ರೊಮ್ಯಾಂಟಿಕ್ ರೋಮ್‌

ರೋಮ್ ಪ್ರವಾಸದ ಅನುಭವ

ಯೂರೋಪ್‌ಗೆ ಹೋಗುವ ಅವಕಾಶ ಸಿಕ್ಕಿ ಪ್ರವಾಸದ ಕೊನೆಯ ಭಾಗವಾಗಿ ರೋಮ್‌ಗೆ ಆಗಮಿಸಿದ್ದೆವು. ಇತಿಹಾಸವನ್ನು ಓದಿದವರಿಗೆಲ್ಲಾ ರೋಮ್ ಬಗ್ಗೆ ಥಟ್ಟನೆ ನೆನಪಾಗುವ ಗಾದೆ ” ಆಲ್ ರೋಡ್ ಲೀಡ್ಸ್ ಟೂ ರೋಂ” ಎಂಬುದು, ಇದಕ್ಕೆ ಕಾರಣವೂ ಇದೆ, ರೋಮ್‌ನ ಇತಿಹಾಸ ಅಷ್ಟು ರೋಮಾಂಚನವಾಗಿತ್ತೆಂದು ಹೇಳುತ್ತಾರೆ. ರೋಮ್ ಬಗ್ಗೆ ಪುಸ್ತಕದಲ್ಲಿ ಓದಿದ್ದೆ, ಆದರೆ ಸ್ವತಃ ಈಗ ರೋಮ್ ನೆಲದಲ್ಲಿ ನಿಂತಿದ್ದೆ, ರೋಮ್ ನಗರವನ್ನು ಸೇರಲು ಮೂವತ್ತೊಂದು ಪ್ರವೇಶ ಮಾರ್ಗಗಳಿದೆ ಅದಕ್ಕೆ “ಆಲ್ ರೋಡ್ ಲೀಡ್ಸ್ ಟೂ ರೋಂ” ಎಂಬ ಗಾದೆ ಯತೋಚಿತವಾಗಿದೆ. ಇಟಲಿಯ ರಾಜಧಾನಿಯಾದ ರೋಮ್ ಸುಮಾರು 60 ಲಕ್ಷ ಜನಸಂಖ್ಯೆಯನ್ನು ಹೊಂದಿದೆ,ಪ್ರಾಚೀನ ರೋಮ್ ನಗರವನ್ನು ಏಳುಗುಡ್ಡಗಳ ಮೇಲೆ ಕಟ್ಟಲಾಗಿತ್ತೆಂದು ಹೇಳಲಾಗುತ್ತದೆ, ಹೊಸ ಮತ್ತು ಹಳೆ ಸಂಸ್ಕೃತಿಗಳ ಸಮಾಗಮ ರೋಮ್‌ನಲ್ಲಿದೆ, ರೋಮ್ ನಗರದ ಜೀವನಾಡಿಯಾದ “ಟೈಬರ್”ನದಿ ರೋಮ್‌ನ ಮಧ್ಯದಲ್ಲಿ ಹರಿಯುತ್ತದೆ.

ರೋಚಕವಾಗಿದೆ ರೋಮಿನ ಇತಿಹಾಸ

ರೋಮಿನ ಇತಿಹಾಸ ಕ್ರಿಪೂರ್ವ 625 ರಿಂದಲೇ ಪ್ರಾರಂಭವಾಗಿತ್ತೆಂದು ಹೇಳುತ್ತಾರೆ. ಪ್ರಾಚೀನ ರೋಮ್‌ನಲ್ಲಿ ರಾಜರ ಅದಿಪತ್ಯವಿತ್ತು ಏಳು ರಾಜರ ತಲೆಮಾರುಗಳ ನಂತರ ರೋಮನ್ನರೇ ಆಳಲು ಪ್ರಾರಂಭಿಸಿದರು ಎನ್ನಲಾಗುತ್ತದೆ. ನಂತರ ಹಿಡಿತ ಸಾಧಿಸಿದ ರೋಮನ್ನರು ಆಡಳಿತ ನೆಡೆಸಲು ಸೂಸುತ್ರವಾಗುವಂತೆ “ಸೆನೆಟ್” ಪ್ರಾರಂಬಿಸಿದ್ದರು. ಅಲ್ಲಿಂದ ರೋಮನ್ ಗಣತಂತ್ರ ಆರಂಭವಾಯಿತು, ಗಣತಂತ್ರ ಅಂದರೆ “ರಿಪ್ಲಬಿಕ್” ಎಂಬ ಪದ ಹುಟ್ಟಿದ್ದು ರೋಮ್‌ನ ಭಾಷೆಯಲ್ಲಿ, ಲ್ಯಾಟಿನ್ ಭಾಷೆಯಲ್ಲಿ ರೆಸ್ ಪಬ್ಲಿಕಾ ಎಂದರೆ ಪ್ರಜೆಗಳಿಗೆ ಸಂಬಂಧಿಸಿದ ವಿಷಯ ಎಂಬ ಅರ್ಥವಿದೆ. ರಾಜನ ಕೈಕೆಳಗೆ ಅಧಿಕಾರದಲ್ಲಿದ್ದ ಸೆನೆಟ್ ರಾಜನಿಗೆ ಆಳಲು ಮಾರ್ಗದರ್ಶನ ಮಾಡುತ್ತಿತ್ತು, ರೋಮ್‌ನಲ್ಲಿ ನಾಲ್ಕುರೀತಿಯ ಜನರ ವರ್ಗವಿತ್ತು, ನಾಲ್ಕನೇ ವರ್ಗದವರು “ಲೇಬರ್” ವರ್ಗ, ಗುಲಾಮಗಿರಿಯಲ್ಲಿ ಬದುಕುತ್ತಿದ್ದರೆ ಅವರನ್ನು ಇಟ್ಟುಕೊಂಡು ಕೆಲಸಮಾಡುತ್ತಿದ್ದ ಸಾಮಾನ್ಯ ಜನರು ಮೂರನೆ ವರ್ಗಕ್ಕೆ ಸೇರಿದ್ದರು. ಇವರ ನಂತರ ಏರಡನೆ ವರ್ಗದಲ್ಲಿ ಶ್ರೀಮಂತರಿದ್ದರು ಇವರನ್ನು ‘ಇಕ್ವೆಸ್ಟಿಯನ್ಸ್’ ಎನ್ನುತ್ತಿದ್ದರು. ಕುದುರೆಯ ಮೇಲೆ ಸಂಚರಿಸುತ್ತಿದ್ದ ಇವರನ್ನು ರೈಡರ್‌ಗಳೆಂದು ಕರೆಯುತ್ತಿದ್ದರಲ್ಲದೇ ಅವರು ಯಾವಾಗಲೂ ಯುದ್ದಕ್ಕೆ ಸನ್ನದ್ದರಾಗಿರುತ್ತಿದ್ದರು.ಇನ್ನು ಮೊದಲನೆ ವರ್ಗದವರು “ಪಾಟ್ರಿಶನ್”ಗಳು ಇವರೆ ರೋಮ್ ದೇಶವನ್ನು ಅಳುತ್ತಿದ್ದರು.ರೋಮ್‌ನ ರಿಪ್ಲಬಿಕ್ ಅತ್ಯಂತ ಯಶಸ್ವಿ ಸರ್ಕಾರವಾಗಿತ್ತು. ಕ್ರಿಪೂ 520 ರಿಂದ 23 ರವರೆಗು ಇವರು ರೋಮನ್ನು ಆಳಿದ್ದರು. ರೋಮಿನ ಅತ್ಯಂತ ಪ್ರಸಿದ್ದ ವ್ಯಕ್ತಿಗಳಲ್ಲಿ ಕೇಳಿ ಬರುವ ಹೆಸರು “ಜೂಲಿಯಸ್ ಸಿಸರ್” ನದು, ರೋಮ್‌ನ ಅದಿಕಾರ ಹಿಡಿದು ಸರ್ವಾದಿಕಾರಿಯಾಗಿ ಮೆರೆದು ಕೊನೆಗೆ ರೋಮ್‌ನ ಸೆನೆಟ್‌ನಲ್ಲೇ ಕೊಲೆಯಾದನು. ಇವನ ಪ್ರಸಿದ್ದಿ ಎಷ್ಟಿತ್ತೆಂದರೆ ಇವನ ನೆನಪಿಗಾಗಿ ಕ್ಯಾಲೆಂಡರಿನ “ಜೂಲೈ” ಜೂಲಿಯಸ್ ಹೆಸರಿನಿಂದಲೇ ಬಂದದ್ದು. ಪ್ರಸಿದ್ದ ಕವಿ “ಶೇಕ್ಸಪೀಯರ್” ಕೂಡ ಇವನ ಹೆಸರಿನಲ್ಲಿ “ಜೂಲಿಯಸ್ ಸಿಸರ್” ಎಂಬ ಕಾದಂಬರಿಯನ್ನು ಬರೆದಿದ್ದಾನೆ ರೋಮನ್ನಾಳಿದ ಚಕ್ರಾದಿಪತಿಗಳಲ್ಲಿ ಪ್ರಸಿದ್ದವಾಗಿ ಕೇಳಿಬರುವ ಹೆಸರು “ಅಗಸ್ತಸ್, ನಿರೊ, ಟೈಟಸ್, ಟ್ರಾಜನ್, ಹ್ಯಾಡ್ರಿಯನ್”, ರೋಮ್ ಅವಸಾನವಾಗುವ ಹೊತ್ತಿಗೆ ಅದನ್ನು “ಬಾರ್ಬೇರಿಯನ್ನರು” ಆಳುತ್ತಿದ್ದರು, ಆಗ ಯೂರೋಪಿನಾದ್ಯಂತ ಜನ ವಲಸೆ ಹೋಗಲಾರಂಬಿಸಿದ್ದರು.ಕ್ರಿ.ಶ. 1453ರಲ್ಲಿ ಟರ್ಕಿಯ ಎರಡನೆ ಮೊಹಮೊದ್ ರೋಮ್ ಮೇಲೆ ದಂಡೆತ್ತಿ ಬಂದಾಗ ಇಡೀ ರೊಚಕ ರೋಮ್ ಇತಿಹಾಸಕ್ಕೆ ಸೇರಿತು ಎನ್ನುತ್ತಾರೆ. ಹನ್ನೊಂದನೇ “ಕಾನ್ಸಾಟಿನೋಪಲ್” ರೋಮ್‌ ನ ಪರವಾಗಿ ಹೋರಾಡುತ್ತಾ ಟರ್ಕಿಯ ಎರಡನೆ ಮೊಹಮೊದ್ದನಿಂದ ಕೊಲ್ಲಲ್ಪಟ್ಟಾಗ ರೋಮ್‌ನ ರೊಮಾಂಚಕ ಇತಿಹಾಸ ಮುಕ್ತಾಯವಾಯಿತು.

ರೋಮ್‌ನಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸದ ಕುರುಹುಗಳು ಅವಶೇಷಗಳು ನಿಮಗೆ ನೋಡಲು ಸಿಗುತ್ತದೆ, 2ನೇ ಶತಮಾನದಿಂದ 17ನೇ ಶತಮಾನದ ಮಧ್ಯ ಭಾಗದವರೆಗೂ ರೋಮ್ ಸಾಧಿಸಿದ ಸಾಧನೆಗೆ ಅಲ್ಲಿರುವ ಶಿಲ್ಪ ಕಲಾಕೃತಿಗಳು ಐತಿಹಾಸಿಕ ಕಟ್ಟಡಗಳು ಸಾಕ್ಷಿಯಾಗಿ ನಿಂತಿದೆ, ಇದು ಬಹಳಷ್ಟು ಹಾಳಾಗಿದ್ದರೂ ಅಳಿದುಳಿದವುಗಳನ್ನೇ ಅಲ್ಲಿನ ಪುರಾತತ್ವ ಇಲಾಖೆ ಜೋಪಾನವಾಗಿ ಇಟ್ಟುಕೊಂಡಿದೆ. ಇಂತಹ ರೋಮ್ ನಗರಕ್ಕೆ ಕಾಲಿಟ್ಟಾಗ ನನಗೂ ಒಂದುಕ್ಷಣ ರೋಮಾಂಚನವಾಗಿತ್ತು.
ರೋಮಾಟರ್ಮಿನಿಗೆ ಬಂದು “ಒಟ್ಟವಿಯಾನೋ ಸ್ಯಾನ್ ಪ್ಯೆಟ್ರೊ” ನಿಲ್ದಾಣದ ಕಡೆ ನಡೆದೆವು ,ಒಟ್ಟವಿಯಾನೋ ಸ್ಯಾನ್ ಪ್ಯೆಟ್ರೊ ನಿಲ್ದಾಣದಲ್ಲಿ ಇಳಿದು ನೆಲಮಾಳಿಗೆಯಿಂದ ಮೇಲೆ ಬಂದರೆ ನೀವು ಸಂತ ಏಂಜಲೊ ಕೋಟೆಯಲ್ಲಿರುತ್ತೀರಿ.

ಸಂತ ಏಂಜಲೊ ಕೋಟೆ

ವ್ಯಾಟಿಕನ್ ಸಿಟಿಯಿಂದ ಒಂದು ಕಿಮೀ ದೂರವಿರುವ ಇದು ರೋಮ್‌ಗೆ ಸೇರುತ್ತದೆ, ಕ್ರಿಶ 130 ರಿಂದ 139 ರ ಅವಧಿಯಲ್ಲಿ “ಹ್ಯಾಡ್ರಿಯನ್” ಚಕ್ರವರ್ತಿ ತನ್ನ ಹಾಗೂ ತನ್ನ ಕುಟುಂಬದವರಿ ಗೋಸ್ಕರ ಇದನ್ನು ಟೈಬರ್ ನದಿಯ ದಡದಲ್ಲಿ ಕಟ್ಟಿಸಿದ್ದನು. ಹ್ಯಾಡ್ರಿಯನ್ ಕೋಟೆ ಅಂತಲೂ ಇದನ್ನು ಮೊದಲು ಕರೆಯುತ್ತಿದ್ದರು.89 ಮೀಟರ್ ಚೌಕಾಕಾರದ ಅಡಿಪಾಯದ ಮೇಲೆ 64 ಮೀಟರ್ ವ್ಯಾಸದ ಸಿಲಿಂಡರ ಆಕೃತಿಯಲ್ಲಿ ಈ ಕೋಟೆಯನ್ನು ಕಟ್ಟಲಾಗಿದೆ. ಕಾಲಕಾಲಕ್ಕೆ ಈ ಕೋಟೆಯನ್ನು ಅವಶ್ಯಕತೆಗೆ ತಕ್ಕಂತೆ ಬದಲಾಯಿಸುತ್ತಾ ಬಂದಿದ್ದಾರೆ. ಕ್ರಿ.ಶ 401ರಲ್ಲಿ ನಡೆದ ಯುದ್ದದಲ್ಲಿ ಸೈನಿಕರಿಗೆ ಈ ಕೋಟೆ ರಕ್ಷಣೆಯೊದಗಿಸಿತ್ತು, ಪೋಪ್ ಅವರನ್ನು ರಕ್ಷಿಸಲು 14 ಶತಮಾನದಲ್ಲಿ ವ್ಯಾಟಿಕನ್ ಸಿಟಿಯಿಂದ ಇಲ್ಲಿಗೆ ಒಂದು ಸುರಂಗವನ್ನು ಮಾಡಲಾಗಿತ್ತು, ಪುನುರುಜ್ಜೀವನ ಕಾಲದಲ್ಲಿ ಪೋಪರಿಗೆ ಸಂಬಂಧ ಪಟ್ಟ ಅಮೂಲ್ಯ ಬೆಲೆಬಾಳುವ ವಸ್ತುಗಳನ್ನು ಇಡಲು ಕೋಟೆಯ ಮಧ್ಯಭಾಗದಲ್ಲಿ ಗುಪ್ತ ಕೋಣೆಯೊಂದನ್ನು ನಿರ್ಮಿಸಲಾಗಿತ್ತು. ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರು , ಆಹಾರ ಧಾನ್ಯಗಳ ಹಗೇವು ಮುಂತಾದ ಅಗತ್ಯ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು. ಅಪರಾಧಿಗಳನ್ನು ಸೆರೆಯಲ್ಲಿಡಲು ಕೂಡ ಈ ಕೋಟೆಯನ್ನು ಬಳಸಿಕೊಳ್ಳಲಾಗಿತ್ತು,ಕೋಟೆಯ ಮಧ್ಯಭಾಗದಲ್ಲಿರುವ ಸಣ್ಣ ಗೋಪುರದ ಮೇಲೆ ಈ ಕೋಟೆಯನ್ನು ಕಟ್ಟಿಸಿದ ಹ್ಯಾಡ್ರಿಯನ್ ಚಕ್ರವರ್ತಿಯ ಕಂಚಿನ ಪ್ರತಿಮೆ ಇತ್ತು, ಕ್ರಿ.ಶ 590 ರಲ್ಲಿ ರೋಮ್‌ನಲ್ಲಿ ಭೀಕರ ಪ್ಲೇಗ್ ರೋಗ ಬಂದಾಗ ದೇವತೆಯೊಬ್ಬಳು ಆತ್ಮಕೋಟೆಯ ಮೇಲೆ ಪ್ರತ್ಯಕ್ಷವಾಗಿ ಮಾಯವಾದಾಗ ಪ್ಲೇಗ್ ರೋಗ ಸಂಪೂರ್ಣ ನಿರ್ನಾಮವಾಯಿತಂತೆ ಹಾಗಾಗಿ ಈ ಕೋಟೆಗೆ ಈಗ ಸಂತ ಏಂಜಲೊ ಕೋಟೆ ಎಂದು ಮರುನಾಮಕರಣ ಮಾಡಲಾಗಿದೆ. ಇಟಲಿ ಉದಯವಾದ ನಂತರ ಈ ಕೋಟೆಯನ್ನು ಸೈನಿಕರ ವಾಸಸ್ಥಳವಾಗಿ ಉಪಯೋಗಿಸಲಾಗುತ್ತಿತ್ತು, ರಾಷ್ಟಿಯ ವಸ್ತು ಸಂಗ್ರಹಾಲಯದ ಪಕ್ಕದಲ್ಲಿರುವ ವೃತ್ತಾಕಾರದ 400 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದರೆ ಕ್ರೈಸ್ತ ಗುರುಗಳು ಬಳಸುತ್ತಿದ್ದ ಸುಂದರ ಕೋಣೆಗಳು, ಸುಂದರ ಅಮೃತ ಶಿಲೆಯ ಮೂರ್ತಿಗಳು ಹಾಗೂ ಕೋಟೆಯ ಕೆಳಭಾಗದಲ್ಲಿ ಅಪರಾದಿಗಳಿಗೆ ಶಿಕ್ಷೆ ಕೊಡುತ್ತಿದ್ದ ಸ್ಥಳಗಳಿದೆ.

ಪೀಯಾಜಾ ನವೊನಾ

ಸಂತ ಏಂಜಲೊ ಕೋಟೆಯಿಂದ ಅರ್ಧ ಕಿಮೀ ನಡೆದರೆ ಸಿಗುವುದೇ ಉದ್ದನೆಯ ವೃತ್ತಾಕಾರದ ಸಾರ್ವಜನಿಕ ಪ್ರದೇಶ, ಇದನ್ನು ಪೀಯಾಜ ನವೊನಾ ಎನ್ನುತ್ತಾರೆ, ಮೊದಲು ಇಲ್ಲಿ ದೊಡ್ಡ ಕ್ರೀಡಾಂಗಣ ಇತ್ತೆಂದು ಇಲ್ಲಿರುವ ಅಳಿದುಳಿದ ಅವಶೇಷಗಳಿಂದ ತಿಳಿಯಬಹುದು, ಮೊದಲು ಈ ಸ್ಥಳದ ಹೆಸರು “ಸರ್ಕಸ್ ಅಗೊನಾಲಿಸ್” ಎಂದಾಗಿತ್ತಂತೆ, 15ನೇ ಶತಮಾನದಲ್ಲಿ ನಿರ್ಮಾಣವಾದ ಇದನ್ನು ಮಾರುಕಟ್ಟೆಯಾಗಿ, ಕೆಲವೊಂದು ಕಾರ್ಯಕ್ರಮಗಳಿಗೆ ಹಾಗೂ ಶಸ್ತ್ರಾಭ್ಯಾಸ ಮಾಡಲು ಉಪಯೋಗಿಸುತ್ತಿದ್ದರು. ಈಗ ಇದೊಂದು ಭೇಟಿಯ ತಾಣವಾಗಿದ್ದು ಇಲ್ಲಿ ಸುತ್ತಲು ಅನೇಕ ಹೋಟೆಲ್‌ಗಳು ಕೆಫೆಗಳು ಹಾಗೂ ಚಿತ್ರಮಂದಿರಗಳಿದ್ದು ಜನರ ಭೇಟಿಯ ತಾಣವಾಗಿ ಮಾರ್ಪಟ್ಟಿದೆ, ಈ ಜಾಗದ ಪ್ರಮುಖ ಆಕರ್ಷಣೆ ಇಲ್ಲಿರುವ ಸುಂದರ ಮೂರು ಕಲಾತ್ಮಕ ಕಾರಂಜಿಗಳು, ಇವುಗಳಲ್ಲಿ ಪ್ರಸಿದ್ದವಾಗಿರುವುದು “ಫೊನ್ ಟಾಣ ಡಿ ಕ್ವಟ್ಟಾರೊ ಫಿಯೂಮಿ ” ಅಂದರೆ ನಾಲ್ಕುನದಿಗಳ ಕಾರಂಜಿ, 1851 ರಲ್ಲಿ ಪೂರ್ಣಗೊಂಡ ಇದನ್ನು ಕಲಾವಿದ ಬೊರೊಮಿನಿ ರಚಿಸಿದ್ದನಾದರೂ ಬೆರ್ನಿನಿ ಇದಕ್ಕೆ ಇನ್ನೊಂದಿಷ್ಟು ಆಕರ್ಷಣೀಯ ರೂಪವನ್ನು ಕೊಟ್ಟನು. ಇಲ್ಲಿರುವ ಸುಂದರ ನಾಲ್ಕು ಅಮೃತ ಶಿಲೆಯ ಮೂರ್ತಿಗಳು ನಾಲ್ಕು ಮಹಾನದಿಗಳಾದ ನೈಲ್, ಗಂಗಾ, ದನುಬಿ ಹಾಗೂ ರಿಯೊಪ್ಲಾಟ ನದಿಗಳನ್ನು ಸೂಚಿಸುತ್ತದೆ, ಇಲ್ಲಿರುವ ಕಾರಂಜಿಯ ಮೂರ್ತಿಯೊಂದಕ್ಕೆ ಗಂಗಾ ನದಿಯ ಹೆಸರನ್ನಿಟ್ಟಿರುವುದನ್ನು ಗಮನಿಸಿದರೆ ಆಕಾಲದಲ್ಲೂ ನಮ್ಮ ಪ್ರಸಿದ್ದ ಗಂಗಾ ನದಿಗೆ ಎಷ್ಟು ಮಹತ್ವವಿತ್ತೆಂದು ಹಾಗೂ ಎಷ್ಟು ಪ್ರಸಿದ್ದವಾಗಿತ್ತೆಂದು ಸೂಚಿಸುತ್ತದೆ, ಇಲ್ಲಿ “ನೆಪ್ಚೂನ್ ಕಾರಂಜಿ” ಹಾಗೂ “ಫೊನ್ ಟಾಣ ಡೆಲ್ ಮೋರಾ” ಎಂಬ ಇನ್ನೆರಡು ಕಾರಂಜಿಗಳಿದ್ದು ನೆಪ್ಚೂನ್ ಕಾರಂಜಿಯಲ್ಲಿ ಅಮೃತಶಿಲೆಯ ಸಮುದ್ರದೇವತೆಯ, ಹಾಗೂ ಜಲದೇವತೆಯ ಮೂರ್ತಿ ಇದ್ದರೆ ಇನ್ನೊಂದು ಕಾರಂಜಿಯಲ್ಲಿ ಡಾಲ್ಫಿನ್ ಹಾಗೂ ಮತ್ಸಜಲಪುರುಷರ ಶಿಲ್ಪಗಳಿದೆ, ನದಿಯ ಹೆಸರಿನಲ್ಲಿ ಕಾರಂಜಿಗಳನ್ನು ನಿರ್ಮಿಸಿರುವುದನ್ನು ನೋಡಿದರೆ ರೋಮನ್ನರು ಕೂಡ ನದಿಗಳಿಗೆ ಪೂಜನೀಯ ಸ್ಥಾನವನ್ನು ನೀಡಿದ್ದರು ಎಂಬುದು ಸ್ಪಷ್ಟವಾಗುತ್ತದೆ.ಈ ಪಿಯಾಜಾ ನವೊನಾದ ಪರಿಸರ ಕಾರಂಜಿಗಳಿಂದ ಸುಂದರವಾಗಿದ್ದು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದಲ್ಲದೇ ಇಲ್ಲೂ ಸಹ ನೃತ್ಯಮಾಡುತ್ತಾ ಕರಕುಶಲ ಕಲೆಗಳನ್ನು ತೋರುತ್ತಾ ಭಿಕ್ಷೆ ಬೇಡುವ ಅನೇಕ ಭಿಕ್ಷುಕರನ್ನು ನೋಡಬಹುದು.

ಪಾಂಥಿಯಾನ್

ಪೀಯಾಜಾ ನವೋನಾದಿಂದ ಅರ್ಧ ಕಿಮೀ ನಡೆದರೆ ಸಿಗುವುದೇ ಭವ್ಯ ಪಾಂಥಿಯಾನ್ ಕ್ರಿ.ಶ 118 ರಿಂದ 125 ರ ನಡುವೆ ಕಟ್ಟಲ್ಪಟ್ಟ ಇದು ರೋಮ್‌ನಲ್ಲಿರುವ ಎಲ್ಲಾ ಸರ್ವದೇವರುಗಳಿಗೂ ಮಂದಿರವಾಗಿತ್ತು, ಪಾಂತಿಯಾನ್ ಅಂದರೆ “ಸರ್ವದೇವ ಮಂದಿರ” ಎಂದರ್ಥ,ಕ್ರಿ.ಶ 80 ರಲ್ಲಿ ಸುಟ್ಟುಹೊದ ಮಾರ್ಕಸ್ ಅಗ್ರಿಪ್ಪಾಸ ಮಂದಿರದ ನೆನಪಿನಲ್ಲಿ ಇದನ್ನು ಕಟ್ಟಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ ಮೂಲ ಬರವಣಿಗೆ “ಮಾರ್ಕಸ ಅಗ್ರಿಪಾಸ್ ಸನ್ ಆಲ್ಯುಸಿಯಸ್” ಎಂಬ ಬರಹವನ್ನು ಈಗಲೂ ನೋಡಬಹುದು.ಕ್ರಿ.ಶ. 608 ರಲ್ಲಿ ಇದನ್ನು ಚರ್ಚ್ ಆಗಿ ಪರಿವರ್ತಿಸಲಾಯಿತು,ಇಟಲಿಯ ಪ್ರಸಿದ್ದ ಚಕ್ರವರ್ತಿಗಳಾದ “ಎರಡನೆ ವಿಟ್ಟೊರಿಯೊ ಇಮ್ಯಾನುಯಲ್ “, ಉಮ್ಬೆರ್ಟೊ ಹಾಗೂ ಕಲಾವಿದ ರಫಿಲ್ ಹಾಗೂ ಆತನ ಪ್ರೇಯಸಿಯ ಸಮಾಧಿಗಳು ಇಲ್ಲಿದೆ, ಕಟ್ಟಡದ ಮುಂಭಾಗದಲ್ಲಿ ತ್ರಿಕೋನಾಕೃತಿಯ ಗೋಡೆಯಿದ್ದು ಇದರ ಮೇಲೆ ಯುದ್ಧಭೂಮಿಯ ಚಿತ್ರಗಳಿದ್ದವೆಂದು ದಿನಗಳೆದಂತೆ ಅವು ಬಿದ್ದು ಹೋಗಿರುವುದಾಗಿ ಹೇಳುತ್ತಾರೆ,ಈ ಬೃಹತ್ ಗೋಡೆಯನ್ನು ಮೂರು ಸಾಲುಗಳ ಬೃಹತ್ ಕಂಬಗಳು ಹಿಡಿದಿಟ್ಟು ಕೊಂಡಿದೆ, ಇದರ ಕೆಳಗಿರುವ ದೊಡ್ಡ ಕಂಚಿನ ಬಾಗಿಲಿನಿಂದ ಒಳಬಂದರೆ ಹೊಸ ಪ್ರಪಂಚವೊಂದು ನಿಮ್ಮ ಕಣ್ಣಮುಂದೆ ತೆರೆದುಕೊಳ್ಳುತ್ತದೆ, ಚರ್ಚ್ನ ಒಳಭಾಗ ಪೂರ್ಣ ಅಮೃತ ಶಿಲೆಯಿಂದ ಮಾಡಲ್ಪಟ್ಟಿದ್ದು ನೆಲ ಇತ್ತೀಚೆಗೆ ಮಾಡಿದ್ದಾರೆನೊ ಎಂಬಷ್ಟು ಕಂಗೊಳಿಸುತ್ತದೆ, ಒಳಗೆ 8 ಸುಂದರ ಕಮಾನುಗಳಿದ್ದು ನೆಲಮಟ್ಟದಲ್ಲಿ 9 ಆಳೆತ್ತರದ ಅಮೃತಶಿಲೆಯ ಮೂರ್ತಿಗಳು ನೋಡುಗರನ್ನು ಮಂತ್ರಮುಗ್ಧ ರನ್ನಾಗಿಸುತ್ತದೆ, ಈ ಚರ್ಚಿನ ಪ್ರಮುಖ ಆಕರ್ಷಣೆ ಕಟ್ಟಡದ ಮೇಲಿರುವ ದೊಡ್ಡ ಗುಮ್ಮಟ, 8 ದೊಡ್ಡ ದೊಡ್ಡ ಬಲವಾದ ಕಮಾನುಗಳು ಈ ಗುಮ್ಮಟವನ್ನು ಹಿಡಿದಿಟ್ಟುಕೊಂಡಿದೆ, ಈ ಗುಮ್ಮಟದ ಮಧ್ಯದಲ್ಲಿ ದೊಡ್ಡ ರಂದ್ರವಿದ್ದು, ಇದರ ಮೂಲಕ ನೈಸರ್ಗಿಕವಾಗಿ ಬೆಳಕು ಕಟ್ಟಡದ ಒಳಗೆ ಬರುತ್ತದೆಯಲ್ಲದೆ, ಒಳಗೆ ರಾತ್ರಿಮಾತ್ರ ವಿದ್ಯುತ್ ದೀಪಗಳನ್ನು ಹಾಕಲಾಗುತ್ತದೆ, ಈ ತೆರೆದ ಭಾಗದಿಂದ ಬರುವ ಮಳೆಯ ನೀರು ತಗ್ಗಾಗಿರುವ ನೆಲದ ಮೂಲಕ ಹರಿದುಹೋಗುತ್ತದೆ,ಈ ಗೊಮ್ಮಟದ ಎತ್ತರ ಹಾಗೂ ಅಗಲ ಸಹ ಒಂದೆ ಆಗಿದ್ದು 43.3 ಮೀಟರ್ ಇರುವುದು ಇನ್ನೊಂದು ವೈಶಿಷ್ಟ್ಯ ಇದರ ಆಕಾರ ಮತ್ತು ರಚನೆ ಕಲಾವಿದರನ್ನು ಗಣಿತಶಾಸ್ತ್ರಜ್ಞರನ್ನು ಶತಶತಮಾನಗಳಿಂದ ಚಕಿತಗೊಳಿಸುತ್ತಾ ಬಂದಿದೆ.

ಪಾಂಥಿಯಾನ್ ನಿಂದ ಅರ್ಧ ಕಿಮೀ ನಡೆದು ಬಂದರೆ ಸಿಗುವುದೇ “ಪಿಯಾಜಾ ವೆನಿಜಿಯಾ” , ಇದೊಂದು ರೋಮಿನ ಮುಖ್ಯ ಸಂಚಾರಿ ವೃತ್ತವಾಗಿದ್ದು ರೋಮಿನ ಬಹುತೇಕ ಮುಖ್ಯರಸ್ತೆಗಳು ಇಲ್ಲಿಂದ ಹಾದು ಹೋಗುತ್ತದೆ, ಕ್ಯಾಪಿಟೋಲಿನ್ ಬೆಟ್ಟದ ಕೆಳಗಿರುವ ಈ ಪ್ರದೇಶ ಸದಾ ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ. ರೋಮಿನ ಎಲ್ಲಾ ಪ್ರವಾಸಿ ಸ್ಥಳಗಳಿಗೂ ಹತ್ತಿರವಿರುವ ಈ ಪ್ರದೇಶವನ್ನು ಪ್ರವಾಸಿಗರು ಒಂದಲ್ಲಾ ಒಂದು ಸಲ ತಮ್ಮ ಪ್ರವಾಸ ಸಮಯದಲ್ಲಿ ಹಾದು ಹೋಗಲೇ ಬೇಕು,ಈ ಪ್ರದೇಶದಲ್ಲಿ ಅನೇಕ ಮುಖ್ಯವಾದ ಸರ್ಕಾರಿ ಕಟ್ಟಡಗಳಿದೆ, ಅವುಗಳಲ್ಲಿ ಮುಖ್ಯವಾದವು ಪ್ಲಾಜೋ ವೆನಿಜಿಯಾ, ಪಾದ್ರಿ ವೆನಿಜಿಯಾರಿಂದ ಕಟ್ಟಲ್ಪಟ್ಟ ಅರಮನೆ, ಹಾಗಾಗಿಯೇ ಈ ಪ್ರದೇಶಕ್ಕೆ ಪಿಯಾಜಾ ವೆನಿಜಿಯಾ ಎಂಬ ಹೆಸರು, 1484 ರಲ್ಲಿ ಪೂರ್ಣವಾದ ಈ ಅರಮನೆಯನ್ನು ಕಟ್ಟಿಸಿದ್ದು ಎರಡನೇ ಪೋಪ್ ಪಾಲ್, ಹಲವು ಪೋಪರಿಗೆ ವಾಸಸ್ಥಾನವಾಗಿದ್ದ ಇದು ವೆನಿಸ್ ರಾಯಭಾರ ಕಛೇರಿಯಾಗಿ ನಂತರ ಮುಸ್ಸಲೋನಿ ಸರ್ಕಾರ ಇದನ್ನು ವಶಪಡಿಸಿಕೊಂಡಿತು, ಸರ್ವಾಧಿಕಾರಿಯಾಗಿದ್ದ ಮುಸ್ಸಲೋನಿ ಈ ಅರಮನೆಯ ಬಾಲ್ಕನಿಯಿಂದಲೇ ನಿಂತು ಭಾಷಣ ಮಾಡುತ್ತಿದ್ದನು, ಈ ಅರಮನೆ ನೋಡಲು ಭವ್ಯವಾಗಿದ್ದು ಪ್ರವಾಸಿಗರಿಗೆ ಸಾರ್ವಜನಿಕರಿಗೆ ಪ್ರವೇಶ ನಿಷಿದ್ದ, ಶ್ವೇತವರ್ಣದ ಅರಮನೆಯನ್ನು ನೋಡಲು ಎರಡು ಕಣ್ಣುಸಾಲದು, ಗಿಜಿಗುಡುವ ಟ್ರಾಫಿಕ್ ನಡುವೆಯೆ ಈ ಅರಮನೆಯ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವ ಪ್ರವಾಸಿಗರು ಇಲ್ಲಿ ಕಾಣಸಿಗುವುದು ಸಾಮಾನ್ಯ.ಈ ಪ್ರದೇಶದಲ್ಲೇ ಇನ್ನು ಮುಖ್ಯವಾದ ಪ್ರಸಿದ್ದ ಕಟ್ಟಡಗಳಿದ್ದು ಅದರಲ್ಲಿ ಎರಡನೆ ವಿಕ್ಟರ್ ಇಮ್ಯಾನ್ಯುಯೆಲ್ ಸ್ಮಾರಕ, ನೆಪೋಲಿಯನ್ ತಾಯಿವಾಸವಾಗಿದ್ದ “ಪ್ಲಾಜೋ ಬೊನಪಾರ್ಟೇ” ಬಂಗಲೇ, ಪ್ಲಾಜೋ ಡೆಲ್ಲೆ ಆಸ್ತೆ, ಹಾಗೂ ಸ್ಯಾನ್ ಮಾರ್ಕೋ ಚರ್ಚ್ ಮುಖ್ಯವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಕಲೋಸಿಯಂ

ನಾವು ಕಲೋಸಿಯಂ ಬಳಿ ಬಂದಾಗ ಮಧ್ಯಾಹ್ನ ಮೂರಾಗಿತ್ತು, ಕಲೋಸಿಯಂ ಹಳೆಯ ರೋಮಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದು, ರೋಮ್‌ನಲ್ಲಿ ನೀವು ಬೇರೆ ಏನನ್ನು ನೋಡದಿದ್ದರೂ ಪರವಾಗಿಲ್ಲ, ಕಲೋಸಿಯಂ ಮಾತ್ರ ನೋಡಲೇ ಬೇಕು, ಚಕ್ರವರ್ತಿಗಳಿಂದ ಕ್ರಿಪೂ 508 ರಿಂದ 544 ರಲ್ಲೆ ಈಗಿರುವ ಕಲೋಸಿಯಂ ಬಳಿ ಒಂದು ದೊಡ್ಡ ಕ್ರೀಡಾಂಗಣ ಇತ್ತೆಂದು ಹೇಳಲಾಗುತ್ತದೆ, ಕ್ರಿ.ಶ. 64 ರಲ್ಲಿ ದೊಡ್ಡ ಅಗ್ನಿ ಅನಾಹುತವಾದ ನಂತರ ನೀರೊ ಇಲ್ಲಿ ದೊಡ್ಡ ಅರಮನೆಯನ್ನು ಕಟ್ಟಿದ್ದ, ಕ್ರಿಶ 71 ಹಾಗು 72 ರಲ್ಲಿ ಕಲೋಸಿಯಂನ ನಿರ್ಮಾಣಕಾರ್ಯ ಆರಂಭವಾಯಿತು, ಕಲೋಸಿಯಂ ಅಂದರೆ ದೊಡ್ಡ ವರ್ತುಲಾಕಾರದ ಮಲ್ಲಯುದ್ಧಗಳನ್ನು ನಡೆಸುತ್ತಿದ್ದ ಕ್ರೀಡಾಂಗಣ, ಕ್ರಿ.ಶ. 80 ರಲ್ಲಿ ಟೈಟಸ್‌ನ ಕಾಲದಲ್ಲಿ ಇದರ ನಿರ್ಮಾಣಕಾರ್ಯ ಮುಗಿದು ಕ್ರಿ.ಶ. 81ರಲ್ಲಿ ಮೂರನೇ ಅಂತಸ್ತನ್ನು ಕಟ್ಟಲಾಯಿತು, ಈ ಕಲೋಸಿಯಂನ್ನು ಮಲ್ಲಯುದ್ಧ, ರಥಸ್ಪರ್ಧೆ,ಆಟಗಳು ಯುದ್ಧ ಮುಂತಾದ ಸಾರ್ವಜನಿಕ ಪ್ರದರ್ಶನಗಳನ್ನು ನಡೆಸುವ ಸ್ಥಳವಾಗಿತ್ತು, ಪ್ರಾಣಕ್ಕೆ ಎರವಾಗುವ ಆಟೋಟ ಸ್ಪರ್ಧೆಗಳು ನೆಡೆಯುತ್ತಿದ್ದ ಈ ಕಲೋಸಿಯಂನಲ್ಲಿ ರಾಜದ್ರೋಹಕ್ಕೆ ಗುರಿಯಾದವರನ್ನು ಜೀವಂತ ಹುಲಿಸಿಂಹಗಳಿಗೆ ಇಲ್ಲಿ ಆಹಾರವಾಗಿ ಕೊಡುತ್ತಿದ್ದರು. ಐತಿಹಾಸಿಕ ನಾಟಕಗಳ ಪ್ರದರ್ಶನಗಳು ಇಲ್ಲಿ ನಡೆಯುತ್ತಿದ್ದವು,ಕಟ್ಟುನಿಟ್ಟಾದ ವರ್ಗಪದ್ದತಿ ಅನುಸರಿಸುತ್ತಿದ್ದ ಇಲ್ಲಿ ನಾಲ್ಕುವರ್ಗದ ಜನರಿದ್ದರು, ಅದಕ್ಕನುಗುಣವಾಗಿ ನಾಲ್ಕು ಹಂತದಲ್ಲಿ ಜನರಿಗೆ ಕೂರುವ ವ್ಯವಸ್ಥೆ ಮಾಡಲಾಗಿತ್ತು.ಐವುತ್ತುಸಾವಿರ ಜನ ಅಮೃತಶಿಲೆಯ ಆಸನದಲ್ಲಿ ಕುಳಿತು ಇಲ್ಲಿ ಆಟೋಟಗಳನ್ನು ಜನ ವೀಕ್ಷಿಸುತ್ತಿದ್ದರು.ಕಲೋಸಿಯಂನ ಕೆಳ ಅಂತಸ್ತಿನಲ್ಲಿ ಆಟಕ್ಕೆ ಮುನ್ನ ಜೀವಂತ ಕ್ರೂರಮೃಗಗಳನ್ನು ಇಡಲು ವ್ಯವಸ್ಥೆ ಮಾಡಲಾಗುತ್ತಿತ್ತು. ಇಂದಿನ ಅತ್ಯಾಧುನಿಕ ಸ್ಟೇಡಿಯಂಗಳು ಕಲೋಸಿಯಂನ ಪ್ರತಿರೂಪಗಳಾಗಿದೆ ಎಂದರೆ ತಪ್ಪಾಗಲಾರದು, ಕ್ರಿ.ಶ. 404 ರಲ್ಲಿ ಇಲ್ಲಿ ಕೊನೆಯ ಮಲ್ಲಯುದ್ಧ ಸ್ಪರ್ಧೆಗಳು ನೆಡೆದವು, ನಂತರದ ದಿನಗಳಲ್ಲಿ ಈ ಕಲೋಸಿಯಂ ಅವನತಿಯ ಹಾದಿಯಲ್ಲಿ ಸಾಗತೊಡಗಿತು.

ಇಲ್ಲಿದ್ದ ಸುಮಾರು 400 ಅಮೃತಶಿಲೆಯ ಭಾಗಗಳನ್ನು ಬೇರೆಕಟ್ಟಡಗಳ ನಿರ್ಮಾಣಕ್ಕೆ ಕದ್ದೊಯ್ದರು, ಭೂಕಂಪದಿಂದಾಗಿ ಕಟ್ಟಡದ ಅನೇಕ ಭಾಗ ಬಿದ್ದು ಹೋಯಿತು, 6 ರಿಂದ 13 ನೇ ಶತಮಾನದವರೆಗೆ ಇದರ ಸುತ್ತಮುತ್ತ ಅನೇಕ ವಾಸಯೋಗ್ಯ ಮನೆಗಳ ನಿರ್ಮಾಣವಾಯಿತು, ಆದರೆ ಇದರಲ್ಲಿದ್ದ ಅಮೂಲ್ಯ ವಾಸ್ತುಶಿಲ್ಪಗಳ ಅವ್ಯಾಹತ ಕಳ್ಳತನ ನಡೆದೇ ಇತ್ತು,ಇಲ್ಲಿದ್ದ ದೊಡ್ದ ದೊಡ್ಡ ಸೈಜುಕಲ್ಲುಗಳನ್ನು ಕಟ್ಟಡಗಳ ನಿರ್ಮಾಣಕ್ಕಾಗಿ ಕದ್ದೊಯ್ದಿದ್ದರು, 1750 ರಲ್ಲಿ 14ನೇ ಪೋಪ್ ಬೆನಿಡಿಕ್ಟ್ರ ಮುಂದಾಳತ್ವದಲ್ಲಿ ಇದರ ಸಂರಕ್ಷಣಾ ಕಾರ್ಯ ಪ್ರಾರಂಭವಾಯಿತು. 188 ಮೀಟರ್ ಅಗಲ ಹಾಗೂ 57 ಮೀಟರ್ ಎತ್ತರದ ನಾಲ್ಕಂತಸ್ತಿನ ಕಟ್ಟಡ ಇದಾಗಿದ್ದು ಮೀಟರ್ ಬಿದ್ದು ಹೋಗಿದೆ, ಆದರೂ ಇದರ ಭವ್ಯತೆಯನ್ನು ಅಲ್ಲೇ ನಿಂತು ನೋಡಬೇಕು,ಕೊನೆಯ ಅಂತಸ್ತಿನಲ್ಲಿ ವಸ್ತು ಸಂಗ್ರಹಾಲಯವಿದ್ದು , ಹೊರಭಾಗವನ್ನು ಈಗಲೂ ವರ್ಷದ ಕೆಲವೊಂದು ದಿನ ರೋಮನ್ ಕ್ಯಾಥೋಲಿಕ್ ಕಾರ್ಯಕ್ರಮಗಳಿಗಾಗಿ ಉಪಯೋಗಿಸುತ್ತಾರೆ,ವಿನೋದ ಆಟಗಳ ಪ್ರದರ್ಶನಕ್ಕಿಂತ ಭಯಾನಕ ಆಟಗಳು ಇಲ್ಲಿ ನಡೆಯುತ್ತಿದ್ದದು ಅಂದಿನ ಜನರ ಕ್ರೂರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಇಂದಿನ ಅತ್ಯಾಧುನಿಕ ಕ್ರೀಡಾಂಗಣಗಳು ಕಲೋಸಿಯಂನ ಮಾದರಿಯ ಆಧಾರದಲ್ಲೇ ಕಟ್ಟಿದ್ದು ಕಲೋಸಿಯಂ ಅದರ ಭವ್ಯತೆಯಿಂದಾಗಿ ಪ್ರಪಂಚದ ಏಳು ಅದ್ಭುತಗಳಲ್ಲಿ ಸ್ಥಾನ ಪಡೆದಿದೆ.ಎರಡುಸಾವಿರ ವರ್ಷಗಳ ಹಿಂದಿನ ಈ ಕಟ್ಟಡವನ್ನು ಮುಟ್ಟಿದರೆ ರೋಮಾಂಚನವಾಗುವುದು ಖಚಿತ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಕಲೋಸಿಯಂ ಮುಂದೆ ನಿಂತು ಅದನ್ನು ಮುಟ್ಟಿ ರೋಮಾಂಚನಗೊಂಡೆ. ರೋಮಿನ ಪುರಾತತ್ವ ಇಲಾಖೆ ಇದರ ಪುನರುತ್ತಾನ ಕಾರ್ಯವನ್ನು ಕೈಗೊಂಡಿದ್ದು ಇದು ಮತ್ತೆ ಹಾಳಾಗದಂತೆ ರಿಪೇರಿಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಕಲೋಸಿಯಂನಿಂದ ಹಾಗೆಯೇ ಸ್ವಲ್ಪ ಮುಂದೆ ಬಂದರೆ ಸಿಗುವ ತಗ್ಗು ಪ್ರದೇಶದಲ್ಲಿ “ರೋಮನ್ ಫೋರಂ” ಎಂಬ ಪ್ರದೇಶವಿದೆ, ಇದೊಂದು ರೀತಿಯ ತೆರೆದ ವಸ್ತು ಸಂಗ್ರಹಾಲಯವೆಂದರೆ ತಪ್ಪೇನಿಲ್ಲಾ! ಪಾಲಟೈನ್, ಕ್ಯಾಪಿಟೋಲಿನ್ ಗುಡ್ಡಗಳಲ್ಲಿ ಹರಡಿರುವ ಇದು ಒಂದುಕಾಲದಲ್ಲಿ ಜವಳು ಭೂಮಿಯಾಗಿ ನೀರುನಿಂತಿತ್ತು, ಇದರಲ್ಲಿದ್ದ ನೀರನ್ನು ಟೈಬರ್ ನದಿಗೆ ಹರಿಸಿ ಈ ನೆಲದಲ್ಲಿ ಜನವಾಸಿಸುವ ಸ್ಥಳ ತಲೆ ಎತ್ತಿ 1000 ವರ್ಷಗಳ ಕಾಲ ನಗರದ ಪ್ರಮುಖ ಭಾಗವಾಗಿದ್ದ ಪ್ರದೇಶ ಇದು, ಇಲ್ಲಿ ಪ್ರಾಚೀನ ರೋಮಿನ ಅಳಿದುಳಿದ ಪಳಯುಳಿಕೆಗಳನ್ನು ನೋಡಬಹುದು, ಹಿಂದಿನ ಕಾಲದಲ್ಲಿ ಪ್ರಸಿದ್ದವಾಗಿದ್ದ ಚೌಕ ಇಲ್ಲಿದ್ದು, ಇಲ್ಲೆ ಹಿಂದೆ ಸಭೆಗಳನ್ನು ನಡೆಸಲು ರೋಮನ್ನರು ಈ ಜಾಗದಲ್ಲಿ ಸೇರುತ್ತಿದ್ದರಲ್ಲದೇ ಇಲ್ಲೇ ವ್ಯಾಪಾರ ವಹಿವಾಟು ನಡೆಯುತ್ತಿತ್ತು, ಹಿಂದೆ ಇಲ್ಲಿದ್ದ ಚರ್ಚ್ಗಳು, ಮಾರುಕಟ್ಟೆ ಪ್ರದೇಶ, ಹೋಟೆಲ್, ಸರ್ಕಾರಿ ಕಟ್ಟಡಗಳ ಅವಶೇಷಗಳನ್ನು ಇಂದಿಗೂ ನೋಡಬಹುದು.ಕ್ರಿ.ಪೂ 203 ರಲ್ಲಿ ನಿರ್ಮಾಣವಾದ 70 ಅಡಿ ಎತ್ತರದ “ಸೆಪ್ಟಿಮಸ್ ಕಮಾನು” ಇಂದಿಗೂ ಇಲ್ಲಿ ನೋಡಲು ಲಭ್ಯ! ಜೂಲಿಯಸ್ ಸೀಸರ್ ಸಭಿಕರನ್ನು ಉದ್ದೇಶಿಸಿ ಮಾತನಾಡಲು ನಿರ್ಮಿಸಿದ್ದ ವೇದಿಕೆ “ರೋಸ್ಟ” ಇಂದಿಗೂ ನೋಡಲು ಲಭ್ಯ.ಇದು 24 ಮೀಟರ್ ಅಗಲ ಹಾಗೂ 12 ಮೀಟರ್ ಉದ್ದವಿದೆ. ಸ್ಯಾಟೂರ್ನ್, ಟೈಟಸ್,ಕ್ಯಾಸ್ಟರ್ ಹಾಗೂ ಪೌಲುಕ್ಸ್ ಗಳಿಗಾಗಿ ಕಟ್ಟಿದ ಮಂದಿರಗಳು ಅದರ ಅವಶೇಷಗಳು ಇಂದಿಗೂ ಇಲ್ಲಿ ಲಭ್ಯ! ರೋಮನ್ ಚರಿತ್ರೆ ಓದಿದವರಿಗೆ ಈ ತೆರೆದ ವಸ್ತು ಸಂಗ್ರಹಾಲಯ ರೋಮಾಂಚನವನ್ನುಉಂಟು ಮಾಡುವುದರಲ್ಲಿ ಸಂಶಯವಿಲ್ಲಾ!

