ವಿಶ್ವ ಪ್ರೇಮಲೋಕದ ರಾಯಭಾರಿ – ಹಂಸಲೇಖ

ಇನ್ನು ಚೆನ್ನಾಗಿ ನೆನಪಿದೆ, 1993 ನೇ ಇಸವಿ ನಾನಾಗ ಆರನೇ ಕ್ಲಾಸು, ನಮ್ಮ ತಂದೆ ಬರಿ ಓದುವುದರಿಂದ ಪ್ರಯೋಜನವಿಲ್ಲ ನಿನ್ನ ನಾನು ಚಿತ್ರಕಲೆ ಶಾಲೆಗೆ ಹಾಕುವೆ ಎಂದು ಹೇಳಿದರು. ಸ್ವತಃ ಶಿಕ್ಷಕರಾದ ನಮ್ಮ ತಂದೆಗೆ ಮಕ್ಕಳು ಓದುವುದರ ಜೊತೆಗೆ ಇನ್ನ್ಯಾವುದಾದರೂ ಕ್ಷೇತ್ರದಲ್ಲಿ ಗುರುತಿಸಿಕೊಬೇಕು ಎಂಬ ಆಸೆ! ಅಲ್ಲಿ ತರಕಾರಿ ಹೂವು-ಹಣ್ಣು, ಗಿಡ-ಮರ ಇತ್ಯಾದಿ ಬಿಳಿ ಪರದೆ ಮೇಲೆ ಬಿಡಿಸುವುದು ಹೇಗೆ ಎಂದು ಸರಳವಾಗಿ ಹೇಳಿಕೊಡುತ್ತಾರೆ ನೀನು ಹೋಗು ಕಲಿತುಕೊ ಎಂಬ ಆಜ್ಞೆ!

ಚಿತ್ರ ಕೃಪೆ: The News Minute

ಬೆಳಗಿನ ಸವಿ ನಿದ್ದೆಗೆ ಅಡ್ಡಿಯಾಗುತ್ತಿದ್ದದ್ದು ನಮ್ಮ ಅಮ್ಮ ಹಾಕುತಿದ್ದ ರೇಡಿಯೋ ದಲ್ಲಿ ಬರುತಿದ್ದ ಸಂಗೀತ. ಮೊದ ಮೊದಲು ನಮ್ಮ ಕಿವಿಗೆ ಅಪ್ಪಳಿಸುತಿದ್ದದ್ದು ಮಂಜುನಾಥನ ಭಕ್ತಿ ಗೀತೆ, ಅನಂತರ ನಾವು ನಿದ್ದೆಯಿಂದ ಎಚ್ಚೆತ್ತು ಕಣ್ಣು ಮುಚ್ಚಿಕೊಂಡೆ ಕಳ್ಳ ನಿದ್ದೆ ನಟಿಸುತ್ತಿದ್ದಾಗ ಆವರಿಸುತ್ತಿದ್ದದ್ದೇ “ಹಂಸಲೇಖ” ರವರ ಹಾಡುಗಳು, ಯುಗ ಪುರುಷ, ರಣಧೀರ, ಪ್ರೇಮಲೋಕ, ರಣರಂಗ ಇವೆಲ್ಲ ಸಿನಿಮಾದ ಹಾಡುಗಳು ಸರದಿ ಮೇಲೆ ಬರುತ್ತಿದ್ದವು. ನಮಗೆ ನಿದ್ದೆ ಹಾಳಾದರೂ ಈ ಹಾಡುಗಳನ್ನು ಕೇಳುತ್ತ ಎದ್ದೇಳುತ್ತಿದ್ದವು. ಅವತ್ತೊಂದು ದಿನ ಬೆಳಿಗ್ಗೆ ಅಪ್ಪ ಇನ್ನಾದರೂ ಚಿತ್ರಕಲೆ ಶಾಲೆಗೆ ಹೋಗುತ್ತೀಯೋ ಇಲ್ಲವೋ ಎಂದು ದಬಾಯಿಸಿದಾಗ ಗಾಬರಿ ಬಿದ್ದು ಮದ್ಯಾಹ್ನದ ತನಕ ಮನೆಗೆ ಬಂದಿದ್ದರೆ ಕೇಳಿ…

ಚಿತ್ರ ಕೃಪೆ: Hindustan Times

ನಮ್ಮ ಮನೆಯ ಹಿಂಬಾಗ ಮಹಾಗಣಪತಿ ದೇವಸ್ಥಾನ ಅದರ ಸಾಲಿನಲ್ಲೇ ಹಂಸಲೇಖ ರವರ ಅಣ್ಣ ಬಾಲಕೃಷ್ಣ ರವರ ಮನೆಯಿತ್ತು. ಮನೆಯ ಕಾಂಪೌಂಡಿನಲ್ಲಿ ಇಲ್ಲಿ ಸಂಗೀತ ಹೇಳಿಕೊಡಲಾಗುತ್ತದೆ ಎಂಬ ಬೋರ್ಡು, ನನಗೆ ಏನೋ ಆಕರ್ಷಣೆ ಒಂದು ದಿನ ನಾನು ನನ್ನ ಸ್ನೇಹಿತರು ಮನೆಗೆ ದಾಳಿ ಇಟ್ಟಾಗ ನಮ್ಮನು ಬಾಲಕೃಷ್ಣರ ಮಡದಿ ಹಜಾರದಲ್ಲಿ ಕೂರಿಸಿ ನಮಗೆಲ್ಲ ಕುಡಿಯಲಿಕ್ಕೆ ನೀರನ್ನು ಕೊಟ್ಟು ಅನಂತರ ಬಾಲಕೃಷ್ಣರವರನ್ನು ಕರೆದು “ಮಕ್ಕಳು ಬಂದಿದ್ದಾರೆ ಸಂಗೀತ ಕಲೀಬೇಕಂತೆ ಬಂದು ಮಾತನಾಡಿಸಿ” ಎಂದು ಒಳ ಹೋದರು. ನಾವು ಮೂರು ಮಂದಿ ಇದ್ದೆವು ನಮಗೆ ‘ಬಾಲಕೃಷ್ಣ’ ಹಂಸಲೇಖ ರವರ ಅಣ್ಣ ಅಂತ ಗೊತ್ತಿರಲಿಲ್ಲ, ಬಾಲಕೃಷ್ಣರವರು  ಬಂದು ಏನು ಮಕ್ಕಳ ಸಂಗೀತ ಕಲೀಬೇಕಾ ಇಲ್ಲಿ ಮೃದಂಗ ಮಾತ್ರ ಹೇಳಿಕೊಡಲಾಗುತ್ತದ್ದೆ ತಿಂಗಳಿಗೆ ಮುನ್ನೂರು ರೂಪಾಯಿ ಎಂದು ಹೇಳಿದಾಗ ನಾವು ಒಬ್ಬರನ್ನೊಬ್ಬರು ಮುಖ ಮುಖ ನೋಡಿಕೊಂಡೆವು. ನಮಗೆ ಗೊತ್ತು ಆ ದಿನಗಳಲ್ಲಿ ಮುನ್ನೂರು ರೂಪಾಯಿ ನಮ್ಮ ಒಂದು ವರ್ಷದ ಶಾಲಾ ಫೀಸು. ನಮ್ಮ ಮನೆಯಲ್ಲಿ ಈ ವಿಚಾರವಾಗಿ ಹೇಳಿದಾಗ ಅಪ್ಪ ” ಚಿತ್ರಕಲೆ ಕಲಿತುಕೊ ಸಂಗೀತವೆಲ್ಲ ನಮಗೆ ಒಗ್ಗೋಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು.

ಆನಂತರ ಮುಂದೆ ನಾವು ಹೈ ಸ್ಕೂಲ್ ನಲ್ಲಿ ಇದ್ದಾಗ ಗೊತ್ತಾಗಿದ್ದು ಬಾಲಕೃಷ್ಣ ರವರು ಹಂಸಲೇಖ ರವರ ಹಿರಿಯ ಸಹೋದರ ಎಂದು. ಹಂಸಲೇಖ ರವರು ” ನೀನಾ ಭಗವಂತ” ಹಾಡು ರಚಿಸಿದಾಗ ಅವರು ಇದ್ದದ್ದು ಇದೆ ಮಹಾಗಣಪತಿಯ ದೇವಸ್ಥಾನದ ಹಿಂದಿನ ಬೀದಿಯಲ್ಲಿ. ನಮ್ಮ (ದೊಡ್ಡಪ್ಪನ ಮಗ) ಅಣ್ಣ ಮನೆಗೆ ಪ್ರೇಮಲೋಕ ಕ್ಯಾಸೆಟ್ ತಂದಾಗ ನಮಗಿನ್ನ ತುಂಬಾ ಚಿಕ್ಕ ವಯಸ್ಸು. ಅಣ್ಣ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಅದೇ ಕ್ಯಾಸೆಟ್ಟ್ ರಿಪೀಟ್ ಹೊಡೀತಿದ್ದ ಮದ್ಯೆ ಮದ್ಯೆ ಆ ಕ್ಯಾಸೆಟ್ ರೀಲು ಬಿಚ್ಚಿಕೊಳ್ಳುತ್ತಿರಲು ನನಗೆ ಅದನ್ನು ಪೆನ್ಸಿಲ್ಲಿನಿಂದ ಒಳಗೆ ತುರುಕಿ ತಿರುಗಿಸಿ ಕೊಡಬೇಕಾಗಿತ್ತು. ಮುಂದೆ ರಣಧೀರ, ಯುಗಪುರುಷ, ಯುದ್ಧಕಾಂಡ, ರಣರಂಗ, ಕಿಂದರಿಜೋಗಿ ಹೀಗೆ ಸಾಗಿತು ನಮ್ಮ ಅಣ್ಣನ ಕ್ಯಾಸಟ್ಟಿನ ಪಯಣ. ನಮ್ಮ ತಲೆಯಲ್ಲಿ ಹಂಸಲೇಖ ರವರ ಸಂಗೀತ ಸಂಯೋಜನೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ ಅಣ್ಣನ ಸ್ನೇಹಿತ ಒಮ್ಮೆ ಮನೆಗೆ ಬಂದಾಗ “hey u i will smash you” (ಯುದ್ಧಕಾಂಡ ದ ಹಾಡು)ಎಂದು ರೇಗಿಸಿ ಓಡಿಬಿಡುತ್ತಿದ್ದೆ. ಈಗ ವಯಸ್ಸು ನಲವತ್ತಾಗಿದೆ ಹಾಗಲು ಸಂಗೀತ ಕ್ಷೇತ್ರದಲ್ಲಿ ಉಪೇಂದ್ರಕುಮಾರ್, ರಾಜನ್-ನಾಗೇಂದ್ರ, ಮುಂತಾದವರ ಹಾಡುಗಳು ರೇಡಿಯೋ ದಲ್ಲಿ ಬಂದರು ನಮಗೆ ಆಪ್ತವಾಗುತ್ತಿದ್ದದ್ದು “ಹಂಸಲೇಖ” ಮಾತ್ರ.

ನಿರ್ಮಾಪಕರಾದ ವೀರಾಸ್ವಾಮಿಯವರು ತಮ್ಮ ಮಗನಾದ ರವಿಚಂದ್ರನ್ ರವರನ್ನು ಚಿತ್ರರಂಗದಲ್ಲಿ ಬೆಳೆಸುವ ಪ್ರಯತ್ನದಲ್ಲಿ ಚಿತ್ರಗಳಿಗೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ‘ಶಂಕರ್ ಗಣೇಶ್’ ರವರ ಕೈಲಿ ಸಂಯೋಜನೆ ಮಾಡಿಸುತ್ತಿದ್ದ ಕಾಲ, “ನಾನು ನನ್ನ ಹೆಂಡತಿ” ಚಿತ್ರಕ್ಕೆ ಶಂಕರ್ ಗಣೇಶ್ ರವರು ಎಂದಿನ ಹಾಗೆ ಬರಿ ಟ್ಯೂನ್ ನನ್ನು ರೆಕಾರ್ಡ್ ಮಾಡಿಸಿ ಕೊಟ್ಟಾಗ, ಎನ್ ಎಸ್ ರಾವ್ ಮೂಲಕ ವೀರಾಸ್ವಾಮಿ ಹಾಗು ರವಿಚಂದ್ರನ್ ರವರಿಗೆ ಹಂಸಲೇಖ ರವರ ಪರಿಚಯವಾಗುತ್ತದೆ. ಬರಿಯ ಟ್ಯೂನ್ ನನ್ನು ತಮ್ಮ ಅದ್ಬುತ ಸಾಹಿತ್ಯದಿಂದ ಹಂಸಲೇಖ ತಮಗೆ ಒದಗಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ಹಾಡುಗಳು ಸೂಪರ್ ಹಿಟ್ ಆಗುತ್ತವೆ. ಮುಂದೆ ರವಿಚಂದ್ರನ್ ಹಂಸಲೇಖ ರವರ ಪ್ರತಿಭೆ ಅರಿತು ತಮ್ಮ ಚೊಚ್ಚಲ ನಿರ್ದೇಶನದ “ಪ್ರೇಮಲೋಕ” ಚಿತ್ರಕ್ಕೆ ತಮ್ಮ ತಂದೆಯವರನ್ನು ಹಂಸಲೇಖ ನೆರವಿನಿಂದ ನಿರ್ಮಾಣಕ್ಕೆ ಒಪ್ಪಿಸುತ್ತಾರೆ. ಅಲ್ಲಿ ಶುರುವಾಗುತ್ತದೆ.

ಚಿತ್ರ ಕೃಪೆ: Deccan Herald

ಹಂಸಲೇಖ – ರವಿಚಂದ್ರನ್ ಜೋಡಿ. ಹಂಸಲೇಖ ಸಾಹಿತ್ಯ ಹಾಗು ರವಿಚಂದ್ರನ್ ನಿರ್ದೇಶನ ದಿಂದ (ರಿಮೇಕ್ ಆದರೂ ಸಹ) ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಒಳ್ಳೆಯ ಚಿತ್ರಗಳಿಂದ ರಂಜಿಸುತ್ತಾರೆ. ಮುಂದೆ 1998 ರಲ್ಲಿ ಜೋಡಿ ಬೇರೆಯಾಗುತ್ತದ್ದೆ ಮತ್ತೆ ಆ ಕಾಂಬಿನೇಶನ್ ಬಂದರು ಸಹ (ಒಂದಾಗೋಣ ಬಾ) ಹಿಟ್ ಆಗುವುದಿಲ್ಲ.

ಈ ಎರಡು ದಶಕಗಳ ಮದ್ಯೆ ಹಂಸಲೇಖ ಅವರು ರವಿಚಂದ್ರನ್ ಚಿತ್ರಗಳಲ್ಲದೆ ನೂರಾರು ಚಿತ್ರಗಳಿಗೆ ಸಾಹಿತ್ಯ ಹಾಗು ಸಂಗೀತ ಸಂಯೋಜನೆ ಮಾಡುತ್ತಾರೆ ಹಾಗು ಅದು ಹಂಸಲೇಖ ಅವರ ಪರ್ವದ ದಿನಗಳು. ಎಲ್ಲ ನಿರ್ಮಾಪಕರಿಗೂ ಹಂಸಲೇಖಾ ಅವರೇ ಬೇಕು! ತಮ್ಮ ಹೆಸರಿನ ಕೆಳಗೆ ಆಕರ್ಷಕವಾಗಿ ಸೈನ್ ಕೂಡ ಮಾಡಿಕೊಳ್ಳುತ್ತಾರೆ ಹಂಸಲೇಖ. ಹಗಲು ರಾತ್ರಿ ಎರಡು ಶಿಫ್ಟ್ ಗಳಲ್ಲಿ ಹಂಸಲೇಖ ತಂಡ ಕೆಲಸ ಮಾಡುತ್ತದೆ ಹಾಗು ವಿನೂತನ ಪ್ರಯೋಗಗಳನ್ನು ಮಾಡುತ್ತದ್ದೆ. ಹಂಸಲೇಖರವರ ನೇತೃತ್ವದಲ್ಲಿ ತಂಡವು ಒಳ್ಳೆ ಸಂಗೀತ ಸಾಹಿತ್ಯ ಗಳನ್ನು ಚಿತ್ರರಂಗಕ್ಕೆ ಕೊಡ್ಡುತ್ತದೆ. ಸಾಂಪ್ರದಾಯಿಕ ಸಂಗೀತವನ್ನು ತೊರೆದು ಬರಿಯ ಬಾಯಿಯಲ್ಲಿ ಶಬ್ದಗಳನ್ನು ಉಚ್ಚರಿಸಿ ಥೇಟ್ ಶಬ್ದಗಳ ಹಾಗೆ ರೆಕಾರ್ಡ್ ಮಾಡಿಸಿ ಹಾಡುಗಳಿಗೆ ಬೆನ್ನೆಲುಬಾಗಿ ಹಾಡುಗಳ ಯಶಸ್ವಿಯಾಗಲು ತಂಡ ಕಾರಣವಾಗುತ್ತದೆ. 1995 ರಲ್ಲಿ ತೆರೆ ಕಂಡ “ಕೋಣ ಈದೈತೆ” ಚಿತ್ರಕ್ಕೆ ಹಂಸಲೇಖ ತಂಡ ಯಾವುದೇ ಸಂಗೀತ ಉಪಕರಣ ಉಪಯೋಗಿಸದೆ ಬರಿಯ ಶಬ್ದಗಳಿಂದ ಸಂಗೀತ ಸಂಯೋಜನೆ ಮಾಡುತ್ತದೆ.

ಒಮ್ಮೆ “ಮುತ್ತಿನ ಹಾರ” ಸಿನಿಮಾದ ಹಾಡಿನ ಧ್ವನಿ ಮುದ್ರಿಕೆ ಸಮಯದಲ್ಲಿ ಸಂಗೀತ ದಿಗ್ಗಜ ಶ್ರೀ ಬಾಲಮುರಳಿ ಕೃಷ್ಣರವರು “ದೇವರು ಹೊಸೆದ ಪ್ರೇಮದ ದಾರ” ಹಾಡನ್ನು ಹಾಡಲೆಂದು ಬಂದಿದ್ದರು. ಆ ಹಾಡನ್ನು ಓದುವಾಗ ಆ ಹಾಡಿನಲ್ಲಿ ಒಂದು ಸಣ್ಣ ತಿದ್ದು ಪಡಿ ಇತ್ತು. ಆಗ ಆ ಹಾಡನ್ನು ಬರೆದ ಕವಿಯನ್ನು ಕರೆಯಿರಿ ಎಂದು ಹಂಸಲೇಖ ಅವರಿಗೆ ಹೇಳಿದರಂತೆ. ಆಗ ಹಂಸಲೇಖರವರು ತುಟಿ ಪಿಟಕ್ ಅನ್ನದೆ ಕಿವಿಯಲ್ಲಿಟ್ಟುಕೊಂಡಿದ್ದ ಪೆನ್ನು ಹಿಡಿದು ಬಾಲಮುರಳಿ ಅವರ ಮುಂದೆ ಬಂದರಂತೆ. ‘ಗುರುಗಳೇ ಹೇಳಿ…’ ಎಂದು ತಿದ್ದಲು ಮುಂದಾದಾಗ, ಬಾಲಮುರಳೀಯವರು ಕೋಪದಿಂದ ‘ಇಲ್ಲ… ನನಗೆ ಇದನ್ನು ಬರೆದ ಕವಿಯೇ ಬೇಕು ಅವರನ್ನೇ ಕರೆಯಿಸಿ’ ಎಂದರಂತೆ. ಹಂಸಲೇಖರವರು ಅವರು ಮುಗುಳ್ನಗುತ್ತ ‘ನಾನೇ ಸ್ವಾಮಿ ಈ ಹಾಡು ಬರೆದವನು’ ಎಂದಾಗ ಬಾಲಮುರಳಿಯವರು ಆಶ್ಚರ್ಯಚಕಿತರಾದರಂತೆ. ಆ ಹಾಡು ಇಂದಿಗೂ ಎಲ್ಲರಿಗು ಪ್ರಿಯ. ಅವರ “ಗಂಗವ್ವ ಗಂಗಾಮಾಯಿ” ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ, ಹಾಲುಂಡ ತವರು, ಶ್ರೀ ಮಂಜುನಾಥ ಚಿತ್ರಗಳಿಗೆ ರಾಜ್ಯಪ್ರಶಸ್ತಿ, ಫಿಲಂಫೇರ್ ಹಾಗೂ ಇನ್ನು ಅನೇಕ ಪ್ರಶಸ್ತಿಗಳು ಹಂಸಲೇಖರವರ ಕೈ ಸೇರಿದೆ.

