ಸೌರವ್ಯೂಹ – 6 – ಮಂಗಳ ಗ್ರಹ

–ಮಂಗಳ ಗ್ರಹ–

ಧರಣಿ ಗರ್ಭ ಸಂಭೂತಂ
ವಿದ್ಯುತ್ಕಾಂತಿ ಸಮ ಪ್ರಭಮ್I
ಕುಮಾರಂ ಶಕ್ತಿ ಹಸ್ತಂಚ
ಪ್ರಣಮಾಮ್ಯಹಂII

ಮಂಗಳ ಗ್ರಹವು ಸೂರ್ಯನಿಂದ ನಾಲ್ಕನೇ ಗ್ರಹವಾಗಿದ್ದು. ನಮ್ಮ ಸೌರಮಂಡಲದ ಎರಡನೇ ಅತೀ ಚಿಕ್ಕ ಗ್ರಹವಾಗಿದೆ. ಭೂಮಿಗಿಂತ ದೂರದಲ್ಲಿದ್ದು ಗುರುಗ್ರಹಕ್ಕಿಂತ ಹತ್ತಿರದಲ್ಲಿದೆ.

ಮಂಗಳ ಗ್ರಹವನ್ನು ಕೆಂಪು ಗ್ರಹವೆಂದು (ಅಂಗಾರಕ) ಕರೆಯುತ್ತಾರೆ ಕಾರಣ ಇದರ ಭೌತಿಕ ಲಕ್ಷಣ. ಮಂಗಳ ಗ್ರಹದ ಮೇಲ್ಮೈ ಕೆಂಪು / ಕಿತ್ತಳೆ ಬಣ್ಣವಾಗಿ ಗೋಚರಿಸುವುದಕ್ಕೆ ಕಾರಣ ಅದರಲ್ಲಿರುವ ಕಬ್ಬಿಣದ ಡೈ ಆಕ್ಸೈಡ್ (ತುಕ್ಕು). ಮಂಗಳವು ಭೂಮಿಯ ಅರ್ಧದಷ್ಟು ವ್ಯಾಸವನ್ನು ಮತ್ತು ಸಾಂದ್ರತೆ ಕಡಿಮೆಯಿರುವ ಕಾರಣ ಭೂಮಿಯ ಹತ್ತನೇ ಒಂದು ಪಾಲು ದ್ರವ್ಯ ರಾಶಿಯನ್ನು ಹೊಂದಿದೆ. ಈ ಗ್ರಹವು ತನ್ನ ಅಕ್ಷವನ್ನು ಸುಮಾರು 24 ಗಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು 2 ವರ್ಷಗಳೇ ಬೇಕಾಗುತ್ತದೆ. ಮಂಗಳ ಗ್ರಹದಲ್ಲಿ ನೀರು ಇರುವ ಬಗ್ಗೆ ನಾಸಾ ಅಧಿಕೃತವಾಗಿ 2015 ಸೆಪ್ಟೆಂಬರ್ 28 ರಂದು ಅಧಿಕೃತ ಘೋಷಣೆ ಮಾಡಿದೆ.

ಈ ಗ್ರಹದ ವ್ಯಾಸ 6790 ಕಿ.ಮೀ./4220 ಮೈಲಿಗಳು ಸೂರ್ಯನಿಂದ ಸುಮಾರು 228,000,000 ಕಿ.ಮೀ (142,000,000 ಮೈಲಿ) ದೂರದಲ್ಲಿರುವ ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡ ಇದೆ. ಮಂಗಳ ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ 2 ನೈಸರ್ಗಿಕ ಉಪಗ್ರಹಗಳಿವೆ. ಚಿಕ್ಕದಾಗಿ ವಿಲಕ್ಷಣ ರೂಪದಲ್ಲಿರುವ ಈ ಉಪಗ್ರಹಗಳು ಮಂಗಳದ ಗುರುತ್ವದಿಂದ ಸೆರೆಯಿಡಿಯಲ್ಪಡುವ ಮುನ್ನ ‘ಅಸ್ಟ್ರಾಯ್ಡ್’ ಗಳಾಗಿದ್ದಿರಬಹುದು. ಭೂಮಿಯಿಂದ ಮಂಗಳಗ್ರಹವನ್ನು ಬರಿಗಣ್ಣಿನಿಂದ ನೋಡಬಹುದು.

