“ಸಾಲ್ಮೋನ್ ಸಲಾರ್”ಮೀನಿನ ವಿಸ್ಮಯ ಜೀವನಚಕ್ರ

An endangered Chinook Salmon Jumps in the California Sacramento River

ಸಾಲ್ಮೋನ್ ಸಲಾರ್ – ವಿಸ್ಮಯ ಮೀನು

ಈ ಭೂಮಿಯ ಮೇಲೆ ವಾಸಿಸುವ ಅನೇಕ ಜೀವಿಗಳಲ್ಲಿ ವಿಸ್ಮಯ ಜೀವನಚಕ್ರವಿದೆ. ಈ ಜೀವನ ಚಕ್ರ ಅತ್ಯಂತ ಕೂತುಹಲಕರ ವಿಷಯಗಳನ್ನೊಳಗೊಂಡಿರುತ್ತದೆ. ಇಂತಹ ವಿಸ್ಮಯ ಜೀವನಚಕ್ರಗಳನ್ನೊಳಗೊಂಡ ಜೀವಿಗಳ ಸಾಲಿನಲ್ಲಿ ಸಾಲ್ಮೋನ್ ಸಲಾರ್ (Salmo salar) ಮೀನಿನ ಪ್ರಭೇದವು ಸಹ ಸೇರುತ್ತದೆ.

ಅಟ್ಲಾಂಟಿಕ್ ಸಾಗರದಲ್ಲಿ ಸಾಲ್ಮೊನ್ ಪ್ರಬೇದ ಮಾತ್ರ ಕಂಡುಬಂದರೆ ಪೆಸಿಫಿಕ್ ಸಾಗರದಲ್ಲಿ ಈ ಜಾತಿಗೆ ಸೇರಿದ ಹಲವಾರು ಪ್ರಭೇದಗಳು ಕಂಡು ಬರುತ್ತದೆ. ತಮ್ಮ ಹರೆಯದ ಜೀವನವನ್ನು ಇವು ಸಿಹಿನೀರಿನ ನದಿಗಳಲ್ಲಿ ಕಳೆದು ವಯಸ್ಕ ಜೀವನವನ್ನು ಸಮುದ್ರದಲ್ಲಿ ಕಳೆದು ಮತ್ತೇ ಸಂತಾನೋತ್ಪತ್ತಿ ಸಮಯಕ್ಕೆ ತಾವು ಹುಟ್ಟಿದ ಸಿಹಿನೀರಿನ ನದಿಗೆ ಸಾವಿರಾರು ಮ್ಯೆಲಿ ಈಜಿ ವಲಸೆ ಬರುತ್ತದೆ. ಇದನ್ನು ವೈಜ್ಞಾನಿಕ ಬಾಷೆಯಲ್ಲಿ “ಅನಡ್ರೊಮಸ” ಜೀವನಚಕ್ರ ಎಂದು ಕರೆಯುತ್ತಾರೆ”.