ಚಿತ್ರ ಕೃಪೆ: Metro Saga

ರವಿಚಂದ್ರನ್ ಅಲ್ಲದೆ ರಾಜಕುಮಾರ್ , ವಿಷ್ಣುವರ್ಧನ್, ಶಿವಣ್ಣ, ಶಶಿಕುಮಾರ್, ಜಗ್ಗೇಶ್ ಮುಂತಾದವರ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತಾರೆ ಮತ್ತು ಎಲ್ಲರ ಚಿತ್ರಗಳ ಕ್ಯಾಸೆಟ್ಗಳು ಭರ್ಜರಿ ಮಾರಾಟವಾಗುತ್ತದೆ. ಅಣ್ಣಾವ್ರ “ಆಕಸ್ಮಿಕ” ಚಿತ್ರದ ಹಂಸಲೇಖರವರೇ ರಚಿಸಿದ “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು” ಹಾಡು ಥೀಯೇಟರ್ ನಲ್ಲಿ ಎರಡೆರಡು ಸಲ ಪ್ರಸಾರವಾಗುತ್ತದೆ. ಆ ಹಾಡು ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕುವೆಂಪು, ನಿಸ್ಸಾರ್ ಅಹ್ಮದ್, ಕವಿತೆಗೆಳ ಜೊತೆ ಸಮ್ಮೋಹನ ಗಾಯನಕ್ಕೆ ಆಯ್ಕೆ ಆಗುತ್ತದ್ದೆ.

