ಮೂಡಣಕೆ ಮುಖಮಾಡಿ ಜಲಬಾಧೆ ಮಾಡದಿರು
ಮೂಡುವೆಳನೇಸರನು ಭಕ್ತಿಯಲಿ ನಮಿಸು
ಗಾಢ ಭಕ್ತಿಯ ಬೆರೆಸಿ ತಾಯ್ ತಂದೆಗಳಿಗೆರಗು
ಓಡುವುದು ಕಷ್ಟಗಳು- || ಪ್ರತ್ಯಗಾತ್ಮ ||
ಕೈ ಗೂಡದಿರುವಂಥ ಆಸೆ ಆಕಾಂಕ್ಷೆಗಳು
ಮೈಗೂಡಿ ಫಲಿಸುವುದು ಇರುಳ ಕನಸಿನಲಿ
ಆಗಾಗ ಮೂಡಿಬಹ ಕನಸು ದೇವನು ಇತ್ತ
ಕೈಗಾಣ್ಕೆ ಎಂದು ತಿಳಿ- || ಪ್ರತ್ಯಗಾತ್ಮ ||
ಸೊಬಗಿನಲಿ ಸರಿಕಾಣೆ ವಿಶ್ವದಲಿ ಈ ಭುವಿಗೆ
ನಭ ನೀ, ಇನ ಶಶಿಗಳುದಯಾಸ್ತ ಭವ್ಯ
ಅಬುಧಿ ನೀಲಿಯ ಜೊತೆಗೆ ಸಸ್ಯ ಶ್ಯಾಮಲ ವರ್ಣ
ಸುಭಗ ದೃಶ್ಯಾವಳಿಯೊ – || ಪ್ರತ್ಯಗಾತ್ಮ ||
ವಿಧವಿಧದ ವರ್ಣಗಳ ಪುಷ್ಪಗಳು ನೂರಾರು
ವಿಧವಿಧ ಸುವಾಸನೆಯ ಕುಸುಮಗಳು ಎನಿತೊ!
ವಿಧವಿಧದ ಆಕಾರ ಗಿಡದ ಹೂ, ಬಳ್ಳಿಯೂ
ಹೃದಯ ವಿಕಸನಕಾರಿ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