ಮನೆಯಂಗಳದ ಅಪ್ಸರಾ – ಪಾರಿಜಾತ ಪುಷ್ಪ

ಮನೆಯಂಗಳದ ಅಪ್ಸರಾ ‘ಪಾರಿಜಾತ’ ಪುಷ್ಪ

ಪಾರಿಜಾತ ಹೆಸರಲ್ಲೇ ಏನೋ ವಿಶೇಷ ಶಕ್ತಿ ಅಥವಾ ಅದೇನೋ ಅವರ್ಣನೀಯವಾದ ಸೊಗಡು ಇದೆ ಅಲ್ಲವೇ..? ಹೌದು ಇದು ಪುಷ್ಪ ಪ್ರಬೇಧದಲ್ಲೇ ವಿಶೇಷ ಸ್ಥಾನಮಾನ ಪಡೆದಿರುವ ಹೂವು. ದೇವತೆಗಳು ಮತ್ತು ಅಸುರರು ತಪಸ್ಸಿನ ಮೂಲಕ ವರಪ್ರಸಾದವಾಗಿ ಪಡೆದುಕೊಂಡ ಅಮೃತವನ್ನು ಹಂಚಿಕೊಳ್ಳಲು ನಡೆಸಿದ ಸಮುದ್ರ ಮಥನದ ಸಂದರ್ಭದಲ್ಲಿ ಕ್ಷೀರ ಸಮುದ್ರದಿಂದ ಹದಿನಾಲ್ಕು ಅಮೂಲ್ಯ ರತ್ನಗಳು ಹಾಗೂ ಐದು ಕಲ್ಪವೃಕ್ಷಗಳು ಹುಟ್ಟಿದವೆಂದು ನಂಬಿಕೆಯಿದೆ. (ಕಲ್ಪವೃಕ್ಷವೆಂದರೆ ಕೇಳಿದ್ದನ್ನೆಲ್ಲಾ ಕೊಡುವ ಮರ) ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ನಾರೀಕೇಳ (ತೆಂಗು) ಮತ್ತು ಹರಿಚಂದನ.

ಕೃಷ್ಣಾವತಾರದ ಕಾಲದಲ್ಲಿ ಭಗವಾನ್ ಶ್ರಿಕೃಷ್ಣನು ದೇವಲೋಕದಿಂದ ಪಾರಿಜಾತ ಸಸ್ಯವನ್ನು ಸತ್ಯಭಾಮೆಯ ಅಂಗಳದಲ್ಲಿ ತಂದು ನೆಟ್ಟು, ಇದರ ಹೂವುಗಳು ರುಕ್ಮಿಣಿಯ ಅಂಗಳಕ್ಕೆ ಬೀಳುವಂತೆ ಮಾಡುತ್ತಾನೆ. ಈ ಮೂಲಕ ಸತ್ಯಭಾಮೆಯ ಮನದಲ್ಲಿ ಮನೆ ಮಾಡಿದ್ದ ದುರಹಂಕಾರ ನಿರ್ಮೂಲವಾಯಿತು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇನ್ನೊಂದು ಇತಿಹಾಸದ ಪ್ರಕಾರ ಸೂರ್ಯದೇವನನ್ನು ಪ್ರೀತಿಸುವ ಪಾರಿಜಾತಕ ರಾಜಕುಮಾರಿಯು ಸೂರ್ಯದೇವನಿಂದ ಉಪೇಕ್ಷೆಗೊಳಗಾಗುತ್ತಾಳೆ. ಇದರಿಂದ ಮನನೊಂದ ರಾಜಕುಮಾರಿಯು ಅಗ್ನಿಗೆ ತನ್ನ ಆತ್ಮಾರ್ಪಣೆಯನ್ನು ಮಾಡಿಕೊಳ್ಳುತ್ತಾಳೆ. ಹೀಗೆ ಪಾರಿಜಾತಕಳ ಚಿತಾಭಸ್ಮದಿಂದ ಪಾರಿಜಾತ ಸಸ್ಯವು ಹುಟ್ಟಿದ್ದು, ಹೀಗೆ ಸೂರ್ಯಾಸ್ತದ ನಂತರ ಅರಳುವ ಈ ಹೂವು ಸೂರ್ಯೋದಯವಾಗುತ್ತಲೇ ಗಿಡದಿಂದ ಉದುರಿ ಬೀಳುವ ಮೂಲಕ ತಾನು ಮತ್ತೆಂದೂ ಸೂರ್ಯನನ್ನು ನೋಡಲಾರನೆಂಬ ಪಾರಿಜಾತಳ ಪ್ರತಿಜ್ಞೆಯನ್ನು ಈ ಹೂವು ಪಾಲಿಸುತ್ತದೆ ಎಂಬುವುದು ಆಸ್ತಿಕರ ಅಂಬೋಣವಾಗಿದೆ.

ಸೂರ್ಯನ ಗಾಢ ಕಿರಣವನ್ನು ಸಹಿಸುವ ಶಕ್ತಿ ಇಲ್ಲದೇ ಉದುರಿ ಬೀಳುವ ಈ ಹೂವಿನ ಗುಣದಿಂದಾಗಿ ಈ ಮರಕ್ಕೆ ‘ಸೊರಗಿದ ಮರ’ ವೆಂದೂ ಕರೆಯಲಾಗುತ್ತದೆ. ಪಾರಿಜಾತದಲ್ಲಿ ಎರಡು ಬಗೆಯಿದ್ದು, ಮೊದಲನೆಯದ್ದು ಆರು ಎಸಳುಗಳು ಪ್ರತ್ಯೇಕ ಪ್ರತ್ಯೇಕವಾಗಿದ್ದು ಮುದುರಿಕೊಂಡಿದ್ದರೆ, ಇನ್ನೊಂದು ಅಗಲ ಅಗಲವಾದ ದಳಗಳಿಂದ ಕೂಡಿದ್ದು ಒಂದಕ್ಕೊಂದು ಸೇರಿಕೊಂಡಿರುತ್ತದೆ. ಈ ಹೂವು ಸುವಾಸನೆ ಭರಿತವಾಗಿದ್ದು ಬಿಳಿಯ ಎಸಳುಗಳಿಂದ ಕೂಡಿದ್ದು ಕೇಸರಿ ತೊಟ್ಟನ್ನು ಹೊಂದಿದ್ದು, ಇದನ್ನು ಸ್ಪರ್ಶಿಸಿದರೆ ಸೊರಗಿ ಹೋಗುವುದೇನೋ ಎಂಬಷ್ಟು ಸೂಕ್ಷ್ಮದಳಗಳನ್ನು ಹೊಂದಿದೆ. ಈ ಸಸ್ಯವನ್ನು ಬೀಜದಿಂದ ಹಾಗೂ ಮಳೆಗಾಲದಲ್ಲಿ ಗೆಲ್ಲುಗಳನ್ನು ಕಡಿದು ನೆಡುವ ಮೂಲವೂ ವಂಶಾಭಿವೃದ್ಧಿಯನ್ನು ಮಾಡಬಹುದಾಗಿದೆ. ಈ ಹೂವಿನ ತೊಟ್ಟಿನಿಂದ ಪೂರ್ವಜರು ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಈ ಹೂವನ್ನು ತಿಳುವಳಿಕೆ ಮತ್ತು ಜ್ಞಾನದ ಸಂಕೇತವೆಂದು ಬಿಂಬಿಸಲಾಗುತ್ತದೆ.

ಸುಮಾರು ಹತ್ತರಿಂದ ಹದಿನೈದು ಅಡಿ ಎತ್ತರದವರೆಗೂ ಬೆಳೆಯಬಲ್ಲ ಈ ಸಸ್ಯಕ್ಕೆ ಆಂಗ್ಲ ಭಾಷೆಯಲ್ಲಿ ‘ನೈಟ್ ಜಾಸ್ಮಿನ್’ ಅಥವಾ ‘ಕೋರಲ್ ಜಾಸ್ಮಿನ್’, ‘ನಿಕೌಂಥಿಸ್ ಅರ್ಬಸ್ಟಿಸ್ಟಿಸ್’ ಎಂಬ ಹೆಸರಿದೆ. (ಇದರರ್ಥ ರಾತ್ರಿಯಲ್ಲಿ ಅರಳುವ ಹೂವು) ಸಂಸ್ಕೃತದಲ್ಲಿ ‘ಶೆಫಾಲಿಕಾ’, ಬಂಗಾಲಿ ಭಾಷೆಯಲ್ಲಿ ‘ಹರ್‌ಸಿಂಗಾರ್’, ಮಲಯಾಳದಲ್ಲಿ ‘ಪವಿಳ ಮಲ್ಲಿಗೆ’, ತಮಿಳಿನಲ್ಲಿ ‘ಮಂಜುಪೂವು’ ಎಂಬೆಲ್ಲಾ ಹೆಸರಿದೆ.

ಔಷಧೀಯ ಗುಣ ಹಾಗೂ ಉಪಯೋಗ

 ಆಯುರ್ವೇದ ವೈದ್ಯ ಶಾಸ್ತ್ರ ಹಾಗೂ ಸುಶ್ರುತ ವೈದ್ಯಶಾಸ್ತ್ರದ ಪ್ರಕಾರ ಪಾರಿಜಾತ ಸಸ್ಯದಲ್ಲಿ ವಿಶೇಷ ಔಷಧೀಯ
ಗುಣವಿದ್ದು ಇದರ ತೊಗಟೆಯಿಂದ ತಯಾರಿಸಲಾದ ಕಷಾಯದಿಂದ ಹುಣ್ಣು ಅಥವಾ ಗಾಯವನ್ನು ತೊಳೆದರೆ ಗಾಯವು ಶೀಘ್ರವಾಗಿ ಉಪಶಮನವಾಗುವುದು.
 ಪಾರಿಜಾತ ಬೀಜದ ಪುಡಿಯನ್ನು ಸೇವಿಸಿದರೆ ಜೀರ್ಣಾಗದ ತೊಂದರೆ ನಿವಾರಣೆಯಾಗುವುದು.
 ಈ ಮರದ ಎಲೆಯ ಮೇಲ್ಮೆಯ ದೊರಗು ಗುಣದಿಂದಾಗಿ ನಾಟಾವನ್ನು ಪಾಲೀಶ್ ಮಾಡಲೂ ಉಪಯೋಗಿಸುತ್ತಾರೆ.
 ಮಲಬದ್ಧತೆ ಹಾಗೂ ಮೂಲವ್ಯಾಧಿಯ ನಿವಾರಣೆಗೆ ಈ ಸಸ್ಯದ ಎಲೆಯ ರಸವನ್ನು ಬಳಸಿದರೆ ಉಪಶಮನವಾಗುವುದು.
 ಇದರ ಎಲೆಯಿಂದ ತೆಗೆಯಲಾದ ರಸವನ್ನು ಸೇವಿಸಿದರೆ ಹೊಟ್ಟೆಯ ಜಂತು ಹುಳ ಬಾಧೆ ಶಮನವಾಗುವುದು.
 ಇದರ ಎಲೆಯ ಕಷಾಯವು ಕೆಮ್ಮು ಮತ್ತು ನೆಗಡಿಗೆ ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ.
 ಹೂವನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು, ಇದರ ಹಿತವಾದ ಸುಗಂಧವು ತಲೆನೋವು ನಿವಾರಕ. ಇದರ ಹೂವನ್ನು ಅರೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದರೆ ಮುಖವು ಮೃದು ಮತ್ತು
ಕಾಂತಿಯುತವಾಗುತ್ತದೆ.
 ತಲೆಯ ಹುಣ್ಣುಗಳಿಗೆ ಪಾರಿಜಾತದ ಎಲೆಯನ್ನು ಅರೆದು ಹಚ್ಚುವುದರಿಂದ ಹುಣ್ಣುಗಳು ವಾಸಿಯಾಗುತ್ತದೆ.
 ಸಾಮಾನ್ಯವಾಗಿ ಯಾವುದೇ ಹೂವು ನೆಲಕ್ಕೆ ಬಿದ್ದಾಗ ಅವುಗಳನ್ನು ದೇವರಿಗೆ ಸಮರ್ಪಿಸಲಾಗುವುದಿಲ್ಲ. ಆದರೆ ಪಾರಿಜಾತ ಹೂವಿನ ಶ್ರೇಷ್ಠತೆಯಿಂದಾಗಿ ಇದಕ್ಕೆ ಹಾಗೂ ಬಕುಳದ ಹೂವಿಗೆ ವಿನಾಯಿತಿ ಇದೆ ಎಂಬುವುದು ದೈವಜ್ಞರ ಅಭಿಪ್ರಾಯವಾಗಿದೆ.

ಪುರಾಣಗಳಲ್ಲಿ ಬಹುವಾಗಿ ಕಂಡುಬರುವ ಈ ಪಾರಿಜಾತದ ಹೂವನ್ನು ಕಾಲ್ಪನಿಕ ಪುಷ್ಪವೆಂದು ಹೇಳಲಾಗಿದ್ದು ಸಸ್ಯಶಾಸ್ತ್ರಜ್ಞರ ಪ್ರಕಾರ ಇದು ಹೂವಲ್ಲವೆಂದು ಹೇಳಲಾಗಿದೆ. ಇದು ರಾತ್ರಿಯ ಹೊತ್ತೇ ಅರಳಿ ಸುಗಂಧವನ್ನು ಪಸರಿಸುವುದರಿಂದ ಇದನ್ನು ‘ಟ್ರೀ ಆಫ್ ಸ್ಯಾಡ್ನೆಸ್’ ಎಂದು ಕರೆಯಲಾಗುತ್ತದೆ. ಈ ಮರ ಸುಮಾರು 50 ರಿಂದ 60 ವರ್ಷಗಳೂ ಬೆಳೆಯಬಲ್ಲದು. ಈ ಹೂವು ಜುಲೈ ತಿಂಗಳಿನಿಂದ ನವೆಂಬರ್ ವರೆಗೆ ರಾಶಿ ರಾಶಿಯಾಗಿ ಹೂವನ್ನು ಸುರಿಸಿ ಗಿಡದ ಸುತ್ತ ನೆಲದಲ್ಲಿ ಹೂವಿನ ಹಾಸಿಗೆ ಹರಡಿದಂತೆ ಕಾಣಿಸುತ್ತದೆ. ಇದರ ಎಲೆಗಳ ಮೇಲ್ಮೆಯು ಉಪ್ಪಿನ ಪದರದಂತೆ ತುಸು ಒರಟಾಗಿರುತ್ತದೆ. ಮಹಾರಾಷ್ಟ್ರದ ಕಪ್ಪು ಮಣ್ಣು ಮತ್ತು ಹಾಗೂ ಇಲ್ಲಿನ ಹವಾಮಾನ ಇದಕ್ಕೆ ಅತ್ಯಂತ ಸೂಕ್ತವಾಗಿದೆ. ಇದು ಅಸ್ಸಾಂ ರಾಜ್ಯದ ಈಶಾನ್ಯ ಭಾಗದ ಕಾಡುಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಮನೆಯಂಗಳದಲ್ಲಿ ಒಂದು ಪಾರಿಜಾತ ಗಿಡವಿದ್ದರೆ ಸಾಕು ಸುತ್ತಮುತ್ತಲಿನ ಪ್ರದೇಶವನ್ನು ತಂಪಾಗಿಸುತ್ತದೆ. ಸಂಜೆ ಮತ್ತು ರಾತ್ರಿ ವೇಳೆ ಹೂವನ್ನು ಅರಳಿಸಿ ಕಂಪನ್ನು ಪಸರಿಸುವ ಈ ಹೂವನ್ನು ನೋಡಿದವರು ಇದನ್ನು ದೇವಲೋಕದ ಪುಷ್ಪವೆನ್ನದೇ ಇರಲಾರರು. ಖ್ಯಾತ ಕವಿಗಳಾದ ದ.ರಾ ಬೇಂದ್ರೆಯವರು ‘ಮೊದಲು ಸಂಜೆಗೆಂಪು ಹಿಂದೆ ಬೆಳದಿಂಗಳು’ ಎಂದು ಪಾರಿಜಾತ ಹೂವು ಮತ್ತು ಇದರ ತೊಟ್ಟಿನ ಕುರಿತು ವರ್ಣನಾತ್ಮಕವಾಗಿ ಬರೆದಿದ್ದಾರೆ.

ಸಂತೋಷ್ ರಾವ್. ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ದ.ಕ ಜಿಲ್ಲೆ
ದೂ: 9742884160

Related post

Leave a Reply

Your email address will not be published. Required fields are marked *