ಮಳ್ಳಿ ಮಳ್ಳಿ ಬಿಳಿ ಮಿಂಚುಳ್ಳಿ
ಬಗೆ ಬಗೆಯ ಪ್ರಾಣಿ ಪಕ್ಷಿಗಳಲ್ಲಿ ವಿಧವಿಧವಾದ ಬೇಟೆಯ ಕ್ರಮಗಳಿವೆ, ಮಿಂಚುಳ್ಳಿ ಹಕ್ಕಿಯ ಬೇಟೆಯ ವಿಧಾನ ಬಹಳ ಆಕರ್ಷಕ. ನದಿ ತೊರೆಗಳ ಮೇಲೆ ಚಾಚಿದ ಮರಗಳ ಕೊಂಬೆಗಳಲ್ಲಿ ಅಥವಾ ನೀರಿನ ಹೆಬ್ಬಂಡೆಗಳ ಮೇಲೆ ತಪಸ್ಸಿಗೆ ಕೂತ ಮುನಿಗಳಂತೆ ಏಕಾಗ್ರತೆಯಿಂದ ಕಾದು ಕುಳಿತು, ದಿಡೀರನೆ ನೀರಿಗೆ ಚಂಗನೆ ನೆಗೆದು ಮೀನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಬರುತ್ತವೆ. ಮೀನನ್ನು ಬೇಟೆಯಾಡುವ ಪಕ್ಷಿಗಳಲ್ಲೇ ಅತ್ಯಂತ ನಿಖರವಾಗಿ ನೀರಿನ ಆಳಕ್ಕೆ ಜಿಗಿದು ತಪ್ಪದೇ ಮೀನನ್ನು ಹೊರತರುವ ಮಿಂಚುಳ್ಳಿಯ ಬೇಟೆಯ ವಿಧಾನದಿಂದಾಗಿ ಇದನ್ನು “ಕಿಂಗ್ ಫಿಷರ್” ಎಂದು ಕರೆಯುತ್ತಾರೆ.
ಹಲವು ಜಾತಿಯ ಮಿಂಚುಳ್ಳಿಗಳಲ್ಲಿ ಕಪ್ಪು ಬಿಳುಪು ಮಿಂಚುಳ್ಳಿ ಅಥವಾ ಬಿಳಿ ಮಿಂಚುಳ್ಳಿ (Pied Kingfisher) ವಿಶಿಷ್ಟವಾದದ್ದು. ಪಕ್ಷಿ ತಜ್ಞರು 1758 ರಲ್ಲಿ ಈ ಪಕ್ಷಿಯನ್ನು “ಸೆರ್ಯಲ್ ರುಡಿಸ್” (Ceryle rudis) ಎಂದು ವೈಜ್ಞಾನಿಕ ದ್ವಿನಾಮದಿಂದ ಗುರುತಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ “ಹಕ್ಕಿ ಪುಕ್ಕ” ಪುಸ್ತಕದಲ್ಲಿ ಇದಕ್ಕೆ ಬಿಳಿ ಮಿಂಚುಳ್ಳಿ ಎಂದು ಹೆಸರು ಕೊಟ್ಟಿದ್ದಾರೆ.
ಕಪ್ಪು ಬಿಳುಪಿನ ಬಣ್ಣದ ವಿನ್ಯಾಸದಿಂದಾಗಿ ಇದೊಂದು ಸುಂದರ ಪಕ್ಷಿ, ಇದರ ತಲೆಯ ಭಾಗ ಹಾಗು ಕೊಕ್ಕಿನ ಗಾತ್ರ ದೊಡ್ಡದಿದ್ದು ಮಿಕ್ಕ ದೇಹದ ಭಾಗ ಹಾಗೂ ಕಾಲುಗಳು ಚಿಕ್ಕದಿರುತ್ತವೆ. ಗಂಡು ಮತ್ತು ಹೆಣ್ಣು ಗಾತ್ರದಲ್ಲಿ ಒಂದೇ ಆದರೂ ಗಂಡು ಹಕ್ಕಿಯ ಎದೆಯ ಭಾಗದಲ್ಲಿ ಕಪ್ಪನೆಯ ಪಟ್ಟಿ ಮಧ್ಯದಲ್ಲಿ ಹೊಡೆದಿರುತ್ತದೆ. ಇವುಗಳ ಮುಖ್ಯ ಆಹಾರ ಮೀನಾದರೂ ನೀರಿನ ಸಮೀಪ ಹಾರಾಡುವ ಕೀಟಗಳನ್ನು ಹಾಗು ಕಪ್ಪೆಗಳನ್ನು ಸಹ ಕಬಳಿಸುತ್ತದೆ. ಈ ಹಕ್ಕಿಗಳು ಸಬ್-ಸಹಾರನ್ ಆಫ್ರಿಕಾ, ಮಧ್ಯಪ್ರಾಚ್ಯ ಏಷ್ಯಾ ಖಂಡ, ದಕ್ಷಿಣ ಚೀನಾ ಮತ್ತು ನಮ್ಮ ಭಾರತದಲ್ಲಿ ಕಂಡುಬರುತ್ತವೆ ಹಾಗು ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಹೆಚ್ಚು. ನೀರಿನಲ್ಲಿ ಮೀನುಗಳನ್ನು ನಿಖರವಾಗಿ ಗುರುತಿಸಿ ಬೇಟೆಯಾಡುವ ಇವುಗಳ ಕ್ರಮದಿಂದ ಸ್ವಚ್ಛ ನೀರಿನ ಪ್ರದೇಶಗಳಲ್ಲಿ ಮಾತ್ರ ಇವುಗಳ ವಾಸ.
