ಪ್ರತ್ಯಗಾತ್ಮ ಚಿಂತನ (ನೇನಂಶಿ) – 29

ಹಾಲು ನೀರುಗಳೊಳಗೆ ಹಾಲು ಉತ್ತಮವೆಂದು
ಮೇಲಾದ ಹಾಲಿನಲಿ ಬಾಳೆಂದು ಮೀನ –
ಮೇಲೆತ್ತಿ ನೀರಿನಿಂ ಹಾಲಿನೊಳು ಹಾಕಿದರೆ
ಬಾಳಲಾರದು ಕಾಣ- || ಪ್ರತ್ಯಗಾತ್ಮ ||

ಆವೇಶಕೊಳಗಾಗಿ ದಾನ ಮಾಡಲು ಬೇಡ
ಆವೇಶವಿಳಿದಾಗ ಪರಿತಪಿಸಬೇಡ
ಆವ ಪರಿಯಲು ನೀನು ಮತಿ ವಿಕಳನಾಗದಿರು
ಆವೇಶ ಸಲ್ಲದೈ- || ಪ್ರತ್ಯಗಾತ್ಮ ||

ಹದವರಿತು ಪಾಳಿಸುವ ಕಲ್ಕುಟಿಕ ವಡ್ಡನೇಂ ?
ಮಿದುವಾದ ಮೇಣವೇಂ ಕಲ್ಲು ಅರೆಬಂಡೆ ?
ಚದುರನಹ ರೂವಾರಿಗೀ ಹೆಸರು ತರವಲ್ಲ
ಅದ ವಿಚಾರಿಸಿ ನೋಡು – || ಪ್ರತ್ಯಗಾತ್ಮ ||

ಮತದ ಲಾಂಛನ ಧರಿಸೆ ಸಂಕೋಚವೇಕಯ್ಯ ?
ಸತಿಯ ಕ್ಯೆ ಹಿಡಿವಾಗ ಮತ ಧರ್ಮ ಬೇಕು
ಮೃತನ ಸಂಸ್ಕಾರಗಳು ಮತ ಧರ್ಮಕನುಸಾರ
ಮತ ಬಿಟ್ಟು ಬಾಳುವೆಯ ?- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *