ಸುಮಧುರ ಮುಕ್ತಕ – ಮಧುರಾ ಮೂರ್ತಿ

ಸುಮಧುರ ಮುಕ್ತಕ – ಮಧುರಾ ಮೂರ್ತಿ

ಪುಸ್ತಕ: ಸುಮಧುರ ಮುಕ್ತಕ
ಲೇಖಕರು:ಮಧುರಾ ಮೂರ್ತಿ
ಪ್ರಕಾಶಕರು:ಸಮರ್ಥ ಪ್ರಕಾಶನ
ಸಂಪರ್ಕ:7892090956

ಒಂದು ವಸ್ತು ಅಥವಾ ಉದ್ದೇಶವನ್ನು ಗುರಿಯಾಗಿ ಇಟ್ಟುಕೊಂಡು ಹೇಳಬೇಕಾದ ವಿಷಯಗಳನ್ನ ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟುಕೊಂಡು ಹೇಳುವುದು ಅಷ್ಟು ಸುಲಭದ ಮಾತಲ್ಲ .

ಮುಕ್ತಕ ಪ್ರಕಾರದಲ್ಲಿ ಡಿವಿಜಿ ಅವರದು ಬಹುದೊಡ್ಡ ಪ್ರಯೋಗ ಮತ್ತು ಅವರ ಮಂಕುತಿಮ್ಮನ ಕಗ್ಗ,ಮರುಳ ಮುನಿಯನ ಕಗ್ಗಗಳು ಅಪಾರ ಜನಪ್ರೀತಿ ಮತ್ತು ಜನಪ್ರಿಯತೆಯನ್ನು ಪಡೆದಿವೆ. ಡಿವಿಜಿ ಅವರನ್ನು ಅನುಸರಿಸಿದ ಹಲವರು ಮುಕ್ತಕ ರಚನೆಯಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ . ಈ ಸಾಲಿಗೆ ಮತ್ತೊಂದು ಸೇರ್ಪಡೆ ಶ್ರೀಮತಿ ಮಧುರ ಮೂರ್ತಿಯವರು. ಬದುಕಿಗೆ ಹತ್ತಿರವಾದ ವಿಚಾರಗಳನ್ನು ತೆಗೆದುಕೊಂಡು ಒಂದು ಉತ್ತಮ ಸಾಮಾಜಿಕ ಸಂದೇಶವನ್ನ ಮುಕ್ತಕಗಳ ಮೂಲಕ ಹೇಳುವ ಅವರ ಪ್ರಯತ್ನ ಸಾಫಲ್ಯ ನೀಡಿದೆ.

ಅನುದಿನವು ಮರೆಯದಿರು ತಿಳಿದವನು ತಾನೆಂದು
ಮನವನರಿತು ಕಲಿಯುತಿರು ಹಲವರನುಸರಿಸಿ
ತನಗೊಲಿವ ಸರಸತಿಯ ಕರಮುಗಿದು ಬೇಡುತಿರು
ಜನನಿಯಲಿ ಮಮತೆಯಿಡು – ಮಧುರ ಮನವೆ

ನಮ್ಮೊಳಗಿನ ಅಹಂಕಾರಕ್ಕೆ ಕಡಿವಾಣ ಹಾಕುತ್ತಾ ಕಲಿಕೆ, ಮಾರ್ಗದರ್ಶನ ಹಾಗೂ ನಂಬಿಕೆಯ ಜೊತೆಗೆ ಮಮತೆಯೂ ಬಹಳ ಮುಖ್ಯ ಎನ್ನುವ ಕಿವಿ ಮಾತನ್ನು ಹೇಳುತ್ತಾರೆ ಮಧುರಾ ಮೂರ್ತಿಯವರು.

ಜಾರದಿರು ಸುಲಭದಲಿ ತೋಡಿರುವ ಹಳ್ಳಕ್ಕೆ
ಏರುತಿರು ಎತ್ತರಕೆ ತುಳಿವವರ ಎದುರು
ತೋರುತಿರು ಗೆಲುವನ್ನು ನಿರ್ಲಿಪ್ತ ಭಾವದಲಿ
ಕೋರುತಿರು ಶುಭವನ್ನು- ಮಧುರ ಮನವೆ

ಆಮಿಷಕ್ಕೆ ಒಳಗಾಗದೇ ಮೋಸದ ಜಾಲಕ್ಕೆ ಸಿಲುಕದೇ ಸೋಲು,ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಶುಭವನ್ನೇ ಕೋರುತ್ತಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅಲ್ಲವೇ!?

“ಮಧುರ ಮನವೆ” ಎಂಬ ಅಂಕಿತವನ್ನು ಆರಿಸಿಕೊಂಡಿರುವುದು ಅದೆಷ್ಟು ಸೂಕ್ತವಾಗಿದೆಯೆಂದರೆ ಮೂಲತಃ ಮನಸು ಮಧುರವೇ!! ಹೌದು;ಆ ಮನಸಿಗೆ ಸಿಗುವ ಸಾಂಗತ್ಯ ಮತ್ತು ಒಡನಾಟಗಳು ನಮ್ಮ ವ್ಯಕ್ತಿತ್ವದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಬಳಿಯಲ್ಲಿ ಚಿಂತೆಗಳು ಗೂಡನ್ನು ಕಟ್ಟಿರಲು
ಕಳೆಯುವುದು ದಿನವೆಲ್ಲ ಗೊಂದಲದ ನಡುವೆ
ತೊಳೆಯುತಿರು ಕೊಳೆಯನ್ನು ತಿಳಿವನ್ನು ಹೆಚ್ಚಿಸುತ
ಹೊಳೆಯುವುದು ವರ್ಚಸ್ಸು -ಮಧುರ ಮನವೆ

ನಮ್ಮೊಳಗಿನ ಚಿಂತೆಗಳು ನಮ್ಮನ್ನು ಗೊಂದಲಕ್ಕೀಡುಮಾಡಿ ಕೆಲವೊಮ್ಮೆ ದಾರಿತಪ್ಪಿಸುವವುದೂ ಇದೆ.ಚಿಂತನೆಯು ನಮ್ಮ ತಿಳಿವನ್ನು ಹೆಚ್ಚಿಸಿ ನಮ್ಮ ವ್ಯಕ್ತಿತ್ವ ,ವರ್ಚಸ್ಸನ್ನು ಉನ್ನತೀಕರಿಸುತ್ತದೆ ಎಂಬ ಈ ಮುಕ್ತಕ ಅದೆಷ್ಟು ಚೆಂದ ಅಲ್ಲವೇ!?

ಮಧುರಾ ಮೂರ್ತಿ ಅವರ ಅನುಭವ,ವಿಸ್ತಾರವಾದ ಓದು ಹಾಗೂ ಕರ್ತೃತ್ವಶಕ್ತಿ ಅವರ ಸುಮಧುರ ಮುಕ್ತಕ ಕೃತಿಯ ಮೂಲಕ ಹೊರಹೊಮ್ಮಿದೆ.

ವಿಷಯ ವೈವಿಧ್ಯದೊಂದಿಗೆ ಈ ಕೃತಿಯ 775 ಮುಕ್ತಕಗಳು ಓದುಗರಿಗೆ ಇಷ್ಟವಾಗುತ್ತವೆ.

ಸುನೀಲ್ ಹಳೆಯೂರು

Related post

1 Comment

  • ವೆರಿ ನೈಸ್

Leave a Reply

Your email address will not be published. Required fields are marked *