ಸೂತ್ರಧಾರ ಮತ್ತು ಇತರ ಕಥೆಗಳು

ಲೇಖಕರು: ಶೈಲಜಾ ಸುರೇಶ್ ರಾವ್ ನಾಯಕ್

ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್

ಬೆಲೆ: 110 (ಅಂಚೆ ವೆಚ್ಚ ಉಚಿತ)

ಸದ್ಯದ ಕರೋನ ಸಂಕಷ್ಟಗಳ ಹಾಗು ಲಾಕ್ ಡೌನ್ ಸಮಯದಲ್ಲಿ ಶ್ರೀಮತಿ ಶೈಲಜಾ ಸುರೇಶ ನಾಯಕ್ ರವರ “ಸೂತ್ರಧಾರ ಮತ್ತು ಇತರೆ ಕಥೆಗಳು” ಪುಸ್ತಕವನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹೊರ ತಂದಿದೆ. ಇದು ಶ್ರೀಮತಿ ಶೈಲಜಾ ಸುರೇಶ ನಾಯಕ್ ರವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ಒಟ್ಟು ಹದಿಮೂರು ಕಥೆಗಳಿವೆ ಹಾಗು ಶ್ರೀಮತಿ ಶೈಲಜಾ ರ ಮಗಳಾದ ಅಶ್ವಿನಿ ಯವರು ಕೂಡ ಇದರಲ್ಲಿ ತಮ್ಮ ಎರಡು ಚೊಚ್ಚಲ ಕಥೆಗಳನ್ನು ಬರೆದಿದ್ದಾರೆ. ಈ ಕಥೆಗಳೆಲ್ಲವೂ ಭಾವನಾತ್ಮಕವಾಗಿ ನಮ್ಮ ಹಾಗು ನೆರೆಹೊರೆಯ ಕುಟುಂಬಗಳಲ್ಲಿ ನೆಡೆಯುವಂತವೇ ಆಗಿದೆ.

ಸಾಹಿತಿಗಳಾದ ಶ್ರೀ ವಾಸುದೇವ ನಾಡಿಗ್ ಅವರು ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ

“ಸದ್ಯ ಹದಿಮೂರು ಕತೆಗಳಿರುವ ಶೈಲಜಾ ಸುರೇಶ್ ರಾವ್ ನಾಯಕ್ ಅವರ ಕಥಾ ಸಂಕಲನ ಸೂತ್ರಧಾರ ಮತ್ತು ಇತರ ಕಥೆಗಳು ಕೂಡಾ ಬಾಳಿನ ಕ್ರಮಗಳ ಅಭಿವ್ಯಕ್ತಿಯ ಭಿನ್ನ ಮಾದರಿಗಳೇ ಆಗಿವೆ. ಅಕ್ಷರಗಳಲ್ಲಿ ದಾಖಲಿಸಿಟ್ಟ ಇಲ್ಲಿನ ಬಾಳಿನ ಕ್ರಮಗಳು ಅನೇಕ ಅನುಭವಗಳನ್ನು ಮತ್ತು ಸಂವೇದನೆಗಳನ್ನು ಹಾಸುತ್ತವೆ. ನಾನು ಕಥೆಗಳ ಬಗ್ಗೆ ಸಾರಾಂಶ ಬರೆಯುವ ಅಥವಾ ಅರ್ಥೈಸುವ ಸಾಹಸಕ್ಕೆ ಹೋಗಲಾರೆ. ಬದಲಿಗೆ ಇಲ್ಲಿನ ಸಾಮಾನ್ಯ ಮತ್ತು ವಿಶೇಷ ಎನಿಸುವ ಸಂಗತಿಗಳನ್ನು ಕುರಿತು ಹಂಚಿಕೊಳ್ಳಲು ಬಯಸುತ್ತೇನೆ. ಕಂಡದ್ದು ಮತ್ತು ಹತ್ತಿರದಿಂದ ಅನುಭವಿಸಿದ ಸಂಗತಿಗಳನ್ನೇ ಅನ್ಯ ಹೆಸರುಗಳಿಂದ ಚಿತ್ರಿಸುವ ಈ ಕ್ರಮವು ಸ್ವಗತದ ಧಾಟಿಯದ್ದು. ‘ಕತೆಯೊಂದನ್ನು ಹೇಳುವೆ’ ಎಂದು ಹೊರಟಾಗೆಲ್ಲ ‘ನಾನು ಇದನ್ನು ಕಂಡೆ, ಇದನ್ನು ಕೇಳಿದೆ, ನಿಮಗೂ ಹೇಳಬೇಕು’ಎಂಬ ಹಂಬಲ ಇಲ್ಲಿ ಹರಿದಾಡುತ್ತದೆ ಮತ್ತು ಅದು ಹೆಚ್ಚು ಕಲಾತ್ಮಕತೆ ಹಾಗೂ ಸಂಕೀರ್ಣತೆಯನ್ನು ಬಯಸದೆ, ಸರಾಗವಾಗಿ ಕತೆಯನ್ನು ಒಪ್ಪಿಸುವ ನೆಲೆಯಲ್ಲಿಯೇ ಸಾಗುತ್ತದೆ ಕೂಡ. ಶೈಲಜಾ ಅವರ ಕಥನ ಕ್ರಮ ಕೂಡಾ ಸರಳ ಮತ್ತು ನಿರಾಡಂಬರ. ಇದು ಕತೆ, ಇಲ್ಲಿ ಕೇಳಿ, ಹೀಗಿದೆ ಎಂದು ಮುಗಿಸಿ ಬಿಡುವ ಸಾಂಪ್ರದಾಯಿಕ ಕಥನ ಶೈಲಿ ಇದು.”

