ವಿಧುರನ ಸತ್ಯ ಮತ್ತು ಧರ್ಮ
ಸತ್ಯ ಮತ್ತು ಧರ್ಮದ ಆಡಳಿತಕ್ಕೆ ಹೆಸರಾಗಿದ್ದ ವಿಧುರನು ದೃತರಾಷ್ಟ್ರನ ಆಸ್ಥಾನದ ಮಂತ್ರಿಯಾಗಿದ್ದು, ದೃತರಾಷ್ಟ್ರನ ಮಗನಾದ ದುಶ್ಶಾಸನನು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದಾಗ ಅದನ್ನು ವಿರೋಧಿಸಿ ಕೌರವನ ಸಭೆಯನ್ನು ಧಿಕ್ಕರಿಸಿ ಹೊರನಡೆದ ದಕ್ಷ ಆಡಳಿತಗಾರನಾಗಿದ್ದ. ಈತನ ಸತ್ಯ ಮತ್ತು ಧರ್ಮದ ನಡೆಯಿಂದ ಶ್ರೀಕೃಷ್ಣನ ವಿಶ್ವಾಸವನ್ನೂ ಈತ ಗಳಿಸಿದ್ದ.
ಹಸ್ತಿನಾವತಿಯ ಅಧಿಕಾರಕ್ಕಾಗಿ ಧುರ್ಯೋಧನನು ಪಾಂಡವರನ್ನು ಮೋಸದಿಂದ ಕೊಲ್ಲಲು ಹಲವು ಕುಟಿಲ ತಂತ್ರಗಳನ್ನು ಹೆಣೆಯುತ್ತಾನೆ. ಆದರೆ ಮಹಾತ್ಮ ವಿಧುರನಿಗೆ ತನ್ನ ಗುಪ್ತಚರರ ಸಹಾಯದಿಂದ ದುರ್ಯೋಧನನು ಪಾಂಡವರನ್ನು ಕೊಲ್ಲಲು ಮಾಡುತ್ತಿದ್ದ ಎಲ್ಲಾ ಕುಟಿಲ ತಂತ್ರಗಳು ಮೊದಲೇ ತಿಳಿಯುತ್ತಿತ್ತು. ಅದೇ ರೀತಿ ಧುರ್ಯೋಧನನು ಪಾಂಡವರನ್ನು ಕಾಡಿನಲ್ಲಿ ನಿರ್ಮಿಸಲಾಗಿದ್ದ ಅರಗಿನ ಮನೆಗೆ ಕಳುಹಿಸಿ ರಾತ್ರಿಯ ವೇಳೆಗೆ ಅರಗಿನ ಮನೆಗೆ ಬೆಂಕಿ ಹಚ್ಚಿ ಎಲ್ಲರನ್ನೂ ಕೊಲ್ಲುವ ಉಪಾಯವನ್ನು ಮಾಡುತ್ತಾನೆ. ಆದರೆ ಪಾಂಡವರನ್ನು ಅರಗಿನ ಮನೆಗೆ ಕಳುಹಿಸದಂತೆ ತಡೆಯಲು ವಿಧುರನಿಗೆ ಸಾಧ್ಯವಿರಲಿಲ್ಲ. ಆದರೆ ಪಾಂಡವರನ್ನು ಈ ತಂತ್ರದಿಂದ ರಕ್ಷಿಸುವಂತಹ ಪ್ರತಿತಂತ್ರವನ್ನು ಮಾಡಲು ವಿಧುರನಿಗೆ ಸಾಧ್ಯವಿತ್ತು.
ಅದೇ ರೀತಿ ಕೌರವನು ಅರಗಿನ ಅರಮನೆಗೆ ಬೆಂಕಿ ಹಚ್ಚಿದಾಗ ಪಾಂಡವರನ್ನು ಹೇಗೆ ಕಾಪಾಡಬಹುದೆಂದು ಸತತವಾಗಿ ಯೋಚಿಸುತ್ತಿದ್ದ. ಧುರ್ಯೋಧನನ ಉಪಾಯದಂತೆ ಪಾಂಡವರು ಅರಗಿನ ಮನೆಗೆ ಹೋಗುವ ಮೊದಲು ಕುಂತಿ ಮತ್ತು ಮಹಾತ್ಮ ವಿಧುರನ ಆಶೀರ್ವಾದವನ್ನು ಪಡೆಯಲು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ವಿಧುರನು ಧರ್ಮರಾಯನಲ್ಲಿ, ಒಂದು ವೇಳೆ ಭೀಕರವಾದ ಕಾಡ್ಗಿಚ್ಚು ಉಂಟಾದರೆ, ಕಾಡಿನಲ್ಲಿ ಯಾವ ಯಾವ ಪ್ರಾಣಿಗಳು ಬೆಂಕಿಗೆ ಆಹುತಿಯಾಗದೇ ಸುರಕ್ಷಿತವಾಗಿ ಉಳಿಯಬಹುದೆಂದು ಕೇಳುತ್ತಾನೆ. ಆಗ ಧರ್ಮರಾಯ ಕಾಡ್ಗಿಚ್ಚು ಹತ್ತಿಕೊಂಡಾಗ ಕಾಡಿನಲ್ಲಿ ಸ್ವಚ್ಛಂದವಾಗಿ, ನಿರ್ಭಯದಿಂದ ಸಂಚರಿಸುವ ಸಿಂಹ, ಹುಲಿ, ಚಿರತೆ, ಆನೆ ಮತ್ತು ಎಲ್ಲಕ್ಕಿಂತ ವೇಗವಾಗಿ ಓಡುವ ಚೀಂಕಾರ ಇತ್ಯಾದಿಗಳು ಬೆಂಕಿಯಿಂದ ದಹಿಸಲ್ಪಟ್ಟು ಸಾಯುತ್ತವೆ. ಆದರೆ ಬಿಲದಲ್ಲಿರುವ ಇಲಿಯು ಬೆಂಕಿಯ ಬೇಗೆಗೆ ಸಿಲುಕದೇ ಬದುಕಿ ಉಳಿಯಬಹುದು, ಅದು ಬೆಂಕಿಯು ನಂದಿದ ನಂತರ ಬಿಲದಿಂದ ಹೊರಬಂದು ಸ್ವಚಂದವಾಗಿ ಜೀವಿಸುತ್ತದೆ ಎಂದು ಹೇಳುತ್ತಾನೆ. ಆಗ ವಿಧುರನು,
ಧರ್ಮರಾಯ, ನಿನ್ನ ಉತ್ತರದಿಂದ ನನಗೆ ಸಮಾಧಾನವಾಯಿತು. ನೀವೆಲ್ಲರೂ ಸುರಕ್ಷಿತವಾಗಿ ಹೋಗಿ ಬನ್ನಿರೆಂದು ಆಶೀರ್ವಾದ ನೀಡುತ್ತಾನೆ.
ಧರ್ಮರಾಯನ ಮಾತಿನಂತೆ ವಿಧುರನು ಪಾಂಡವರ ಪೈಕಿ ಬಲಾಢ್ಯನಾದ ಭೀಮಸೇನನಿಗೆ ಅರಗಿನ ಅರಮನೆಗೆ ಹೋದ ತಕ್ಷಣ ಅರಗಿನ ಅರಮನೆಯಿಂದ ಬಿಲವನ್ನು ಕೊರೆದು ಕಾಡಿನ ಮೂಲಕ ಹೊರಬರುವಂತಹ ಸುರಂಗ ಮಾರ್ಗವನ್ನು ನಿರ್ಮಿಸಲು ಹೇಳುತ್ತಾನೆ. ಅದೇ ರೀತಿ ದುರ್ಯೋಧನನು ಅರಮನೆಗೆ ತಡರಾತ್ರಿ ಬೆಂಕಿ ಹಚ್ಚಿದಾಗ ಪಾಂಡವರೆಲ್ಲರೂ ಅದೇ ಸುರಂಗ ಮಾರ್ಗದ ಮೂಲಕ ಹೊರಬಂದು ಬದುಕಿ ಉಳಿಯುತ್ತಾರೆ.
ಜೀವನ ಎನ್ನುವುದು ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಮಹಾಭಾರತವೆಂದರೆ ತಪ್ಪಾಗದು. ಇಲ್ಲಿ ಪಾಂಡವರ, ವಿಧುರನ ಹಾಗೂ ಕೌರವನ ನೀತಿಗಳೂ ಕಾಣಸಿಗುತ್ತವೆ. ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವವರಿಗೆ ವಿಧುರನ ಹಾಗೂ ಶ್ರೀಕೃಷ್ಣನ ಬೆಂಬಲವೂ ಸದಾ ಇರುತ್ತದೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡಿದರಂತೆ ಎನ್ನುವ ಗಾದೆಯಂತೆ ಆಪತ್ತು ಬಂದಾಗ ಪರಿಹಾರ ಯೋಚಿಸುವ ಬದಲು ಮುಂದೆ ಬರಬಹುದಾದ ಆಪತ್ತಿನ ಕುರಿತು ಮೊದಲೇ ಚಿಂತಿಸಿ ಅದಕ್ಕೆ ಅಗತ್ಯವಿರುವ
ತಯಾರಿಗಳನ್ನು ಮಾಡಿಕೊಳ್ಳುವುದು ಜಾಣತನ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160