ಸಿಹಿ ನೀರಿನಲ್ಲಿ ಇಟ್ಟ ಸಾಲ್ಮೊನ್ ಮೊಟ್ಟೆಗಳು ಕೇಸರಿ ಬಣ್ಣದಿಂದ ಕೂಡಿದ್ದು ಬಟಾಣಿ ಕಾಳಿನ ಗಾತ್ರದ್ದಾಗಿರುತ್ತದೆ.ನೀರಿನ ಉಶ್ಣತೆಗನುಗುಣವಾಗಿ ಮೊಟ್ಟೆಗಳು ವಸಂತ ಮಾಸದಲ್ಲಿ ಓಡೆದು ಮರಿಗಳು ಹೊರಬರುತ್ತದೆ. ಹೆಣ್ನು ಸಾಲ್ಮೋನ್ ಸುಮಾರು 16000 ತನಕ ಮೊಟ್ಟೆಗಳನ್ನಿಟ್ಟರೂ ಇದರಲ್ಲಿ ಶೆಕಡಾ 1ರಷ್ಟು ಮಾತ್ರ ಬದುಕುಳಿಯತ್ತದೆ. ಆಗಷ್ಟೆ ಮೊಟ್ಟೆಯೊಡೆದು ಹೊರಬಂದ ಮರಿಯನ್ನು “ಅಲ್ವಿನ್ಸ್” (Alevins)” ಎನ್ನುತ್ತಾರೆ. ಇವು ಮೊದಲಿಗೆ ತಮ್ಮ ಮ್ಯೆಗೆ ಅಂಟಿಕೊಂಡ ಮೊಟ್ಟೆಯ ಲೋಳೆಯನ್ನು ತಿಂದು ಬದುಕುತ್ತದೆ. ನಂತರ ಚಟುವಟಿಕೆಯಿಂದಿರುವ ಇವು ನೀರಿನ ಮೇಲ್ಬಾಗಕ್ಕೆ ಬಂದು ಗಾಳಿಯನ್ನು ಸೇವಿಸಿ ಮತ್ತೆ ನೀರೊಳಗೆ ಹೋಗುತ್ತದೆ. ನದಿದಡದ ಸಣ್ಣ ಸಣ್ಣ ಕಲ್ಲುಗಳ ಮಧ್ಯೆ ಜಾಸ್ತಿ ಜೀವಿಸುವ ಇವು ಹಕ್ಕಿಪಕ್ಷಿಗಳಿಂದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಮಾಡುತ್ತದೆ.

ಸಾಲ್ಮನ್ ಮೀನಿನ ಜೀವನ ಚಕ್ರ

ಮೊಟ್ಟೆಯಿಂದ ಹೊರಬಂದ 3 ರಿಂದ 6 ವಾರದ ಮರಿಯನ್ನು ‘ಈಡಿಥಿ’ ಎಂದು ಕರೆಯುತ್ತಾರೆ. ಇವುಗಳಿಗೆ ಈಗ 8 ರೆಕ್ಕೆಗಳಿರುತ್ತದೆ. ಇದು ನೀರಿನಲ್ಲಿ ಈಜುವಾಗ ನೀರಿನ ಹರಿಯುವ ವಿರುದ್ದ ದಿಕ್ಕಿಗೆ ಈಜಲು ಪ್ರಯತ್ನಪಡುತ್ತದೆ. ಈ ಹಂತದಲ್ಲಿ ಬದುಕುಳಿಯುವ ಸಾದ್ಯತೆ ನೀರಿನ ಉಷ್ಣಾಂಶವನ್ನು ಅವಲಂಬಿಸಿರುತ್ತದೆ. ಅಲ್ಲದೇ ಕಲುಷಿತ ನೀರಿನಲ್ಲಿ ಇವು ಬದುಕುಳಿಯುವುದಿಲ್ಲ. ಸಿಹಿನೀರಿನಲ್ಲಿ ಸಾಲ್ಮೊನ್ ಮೀನುಗಳು ಇದೆ ಎಂದರೆ ನೀರು ಶುದ್ಧವಾಗಿದೆ ಎಂದು ಹಾಗು ಅಲ್ಲಿ ಶುದ್ದ ಜಲಚರ ಜೀವರಾಶಿ ಇದೆಯೆಂದು ಅರ್ಥ. ಶರದ್ರುತು ಬರುವ ವೇಳೆಗೆ ಇವು ಗಾತ್ರದಲ್ಲಿ ದೊಡ್ಡದಾಗಿ ಬೆಳೆದ ಇವುಗಳ ಮ್ಯೆಮೇಲೆ ಅಡ್ಡಡ್ಡ ಪಟ್ಟೆಗಳು, ಶತ್ರುಗಳನ್ನು ಹೆದರಿಸಲು ಮ್ಯೆಮೇಲೆ ಅಲ್ಲಲ್ಲಿ ಕಪ್ಪು ಚುಕ್ಕೆಗಳು ಬಂದಿರುತ್ತದೆ. ಈ ಹಂತವನ್ನು “ಪಾರ್’(Parr) ಎನ್ನುತ್ತಾರೆ. ಈ ಹಂತದಲ್ಲಿ ಸಿಹಿನೀರಿನಲ್ಲಿ ತನ್ನ ಗಡಿಯನ್ನು ಸ್ತಾಪಿಸಿಕೊಂಡು ಬದುಕುವ ಇವು ನೀರಿನಲ್ಲಿರುವ ಕೀಟಗಳನ್ನು ತಿಂದು ಬದುಕುತ್ತದೆ. ಈ ಪಾರ್ 10-25 ಸೇಂಟಿಮೀಟರ್ ಬೆಳೆದ ಮೇಲೆ ಇದರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತದೆ. ಈ ಹಂತದಲ್ಲಿ ಬೆಳ್ಳಿಯ ಬಣ್ಣಕ್ಕೆ ತಿರುಗುವ ಈ ಮೀನಿನ ವರ್ತನೆಯಲ್ಲೂ ಬಹಳ ಬದಲಾವಣೆಯಗುತ್ತದೆ. ನೀರು ಹರಿವಿನ ಜೊತೆಯಲ್ಲೇ ಈಜುವುದನ್ನು ಕಲಿಯುತ್ತದೆ. ಮುಂದಿನ ಪಯಣ ಸಮುದ್ರದೆಡೆಗೆ, ಅದ್ದರಿಂದ ಇವುಗಳ ದೇಹದಲ್ಲಿ ಉಪ್ಪಿನ ನೀರಿಗೆ ಹೊಂದಿಕೊಳ್ಳುವಂತೆ ಬದಲಾವಣೆಗಳಾಗುತ್ತದೆ.