ಪ್ಯಾಲಟೈನ್ ದಿಬ್ಬ ಹಾಗೂ ಮ್ಯೂಸಿಯಂ

ಕಲೋಸಿಯಂ ಹಾಗೂ ರೋಮನ್ ಫೋರಮ್ ನಡುವಿನಲ್ಲಿ ಇನ್ನೊಂದು ಪ್ರದೇಶವಿದೆ, ರೋಮ್ ಸಾಮ್ರಾಜ್ಯ ನಿರ್ಮಾಣವಾದ ಏಳು ಗುಡ್ಡಗಳಲ್ಲಿ ಇದೂ ಒಂದು, ಇದು ಸಹ ತೆರೆದ ವಸ್ತುಸಂಗ್ರಹಾಲಯದಂತಿದೆ ,ಪುರಾತತ್ವ ಇಲಾಖೆಯ ವರದಿಗಳ ಪ್ರಕಾರ ಕ್ರಿ.ಪೂ. 10ನೇ ಶತಮಾನದಲ್ಲೇ ಇಲ್ಲಿ ರೋಮನ್ ಸಾಮ್ರಾಜ್ಯ ಇತ್ತೆಂದು ಇಲ್ಲಿನ ಕುರುಹುಗಳು ಸಾರುತ್ತದೆ. ಇದೇ ಜಾಗದಲ್ಲಿ “ಲ್ಯೂಪೆರ್ಕಲ್” ಗುಹೆ ಇತ್ತೆಂದು ಇದರಲ್ಲಿ ಹೆಣ್ಣು ತೋಳ “ರೋಮುಲಸ್” ಹಾಗೂ “ರಿಮಸ್”ರನ್ನು ಬೆಳೆಸಿತ್ತೆಂದು ಹಾಗೂ ಇಲ್ಲೇ ಕ್ರಿ.ಪೂ. 754 ರಲ್ಲಿ ರೋಮುಲಸ್‌ನಿಂದ ನಗರ ನಿರ್ಮಾಣಕಾರ್ಯ ಆರಂಭವಾಯಿತೆಂದು ಹೇಳಲಾಗುತ್ತದೆ. ಎತ್ತರದ ದಿಬ್ಬ ಪ್ರದೇಶವಾದ್ದರಿಂದ ಮತ್ತು ಇಲ್ಲಿಂದ ಪ್ರಕೃತಿ ಸೌಂದರ್ಯ ಮನಮೋಹಕವಾಗಿ ಕಾಣುತ್ತಿದ್ದರಿಂದ ರೋಮಿನ ಅನೇಕ ಚಕ್ರವರ್ತಿಗಳು ಇಲ್ಲೇ ತಮ್ಮ ಅರಮನೆಯನ್ನು ಕಟ್ಟಿಕೊಂಡಿದ್ದರು. ಇಲ್ಲಿ ಅಕ್ಕಪಕ್ಕದಲ್ಲಿ ಒಂದರಂತೆ ಅನೇಕ ಅರಮನೆಗಳಿದ್ದವೆಂದು ಇತಿಹಾಸ ಹೇಳುತ್ತದೆ, ಈ “ಪ್ಯಾಲಟೈನ್” ಪದದಿಂದ “ಪ್ಯಾಲೆಸ್” ಎಂಬ ಪದ ಬಂದಿದೆ ಎಂದು ಹೇಳಲಾಗುತ್ತದೆ, ರೋಮಿನ ಪ್ರಥಮ ಚಕ್ರವರ್ತಿ “ಅಗಸ್ತಸ್” ಈ ಪ್ಯಾಲಟೈನ್ ದಿಬ್ಬವನ್ನೇ ತನ್ನ ಕೇಂದ್ರವಾಗಿ ಆರಿಸಿಕೊಂಡಿದ್ದನು. ಇದಲ್ಲದೇ ಜ್ಯೂಲಿಯಸ್, ನೀರೊ ಕಟ್ಟಿದ ಅರಮನೆಗಳ ಅವಶೇಷಗಳು ಈ ತೆರೆದ ವಸ್ತು ಸಂಗ್ರಹಾಲಯದಲ್ಲಿ ನೋಡಲು ಲಭ್ಯ.ಹಾಳುಬಿದ್ದ ಅವಶೇಷಗಳ ನಡುವೆ ಓಡಾಡುತ್ತಿದ್ದರೆ ಪ್ರಾಚೀನ ರೋಮಿನ ಇತಿಹಾಸ ನಮ್ಮ ಕಣ್ಣಮುಂದೆ ಹಾದುಹೋಗುವುದರಲ್ಲಿ ಸಂಶಯವಿಲ್ಲ! ಕಲೋಸಿಯಂ ಬಳಿಯೆ ಇನ್ನೊಂದು ” ಆರ್ಚ್ ಆಫ್ ಕಾನಸ್ಟೆಂಟೈನ್” ಎಂಬ ಸ್ಥಳವಿದೆ, ಯುದ್ಧದ ಗೆಲುವಿನ ನೆನಪಿನಲ್ಲಿ ಕಟ್ಟಿದ ಮೂರು ಕಮಾನು ಕಟ್ಟಡವಿದೆ, ಇದರ ಮೇಲೆ ಅನೇಕ ಯುದ್ಧದ ಚಿತ್ರಗಳನ್ನು ಕೆತ್ತಿದ್ದು ಅದು ಇಂದಿಗೂ ಸುಸ್ಥಿಯಲ್ಲಿರುವುದು ನೋಡುಗರನ್ನು ಅಚ್ಚರಿಗೊಳಿಸುತ್ತದೆ, ಇದರ ಸಮೀಪವೆ ರೋಮನ್ನರು ರಥಪಂದ್ಯಗಳನ್ನು ಆಡುತ್ತಿದ್ದ ಜಾಗವಿದೆ, ಸುಮಾರು ಐನೂರು ಅಡಿಗಳಷ್ಟು ಅಗಲವಿರುವ ಇದರಲ್ಲಿ ಒಟ್ಟಿಗೆ ಅನೇಕ ರಥಗಳ ಸ್ಪರ್ಧೆ ನಡೆಯುತ್ತಿತ್ತು.

Beautiful view of the Trevi Fountain. Rome

ಕತ್ತಲಾಗಿದ್ದರಿಂದ ನಾವು “ಟ್ರೇವಿ ಕಾರಂಜಿ”ಯ ಬಳಿ ಬಂದೆವು, ನಾವು ಈ ಟ್ರೀವಿ ಕಾರಂಜೀಯನ್ನು ಕೊನೆಯ ಸ್ಥಳವಾಗಿ ಇಟ್ಟುಕೊಂಡಿದ್ದೆವು.ಈ ಕಾರಂಜಿಯನ್ನು ರಾತ್ರಿಮಾತ್ರ ನೋಡಬೇಕು, ಕಾರಣ ಇದು ಸಂಪೂರ್ಣ ಅಮೃತ ಶಿಲೆಯಿಂದ ನಿರ್ಮಾಣವಾಗಿದ್ದು ವರ್ಣರಂಜಿತ ರಾತ್ರಿ ಬೆಳಕಿನಲ್ಲಿ ಈ ಹಾಲಿನಂತಿರುವ ಕಾರಂಜಿಯನ್ನು ನೋಡುವುದೇ ಒಂದು ಆನಂದದಾಯಕ, ರಾತ್ರಿಯ ಸಮಯದಲ್ಲಿ ಅದರ ಸೌಂದರ್ಯ ಇಮ್ಮಡಿಯಾಗಿರುತ್ತದೆ. ಇಲ್ಲಿ ನೈಸರ್ಗಿಕವಾಗಿ ಚಿಮ್ಮುತ್ತಿರುವ ಚಿಲುಮೆಯನ್ನು ಪರಿವರ್ತಿಸಿ ಆಕರ್ಷಕ ಕಾರಂಜಿಯನ್ನು ನಿರ್ಮಿಸಲಾಗಿದೆ, ಇಲ್ಲಿ ಅನೇಕ ಜಲದೇವತೆಗಳ ಅಮೃತಶಿಲೆಯ ಮೂರ್ತಿಯನ್ನು ನಿರ್ಮಿಸಲಾಗಿದ್ದು ರಾತ್ರಿವೇಳೆಯಲ್ಲಿ ನೋಡಲು ಮನಮೋಹಕವಾಗಿರುತ್ತದೆ, ರೋಮ್‌ಗೆ ಬರುವ ಪ್ರವಾಸಿಗರು ಕೊನೆಗೆ ಭೇಟಿಕೊಡುವ ಸ್ಥಳವಾಗಿದ್ದು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತದೆ ಹಾಗಾಗಿ ನಿಮ್ಮ ವಸ್ತುಗಳ ಬಗ್ಗೆ ಹಾಗೂ ಪರ್ಸ್ ಬಗ್ಗೆ ಗಮನ ಇರುವುದು ಅಗತ್ಯ.ಕಾರಂಜಿಯಿಂದ ಬಿದ್ದ ನೀರು ಮುಂದಿನ ಕೊಳದಲ್ಲಿ ಸೇರುತ್ತದೆ, ಇಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಂತು ಕೊಳಕ್ಕೆ ನಾಣ್ಯ ಹಾಕಿದರೆ ಮತ್ತೆ ನೀವು ರೋಮ್‌ಗೆ ಬರುತ್ತಿರಾಗಿ ಅಲ್ಲೊಂದು ನಂಬಿಕೆಯಿದೆ, ಮತ್ತೆ ರೋಮ್‌ಗೆ ಬರುವ ಅವಕಾಶಸಿಕ್ಕರೆ ಯಾಕಾಗಬಾರದು ಎಂಬ ಆ(ದುರಾ)ಸೆ ಯಿಂದ ನಾನು ಒಂದು ನಾಣ್ಯವನ್ನು ಎಸೆದೆ. ಹೀಗೆ ಕೊಳದಲ್ಲಿ ಸಂಗ್ರಹವಾದ ಹಣ ಯಾವುದೋ ಧರ್ಮಾರ್ಥಕಾರ್ಯಕ್ಕೆ ಬಳಸಲಾಗುತ್ತದೆಂದು ಅಲ್ಲಿದ್ದ ಗೈಡ್ ವಿವರಿಸುತ್ತಿದ್ದ.

