ಸಮುದ್ರದೊಳಗಿನ ಅಧ್ಬುತ ಮತ್ಸ್ಯಲೋಕ
ಪ್ರವಾಸ ಹೋದಾಗ ಒಬ್ಬೊಬ್ಬರಿಗೆ ಒಂದೊಂದು ವಿಷಯದ ಮೇಲೆ ಆಸಕ್ತಿ ಇರುತ್ತದೆ, ಕೆಲವರು ಐತಿಹಾಸಿಕ ಸ್ಥಳಗಳನ್ನು ನೋಡಲು ಇಷ್ಟಪಟ್ಟರೆ, ಕೆಲವರು ಮ್ಯೂಸಿಯಂ, ಹೂತೋಟ, ಸಮುದ್ರ ತೀರ, ಅಡ್ವೆಂಚರಸ್ ಹೀಗೆ ಒಬ್ಬಬ್ಬೊರು ತಮಗೆ ಇಷ್ತವಾದುದ್ದನ್ನು ಪ್ರವಾಸದಲ್ಲಿ ಹುಡುಕಿಕೊಂಡು ಹೋಗುತ್ತಾರೆ. ಆದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರೆಗೂ ಎಲ್ಲರೂ ಇಷ್ಟಪಡುವ ಒಂದು ವಸ್ತುವೆಂದರೆ ಮೀನು.
ಸಮುದ್ರದ ಒಳಹೊಕ್ಕು ದೊಡ್ಡ ಮೀನುಗಳೂ ಸಮುದ್ರ ಜಲಚರಗಳನ್ನು ನೋಡುವುದು ಅವುಗಳನ್ನು ಮುಟ್ಟುವುದು ಯಾರಿಗೆ ತಾನೆ ಇಷ್ಟವಾಗುವುದಿಲ್ಲ. ಈ ರೀತಿಯ ಅನೇಕ ಓಷನೇರಿಯಂಗಳು ಪ್ರಪಂಚದಾದ್ಯಂತ ಸಾಗರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ. ಅವುಗಳಲ್ಲಿ ಯೂರೋಪಿನ ದೊಡ್ಡ ಓಷನೇರಿಯಂ ಎಂದರೆ ಡೆನ್ಮಾರ್ಕಿನ ಆಲ್ಬರ್ಗ್ ಬಳಿ ಇರುವ ನಾರ್ಡ್ ಸೋಯಿನ್ ಓಷನೇರಿಯಂ.
ಡ್ಯಾನಿಷ್ ಭಾಷೆಯಲ್ಲಿ ನಾರ್ಡ್ ಎಂದರೆ ಉತ್ತರ, ಸೊಯಿನ್ ಎಂದರೆ ಸಮುದ್ರ, ಅದಕ್ಕೆ ಈ ಮತ್ಸ್ಯಾಗಾರಕ್ಕೆ ನಾರ್ಡ್ ಸೊಯೀನ್ ಉತ್ತರಸಮುದ್ರದ ಓಷನೇರಿಯಂ ಎಂಬ ಹೆಸರು. ಎರಡು ವರ್ಷದ ಕೆಳಗೆ ಡೆನ್ಮಾರ್ಕ್ ಗೆ ಹೋದಾಗ ಈ ಅಧ್ಬುತ ಓಷನೇರಿಯಂ ನೋಡುವ ಸುವರ್ಣ ಅವಕಾಶ ನನಗೆ ಒದಗಿ ಬಂದಿತು.
ನಾರ್ಡ್ ಸೋಯಿನ್ ಓಷನೇರಿಯಂ ಆಲ್ಬರ್ಗ್ ನಿಂದ 30 ಕಿಮೀ ದೂರದ ಹಿರ್ಟ್ ಶಾಲ್ಸ್ ಎಂಬ ಸಣ್ಣ ಪಟ್ಟಣದ ಜ್ಯೂಟ್ ಲ್ಯಾಂಡಿನ ಉತ್ತರ ಸಮುದ್ರತೀರದಲ್ಲಿದೆ. ಯೂರೋಪಿನ ಅತ್ಯಂತ ದೊಡ್ಡ ಓಷನೇರಿಯಂ ಎಂಬ ಹೆಗ್ಗಳಿಗೆ ಇದರದ್ದು. ಇಲ್ಲಿ ಈ ಭಾಗದ ಸಮುದ್ರದಲ್ಲಿ ವಾಸಿಸುವ 70 ರೀತಿಯ ಮೀನಿನ ಪ್ರಭೇದಗಳನ್ನು ನೋಡಬಹುದು. ಡೆನ್ಮಾರ್ಕ್ನಲ್ಲಿ ಅನೇಕ ಸಮುದ್ರ ತೀರದ ಓಷನೇರಿಯಂ, ಅಂದರೆ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಮತ್ಸ್ಯಾಗಾರಗಳು ಇದೆ. ಅವುಗಳಲ್ಲಿ ನಾರ್ಡ್ಸೋಯಿನ್ ಹಾಗೂ ಬ್ಲೂಪ್ಲಾನೆಟ್ ಓಷನೇರಿಯಂಗಳು ಮುಖ್ಯವಾದವು.
ಪೂರ್ತಿ ಓಷನೇರಿಯಂ ನೋಡಲು ಒಂದು ದಿನ ಬೇಕು. ಟಿಕೇಟ್ ತೆಗೆದುಕೊಂಡು ಒಳಹೊಕ್ಕರೆ ಸುಂದರ ಮತ್ಸ್ಯ ಲೋಕ ನಿಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ. ಈಲ್, ಭಯಾನಕ ಶಾರ್ಕ್, ತಿಮಿಂಗಲ, ಎಲೆಕ್ಟ್ರಿಕ್ಕ್ರೇ, ಆಕ್ಟೋಪಸ್, ಸಮುದ್ರ ಕುದುರೆಯಂತಹ ಅನೇಕ ಮೀನುಗಳನ್ನು ಹತ್ತಿರದಿಂದ ನೋಡಬಹುದಲ್ಲದೇ ತುಂಟ ಸೀಲ್ಗಳೊಂದಿಗೆ ಆಟವನ್ನು ಆಡಬಹುದು. ಪುರಾತನ ಶಾರ್ಕ್ಗಳು ತಿಮಿಂಗಲಗಳು ಹಾಗೂ ಅನೇಕ ಜಲಚರ ಪ್ರಾಣಿಗಳ ಪಳೆಯಳಿಕೆಗಳ ದೊಡ್ಡ ಮ್ಯೂಸಿಯಂ ಕೂಡ ಇದರೊಳಗೆ ಇದೆ. ಸಮುದ್ರದೊಳಗೆ ಮುಳುಗಿರುವ ಸಣ್ಣ ಹಡಗನ್ನು ಸಹ ನೀವು ಇಲ್ಲಿ ನೋಡಬಹುದು. ಇಲ್ಲಿ ಜಲಚರ ಸಾಕಾಣೀಕಾ ಕೇಂದ್ರವೂ ಇದ್ದು ಕೆಲವೊಂದು ವಿಶೇಷ ಜೀವಂತ ಮೀನುಗಳನ್ನು, ಜಲಚರ ಪ್ರಾಣಿಗಳನ್ನು ಮುಟ್ಟಿ ಆನಂದಿಸಲೂಬಹುದು.
ಇಲ್ಲೊಂದು ದೊಡ್ಡ ಪರದೆಯಿದ್ದು ಅದರ ಮುಂದೆ ನಿಂತು ನಿಮ್ಮ ಕ್ಯೆಯನ್ನು ಹೇಗೆ ಆಡಿಸುತ್ತಿರೋ ಹಾಗೆ ಒಂದು ಶಾರ್ಕ್ ಈಜುತ್ತಿರುತ್ತದೆ. ಕೊನೆಗೊಮ್ಮೆ ಅದು ನಿಮ್ಮ ಮೈಮೇಲೆ ಬಂದಂತಾಗಿ ಫ್ಲ್ಯಾಶ್ ಬರುತ್ತದೆ. ಶಾರ್ಕ್ ಬಾಯಿಯೊಳಗೆ ನೀವಿರುವ ಹಾಗೊಂದು ಫೋಟೋ ಕ್ಲಿಕ್ ಅಗಿರುತ್ತದೆ. ಅದು ಬೇಕೆಂದರೆ ನೀವು ಮೂವತ್ತು ಕ್ರೋನರ್ಸ್ ಅಂದರೆ (ಮುನ್ನೂರು ರೂಪಾಯಿಗಳು) ಹಾಕಿದರೆ ನಿಮ್ಮ ಮಿಂಚಂಚೆ ವಿಳಾಸಕ್ಕೆ ನಿಮ್ಮ ಫೋಟೋ ಬರುತ್ತದೆ. ಅಲ್ಲಿಗೆ ಹೋದ ನೆನಪಿಗೆ ನೀವು ಇದನ್ನು ತೆಗೆದುಕೊಳ್ಳಬಹುದು.
