ಭಕ್ತರ ಕಾಯುವ ದೊಡ್ಡ ಕಾಯಪ್ಪ
ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ತೋವಿನಕೆರೆ ಬಳಿಯ ಕುರಮಕೋಟೆ ಎಂಬ ಹಳ್ಳಿಗೆ ಹೋದರೆ ಸಿದ್ದರ ಬೆಟ್ಟದ ಬುಡದಲ್ಲಿ ನೆಲೆಸಿ ಕಷ್ಟ, ರೋಗ ರುಜಿನ ಎಂದು ನೊಂದು ಬರುವ ಭಕ್ತರ ಅಭಿಲಾಷೆಯನ್ನು ಇಡೇರಿಸುತ್ತಾ ದೊಡ್ಡಕಾಯಪ್ಪ ಎಂಬ ಹೆಸರಿನಿಂದ ಇಲ್ಲಿ ಅಂಜನೇಯ ಸ್ವಾಮಿ ನೆಲೆ ನಿಂತಿದ್ದಾನೆ.
ಹಿಂದಿನಿಂದಲೂ ಇಲ್ಲಿಗೆ ಬರುವ ಭಕ್ತರಿಗೆ ಇರುವ ಖಾಯಿಲೆ ಹಾಗೂ ಕಷ್ಟ ನಿವಾರಣೆಯಾಗುತ್ತದೆಂಬ ನಂಬಿಕೆ ಇದ್ದು ಅದು ಹಾಗೆ ಮುಂದುವರೆದುಕೊಂಡು ಬಂದಿದೆ. ಈ ದೇವಸ್ಥಾನದ ಇತಿಹಾಸವನ್ನು ಹುಡುಕುತ್ತಾ ಹೋದರೆ ಅದು ನಿಮ್ಮನ್ನು ತ್ರೇತಾಯುಗಕ್ಕೆ ಕರೆದುಕೊಂಡು ಹೋಗುತ್ತದೆ.
ರಾಮ ರಾವಣನನ್ನು ಕೊಂದು ಜಯಸಾಧಿಸಿ ಸೀತೆ, ಲಕ್ಷ್ಮಣ ಹಾಗು ಅಂಜನೇಯನೊಡನೆ ಇದೇ ಸಿದ್ದರ ಬೆಟ್ಟದ ಮಾರ್ಗವಾಗಿ ಬರುತ್ತಿರುತ್ತಾನೆ. ಋಷಿಮುನಿಗಳು ಸಿದ್ದ ಪುರುಷರಿಂದ ತಮ್ಮ ಪಾಡಿಗೆ ತಾವು ತಪ್ಪಸ್ಸು ಆಚರಿಸಿಕೊಂಡಿದ್ದ ಈ ಸಿದ್ದರ ಬೆಟ್ಟದಲ್ಲಿ ಕಾಕಾಸುರನೆಂಬ ರಾಕ್ಷಸ ಋಷಿ ಮುನಿಗಳಿಗೆ ತೊಂದರೆ ಕೊಡುತ್ತಿದ್ದನು. ಆಗ ಇದೇ ಮಾರ್ಗವಾಗಿ ಬಂದ ಶ್ರೀರಾಮನಿಗೆ ಋಷಿಮುನಿಗಳು ಮೊರೆ ಹೋಗುತ್ತಾರೆ.
