ಸಂಕ್ರಮಣ ಕಾಲ…

ಸಂಕ್ರಮಣ ಕಾಲ…

ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಹಬ್ಬ. ರೈತರ ಪಾಲಿಗೆ ಈ ಹಬ್ಬ ವಿಶೇಷ. ಬೆಳಿದಿರುವ ಬೆಳೆ ಕೊಯ್ಲಿಗೆ ಬಂದು, ಸುಗ್ಗಿ ಮಾಡುವ ಕಾಲ. ಬೆಳೆದ ಧಾನ್ಯ ರಾಶಿ ಹಾಕಿ, ಪೂಜೆ ಮಾಡಿ, ಭೂದೇವಿಗೆ ಕೃತಜ್ಞತೆ ಅರ್ಪಿಸುವ ಸಂಪ್ರದಾಯವು ಇದೆ. ಪೂಜೆಯ ಪ್ರಸದಾರ್ಥವಾಗಿ, ನೆನೆಸಿಟ್ಟ ಅಕ್ಕಿಗೆ, ಬೆಲ್ಲ ಮತ್ತು ಕಾಯಿತುರಿ ಸೇರಿಸಿ ನೈವೇದ್ಯ ಮಾಡಿ ತಿನ್ನಲು ಕೊಡುತ್ತಾರೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣ ಇವೆ..!

ನಮ್ಮ ದೇಶದ ಆಚಾರ, ವಿಚಾರ, ಸಂಸ್ಕೃತಿ ಎಲ್ಲವೂ ವಿಭಿನ್ನ ಮತ್ತು ವಿಸ್ಮಯದ ಸಂಗತಿಗಳು. ಪ್ರತಿಯೊಂದು ಶುದ್ಧ ಆಚರಣೆಗಳ ಹಿಂದೆಯೂ, ಪ್ರಕೃತಿಪರ ಕಾಳಜಿ ಮತ್ತು ಜೀವಿಗಳ ಏಳ್ಗೆ, ಆರೋಗ್ಯಕರ ಜೀವನಕ್ಕೆ ಬೆಸೆದುಕೊಂಡಿರುವ ಕಾರಣಗಳಿರುತ್ತವೆ. ಅಂತೆಯೇ ಈ ಸಂಕ್ರಾಂತಿ ಹಬ್ಬದ ಹಿಂದೆಯೂ ಕಾರಣಗಳಿವೆ.
ದೇಶದಾದ್ಯಂತ ಆಚರಿಸುವ ಹಬ್ಬವಿದು. ಆದರೆ ಕರೆಯುವ ಹೆಸರುಗಳು ಬೇರೆಬೇರೆ. ವಿಭಿನ್ನತೆಯಲ್ಲಿ ಏಕತೆಯಂತೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವುದಕ್ಕೆ ಸಂಕ್ರಮಣ ಕಾಲ ಎನ್ನುತ್ತಾರೆ.

ಮಕರ ಸಂಕ್ರಾಂತಿ, ಉತ್ತರಾಯಣ, ಮಘಿ ಮೇಳ, ಪೊಂಗಲ್, ಮಾಗ್ ಬಿಹು, ಸಕ್ರತ್, ಲೋಹ್ರಿ.. ಹೀಗೆ ಅನೇಕ ಹೆಸರುಗಳು. ಜೊತೆಗೆ ಆಚರಣೆಯು ಕೊಂಚ ವಿಭಿನ್ನವೇ. ಹಿಂದೂ ಪಂಚಾಂಗದ ಪ್ರಕಾರ, ಪುಷ್ಯ ಮಾಸ ಶುಕ್ಲ ಪಕ್ಷ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆ. ಇದನ್ನು ಉತ್ತರಾಯಣ ಪುಣ್ಯ ಕಾಲ ಎನ್ನುತ್ತಾರೆ. ಸೂರ್ಯ ಪಥ ಬದಲಿಸಿ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಕಾಲ. ಸೂರ್ಯ ಭೂಮದ್ಯ ರೇಖೆಗೆ ಉತ್ತರಾಭಿಮುಖವಾಗಿ ಚಲಿಸುವ ಕಾಲ. ಈ ಸಮಯದಿಂದ ಆರು ತಿಂಗಳು, ಬೆಳಕಿನ ಸಮಯ ಹೆಚ್ಚು, ಮತ್ತು ಜೂನ್ ದಕ್ಷಿಣಾಯಣದಲ್ಲಿ ಬೆಳಕಿನ ಸಮಯ ಸ್ವಲ್ಪ ಕಡಿಮೆ ಇರುತ್ತದೆ. ಚಳಿ ಇನ್ನು ಕಮ್ಮಿಯಾಗುತ್ತ ಬರುವ ಸೂಚನೆ ಮತ್ತು, ಬೇಸಿಗೆ ಕಾಲ ಶುರುವಾಗುತ್ತ ಸೂರ್ಯನ ಪ್ರಖರತೆ ಹೆಚ್ಚಾಗುವ ಸಮಯ.

