ಬದುಕು ಜಟಕಾಬಂಡಿ – ಅನಂತ್ ಕುಣಿಗಲ್

ಬದುಕು ಜಟಕಾಬಂಡಿ – ಕಥಾಸಂಕಲನ

ಕಥಾಸಂಕಲನ: ಬದುಕು ಜಟಕಾ ಬಂಡಿ
ಲೇಖಕರು : ಅನಂತ್ ಕುಣಿಗಲ್
ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್

ನಾವು ಬೆಳೆದ ಪರಿಸರ, ಹೊಂದಿಕೊಂಡ ಜಾಗ, ಹಚ್ಚಿಕೊಂಡ ಜನಗಳು ಒಮ್ಮೊಮ್ಮೆ ನಮ್ಮ ಹವ್ಯಾಸ, ಆಸಕ್ತಿಗಳ ಆಯ್ಕೆಯನ್ನ ನಿರ್ಧರಿಸಿಬಿಡುತ್ತವೆ… ಅಂತೆಯೇ ಅನಂತ್ ಅವರ ಬರಹದ ಬದುಕಿಗೆ ಸ್ಪೂರ್ತಿ ಮತ್ತು ಶಕ್ತಿಯಾಗಬಲ್ಲ ಎಲ್ಲ ಚೇತನ, ಅಚೇತನಗಳಿಗೆ ನಾನು ಮನಪೂರ್ವಕವಾಗಿ ವಂದಿಸುವೆ. ಅಂತೆಯೇ ಕಂಡು ಕೇಳಿದ ಘಟನೆಗಳನ್ನ ವಸ್ತುವಾಗಿಸಿಕೊಂಡು ಕಥೆ ಬರೆದು ಸಹೃದಯರಿಗೆ ಹಂಚಿದ ಅನಂತ್ ಕುಣಿಗಲ್ ಅವರಿಗೂ..

ಲೇಖಕರ ಪರಿಚಯ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಜನಿಸಿದ ಅನಂತ್ ಕುಣಿಗಲ್ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ತಮ್ಮ ಸಾಹಿತ್ಯಾಸಕ್ತಿಯಿಂದಾಗಿ “ಅವ್ವ ಪುಸ್ತಕಾಲಯ” ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನ, ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿ, ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ ಬುಕ್ ಬ್ರಹ್ಮ ಕಥಾ ಹಾಗೂ ಕವನ ಬಹುಮಾನಗಳೂ ಸಂದಿವೆ. ಋಣಭಾರ (ಕಥಾಸಂಕಲನ), ರೌದ್ರಾವರಣಂ (ಕಾದಂಬರಿ), ಬದುಕು ಜಟಕಾ ಬಂಡಿ ಹಾಗು ಮೂರನೆಯವಳು ಮತ್ತು ಎದೆಯ ದನಿ ಕೇಳಿರೋ ಎಂಬ ಎರಡು (ಕವನಸಂಕಲನ) ಇವಿಷ್ಟೂ ಇದುವರೆಗೂ ಬಿಡುಗಡೆಯಾಗಿರುವ ಅನಂತ್ ಅವರ ಪುಸ್ತಕಗಳು. ಪ್ರಸ್ತುತ ಇವರ ರೌದ್ರಾವರಣಂ ಕಾದಂಬರಿಯು ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿಗೆ ಅಂತಿಮ ಪಟ್ಟಿಯಲ್ಲಿ ಸೇರಿತ್ತು.

