‘ಪಂಜರದ ಪಕ್ಷಿ’ಯಾಗಿದ್ದ ಭಾರತವನು
ಆಂಗ್ಲರ ‘ಬೆಂಕಿಯ ಬಲೆ’ಯಿಂದ ಬಿಡಿಸಿ
‘ಬಿಡುಗಡೆಯ ಬೇಡಿ’ಯ ‘ಬೆಳಕು ತಂದ’ರು
‘ಕಂಬನಿಯ ಕುಯಿಲು’ ಕಳೆದ ರಾಯರು
‘ಚಂದವಳ್ಳಿಯ ತೋಟ’ದ ‘ಚಕ್ರತೀರ್ಥ’ದಿ
‘ಶಿಲ್ಪ’ದೊಂದಿಗೆ ‘ಗಾಳಿಮಾತು’ಗಳಾಡುತಿಹ
‘ನಾಗರ ಹಾವಿ’ನ ‘ಹಂಸಗೀತೆ’ಯಾಲಿಸುವ
‘ಚಂದನದ ಗೊಂಬೆ’ಯ ‘ಮೊದಲ ನೋಟ’
‘ಮಲ್ಲಿಗೆಯ ನಂದನವನದಲ್ಲಿ’ ಕಂಡ ‘ರೂಪಸಿ’
‘ಮನೆಗೆ ಬಂದ ಮಹಾಲಕ್ಷ್ಮಿ’ಗೆ ‘ಕಸ್ತೂರಿ ಕಂಕಣ’
‘ತೊಟ್ಟಿಲು ತೂಗಿತು’ ಅಂಗಳ ತುಂಬ ಅಂಬುಜ
‘ಬಸಂತ್ ಬಹಾರ್’ ಆ ‘ಮಹಾಶ್ವೇತೆ’ಯಿಂದ
‘ಸಿಡಿಲ ಮೊಗ್ಗು’ ಅರಳಿತು ‘ಜ್ವಾಲಾ’ ಸಿಡಿಯಿತು
‘ಖೋಟಾ ನೋಟು’ ಬಡಿದ ‘ಪುರುಷಾವತಾರ’
‘ತಿರುಗು ಬಾಣ’ ‘ರಕ್ತ ತರ್ಪಣ’ಗಳ ‘ರಕ್ತ ರಾತ್ರಿ’
ಚಿತ್ರಕಲ್ಲುಗಳ ನಡುಗಿಸಿದ ‘ದುರ್ಗಾಸ್ತಮಾನ’
‘ಮೃತ್ಯು ಸಿಂಹಾಸನ’ ಏರಿತು ‘ಮಸಣದ ಹೂ’
ತರಾಸು ಅಗಲಿಕೆ ಕಂಪನಿಗಳ ತರಿಸಿತು, ಕನ್ನಡ
‘ಅನ್ನಾವತಾರ’ ‘ಇದೇ ನಿಜವಾದ ಸಂಪತ್ತು’
ಸಾಹಿತ್ಯ ‘ನೃಪತುಂಗ’ ನಮಗೆ ‘ಮಾರ್ಗದರ್ಶಿ’
ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259