ಮನಸೆಳೆಯುವ ಚಿತ್ರಕಾರರು

ರೋಮ್‌ನಲ್ಲಿ ನನ್ನನ್ನು ಬಹಳವಾಗಿ ಆಕರ್ಷಿಸಿದ್ದು ಇಲ್ಲಿನ ರಸ್ತೆ ಬದಿಯ ಚಿತ್ರಕಾರರು. ಸ್ಥಳದಲ್ಲೇ ಚಿತ್ರ ಬಿಡಿಸಿ ಅದನ್ನು ಮಾರಿ ಜೀವನ ನಡೆಸುವ ಇವರ ಅದ್ಬುತ ಚಿತ್ರರಚನೆ ಕಂಡು ನಿಬ್ಬೆರಗಾಗಿದ್ದೆ, ಈ ಚಿತ್ರಕಾರರನ್ನು ನೋಡಿದಾಗ ರೋಮನ್ ಪುನರುತ್ತಾನ ಕಾಲದಲ್ಲಿ ಅರಳಿದ ಶಿಲ್ಪಕಲೆ, ಚಿತ್ರಕಲೆಯನ್ನು ಅಲ್ಲಿನ ಜನರು ಇನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ, ಐದು ಹತ್ತು ನಿಮಿಷದಲ್ಲಿ ಸ್ಪ್ರೇ ಪೈಂಟ್ ಬಳಸಿ ನಿಮ್ಮ ಕಣ್ಣೆದುರಿಗೆ ಅದ್ಬುತ ಚಿತ್ರಗಳನ್ನು ನಿರ್ಮಿಸುವ ಪ್ರತಿಭೆಗಳು ರೋಮ್‌ನ ರಸ್ತೆ ರಸ್ತೆಗಳಲ್ಲಿ ಕಾಣುತ್ತಾರೆ, ಇವರು ರಚಿಸುವ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ, ಯಾವುದೂ ಒಂದೇ ರೀತಿ ಇರುವುದಿಲ್ಲಾ! ಜಾಸ್ತಿ ಪ್ರಕೃತಿ ಚಿತ್ರಗಳನ್ನು ಬಿಡಿಸಿದರೆ ಕೆಲವರು ಅಲ್ಲಿರುವ ಪಸಿದ್ಧ ಸ್ಮಾರಕಗಳನ್ನು ಬಿಡಿಸುತ್ತಾರೆ, ಇವರು ರಚಿಸುವ ಚಿತ್ರಗಳನ್ನು ಹರಾಜು ಹಾಕಿದರೆ ಲಕ್ಷಾಂತರ ರೂಪಾಯಿಗೆ ಹರಾಜಾಗುತ್ತದೆ, ಆದರೆ ಹೊಟ್ಟೆಪಾಡಿಗೋಸ್ಕರ ಇದನ್ನು ರಚಿಸುವ ಇವರು ಒಂದೆರಡು ಯೂರೋಗಳಿಗೆ ಇದನ್ನು ಮಾರುವುದು ಮನಕರಗುತ್ತದೆ. ಇನ್ನೂ ಕೆಲ ಚಿತ್ರಕಲಾವಿದರು ನಿಮ್ಮನ್ನು ಯಾವುದಾದರೂ ಸ್ಮಾರಕದ ಮುಂದೆ ಕೂರಿಸಿ ನಿಮ್ಮ ಚಿತ್ರವನ್ನು ಅಂದವಾಗಿ ಬರೆದುಕೊಡುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಶಿಲ್ಪಕಲೆ, ಚಿತ್ರಕಲೆಗೆ ಪಸಿದ್ಧವಾದ ರೋಮ್‌ನಲ್ಲಿ, ಮೋನಾಲೀಸಾ, ಮಡೊನ್ನಾ ಆಫ್ ದಿ ಚೇರ್, ರಿಟರ್ನ್ಡ್ ದಿ ಫಿಲ್ಡ್, ದಿ ಲಾಸ್ಟ್ ಜಡ್ಜ್ಮೆಂಟ್, ದಿ ಟೆಂಪೆಸ್ಟ್ ನಂತಹ ಪ್ರಸಿದ್ದ ವರ್ಣಚಿತ್ರಗಳು ರಚನೆಗೊಂಡ ರೋಮ್ ನೆಲದಲ್ಲಿ ಈಗಲೂ ಇಂಥಹ ಕಲಾವಿದರಿಂದ ವರ್ಣಚಿತ್ರಕಲೆ ಮುಂದುವರೆಯುತ್ತಿರುವುದು ಕಲೆಯ ಜೊತೆ ರೋಮಿಗಿರುವ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ.ವರ್ಣ ಚಿತ್ರ ರಚನೆಯಲ್ಲಿ, ಶಿಲ್ಪಕಲೆಯಲ್ಲಿ ಇಟಲಿ ಜಗತ್ಪ್ರಸಿದ್ದವಾಗಿತ್ತು, ವರ್ಣಚಿತ್ರಕಾರರು, ವಾಸ್ತುವಿನ್ಯಾಸಕಾರರು, ಶಿಲ್ಪಿಗಳ ನೆಲೆವೀಡಾಗಿದ್ದ ಇಟಲಿ ಅಂದ ಹೆಚ್ಚಲು ಮೈಕಲ್ ಏಂಜಲೋ,ಬೇರ್ನಿನಿ, ಲೀಯೋನಾರ್ಡೋದ ವಿಂಚಿ ಅದ್ಭುತ ರಚನೆಗಳು ಕಾರಣವೆಂದರೆ ತಪ್ಪೇನಿಲ್ಲಾ!ಇವರ ಕಲಾಕೃತಿಗಳು ಇಂದಿಗೂ ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ರಾರಾಜಿಸುತ್ತದೆ. ಮೈಕಲ್ ಏಂಜಲೋ ಸಿಸ್ಟೆನ್ ಚಾಪೆಲ್‌ನ ಒಳ ಛಾವಣಿಯಲ್ಲಿ ಬಿಡಿಸಿರುವ ಚಿತ್ರಗಳು ಈಗಷ್ಟೇ ಚಿತ್ರಿಸಿದವೇನೊ ಎನ್ನುವಷ್ಟು ಹೊಸತನದಿಂದ ಕೂಡಿದೆ, ಬೆಂಕಿಯ ಜೊತೆ ಸರಸವಾಡುತ್ತಾ, ನೃತ್ಯಮಾಡುತ್ತಲೋ ರಸ್ತೆಯ ಬದಿಯಲ್ಲಿ ಪಿಯಾನೋ ಬಾರಿಸುತ್ತಲೋ ಭಿಕ್ಷೆ ಬೇಡುವವರನ್ನು ಇಲ್ಲಿ ಸಾಮಾನ್ಯವಾಗಿ ಕಾಣಬಹುದು.

ರೋಮ್‌ನಲ್ಲಿ ನಿಮಗೆ ಅಲ್ಲಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರೋಮ್ಯಾಂಟಿಕ್ ಆಗಿ ಚುಂಬಿಸುತ್ತಾ ನಿಂತ ಪ್ರೇಮಿಗಳ ಜೋಡಿ ಕಾಣಸಿಗುವುದು ಸಾಮಾನ್ಯ.

ಡಾ. ಪ್ರಕಾಶ್.ಕೆ.ನಾಡಿಗ್

Related post