ಕಾಕಾಸುರನಿಗೂ ಹಾಗೂ ಶ್ರೀರಾಮನಿಗೂ ಯುದ್ದವಾಗುತ್ತದೆ. ರಾಮನನ್ನು ಎದುರಿಸಲಾಗದೆ ಕಾಕಾಸುರ ಶರಣಾಗುತ್ತಾನೆ. ಕಾಕಾಸುರನನ್ನು ಕೊಲ್ಲಬಾರದೆಂದು ಆತನ ಒಂದು ಕಣ್ಣನ್ನು ಮಾತ್ರ ತೆಗೆಯುತ್ತಾನಲ್ಲದೇ ಸಿದ್ದರ ಬೆಟ್ಟದಲ್ಲಿ ವಾಸ ಮಾಡಬಾರದೆಂದು ಹೇಳುತ್ತಾನೆ. ಅದರಂತೆ ಯುದ್ದದಲ್ಲಿ ಸೋತ ಕಾಕಾಸುರ ಸಿದ್ದರ ಬೆಟ್ಟವನ್ನು ಬಿಟ್ಟು ಹೋಗುತ್ತಾನೆ. ಆವಾಗಿನಿಂದ ಸಿದ್ದರ ಬೆಟ್ಟದಲ್ಲಿ ಕಾಗೆಗಳು ಇಂದಿಗೂ ಗೂಡು ಕಟ್ಟುವುದಿಲ್ಲವೆಂಬ ನಂಬಿಕೆ ಇದೆ. ಇದಾದ ನಂತರ ಶ್ರೀರಾಮ ಅಂಜನೆಯನಿಗೆ ಇಲ್ಲೇ ನೆಲೆ ನಿಂತು ಭಕ್ತರನ್ನು ಉದ್ದರಿಸಬೇಕೆಂದು ಹೇಳುತ್ತಾನೆ. ಅದರಂತೆ ಸಿದ್ದರಬೆಟ್ಟದ ಅರ್ಧಕ್ಕೆ ಒಂದು ಹೆಜ್ಜೆ, ಬೆಟ್ಟದ ಬುಡದಲ್ಲಿ ಈಗಿರುವ ದೇವಸ್ಥಾನದ ಹಿಂಬದಿಯಲ್ಲಿ ಒಂದು ಹೆಜ್ಜೆ ಹಾಗೂ ಈಗಿರುವ ದೇವಸ್ಥಾನದ ಬಳಿ ಒಂದು ಹೆಜ್ಜೆ ಇಟ್ಟು ಬಂದ ದೊಡ್ಡಕಾಯ ಹೊಂದಿದ ಅಂಜನೇಯ ಋಷಿ ಮುನಿ ಸಿದ್ದ ಪುರುಷರಿಗೆ ಅಭಯ ನೀಡಿ ಅದೃಷ್ಯನಾಗುತ್ತಾನೆ.
ತ್ರೇತಾಯುಗದ ಅಂತ್ಯದಲ್ಲಿ ಈ ಪ್ರಾಂತ್ಯವನ್ನು ಕೊರಂಗರಾಯ ಎಂಬ ಪಾಳೇಗಾರ ಆಳುತ್ತಿರುತ್ತಾನೆ. ಅಂಜನೇಯಸ್ವಾಮಿಯ ಮಹಿಮೆಯನ್ನು ತಿಳಿದಿದ್ದ ಕೊರಂಗರಾಯ ಅಂಜನೇಯ ಮೂರನೇ ಹೆಜ್ಜೆ ಇಟ್ಟ ಸ್ಥಳದಲ್ಲಿ ತ್ರೇತಾಯುಗದ ಅಂತ್ಯದಲ್ಲಿ ದೇವಸ್ಥಾನವನ್ನು ಕಟ್ಟಿಸಿದ ಎಂದು ಇತ್ತಿಹಾಸ ಹೇಳುತ್ತದೆ. ಇಲ್ಲಿರುವ ಮೂರ್ತಿ 9 ಅಡಿ ಎತ್ತರವಿದ್ದು ವಿಶಾಲ ದೇಹವನ್ನು ಹೂಂದಿರುವುದರಿಂದ ದೊಡ್ಡಕಾಯಪ್ಪ ಎಂಬ ಹೆಸರೂ ಬಂದಿರಬಹುದೆಂದು ಪ್ರತೀತಿ.
