾಧಕ. ಅತಿ ಹಿರಿಯ ಜೀವ, ಬ್ರಹ್ಮಚಾರಿ, ದೇವರನ್ನು ಒಲಿಸಿಕೊಂಡವರು ಸುತ್ತೂರಿಗೆ ಪ್ರಸಿದ್ಧಿಯನ್ನು ಪಡೆದ ಧರ್ಮಯ್ಯನವರನ್ನು ಕರೆಯುವಂತೆ ಸಲಹೆ ನೀಡಿದರು. ಅದರಂತೆ ಅವರನ್ನು ಕರೆದುಕೊಂಡು ಬಂದರು. ಅವರು ಬಂದವರೇ ಊರಿನ ಜನರ ಕಡೆಗೊಮ್ಮೆ, ನೋಡಿದರು ದೇವಸ್ಥಾನದ ಒಳಗೆ ಹೋಗಿ ಗರ್ಭಗುಡಿಯ ಬಾಗಿಲು ಹಾಕಿಕೊಂಡರು. ಸುಮಾರು ಒಂದು ತಾಸು ಹೊರಬರಲಿಲ್ಲ. ಏನಾಯಿತೆಂಬ ಆತಂಕ ಎಲ್ಲರಲ್ಲಿಯೂ ಮನೆಮಾಡಿತ್ತು.
ಹೊರಗೆ ಬಂದ ಹಿರಿಯ ಸಾಧಕರು, ಹೆದರುವ ಅವಶ್ಯಕತೆಯಿಲ್ಲ, ಊರಿಗೆ ಬರುವ ಆಪತ್ತನ್ನು ದೇವಿ ತಡೆದಿದ್ದಾಳೆ. ಆದ್ದರಿಂದ ಹೀಗಾಗಿದೆ ಎಂದರು. ಊರಿನ ಜನಕ್ಕೆ ದೇವಿಗೆ ಶಾಂತವಾಗುವಂತೆ ಬೇಡಿಕೊಳ್ಳಲು ಹೇಳಿ ಹೊರಟುಹೋದರು. ಜನರೆಲ್ಲಾ ಹಣ್ಣುಕಾಯಿ ತಂದು ದೇವಿಗೆ ಮಂಗಳಾರತಿ ಮಾಡಿಸಿದರು. ಜನರ ದುಗುಡ ಕಡಿಮೆಯಾಗಿತ್ತು. ನಂತರ ಊರ ಹಿರಿಯರೆಲ್ಲಾ, ಸೇರಿ ಹೋಮ-ಹವನಗಳನ್ನು ಮಾಡಿ ಶುದ್ದಿ ಮಾಡಿಸಿ, ವಿಗ್ರಹವನ್ನು ಶುಚಿಗೊಳಿಸಿದರು.
ಪೂಜಾರಪ್ಪ ಮತ್ತೆ ಮೊದಲಿನಂತೆ ಗೆಲುವಾದರು. ಪಾರುವಿಗೆ ಈಗ ಆ ಘಟನೆ ನೆನಪಾಯಿತು. ಪಾರು, ಯಾವುದೋ ಮುಂಬರುವ ಕೆಡಕು ತಪ್ಪಿತು. ಎಂದುಕೊಂಡು ಮಳೆ ನಿಂತಿದ್ದರಿಂದ ಜಾತ್ರೆಗೆ ಹೋಗಲು ಮಕ್ಕಳನ್ನು ಕರೆದಳು.
ದಿವ್ಯ ಎಲ್. ಎನ್. ಸ್ವಾಮಿ
1 Comment
ಚಂದದ ಕಥೆ ಪಾರು ಕೊಥೆ