ಮತ್ತೆ ವಸಂತ ಮಾಸದ ಆರಂಭದಲ್ಲಿ ಈ ಮೀನುಗಳು ನೀರು ಹರಿದುಹೋಗುವ ದಿಕ್ಕಿನಲ್ಲಿ ಈಜಲಾರಂಬಿಸುತ್ತದೆ. ಈ ಹಂತವನ್ನು “ಸ್ಮಾಲ್ಟ್” (Smolt ) ಎನ್ನುತ್ತಾರೆ. ಐರಿಶ್ ನದಿಯನ್ನು ಬಿಡುವ ಇವು ಅಟ್ಲಾಂಟಿಕ್ ಸಾಗರದ ಕಡೆ ಚಲಿಸಲಾರಂಬಿಸುತ್ತದೆ.ಆಧಿಕ ಆಹಾರ ಸಿಗುವ ನಾರ್ವೇ ಸಮುದ್ರವನ್ನು ದಾಟಿ ಅಟ್ಲಾಂಟಿಕ್ ಮಹಾಸಾಗರವನ್ನು ಬಂದು ಸೇರುತ್ತದೆ. ಇಲ್ಲಿ ಇವು ಚಿಕ್ಕ ಚಿಕ್ಕ ಕೆಪಿಲಿನ್ (capelin – small forage fish) ಹಾಗೂ ಮರಳು ಈಲ್ (Sand eel) ಗಳನ್ನು ತಿಂದು ಬದುಕುತ್ತದಾದರೂ, ಇವು ಕೂಡ ಬೇರೆ ಮೀನುಗಳಿಗೆ ಆಹಾರವಾಗುತ್ತದೆ. ಸಮುದ್ರಕ್ಕೆ ಬಂದು ಒಂದು ವರ್ಶದ ನಂತರ ಇವು ವಯಸ್ಕ ಹಂತವನ್ನು ತಲುಪುತ್ತದೆ. ಈಗ ಇವು 1 ರಿಂದ 4 ಕೆಜಿ ತೂಗುತ್ತದೆ.ಕೆಲವೊಮ್ಮೆ ಇವು ವಯಸ್ಕ ಹಂತಕ್ಕೆ ಬರಲು 2-3 ವರ್ಷ ತೆಗೆದುಕೊಂಡರೆ ಆಗ ಇವು 3-15 ಕೆಜಿ ತೂಗುತ್ತದೆ.

ಸಮುದ್ರದಲ್ಲಿ ಒಂದು ವರುಷ ಕಳೆದ ನಂತರ ಇವುಗಳು ತಮ್ಮ ಹುಟ್ಟಿದ ಸ್ತಳಕ್ಕೆ ಸಂತನೋತ್ಪತ್ತಿ ಮಾಡಲು ವಾಪಸ್ ಹೊರಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಸಾವಿರಾರು ಕಿಲೋಮೀಟರ್ ಈಜಲು ಸಜ್ಜಾಗುತ್ತವೆ . ಅದರೆ ಇವು ಹುಟ್ಟಿದ ಸ್ತಳಕ್ಕೆ ಹೋಗಲು ದಾರಿ ತೋರುವರಾರು? ಇವು ಭೂಮಿಯ ಗುರುತ್ವಾಕರ್ಶಣೆ, ತಾವು ಹುಟ್ಟಿದ ನದಿಯ ರಾಸಾಯನಿಕದ ವಾಸನೆ ಹಾಗೂ ಈಗಾಗಲೆ ಆ ಸಿಹಿನೀರಿನ ನದಿಯಲ್ಲಿರುವ ತಮ್ಮದೇ ಜಾತಿಯ ಮೀನುಗಳ ದೇಹದಿಂದ ಹೊರಬರುವ ರಾಸಾಯನಿಕ ಹಾರ್ಮೋನ್ಸ್ ಗಳ ಜಾಡು ಹಿಡಿದು ಮೂರು ಸಾವಿರ ಕೀಮೀ ಈಜೀ ತಾವು ಹುಟ್ಟಿದ ಸ್ತಳಕ್ಕೆ ಬರುತ್ತದೆ ಎಂದರೆ ವಿಸ್ಮಯವಾಗುತ್ತದೆ ಅಲ್ಲವೇ? ಇದನ್ನು “ಹೊಮಿಂಗ್ ಇನ್‍ಸ್ಟಿಂಕ್ಟ್” (homing instinct) ಎನ್ನುತ್ತಾರೆ.

ನಾರ್ವೆ ಸಮುದ್ರ ಮತ್ತು ವೆಸ್ಟ್ ಗ್ರೀನ್ ಲ್ಯಾಂಡ್ ದಾಟಿ ತಮ್ಮ ಹುಟ್ಟಿದ ಸಿಹಿ ನೀರಿನ ಐರಿಶ್ ನದಿಗೆ ಹೋಗುವಾಗ ಇವು ನೀರು ಹರಿಯುವ ವಿರುದ್ದ ದಿಕ್ಕಿಗೆ ಈಜಬೇಕು, ಹಾಗು ಸಣ್ಣ ಸಣ್ಣ ಜಲಪಾತಗಳನ್ನು ಹತ್ತಿ ಹೊಗಬೇಕು. ನೀವು ಇದನ್ನು ಟಿವಿಯಲ್ಲಿ ನೋಡಿರಬಹುದು!, ಸಣ್ಣ ಸಣ್ಣ ಜಲಪಾತದ ಬಳಿ ಕರಡಿಗಳು ಹಾರುತ್ತಿರುವ ಮೀನುಗಳನ್ನು ಹಿಡಿದು ತಿನ್ನುತ್ತಿರುತ್ತದೆ. ಇವುಗಳೆ ಸಾಲ್ಮೋನ್ ಮೀನುಗಳು, ಇಲ್ಲಿ ಕರಡಿ ಬಾಯಿಯಿಂದ ಮೀನುಗಳು ತಪ್ಪಿಸಿಕೊಂಡರೆ ಸರಿ! ಹೇಗೋ ಜಲಪಾತವನ್ನು ಹತ್ತಿ ಏಪ್ರಿಲ್ ನಿಂದ ನವಂಬರ್ ವೇಳೆಗೆ ತಾವು ಹುಟ್ಟಿದ ನದಿಗೆ ಬಂದು ಸೇರುತ್ತದೆ. ಸಿಹಿನೀರಿಗೆ ಬಂದಮೇಲೆ ಇವು ತಿನ್ನುವುದನ್ನು ನಿಲ್ಲಿಸುತ್ತದೆ. ದೇಹದಲ್ಲಿ ಶೇಖರಣೆಯಾದ ಕೊಬ್ಬಿನಿಂದಲೇ ಜೀವನ ಸಾಗಿಸುತ್ತದೆ. ಹೆಣ್ಣು ಸಾಲ್ಮೋನ್ 10- ರಿಂದ 30 ಸೇಂ.ಮೀ ಆಳದ ಗುಂಡಿ ತೆಗೆದು ಅದರಲ್ಲಿ ಸುಮಾರು 15 ರಿಂದ 16 ಸಾವಿರ ಮೊಟ್ಟೆಗಳನ್ನಿಡುತ್ತದೆ. ಇಂತಹ ಗೂಡುಗಳನ್ನು “ರೀಡ್” (redd) ಎನ್ನುತ್ತಾರೆ. ಗಂಡು ಸಾಲ್ಮೋನ್ ಈ ಮೊಟ್ಟೆಗಳನ್ನು ತನ್ನ ವೀರ್ಯಾಣುಗಳಿಂದ ಫಲವತ್ತಾಗಿಸುತ್ತದೆ. ಹೀಗೆ ಮೊಟ್ಟೆಗಳನಿಟ್ಟ ಮೀನನ್ನು “ಕೆಲ್ಟ್” (kelt) ಎನ್ನುತ್ತಾರೆ. ಸಮುದ್ರದಲ್ಲಿ ಸಾವಿರಾರು ಕೀಮೀ ಈಜಿ ಬಂದದ್ದರಿಂದ ಇವುಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ನಿತ್ರಾಣವಾಗುತ್ತದೆ. ಈ ಹಂತದಲ್ಲಿ ಇವು ರೋಗಗಳಿಗೆ ಹಾಗೂ ಬೇರೆ ಪ್ರಾಣಿಗಳಿಗೆ ಬಲಿಯಗುತ್ತದೆ. ಮೊಟ್ಟೆಗಳನ್ನಿಟ್ಟ ಇವು ಸಾಯುವುದೇ ಹೆಚ್ಚು. ಹೀಗೆ ಸತ್ತ ನಂತರ ಇವುಗಳ ಜೀವನ ಚಕ್ರ ಮುಗಿಯುತ್ತದೆ. ಆದರೆ ಕೆಲವೊಂದು ಸಾಲ್ಮೊನ್ ಗಳು ಮೊಟ್ಟೆ ಇಟ್ಟ ನಂತರವು ಮತ್ತೆ ಸಮುದ್ರಕ್ಕೆ ಪ್ರಯಾಣಿಸಿ ಮತ್ತೆ ವಾಪಸ್ ಬಂದು ಮೊಟ್ಟೆ ಇಟ್ಟ ದಾಖಲೆ ಇದೆ. ಹೀಗೆ ಇಟ್ಟ ಮೊಟ್ಟೆ ಮತ್ತೆ ವಸಂತ ಕಾಲದಲ್ಲಿ ಒಡೆದು ಮರಿ ಹೊರಬರುವ ಮೂಲಕ ಹೊಸ ಜೀವನ ಚಕ್ರ ಆರಂಭವಾಗುತ್ತದೆ. ಸಂತಾನೋತ್ಪತ್ತಿಗೋಸ್ಕರ ಸಮುದ್ರದ ಉಪ್ಪಿನ ನೀರಿನಿಂದ ತಾವು ಹುಟ್ಟಿದ ಸಿಹಿನೀರಿನ ಜಾಡನ್ನು ಹಿಡಿದು ಸಾವಿರಾರು ಕೀಮೀ ಪ್ರಯಾಣಿಸುವ ಇವುಗಳ ಜೀವನಚಕ್ರ ನಿಜಕ್ಕೂ ವಿಸ್ಮಯಕಾರಿ ಅಲ್ಲವೇ?

ಪ್ರಕಾಶ್ ಕೆ. ನಾಡಿಗ್

ಶಿವಮೊಗ್ಗ

Related post

Leave a Reply

Your email address will not be published. Required fields are marked *