ಎಲ್ಲೆಡೆ ನಡೆಯುವ, ಎಲ್ಲರಿಗೂ ಅನುಭವಕ್ಕೆ ಬರುವ ಘಟನಾವಳಿಗಳನ್ನೇ ಶೈಲಜಾ ಇವರು ಕಥೆಯನ್ನಾಗಿಸಿದ್ದಾರೆ. ಸೂತ್ರಧಾರ ಕಥೆಯ ಹಂದರವನ್ನೇ ನೋಡಿ. ತನ್ನ ಮಗುವನ್ನು ನೋಡಿಕೊಳ್ಳುವಂತೆ ಅಮ್ಮನಿಗೆ ಹೇಳುವ ಪೂರ್ವಿ, ತನಗೆ ತಗುಲಿರುವ ಕ್ಯಾನ್ಸರ್ ಕಾಯಿಲೆ ಬಗ್ಗೆ ಅಮ್ಮನಿಗೆ ಹೇಳಿ ಅಳುತ್ತಾಳೆ. ಅವಳ ಮಗುವನ್ನು ನೋಡಿಕೊಳ್ಳುವೆ ಎಂದು ಒಪ್ಪಿಕೊಳ್ಳುವ ಅಮ್ಮನಿಗೆ ಕಿಡ್ನಿ ಫೈಲ್ ಆಗುತ್ತದೆ. ಈ ನೋವನ್ನು ಯಾರ ಬಳಿ ಹೇಳಲಿ, ನಾನು ಮತ್ತು ನನ್ನ ಮಗಳು ಇಬ್ಬರೂ ಸತ್ತು ಹೋದರೆ ಮಗುವಿನ ಗತಿಯೇನು? ಎಂದು ಮನದಲ್ಲೇ ರೋಧಿಸುತ್ತಾಳೆ ಅಮ್ಮ. ಕಥೆಯ ಕೊನೆಗೆ ಮಗಳು ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖಳಾಗಿದ್ದಾಳೆ ಎಂಬ ವರ್ತಮಾನ ಬರುತ್ತದೆ. ಹೀಗೆ ಬಹಳ ಸರಳವಾಗಿ ಕಥೆ ಮುಗಿಯುತ್ತದೆ.