ಇಲ್ಲಿ ಪ್ರತಿದಿನ ಬೆಳಗ್ಗೆ 11ಘಂಟೆ ಹಾಗೂ ಮಧ್ಯಾಹ್ನ 3 ಘಂಟೆಗೆ ಸೀಲ್ಗಳಿಗೆ ಹಾಗೂ ಮಧ್ಯಾಹ್ನ 1 ಘಂಟೆಗೆ ಶಾರ್ಕ್ಗಳಿಗೆ ಊಟಹಾಕುತ್ತಾರೆ. ಇದನ್ನು ನೋಡಲೆಂದೇ ಪ್ರವಾಸಿಗರು ಓಶನೇರಿಯಂನಲ್ಲಿ ಇವುಗಳಿರುವ ಭಾಗಕ್ಕೆ ದೌಡಾಯಿಸುತ್ತಾರೆ. ಇಲ್ಲಿ ಸುಮಾರು ಐನೂರು ಜನ ಕುಳಿತು ನೋಡಬಹುದಾದ ದೊಡ್ಡ ಗ್ಯಾಲರಿ ಇದ್ದು ಒಬ್ಬರು ವಿವರಣೆಕೊಡುತ್ತಿದ್ದರೆ ಇನ್ನೊಬ್ಬ ಡೈವರ್ ನೀರೊಳಗೆ ಧುಮುಕಿ ಶಾರ್ಕಗಳಿಗೆ ತಿನ್ನಿಸುವುದು ರೋಚಕವಾಗಿರುತ್ತದೆ. ಸಮುದ್ರದೊಳಗೆ ದೊಡ್ಡ ದೊಡ್ಡ ರೆಸ್ಟೂರಾಂಟ್ಗಳಿದೆ. ಶಾಪಿಂಗ್ ಪ್ರಿಯರಿಗೆ ದೊಡ್ಡ ಅಂಗಡಿಯಿದ್ದು ಇಲ್ಲಿ ಸಮುದ್ರ ಜಲಚರಗಳ ಮಾದರಿಯ ಅನೇಕ ಅಲಂಕಾರಿಕ ಕೀಚೈನ್ಗಳು, ಸರ ಬಳೆ, ಮೃದು ಆಟಿಕೆಗಳು, ಟಿ-ಶರ್ಟ್ಗಳು ಇನ್ನು ಅನೇಕ ವಸ್ತುಗಳನ್ನು ಖರಿದೀಸಬಹುದು. ಮೀನುಪ್ರಿಯರಿಗೆ ಅಲ್ಲೇ ಋತುಮಾನಕ್ಕನುಗುಣವಾಗಿ ಸಿಗುವ ಮೀನುಗಳನ್ನು ಹಿಡಿದು ನಿಮಗಿಷ್ಟವಾದ ಮೀನಿನ ಖಾದ್ಯಗಳನ್ನು ಮಾಡಿಸಿಕೊಂಡು ತಿನ್ನಬಹುದು.
