ಸೋಜಿಗದ ಬದುಕು

ಸೋಜಿಗದ ಬದುಕು

ಊರ ದಾರಿಯಲ್ಲಿ ನಡೆವ
ನೆನಪ ಹಾದಿಯಲ್ಲಿ ಪಡೆವ
ಸುಖವದೆಷ್ಟು ಸೋಜಿಗ!!

ಹರಿದ ಚಡ್ಡಿ, ಸುರಿವ ಮೂಗು
ಬಗಲಿಗೊಂದು ಪಾಟಿ ಚೀಲ
ರಸ್ತೆ, ಓಣಿ ತೋಟ, ಗದ್ದೆಯಲ್ಲಿ ನಡೆದ
ಕಾಲ್ಗಳೆಷ್ಟು ಸೋಜಿಗ!!

ನಿಂಬೆಹುಳಿಯ ಪೆಪ್ಪರಮಿಂಟು
ಕಡ್ಲೆಪುರಿ ಚಾಕಲೇಟು
ಮೂಲೆಯಂಗಡಿಯ ಶೆಟ್ಟಿ
ಸಂತೆಯಲ್ಲಿ ಸಿಕ್ಕ ಸುಖವದೆಷ್ಟು ಸೋಜಿಗ!!

ಬಾಯಿಪಾಠ ಹೇಳಿಸುತ್ತ
ಲೆಕ್ಕ, ಮಗ್ಗಿ ಮಾಡಿಸುತ್ತ
ಕಾಗುಣಿತವ ಹೇಳಿಕೊಟ್ಟ
ಅಮ್ಮನೆಂತ ಸೋಜಿಗ!!

ನನಗೆ ಗುರಿಯ ಹಾಕಿಕೊಟ್ಟು
ನಡೆವ ದಾರಿ ತೋರಿಕೊಟ್ಟ
ಗುರುವು ಅದೆಂತಾ ಸೋಜಿಗ!!

ಒಮ್ಮೆ ಹೆಮ್ಮೆಯಿಂದ ಬೀಗಿ
ಅಹಮಿಕೆಯಲ್ಲಿ ಸಾಗಿ
ಎಡವಿಬಿದ್ದ ಗಳಿಗೆಯಲ್ಲಿ
ಅಹಂಕಾರವೆಲ್ಲ ಬಾಗಿ

ಅಲ್ಲಿ ಬಿದ್ದು, ಇಲ್ಲಿ ಎದ್ದು
ಎಲ್ಲಿ ಎಲ್ಲೋ ಅಲೆದಾಡುವ
ಮತ್ತೆ ಮಣ್ಣ ಸೇರುವ
ಬದುಕದೆಷ್ಟು ಸೋಜಿಗ!!

ಸುನೀಲ್ ಹಳೆಯೂರು

Related post