ಪ್ರತ್ಯಗಾತ್ಮ ಚಿಂತನ (ನೇನಂಶಿ) – 58

ಎರಡು ಜೀವಗಳೊಂದು ಗೂಡುವುದೆ ಪರಿಣಯವು
ವರದಕ್ಷಿಣೆಯ ಪಿಡುಗು ಇದಕೊಂದು ವಿಘ್ನ
ವರನ ತಾಯ್ ತಂದೆಗಳು ಆತ್ಮ ಶೋಧನೆಗೈಯೆ
ಪರಿಹಾರವಿದಕುಂಟು- || ಪ್ರತ್ಯಗಾತ್ಮ ||

ಜೀವವೆರಡರ ಮಧುರ ಮಿಲನವಲ್ಲವೆ ಮದುವೆ!
ಆ ವಿಚಾರವ ಮರೆಯಲಿನ್ನೇಕೆ ಮದುವೆ?
ಆವ ಪುರುಷಾರ್ಥಕ್ಕೆ ವರದಕ್ಷಿಣೆಯ ತೆರುವೆ?
ಹೂವಲ್ಲ ಹಾವಾಗು- || ಪ್ರತ್ಯಗಾತ್ಮ ||

ಹೊಸಗರಿಯ ಚಪ್ಪರವು, ಮಾವಿನೆಲೆ ತೋರಣವು
ಬಿಸಿಯಾದ ರುಚಿಯಾದ ಭಕ್ಷ್ಯಭೋಜ್ಯಗಳು
ಒಸಗೆ ವಾದ್ಯದ ಮೊಳಗು, ಪ್ರಸದನದ ಸಡಗರವು
ರಸಿಕತೆಯ ನೆಲೆ ಮದುವೆ- || ಪ್ರತ್ಯಗಾತ್ಮ ||

ನೆಂಟರಿಷ್ಟರ ಕೂಟ, ತುಂಟ ಮಕ್ಕಳ ಆಟ
ಸೊಂಟ ತಿರುವುತ ಬರಿದೆ ಹೆಣ್‍ಗಳೋಡಾಟ
ನೆಂಟತನ ಸೋಗಿನೊಳು ಗಂಟು ಹೊಡೆದವರ
ವೈಕುಂಠವೈ ಮದುವೆ ಮನೆ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *