ಮನೆ ಕೆಲಸದ ಹುಡುಗಿ

ಮನೆ ಕೆಲಸದ ಹುಡುಗಿ

ಮೂರಕ್ಕೆ ಮೂರು ಸೇರಿಸಿದರೆ
ಸಾಲಿಗೆ ಸೇರುವಷ್ಟು ವಯಸ್ಸಾಗುವ ಹುಡುಗಿ
ತರಾತುರಿಯಲ್ಲಿ ಮನೆಗೆಲಸಕ್ಕೆ ತಯಾರಾದಳು

ದುಂಡು ತಲೆಯಲ್ಲಿ ದುಂಡು ಮಲ್ಲಿಗೆ ಮುಡಿದು
ತುರುಬು ಕಟ್ಟುವ ತಲೆಯ ಕೂದಲು ಕತ್ತರಿಸಿ
ಎಣ್ಣೆಯ ಬರಕ್ಕೆ ಹೆದರಿ
ತುಸು ತಲೆಯ ಬಾರ ಇಳಿಸಿಕೊಂಡಿದ್ದಳು

ಕರಾರು ಒಪ್ಪಂದಕ್ಕೆ
ಅಂದದ ಮುಖದ ನಗುವನ್ನು
ಒತ್ತೆ ಇಟ್ಟ ಅವ್ವನ ಹೆಬ್ಬೆಟ್ಟು
ಒಬ್ಬಟ್ಟು ತಿಂದದ್ದು ಅಪ್ಪನ ಪುಣ್ಯಸ್ಮರಣೆಯ ದಿನದಂದು
ಇಂದಿಗೂ ನೆನೆಯುತ್ತಿದ್ದಳು

ಇದ್ದದ್ದೇ ಐದು ಜನ
ಬಂದು ಬಾಂಧವರೆಲ್ಲ ಬಂದು ಹೋದರು
ನೊಂದ ಮನಕ್ಕೆ ಮಾತಿನ ಮುಲಾಮಲ್ಲದೆ
ಮತ್ತೇನು ಕೊಡಲಿಲ್ಲ
ಹಂದರ ಹಾಕಿದ್ದ ಹಸಿವಿಗೆ
ಕೈ ಚಾಚದೆ ವಿರಾಮದ ಕನಸು ಕಟ್ಟಿದ್ದಳು

ಬಿಡಿಗಾಸಿನ ಸಹಾಯವಿಲ್ಲದೆ
ಉಡಿಯಲ್ಲಿ ಮಕ್ಕಳನಿಟ್ಟು
ಕೂಲಿಯ ನೆಲೆಯಿಂದ ಬಡತನದ ಬೇಲಿ ದಾಟಿ
ಬದುಕುವ ಆಸೆ ಹೊತ್ತವಳು
ನಿತ್ಯ ಚಂದ್ರನ ಸರಿಸಿ ಸೂರ್ಯನ
ಬಾಗಿಲು ತೆರೆದು ಬೆಳಕಿಗಾಗಿ
ಬಂಡೆಗಲ್ಲಂತೆ ನಿಂತು ನಸು ನಗುತ್ತಿದ್ದಳು

ಇದ್ದ ಐವರಲ್ಲಿ ಹಿರಿಯವಳನ್ನು
ಕಿರಿಯವಳನ್ನು ಜೊತೆ ಮಾಡಿ
ಜೀತಕ್ಕಿಡುವಂತೆ ಸಿರಿತನದ ಜನಿವಾರದವರ ಮನೆಯಲ್ಲಿ
ಕಸಕಡ್ಡಿ ಬಳಿದು ಎಂಜಲು ಗಂಜಲನ್ನು ತೊಳೆಯಲು
ತಿಳಿಯಿಲ್ಲದ ತರುಣಿ ಬೆರಣಿ ತಟ್ಟಲು ಗಟ್ಟಿಯಾದಳು

ಹೆತ್ತವರನ್ನು ಬಿಟ್ಟು
ಹತ್ತಾರು ಮನೆಯ ಬಾಗಿಲ ಬಳಿ ಕುಳಿತು
ಶಿವನ ಧ್ಯಾನಿಸುವಂತೆ
ಕಾಯಕವೇ ಕಲಾಸವೆಂದು
ದಿನವೂ ತಪ್ಪದಂತೆ ಹಸಿವು ನಿಗದಿದ್ದರು
ನಗುತ್ತಾ ಹಾಜರಿಗೆ ಸಹಿ ಮಾಡುತ್ತಿದ್ದಳು

ನೆತ್ತರು ಬೆವರಾಗಿ ಹರಿಸಿ
ಶಕ್ತಿ ಕುಂದಿದರು
ಅಡುಗೆ ಮನೆಯ ಸುವಾಸನೆಯ
ಅಮೃತವನ್ನು ಮೂಗಿನಿಂದುಂಡು ನುಂಗುತ್ತಿದ್ದಳು

ಎಂಜಲೆನ್ನದೆ ತಂಗಿಯೊಂದಿಗೆ
ಗಂಗೆಯಂತೆ ಕಣ್ಣೀರು ಹರಿಸುತ್ತಾ
ಅಂಗೈ ಗೀರುಗಳೆಲ್ಲಾ ಸವೆದರು
ಮೈಮೇಲಿನ ಬಟ್ಟೆ ಹರಿದಲ್ಲೆಲ್ಲ ಗಂಟು ಕಟ್ಟಿ
ಬಟ್ಟಲು ಕಣ್ಣಿನ ಬಾಲೆ ಬಲಿಯಾದವಳು

ಕಾಮದ ಕಣ್ಣುಗಳೆಲ್ಲ ಸುತ್ತುವರೆದು
ರೇಶಿಮೆ ಮೈಬಣ್ಣದ ಮೈಗುಣದವಳ
ಮಲಿನವಾಗದ ಮನದವಳು
ಮಲಿನವಾದದ್ದೆಲ್ಲ ತಿಕ್ಕಿ ತೊಳೆದು
ಹಣ್ಣು ಹೆಣ್ಣಾಗುವ ಮೊದಲು ಹೆಣವಾಗಿ
ಕಣ್ಣು ತೆರೆಯದೆ ಕಾಣದಂತೆ ಕಣ್ಮರೆಯಾದಳು.

ಹನಮಂತ ಸೋಮನಕಟ್ಟಿ

Related post