ಈ ಕಪ್ಪು ಬಿಳುಪು ಮಿಂಚುಳ್ಳಿಗಳು ನದಿಯ ತೀರದ ಮಣ್ಣಿನ ಗುಡ್ಡೆಗಳಲ್ಲಿ, ತಮ್ಮ ಬಲವಾದ ಕೊಕ್ಕುಗಳಿಂದ ಮಣ್ಣಿನ ಗುಡ್ಡೆಗಳಲ್ಲಿ ಆಳವಾದ ರಂದ್ರವನ್ನು ತೋಡಿ ಅದನ್ನೇ ಗೂಡು ಮಾಡಿಕೊಳ್ಳುತ್ತವೆ. ಗಂಡು ಹಾಗೂ ಹೆಣ್ಣು ಹಕ್ಕಿಗಳೆರಡೂ ಸೇರಿಕೊಂಡು ಗೂಡು ತೋಡುತ್ತವೆ. ದಿನದ ಬಹುಪಾಲು ಹೊರಗೆ ಇರುವ ಇವು ಮೊಟ್ಟೆಗಳ ರಕ್ಷಣೆಗಾಗಿ ಮಾತ್ರ ಗೂಡುಗಳನ್ನು ಉಪಯೋಗಿಸುತ್ತವೆ. ಇತರೆ ಪರಭಕ್ಷಕಗಳ ಕಣ್ತಪ್ಪಿಸಲು ಹಲವು ಹುಸಿಗೂಡುಗಳನ್ನು ತೋಡುವುದು ಇವುಗಳ ಚಾತುರ್ಯತೆಗೆ ಸಾಕ್ಷಿಯಾಗಿದೆ. ಮಿಂಚುಳ್ಳಿಗಳ ಸಂತಾನೋತ್ಪತ್ತಿಯ ಅವಧಿ ಆಯಾ ದೇಶಗಳ ಚಳಿಗಾಲದ ಅವಧಿಗಳನ್ನು ಅವಲಂಬಿಸಿದೆ, ಆದರೆ ಭಾರತದಲ್ಲಿ ಇದರ ಅವಧಿ ಏಪ್ರಿಲ್ ತಿಂಗಳಿನವರೆಗೂ ವಿಸ್ತರಿಸುತ್ತದೆ. ಪ್ರಣಯದ ಸಂಕೇತವಾಗಿ ಗಂಡು ಹಕ್ಕಿಯು ಹೆಣ್ಣು ಹಕ್ಕಿಗೆ ದಿನನಿತ್ಯ ಆಹಾರವನ್ನು ಕೊಂಡೊಯ್ದು ಅದರ ಮನ ಸೆಳೆಯುತ್ತದೆ. ಏಕ ಪತ್ನಿತ್ವ ಪದ್ಧತಿಯನ್ನು ಅನುಸರಿಸುವ ಇವುಗಳು ಒಮ್ಮೆಗೆ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಮೂರು ದಿನದ ಅವಧಿಯಲ್ಲಿ ಹೆಣ್ಣು ಹಕ್ಕಿಯು ಒಂದರಿಂದ ಐದು ಮೊಟ್ಟೆಗಳವರೆಗೂ ಇಡುತ್ತದೆ.
