ಮರಕುಟಿಕ – Woodpecker
ಮರಕುಟಿಕಗಳಲ್ಲಿ ಸುಮಾರು 200 ಪ್ರಭೇದಗಳಿದ್ದು ಉಷ್ಣವಲಯದ ಕಾಡುಗಳಿಂದ ಹಿಡಿದು ಸಮಶೀತೋಷ್ಣ ವಲಯದ ಕಾಡುಗಳ ಸಮೇತ ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತವೆ.
ಆಸ್ಟ್ರೇಲಿಯಾ, ನ್ಯೂಗಿನಿಯಾ, ನ್ಯೂಜಿಲ್ಯಾಂಡ್, ಮಡಗಾಸ್ಕರ್, ಮತ್ತು ತೀವ್ರ ಧ್ರುವ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ.
ಮರಗಳ ಕಾಂಡ, ರೆಂಬೆಗಳನ್ನು ಕುಟ್ಟಿ ತೊಗಟೆಗಳ ಒಳಗಿರುವ ಕ್ರಿಮಿಕೀಟಗಳನ್ನು ಭಕ್ಷಿಸಲು ಇವುಗಳ ಅಂಗರಚನೆಯೂ ಇದಕ್ಕೆ ಅನುಗುಣವಾಗಿದೆ. ಉದ್ದನೆಯ ಗಟ್ಟಿಮುಟ್ಟಾದ ಕೊಕ್ಕು, ಹರಿತವಾದ ಉಗುರುಗಳುಳ್ಳ ಕಾಲುಗಳು, ಮರವನ್ನ ನಿಮಿಷಕ್ಕೆ 120 ಬಾರಿಗಿಂತಲೂ ಹೆಚ್ಚು ಬಾರಿ ಕುಟ್ಟುವಂತೆ ರಚಿತವಾದ ತಲೆಬುರುಡೆಗಳನ್ನು ಹೊಂದಿರುವುದು ಇವುಗಳ ವೈಶಿಷ್ಟ್ಯ.
ದೇಹದ ಮುಕ್ಕಾಲು ಭಾಗದಷ್ಟು ಉದ್ದಕ್ಕಿರುವ ಇವುಗಳ ನಾಲಿಗೆ ಇವುಗಳ ಗಟ್ಟಿಯಾದ ತಲೆ ಬುರುಡೆಯ ಸುತ್ತಲೂ ಮೆತ್ತನೆಯ ಕುಷನ್ ನಂತೆ ಪಸರಿಸಿರುತ್ತದೆ.
ಮರದ ಕಾಂಡವನ್ನ ಕಟ್ ಕಟ್ ಎಂದು ಬಲವಾಗಿ ಅತಿವೇಗದಿಂದ ಕುಟುಕಿ ಕುಟುಕಿ ರಂದ್ರವನ್ನು ಕೊರೆಯುವಾಗ ಉದ್ದನೆಯ ಅದರ ನಾಲಿಗೆ ಶಾಕ್ ಅಬ್ಸರ್ವರ್ ನಂತೆ ಕೆಲಸ ನಿರ್ವಹಿಸಿ ಇದರ ಮಿದುಳಿಗೆ ಹಾನಿಯಾಗದಂತೆ ರಕ್ಷಣೆ ಒದಗಿಸುತ್ತದೆ.
ಮರದ ಕಾಂಡದಲ್ಲಿ ಗೂಡು ನಿರ್ಮಿಸಿ, ಎಲೆ ಹುಲ್ಲುಗಳಿಂದ ಮೆತ್ತನೆಯ ಹಾಸು ನಿರ್ಮಿಸಿ, ಮರದ ಬೊಡ್ಡೆ ಕಾಂಡಗಳಲ್ಲಿನ ಹುಳ ಕ್ರಿಮಿ ಕೀಟಗಳನ್ನ ತಿಂದು ಸಂತಾನೋತ್ಪತ್ತಿ ನಡೆಸಿ ಮರಿಗಳನ್ನ ಬೆಳೆಸುತ್ತವೆ.
ಯರೋಪ್ ನ ಸಮಶೀತೋಷ್ಣ ವಲಯದ ಕಾಡುಗಳು ಮತ್ತು ಅತಿ ಶೀತವಲಯದ ಕಾಡುಗಳಲ್ಲಿನ ಮರಕುಟಿಕಗಳಿಗೆ ತೀವ್ರತರವಾದ ಮಂಜು ಬೀಳುವ ಚಳಿಗಾಲದ ಸಮಯದಲ್ಲಿ ಹುಳ ಹುಪ್ಪಟೆ ಆಹಾರಗಳು ದೊರಕುವುದು ತೀರಾ ಕಷ್ಟಕರವಾಗಿಬಿಡುತ್ತದೆ.
ಚಳಿಗಾಲದಲ್ಲಿ ಆಹಾರದ ಈ ಕೊರತೆಯನ್ನ ನಿಭಾಯಿಸಲು ಆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುವ ಓಕ್ ಮರದ ಹಣ್ಣುಗಳು ಇವುಗಳಿಗೆ ಆಸರಯಾಗುತ್ತವೆ.. ಓಕ್ ಮರದ ಈ ಹಣ್ಣುಗಳನ್ನ ಓಕಾರ್ನ ಎಂದು ಕರೆಯುತ್ತಾರೆ. ಸಂತಾನೋತ್ಪತ್ತಿ ನಡೆಸುವ ಬೇಸಿಗೆಯ ಸಮಯದಲ್ಲಿಯೇ ಓಕಾರ್ನ್ ಗಳನ್ನ ಮರದ ಕಾಂಡಗಳಲ್ಲಿ ಚಿಕ್ಕ ಚಿಕ್ಕ ರಂದ್ರಗಳನ್ನ ಕೊರೆದು ಸಂಗ್ರಹಿಸಿಡುತ್ತವೆ. ಹೀಗೆ ಸಂಗ್ರಹಿಸಿದ ಓಕಾರ್ನ ಗಳನ್ನ ಚಳಿಗಾಲದಲ್ಲಿ ತಿಂದು ಬದುಕುತ್ತವೆ. ಅತ್ಯಂತ ನಿಖರವಾಗಿ ಕುಶಾಗ್ರಮತಿಯಿಂದ ಓಕಾರ್ನ ಹಣ್ಣಿನ ಗಾತ್ರದಷ್ಟೇ ಗಾತ್ರದ ರಂದ್ರ ಕೊರೆದು ಓಕಾರ್ನ ಸಂಗ್ರಹಿಸಿಡುವ ಇವುಗಳ ಜಾಣ್ಮೆಗೆ ಸಾಟಿ ಉಂಟೆ !?
ಮೃತ್ಯುಂಜಯ ನ. ರಾ.