ಬದುಕು ಜಟಕಾ ಬಂಡಿ ಕಥಾಸಂಕಲನದಲ್ಲಿ ಒಟ್ಟು 20 ಕಥೆಗಳಿವೆ. ಅದರಲ್ಲಿ 10 ಸಣ್ಕತೆ, ಇನ್ನು 10 ಪುಟ್ಕತೆ. ಗಿರಿಜನರ ಬದುಕಿನ ಹೋರಾಟದ ಕಥೆ ಹೇಳುವ ‘ಒಂದು ಹೋರಾಟದ ಕಥೆ’ (ಇದನ್ನ ಓದೋವಾಗ ಉಮಾಶ್ರೀ ಮ್ಯಾಡಮ್ ಗೆ ಸಾಕವ್ವನ ಪಾರ್ಟ್ ಹಾಕ್ಸಿ ಸಿನ್ಮ ಮಾಡಿ ನೋಡಿ ಬಿಟ್ಟೆ ನಾನು.) ಮೀನುಗಾರನ ಬಾಳ ಅತೀ ಸೂಕ್ಷ್ಮ ಚಿತ್ರಣಗಳನ್ನ ಕಟ್ಟಿಕೊಡುವ ‘ಬಯಲ ತೊರೆದ ಹಾಡು’. ಎಂಬ ಕಥೆ. ಸಾಮಾಜಿಕ ಜಾಲತಾಣಗಳಲ್ಲಿ ಲೈಕ್, ಕಾಮೆಂಟ್, ಅನ್ನೋ ಸಿಲ್ಲಿ ಸಿಲ್ಲಿ ಮ್ಯಾಡರ್ ಗಳಿಗಾಗಿ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುವ ಅಥ್ವಾ ಆ ನಿರ್ಧಾರ ಮಾಡಿದಂತೆ ನಟಿಸಿ ಇನ್ನೊಬ್ಬರ ಜೀವನವನ್ನ ಬಲಿ ಪಡೆಯುವಂತಹ ದುರಂತಗಳ ಕುರಿತು ಕಾಳಜಿ ವಹಿಸಿ ಬರೆದ #ಟ್ಯಾಗ್ ಕಥೆ. ಟ್ಯಾಗ್ ಕುಣಿಕೆಯೇ ಎನಿಸುವಷ್ಟು ಸ್ಪಷ್ಟ ಬರೆಹ ನಿಜಕ್ಕೂ ಪ್ರಸ್ತುತ ಎನ್ನಿಸುತ್ತದೆ. ಸಿನ್ಮಾ ಮಾಡಲು ಬಂದವನಿಗೆ ಸುನೀತೆಯ ಜೀವನವೇ ಸಿನ್ಮಾ ಎನಿಸಿದ್ದು ‘ದೇಹ ದೇಗುಲ’ ಎಂಬ ಗಣಿಕೆಯರ ಬಾಳ ಪಯಣದ ಭಯೋಗ್ರಫಿಯನ್ನ ಕಣ್ಣಿಗೆ ಕಟ್ಟಿದಂತೆ ಕಂಡಾಗ, ಕೇಳಿದಾಗ. ಅಸಲಿಗೆ ಜನಪದವೇ ಸಂಕ್ರಾಂತಿ ಹಬ್ಬದ ‘ಮೇಟ್ಕುಳಿ’ ಕಥೆ. ಬಾಲ್ಯದ ನೆನಪು ತರಿಸಿ, ದುರಂತದಲ್ಲಿ ಕೊನೆಗೊಳ್ಳುವ ಸರ್ಕಸ್ ಕಂಪನಿ ಮಾಲೀಕನ ಸಾವಿನ ಸಂಕಟದ ಕಥೆ ‘ಸರದಿ’.