ಅಷ್ಟರಲ್ಲೇ ಹಂಸಲೇಖರವರು ಭಾಷಣವೊಂದರಲ್ಲಿ ಅಸ್ಪೃಶ್ಯತೆಯ ಬಗ್ಗೆ ಕೆಲವು ಮಾತನಾಡುತ್ತಾರೆ ಆದರೆ ದುರದೃಷ್ಟವಶಾತ್ ಆ ಮಾತುಗಳು ಕೆಲವು ಜನರಿಗೆ ಇಷ್ಟವಾಗುವುದಿಲ್ಲ ಹಾಗು ಬಹಿರಂಗವಾಗಿ ದೂಷಣೆ ಮಾಡಲಿಕ್ಕೆ ಶುರುಮಾಡುತ್ತಾರೆ. ಸಾಮಾಜಿಕ ತಾಣದಲ್ಲಿ ಅವರ ಕುರಿತು ಕೆಟ್ಟದಾಗಿ ಕಾಮೆಂಟ್ಗಳು ಶುರುವಾಗುತ್ತವೆ. ತತ್ತಕ್ಷಣ ಹಂಸಲೇಖ ಅದರ ಕುರಿತು ಕ್ಷಮೆಯನ್ನು ಸಹ ಕೇಳಿದ್ದಾರೆ. “ಮಾತು ಆಡಿದರೆ ಆಯ್ತು ಮುತ್ತು ಹೊಡೆದರೆ ಹೋಯ್ತು” ಎಂದು ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಕುಣಿಕೆ ಬೇಡ ಅವರು ಕ್ಷಮೆಯನ್ನು ಸಹ ಕೇಳಿದ್ದಾರೆ. ಕ್ಷಮೆಯನ್ನು ಎಲ್ಲಿ ಕೇಳಿದರು ಎಂಬ ಮತ್ತೊಂದು ವಿವಾದ ಬೇಡ ಕ್ಷಮೆಗಿಂತ ಹೆಚ್ಚಿನ ಪದ ಈ ಸಂದರ್ಭದಲ್ಲಿ ಅದೂ ಆ ಮೇರು ಸಾಧಕನ ವಿಷಯದಲ್ಲಿ ಹೊಳೆಯುತ್ತಿಲ್ಲಾ!

ತಮ್ಮ ನಿವಾಸದಲ್ಲಿ ದೇಸಿ ಶಾಲೆ ತೆರೆದು ಅವರ ಪತ್ನಿಯ ನೆರವಿನಿಂದ ನೂರಾರು ಮಕ್ಕಳಿಗೆ ಸಂಗೀತ ಹೇಳಿಕೊಡುತ್ತ ಚನ್ನಪಟ್ಟಣದ ಹತ್ತಿರ ತಮ್ಮ “ವಿಶ್ವರಂಗಭೂಮಿ”ಎಂಬ ಪರಿಕಲ್ಪನೆ ಹೊತ್ತು ಸಾವಿರಾರು ವಿದ್ಯಾರ್ಥಿಗಳಿಂದ ದೇಸಿ ಸೊಗಡನ್ನು ಎಲ್ಲೆಡೆ ಪಸರಿಸುವ ಕನಸ್ಸನ್ನು ಹಂಸಲೇಖ ಕಂಡಿದ್ದಾರೆ. ಇನ್ನು ಈ ದೋಷಣೆಗಳ ಮದ್ಯೆ ಆ ಕನಸ್ಸು ನೆರವೇರುವುದ ಕಾದು ನೋಡಬೇಕು.? ನೆರವೇರಿಸುವ ಹಾಗು ಸಾದಿಸುವ ಶಕ್ತಿ ಹಂಸಲೇಖರವರಿಗೆ ಖಂಡಿತ ಇದೆ.

ಪ್ರಸ್ತುತ ಹಂಸಲೇಖರವರು ತಮ್ಮ ನಿವಾಸದ ಒಂದು ಭಾಗದಲ್ಲಿ “ಶಾರದಾ ಪುಸ್ತಕಾಲಾಯ” ವನ್ನು ತೆರೆದು ಸಧಭಿರುಚಿಯ ಪುಸ್ತಕಗಳು ದೊರಕುವಂತೆ ಮಾಡಿದ್ದಾರೆ.

ಅವರ ಸಂಗೀತ, ಸಾಹಿತ್ಯ ಸೇವೆ ಹಾಗು ಅವರ ಮೇಲಿನ ಅಭಿಮಾನದಿಂದ ನಮ್ಮ “ಸಾಹಿತ್ಯಮೈತ್ರಿ” ಪತ್ರಿಕೆ ಈ ಸಂದರ್ಭದಲ್ಲಿ ಅವರ ಜೊತೆ ನಿಲ್ಲುತ್ತದೆ. 

ಕು ಶಿ ಚಂದ್ರಶೇಖರ್

ಸಲಹೆ ಸೂಚನೆ : ಅನಂತ್ ಕುಣಿಗಲ್

Related post

Leave a Reply

Your email address will not be published. Required fields are marked *