ಓಷನೇರಿಯಂನಲ್ಲಿ ಮಕ್ಕಳಿಗೆಂದೇ ಆಟದ ಜಾಗವೂ ಇದೆ. ಎಲ್ಲಾರೀತಿಯ ಜಲಚರಗಳನ್ನು ನೋಡಬೇಕೆಂದರೆ ಒಂದು ದಿನ ಸಾಕಾಗುವುದಿಲ್ಲಾ!. ಇಲ್ಲಿನ ಪ್ರಮುಖ ಆಕರ್ಷಣೆ ಇಲ್ಲಿರುವ ನೀರುನಾಯಿಗಳು. ನೀವು ಸಮುದ್ರದೊಳಗೆ ಅಕ್ವೇರಿಯಂನಲ್ಲಿ ಗಾಜಿನ ಸುರಂಗದಲ್ಲಿ ಮೀನುಗಳನ್ನು ನೋಡುತ್ತಾ ನಡೆಯುತ್ತಿದ್ದರೆ ನಿಮ್ಮ ಪಕ್ಕದಲ್ಲೇ ಸೀಲ್ (ನೀರು ನಾಯಿ)ಗಳ ಹಿಂಡು ಬರುತ್ತಿರುತ್ತದೆ. ಪ್ರವಾಸಿಗರನ್ನು ನೋಡಿ ನೋಡಿ ಅವುಗಳಿಗೆ ಅಭ್ಯಾಸವಾಗಿರುತ್ತದೆ. ನೀವೇನಾದರು ನಿಂತು ಗ್ಲಾಸಿನ ಮೇಲೆ ಕೈ ಆಡಿಸಿದರೆ ನಿಮ್ಮ ಜೊತೆಗೆ ಅದು ಕೈ ಆಡಿಸಿದಲೆಲ್ಲಾ ಈಜುತ್ತಿರುತ್ತದೆ. ಓಷನೇರಿಯಂ ನಿಂದ ಹೊರಗಡೆ ಬಂದರೆ ಮಧ್ಯಾಹ್ನ ಇವುಗಳ ಸರ್ಕಸ್ ನೋಡಬಹುದು. ಇವುಗಳಿಗೆ ಊಟ ಹಾಕುವ ಸಮಯದಲ್ಲಿ ಇವುಗಳನ್ನು ರಿಂಗ್ ಒಳಗೆ ಜಂಪ್ ಮಾಡಿಸುವುದು, ಬಾಲದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತವರಿಗೆ ನೀರೆರೆಚುವುದು ಮುಂತಾದ ಚೇಷ್ಟೇಗಳನ್ನು ಮಾಡುತ್ತದೆ. ಅವುಗಳ ಪಕ್ಕ ನಿಂತು ಒಂದಷ್ಟು ಪೋಟೊ ಕ್ಲಿಕ್ಕಿಸಿಕೊಳ್ಳಬಹುದು. ಮತ್ಸ್ಯಾಗಾರದ ಹೊರಗೆ ಒಂದು ನಿಜವಾದ ಹಡಗನ್ನು ನಿಲ್ಲಿಸಿದ್ದಾರೆ. ಇದರೊಳಗೆ ಹೋಗಿ ನೀವು ಹಡಗಿನ ಇಂಚಿಂಚು ಭಾಗವನ್ನು ನೋಡಿ ತಿಳಿದುಕೊಳ್ಳಬಹುದು.
ಇದು ಯುರೋಪಿನ ಅತ್ಯಂತ ದೊಡ್ಡ ಓಷನೇರಿಯಂ ಆದರೆ ಇಲ್ಲಿಂದ ಸ್ವಲ್ಪದೂರದಲ್ಲಿ ಯುರೋಪಿನ ಅತ್ಯಂತ ಸುಂದರ ಪ್ರಾಣಿಸಂಗ್ರಹಾಲಯವಿದೆ. ಇಲ್ಲಿನ ಭೀಮಗಾತ್ರದ ಜಿಂಕೆಗಳು, ರೈನೋಸರಸ್ಗಳು, ದೊಡ್ಡ ಆನೆಗಳು ಹಾಗೂ ಡೊಂಕುಹಲ್ಲಿನ ದೈತ್ಯ ಬೆಕ್ಕುಗಳನ್ನು ನೋಡಿದರೆ ನಿಮಗೆ ಐಸ್ ಏಜ್ ಚಿತ್ರ ಕಣ್ಮುಂದೆ ಬರುತ್ತದೆ.
ಪ್ರಕಾಶ್ ಕೆ ನಾಡಿಗ್