ಪುರಾಣಗಳ ಪ್ರಕಾರ ಉತ್ತರಾಯಣ ದೇವತೆಗಳ ಸಮಯ ಮತ್ತು ದಕ್ಷಿಣಾಯಣ ಪಿತೃಗಳ ಕಾಲ ಎನ್ನುತ್ತಾರೆ. ಉತ್ತರಾಯಣ ಕಾಲಕ್ಕೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಉಲ್ಲೇಖಗಳು ಇವೆ. ಇದಕ್ಕೊಂದು ಉದಾಹರಣೆ ಅಂದರೆ, ಮಹಾಭಾರತದ ಭೀಷ್ಮ, ಯುದ್ಧ ಮಾಡಿ ಬಾಣಗಳ ಮೇಲೆ ಮಲಗಿದ್ದರು ಕೂಡ, ಉತ್ತರಾಯಣ ಬರುವವರೆಗೂ ಕಾದಿದ್ದು, ಉತ್ತರಾಯಣದಂದು ದೇಹ ತ್ಯಾಗ ಮಾಡುವುದು.

ಈ ಹಬ್ಬದಲ್ಲಿ ಎಳ್ಳು ಬೆಲ್ಲ, ಕೊಬ್ಬರಿ ಜೊತೆಗೆ ಕಬ್ಬು ಹಂಚಿ ತಿನ್ನುವುದು ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತ. ಇದರ ಹಿಂದಿರುವ ವೈಜ್ಞಾನಿಕ ಕಾರಣ ನೋಡುವುದಾದರೆ, ಚಳಿಗಾಲದಲ್ಲಿ ಮೂಡಣದ ತಂಡಿ ಗಾಳಿಯ ತೀವ್ರತೆ ಹೆಚ್ಚು.  ಇದರಿಂದ ದೇಹದ ಚರ್ಮವೆಲ್ಲ ಒಂದು ರೀತಿ ಒಣಗಿದಂತೆ ಆಗಿರುತ್ತದೆ ಮತ್ತು ಹೆಚ್ಚು ಚಳಿಯಿಂದ ಮೈಮನಕ್ಕೆಲ್ಲ ಜಡತ್ವ ಆವರಿಸಿಕೊಂಡಂತಾಗಿರುತ್ತದೆ. ಅಂತಹ ಸಮಯದಲ್ಲಿ, ನೈಸರ್ಗಿಕ ಜಿಡ್ಡು ಅಥವಾ ಎಣ್ಣೆ ಪದಾರ್ಥಗಳಿಂದ ಕೂಡಿದ, ಶೇಂಗಾ, ಕೊಬ್ಬರಿ, ಎಳ್ಳು, ಬೆಲ್ಲ ತಿನ್ನುವುದರಿಂದ, ದೇಹಕ್ಕೆ ಅಗತ್ಯವಿರುವ ಕೊಬ್ಬಿನ ಅಂಶ ಮತ್ತು ಕ್ಯಾಲ್ಸಿಯಂ ದೊರೆಯುತ್ತದೆ. ಇದರಿಂದ ಚರ್ಮಕ್ಕೂ ರಕ್ಷಣೆ ಸಿಗುತ್ತದೆ. ಹಂಚಿ ತಿನ್ನುವುದರಿಂದ ಬಾಂಧವ್ಯ ವೃದ್ಧಿ ಆಗುತ್ತದೆ. ಸುತ್ತಲಿರುವ ಬಂಧಗಳು ಚೆಂದವಾಗಿದ್ದಾಗ ಬದುಕು ಬಂಧನವೆನಿಸದೆ, ತೆಯ್ದ ಚಂದನವಾಗಿರುತ್ತದೆ ಅಲ್ಲವೇ ?

ಇನ್ನು ಶಾಸ್ತ್ರಗಳ ಪ್ರಕಾರ, ದಾನಕ್ಕೂ ಈ ಸಮಯದಲ್ಲಿ ಹೆಚ್ಚು ಮಹತ್ವವಿದೆ. ಸಂಕ್ರಮಣ ಕಾಲದಲ್ಲಿ ದಾನ ಮಾಡುವುದರಿಂದ, ಸೂರ್ಯದೇವನಿಗೆ ಸಂತೃಪ್ತಿಯಾಗುತ್ತದೆ. ಬಾಕಿ ದಿನಗಳಲ್ಲಿ ಮಾಡಿದ ದಾನಕ್ಕಿಂತ ಹೆಚ್ಚು ಫಲವಿದೆ ಎನ್ನುತ್ತಾರೆ. ನಮ್ಮ ಸಂಸ್ಕೃತಿ ರೂಪುಗೊಂಡಿರುವ ತಳಹದಿಯೇ, ಹೀಗೆ ಸಕಲ ಸೃಷ್ಟಿಯ ಹಿತ, ಮತ್ತು ಪಾರಮಾರ್ಥಿಕ ಜೀವನ ಜೀವಿಸುವ ಸಲುವಾಗಿ ಆಗಿರುವುದು. ಪ್ರತಿ ಆಚರಣೆಗಳ ಹಿಂದಿನ ಮಹತ್ವವನ್ನರಿತು ಪಾಲಿಸುತ್ತ, ಬಾಳಿನ ಸಾರ್ಥಕ್ಯದ ಹಾದಿಯಲ್ಲಿ ಸಾಗೋಣ.

ಈ ಸಂಕ್ರಾಂತಿಯು ಎಲ್ಲರ ಬದುಕಿನ ಸಂಕ್ರಮಣ ಕಾಲಕ್ಕೆ ಮುನ್ನುಡಿಯಾಗಲಿ… ಸಂಕ್ರಾಂತಿಯ ಶುಭಾಶಯಗಳು…

ಪಲ್ಲವಿ ಚೆನ್ನಬಸಪ್ಪ

Related post