ಗೂಡಿನಲ್ಲಿ ಹೆಣ್ಣು ಹಕ್ಕಿಯು ಮೊಟ್ಟೆಗಳ ಕಾವಲಿಗೆ ನಿಂತರೆ ಗಂಡು ಹಕ್ಕಿಯು ಆಹಾರವನ್ನು ತಂದು ಸಂಸಾರ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಗಂಡು ಹಕ್ಕಿಯ ಅನುಪಸ್ಥಿತಿಯಲ್ಲಿ ಹೆಣ್ಣು ಹಕ್ಕಿಯು ಗೂಡನ್ನು ಇತರೆ ಪರಭಕ್ಷಕಗಳಿಂದ ಕಾಯುತ್ತದೆ. ಗಂಡು ಹಾಗೂ ಹೆಣ್ಣು ಹಕ್ಕಿಗಳು ಎರಡೂ ಸೇರಿ ಸರದಿಯ ಪ್ರಕಾರ ಮೊಟ್ಟೆಗಳಿಗೆ ಕಾವು ನೀಡುತ್ತವೆ. 18 ದಿನಗಳ ನಂತರ ಮರಿಗಳು ಮೊಟ್ಟೆಗಳಿಂದ ಹೊರಬರುತ್ತವೆ. ಮೊಟ್ಟೆಯಿಂದ ಹೊರ ಬಂದ ನಂತರ ಮರಿಗಳು ಕಣ್ಬಿಡಲು ಒಂಬತ್ತು ದಿನಗಳು ಬೇಕು ಆದರೆ ರೆಕ್ಕೆಗಳು ನಾಲ್ಕನೇ ದಿನದಿಂದಲೇ ಮೂಡಲು ಆರಂಭಿಸುತ್ತದೆ. ಎರಡು ವಾರಗಳ ನಂತರ ನದಿಗೆ ಜಿಗಿಯುವುದನ್ನು ಮರಿಗಳು ಕಲಿತು ಸ್ವತಂತ್ರವಾಗಿ ಆಹಾರವನ್ನು ಹರಸುತ್ತವಾದರೂ ಇವುಗಳ ಪೋಷಕರು ಎರಡು ತಿಂಗಳಿನವರೆಗೆ ಆಹಾರವನ್ನು ಉಣಿಸಿ ಮರಿಗಳನ್ನು ಬೆಳೆಸುತ್ತವೆ.
ಮಿಂಚುಳ್ಳಿಗಳ ಜೀವಿತಾವಧಿ ನಾಲ್ಕು ವರ್ಷಗಳು ಮಾತ್ರ, ಆದರೆ ಇವುಗಳ ಅವಧಿಯು ಇನ್ನಷ್ಟು ಕಡಿತಗೊಳ್ಳುತ್ತಿದೆ ಕಾರಣ ಎಂದಿನಂತೆ ಕಲುಷಿತಗೊಳ್ಳುತ್ತಿರುವ ಪರಿಸರದಿಂದ ನದಿಗಳ ನೀರು ಮಲಿನಗೊಳ್ಳುತ್ತಿದೆ, ಇದರಿಂದಾಗಿ ಸ್ವಚ್ಛ ನೀರನ್ನು ಹುಡುಕುವ ಹಕ್ಕಿಗಳ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಮನುಷ್ಯನ ಹಸ್ತಕ್ಷೇಪವು ಇವುಗಳ ಜೀವಿತಾವಧಿ ಕಡಿಮೆಯಾಗುತ್ತಿರುವುದಕ್ಕೆ ಮತ್ತೊಂದು ಕಾರಣ. ಮಿಂಚುಳ್ಳಿಗಳಿಗೆ ಬೇಟೆಯ ಚಲನೆಯನ್ನು ಪತ್ತೆಹಚ್ಚಲು ವಿಶೇಷವಾದ ದೃಷ್ಟಿ ವ್ಯವಸ್ಥೆ ಇದೆ ಮತ್ತು ಬೇಟೆಯನ್ನು ಗಮನಿಸಲು ಇವುಗಳಿಗಿರುವ ವಿಶಾಲ ದೃಷ್ಟಿ ಕೋನ (wide angle) ಸಹಾಯ ಮಾಡುತ್ತದೆ.
ಪರಿಸರವನ್ನು ಮಾಲಿನ್ಯದಿಂದ ಉಳಿಸಿ ನದಿಯ ನೀರು ಸ್ವಚ್ಛವಾಗಿರಿಸುವುದು ನಮ್ಮ-ನಿಮ್ಮೆಲ್ಲರ ಹೊಣೆಯಾಗಿರುವ ಈ ಸಂದರ್ಭದಲ್ಲಿ ಇಂತಹ ಎಷ್ಟೋ ಸುಂದರ ಜೀವಿಗಳನ್ನು ಉಳಿಸಿಕೊಳ್ಳಬಹುದು.
ಚಂದ್ರಶೇಖರ್ ಕುಲಗಾಣ