ಶೈಲಜಾ ಅವರ ಎಲ್ಲಾ ಕಥೆಗಳು ಎಲ್ಲೂ ದೀರ್ಘವಾಗಿ ಬೋರ್ ಹೊಡೆಸುವುದಿಲ್ಲ. ಪ್ರತಿಯೊಂದು ಕಥೆ ಕೊನೆಗೆ ಒಂದು ನೀತಿ ಹೇಳುತ್ತದೆ. ಪರಿವರ್ತನೆ, ಹೃದಯಾಂತರಾಳದಲಿ ಕಥೆಗಳು ದುಃಖ ಅಂತ್ಯ ಕಂಡರೂ ಅದರಿಂದ ಮತ್ತೊಬ್ಬರ ಕಣ್ಣು ತೆರೆಯುತ್ತದೆ. ನಿಜಕ್ಕೂ ಇಷ್ಟವಾಗುವ ಒಂದು ಕಥೆ ‘ಅರಿವು ಕಣ್ತೆರೆದಾಗ’. ಈ ಕಥೆಯು ಬಹಳ ಸರಳ. ತನ್ನ ಗಂಡನ ಅಕ್ಕ ತನ್ನ ಮಗಳಿಗಾಗಿ ಬಳೆ ತೆಗೆದುಕೊಂಡಾಗ ಅದರ ಹಣವನ್ನು ತನ್ನ ಗಂಡನೇ ನೀಡಿದಾಗ ಕೋಪಗೊಳ್ಳುವ ಹೆಂಡತಿಗೆ ಒಂದು ಅಚ್ಚರಿ ಕಾದಿರುತ್ತದೆ. ಏನದು? ಎಂಬುವುದನ್ನು ನೀವು ಓದಿಕೊಂಡು ತಿಳಿದರೇನೇ ಚೆನ್ನ. ಶೇಖರನ ಲವ್ ಸ್ಟೋರಿಯಲ್ಲಿ ಶೇಖರನಿಗೆ ರಾಣಿಯು ಪ್ರೀತಿಸಿದಂತೆ ನಟಿಸಿ ಮೋಸ ಮಾಡುತ್ತಾಳೆ. ತಾನು ಮೋಸ ಹೋದೆ ಎಂದು ಗೊತ್ತಾದ ನಂತರವೂ ಶೇಖರ ಹೇಳುವ ‘ಕಷ್ಟ ಯಾವಾಗಲೂ ನನಗೇ ಬರಲಿ. ನನ್ನ ರಾಣಿ ಯಾವಾಗಲೂ ಸುಖವಾಗಿರಲಿ’ ಎಂಬ ಮಾತುಗಳು ನಮಗೆ ಗೊತ್ತಿಲ್ಲದೆಯೇ ಕಣ್ಣನ್ನು ಒದ್ದೆ ಮಾಡುತ್ತದೆ. ‘ಕಾಣದ ಕೈ’ಯ ಅಮ್ಮನ ಪ್ರೀತಿ, ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’, ತ್ಯಾಗ ಮೊದಲಾದ ಕಥೆಗಳು ಚೆನ್ನಾಗಿವೆ. ‘ಫಣೀಂದ್ರನ ಗಲಿಬಿಲಿ ಸಂಸಾರ’ ಸ್ವಲ್ಪ ಹಾಸ್ಯಮಯವಾಗಿ ಸಾಗಿದರೂ ಅಂತ್ಯ ಮಾತ್ರ ವಿಭಿನ್ನವಾಗಿದೆ.

ಶೈಲಜಾ ಅವರು ತಮ್ಮ ಮೊದಲ ಕಥಾ ಸಂಕಲನದಲ್ಲಿ ಉತ್ತಮ ಕಥೆಗಾರ್ತಿಯಾಗುವ ಭರವಸೆ ಹುಟ್ಟಿಸಿದ್ದಾರೆ. ತಾವು ಬರೆದ ಕಥೆಯೊಂದು ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವಂತಿದ್ದರೆ ಅದೇ ಉತ್ತಮ ಕಥೆ ಎಂದು ನನ್ನ ಭಾವನೆ. ಒಂದು ಪುಟದಲ್ಲಿ ಮುಗಿಯುವ ಕಥೆಯನ್ನು ಹತ್ತು ಪುಟಕ್ಕೆ ಎಳೆದು ಗೋಜಲಾಗಿಸುವ ಬದಲು ಪುಟ್ಟದಾಗಿ, ಹೇಳ ಬೇಕಾದುದನ್ನು ನೇರವಾಗಿ ಹೇಳುವುದೇ ಶೈಲಜಾ ಅವರ ಶೈಲಿ ಎಂದು ನನಗೆ ಅನಿಸುತ್ತದೆ.

ಶ್ರೀಮತಿ ಶೈಲಜಾ ರವರು ತಮ್ಮ ಚೊಚ್ಚಲ ಕಥಾಸಂಕಲವನ್ನು ತಮ್ಮ ಮಗಳಾದ ಅಶ್ವಿನಿಯವರ ಹುಟ್ಟು ಹಬ್ಬದ ಕೊಡುಗೆಯಾಗಿ ಅರ್ಪಿಸಿದ್ದಾರೆ.

ಆಕರ್ಷಕ ಮುಖಪುಟ ಹೊಂದಿರುವ ೧೦೦ ಪುಟಗಳ ಈ ಪುಸ್ತಕವನ್ನು ತಮ್ಮ ಮಗಳಾದ ಅಶ್ವಿನಿಗೆ ಹುಟ್ಟು ಹಬ್ಬದ ಕೊಡುಗೆಯಾಗಿ ಅರ್ಪಿಸಿದ್ದಾರೆ ಲೇಖಕಿ ಶೈಲಜಾ ಅವರು.

ಸಾಹಿತ್ಯಮೈತ್ರಿ: ಕಥಾ ಪುಸ್ತಕ ಪ್ರಿಯರು ಪುಸ್ತಕ ಬೇಕಿದ್ದಲ್ಲಿ ಶ್ರೀ ರಘುವೀರ್ ( ಮೊಬೈಲ್ – 9945939436 ) ರವರನ್ನು ಸಂಪರ್ಕಿಸಿದರೆ ನಿಮ್ಮ ಮನೆಯ ಬಾಗಿಲಿಗೆ ಅಂಚೆ ವೆಚ್ಚವಿಲ್ಲದೆ ತಲುಪಿಸುತ್ತಾರೆ.

Related post

Leave a Reply

Your email address will not be published. Required fields are marked *