ಪ್ರತ್ಯಗಾತ್ಮ ಚಿಂತನ (ನೇನಂಶಿ) – 6

ಚಿಟಿಕೆ ಹೊಡೆವಷ್ಟರಲಿ ಹೇಳಿ ಮುಗಿಸುವ ಕವನ
ಪಠಿಸಿದರೆ ಸಾಕೊಮ್ಮೆ ನೆನಪಿಗೂ ಸುಲಭ.
ಜಟಿಲತೆಯ ತೊಡಕಿಲ್ಲ; ಸುಲಿದ ಬಾಳೆಯ ಹಣ್ಣು
ಚುಟುಕ ಹೃದಯಂಗಮವು- || ಪ್ರತ್ಯಗಾತ್ಮ ||

ಹೂವಿಂದ ಹೂವಿಂಗೆ ಹಾರುತ್ತ ತಂದಿರುವೆ
ಹೂವೊಡಲೊಳಿದ್ದಂಥ ಮಕರಂದವನ್ನು
ನೀವಿದನು ಸವಿನೋಡಿ ಮೆಚ್ಚಿದರೆ ಬಂಡುಣಿಗೆ
ಆವುದಿದೆ ಬೇರೆ ಸುಖ?- || ಪ್ರತ್ಯಗಾತ್ಮ ||

ಈ ಜಗದಿ ದುಃಸಾಧ್ಯವೆಂಬುದಾವುದೂ ಇಲ್ಲ
ಸಜ್ಜನ ಮಹಾಮಹಿಮ ಪುರುಷ ಸಿಂಹನಿಗೆ,
ಆಂಜನೇಯನು ತಾನು ಶರಧಿಯನೆ ದಾಟಿದನು
ಸೋಜಿಗವದೇನಲ್ಲ- || ಪ್ರತ್ಯಗಾತ್ಮ ||

ಯಾವುದೇ ವಿಷಯದಲಿ ಸಂಶಯವು ಮೂಡಿರಲು
ಯಾವ ವ್ಯಕ್ತಿಯ ಕಡೆಗೂ ಹೋಗದಿರು ಒಡನೆ,
ಸಾವದಾನದಿ ಕುಳಿತು ಆತ್ಮಚಿಂತನೆ ಮಾಡು
ಕಾವುದೈ ನಿನ್ನರಿವು- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ

Related post

Leave a Reply

Your email address will not be published. Required fields are marked *