ಈ ದೇವಸ್ಥಾನದ ಹಿಂಭಾಗದಲ್ಲಿ ಹತ್ತು ಅಡಿ ಅಗಲ ಎಂಟು ಅಡಿ ಆಳದ ಪುಷ್ಕರಣಿ ಇದ್ದು ಸದಾ ಇದರಲ್ಲಿ ನೀರಿರುವುದು ದೇವರ ಮಹಿಮೆಯೆ ಸರಿ, ಅಲ್ಲದೇ ಇದನ್ನು ಸಂಜೀವಿನಿ ಕೊಳ ಎನ್ನುತ್ತಾರೆ. ಇದೇ ನೀರನ್ನು ಸ್ವಾಮಿಯ ಅಭಿಷೇಕಕ್ಕೂ ಬಳಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಈ ಕೊಳದಲ್ಲಿ ಮಿಂದು ಸ್ವಾಮಿಯ ಸೇವೆ ಮಾಡಿದರೆ ಸಕಲ ಇಷ್ಟಾರ್ಥಗಳು ಈಡೆರುತ್ತದೆ. ಬುದ್ದಿ ಬ್ರಮಣೆ, ಗ್ರಹದೋಷ, ರೋಗರುಜಿನಗಳಿಂದ ನರಳುವ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಗುಣ ಹೊಂದಿದ್ದಾರೆ ಎನ್ನುತ್ತಾರೆ ಇಲ್ಲಿನ ಅರ್ಚಕರಾದ ಶ್ರೀ ಶ್ರೀನಿವಾಸ್‌ರವರು. ಬಹಳ ಮಂದಿ ಇಲ್ಲಿ ಬಂದು ದೇವಸ್ಥಾನದ ಆವರಣದಲ್ಲೇ ಒಂದು ರಾತ್ರಿ ಮಲಗಿ ಸೇವೆ ಮಾಡಿದರೆ ಬೇಗ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಕೊರಂಗರಾಯ ಕಟ್ಟಿಸಿದ್ದ ಕೋಟೆಯ ಅಳಿದುಳಿದ ಭಾಗ ಅರ್ಧ ಚಂದ್ರಾಕಾರದ ಶಿಥಿಲವಾದ ಕೋಟೆಯ ಏರಿ ಬೆಟ್ಟದಲ್ಲಿ ಈಗಲೂ ಕಾಣುತ್ತದೆ. ದೇವಸ್ಥಾನ ಶಿಥಿಲವಾಗಿದ್ದರಿಂದ ಇತ್ತೀಚೆಗೆ ಹೊಸ ದೇವಸ್ಥಾನ ಹಾಗೂ ದೂರದಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಭವನವನ್ನು ನಿರ್ಮಿಸಲಾಗಿದೆಯಲ್ಲದೇ ಊಟದ ವ್ಯವಸ್ಥೆಯೂ ಇದೆ. ವಿಶೇಷ ಹಬ್ಬ ಹರಿದಿನಗಳ ಸಂಧರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ರಥೋತ್ಸವಗಳು ನೆಡೆಯುತ್ತದೆ.
ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ತೋವಿನಕೆರೆ ತಲುಪಿ ಅಲ್ಲಿಂದ ಕುರಮಕೋಟೆ ದೊಡ್ಡಕಾಯಪ್ಪ ಅಂಜನೇಯ ದೇವಸ್ಥಾನವನ್ನು ತಲುಪಬಹುದು. ದೇವಸ್ಥಾನದ ಪ್ರಶಾಂತ ವಾತಾವರಣ ಹಾಗೂ ದೇವಸ್ಥಾನದ ಹಿಂಬಾಗದಲ್ಲಿರುವ ಸಿದ್ದರಬೆಟ್ಟ ನೋಡಲು ರಮಣೀಯವಾಗಿದ್ದು ಮನಸ್ಸಿಗೆ ಮುದನೀಡುತ್ತದೆ. ಶನಿವಾರಗಳಂದು ಭಕ್ತರಿಗೆ ಇಲ್ಲಿ ಊಟದ ವ್ಯವಸ್ಥೆ ಇರುತ್ತದೆ. ವಾರಾಂತ್ಯದಲ್ಲಿ ಪರಿವಾರದೊಡನೆ ಹೋಗಿಬರಲು ಇದು ಹೇಳಿ ಮಾಡಿಸಿದ ಜಾಗ.
ಡಾ. ಪ್ರಕಾಶ್.ಕೆ.ನಾಡಿಗ್