ಪ್ರೇಮವೆಂದರೆ ನೀಡುವುದಷ್ಟೇ ಬೇಡುವುದಲ್ಲ, ಅದೊಂದು ಆತ್ಮಾನುಸಂಧಾನ… ನಮ್ಮೊಳಗೆ ನಮ್ಮನ್ನೇ ಮೌನವಾಗಿರಲು ಬಿಡದಿರುವಂತಹದ್ದು. ಪರಸ್ಪರ ಸಮರ್ಪಣಾ ಭಾವವಿದ್ದರೆ ಈ ನಿಬಂಧನೆಗಳೇಕೆ…? ಆದರೆ ಎದೆಯೊಳಗಿನ ಯಾಶಿಗೊಂದು ಕ್ಷಮಾ ಕೇಳಿದ್ದು ಅತ್ಯಂತ ಭಾವುಕ ಮತ್ತು ಭಾವನಾತ್ಮಕ. ಮಗನ ಜೀವಕ್ಕಾಗಿ ತಂದೆ ಜೀವವನ್ನೇ ಬಲಿ ತೆಗೆದುಕೊಂಡ ವಿಧಿಗೆ ಒಮ್ಮೆ ಥೂ ಅನ್ನೋ ಅಷ್ಟು ಮನದಾಳಕ್ಕೆ ಇಳಿವ ಕಥೆ ‘ವಿಸರ್ಜನೆ’. ಹೀಗೆ ‘ಕಪ್ಪು ಬಸ್ಸಿನ ನೀಲಿ ಸೀಟು’, ‘ಬೆಂಗಳೂರಿಗೆ ಬಂದ ಬೋರೇಗೌಡ’. ಸೇರಿದಂತೆ ‘ನಾಳೆ ಬಾ’. ‘ಫರ್ಪೆಕ್ಷನ್’. ‘ಡ್ರೈಫ್ರೂಟ್ಸ್ ದೆವ್ವ’.’ವಿಜಯಧಾರೆ’ ‘ಯದುಗದಾ’. ‘ಪ್ರಾರ್ಥನೆ’.’ಯಡವಟ್ಟು’. ‘ಕಾಲ್ಗೆಜ್ಜೆ’. ‘ಅವಳಲ್ಲ ಅವನು’…ಎಂಬ ತರಾವರಿ ಕಥೆಗಳ ಸರಣಿ ಮಳೆ ‘ಬದುಕು ಜಟಕಾಬಂಡಿ’ ಕಥಾಗುಚ್ಚ.
ನನಗೆ ಇಲ್ಲಿ ಅತ್ಯಂತ ಇಷ್ಟವಾಗಿದ್ದು, ಅತಿಯಾಗಿ ಕಾಡುವಂತಹದ್ದು ‘ ಹೆಣ್ಣೆಂದರೆ ಅಷ್ಟೇ ಸಾಕೆ?’ ಅನ್ನೋ ಒಂದು ಪುಟ್ಕತೆ. ಸುಮಿತ್ರೆ ಆಗಾಗ ಸುಮ್ಮನೆ ಕುಳಿತಾಗ ಕಣ್ಣೆದುರೇ ಬರಬಹುದು.

ಒಟ್ಟಿನಲ್ಲಿ ಅನಂತ್ ರವರ ಕಥಾಹಂದರದ ಸಮುದ್ರಯಲ್ಲಿ ಅರ್ಧ ರಾತ್ರಿ, ಅರ್ಧ ಬೆಳಗು ಮುಳಿಗೆದ್ದೆ, ಸಮುದ್ರದ ಭೋರ್ಗರೆತವೂ ಹಿಡಿಸಿತು… ಆಳವು ಅನಂತವೆನಿಸಿತು.
ಅನಂತ್ ರವರ ಬರಹದ ಬದುಕಿನ ಜಟಕಾಬಂಡಿ ತಡೆ ಇಲ್ಲದೆ ಮುಂದೆ ಮುಂದೆ ಸಾಗಲಿ….
ಹ್ಹಾ! ಪುಸ್ತಕದ ನನ್ನುಡಿಯಲ್ಲಿನ ಆ ಕೊನೆಯ ಸಾಲು… ನನಗೆ ತುಂಬಾ ಹಿಡಿಸಿತು.

ನಾನು ಪ್ರೀತಿ ಬಾಕ. ಪ್ರೀತಿ ಹೊರತು ಬೇರೇನೂ ಸೇರುವುದಿಲ್ಲ.”

ಈ ಪುಸ್ತಕ ಕೊಳ್ಳಲು ಸಂಪರ್ಕಿಸಿ ಅವ್ವ ಪುಸ್ತಕಾಲಯ: 8548948660, ಅಂಚೆ ವೆಚ್ಚ ಉಚಿತ

ಕು ವಿ
(ವಿಸ್ಮಿತ. ವಿ)

Related post

Leave a Reply

Your email address will not be published. Required fields are marked *