ಮಂಗಳದಿಂದ ಭೂಮಿಗೆ ಬಂದ ಉಲ್ಕೆಗಳ ಪರಿಶೀಲನ್ಯಿಂದ ಹಾಗು ಮಂಗಳದ ಪರಿಭ್ರಮಣವನ್ನು ಅಧ್ಯಯನ ಮಾಡಿದ ಆದರದ ಮೇಲೆ ಮಂಗಳದ ಮೇಲ್ಮೈ ಪದರವು ಮುಖ್ಯವಾಗಿ ಕಪ್ಪು ಶಿಲೆಯಿಂದ ರಚಿತವಾಗಿರುವಂತೆ ಕಂಡು ಬರುತ್ತದೆ. ಮಂಗಳದ ಮೇಲ್ಮೈನ ಸ್ವಲ್ಪ ಭಾಗವು ಸಾಮಾನ್ಯ ಕಪ್ಪು ಶಿಲೆಗಿಂತ ಹೆಚ್ಚು ಸಿಲಿಕಾ ಸಮೃದ್ಧವಾಗಿದೆ ಎನ್ನುವುದಕ್ಕೆ ಕೆಲವು ಆಧಾರಗಳಿಂದ ಈ ಭಾಗಗಳು ಭೂಮಿಯ ಮೇಲಿನ ಆಂಡೆಸೈಟಿಕ್ ಶಿಲೆಗಳಂತೆ ಕಂಡುಬರುತ್ತದೆ. ಆದರೆ ಇವು ಸಿಲಿಕಾ ಗಾಜಿನಿಂದಲೂ ರಚಿತವಾಗಿರಬಹುದು. ಮೇಲ್ಮೈನ ಬಹುಭಾಗವು ಬಹಳ ನುಣುಪಾದ ಕಬ್ಬಿಣದ ಡೈ ಆಕ್ಸೈಡ್ (ತುಕ್ಕು) ಧೂಳಿನ ದಪ್ಪನಾದ ಪದರದಿಂದ ಕೂಡಲ್ಪಟ್ಟಿದೆ.

ಮಂಗಳದ ಮೇಲೆ ಹೆಮಟೈಟ್, ಜಿಯೋಟೈಟ್ ಮುಂತಾದ ಖನಿಜಗಳು ನೀರಿನ ಉಪಸ್ಥಿತಿಯಲ್ಲಿ ಮಾತ್ರ ರೂಪುಗೊಳ್ಳುತ್ತದೆ. ಈ ಮೇಲಿನ ಮತ್ತು ಸಂಭಂದಪಟ್ಟ ಇತರ ಸಂಶೋಧನೆಗಳ ಕಾರಣದಿಂದ ಮಂಗಳದ ಮೇಲೆ ಒಂದು ಕಾಲದಲ್ಲಿ ನೀರು ಜಲರೂಪದಲ್ಲಿತ್ತೆಂಬುದಕ್ಕೆ ನಿರ್ಣಾಯಕ ಸಾಕ್ಷಾಧಾರಗಳಿವೆ.

ಮಂಗಳದ ಮೇಲ್ಮೈ ಸ್ವರೂಪಗಳು ಗಮನಾರ್ಹವಾದ ವಿಭಿನ್ನತೆಗಳನ್ನು ಹೊಂದಿವೆ. ಲಾವಾ ಪ್ರವಾಹಗಳಿಂದ ಚಪ್ಪಟೆಯಾದ ಉತ್ತರದ ಸಮತಲಗಳು ಪ್ರಾಚೀನವಾದ ಅಪ್ಪಳಿಕೆಗಳ ಕುಳಿಗಳಿಂದ ಕೂಡಿರುವ ದಕ್ಷಿಣದ ಪ್ರಸ್ಥಭೂಮಿಗಳಿಗಿಂತ ಬಹಳ ಭಿನ್ನವಾಗಿ ಕಾಣುತ್ತವೆ. ಭೂಮಿಯಿಂದ ನೋಡಿದಾಗ ಕಾಣುವ ಮಂಗಳದ ಮೇಲ್ಮೈಯನ್ನು ಭಿನ್ನವಾದ ಪ್ರತಿಫಲ ನಾಂಶವುಳ್ಳ ಎರಡು ಬಗೆಯ ವಲಯಗಳನ್ನಾಗಿ ವಿಂಗಡಿಸಬಹುದು. ಧೂಳು ಮತ್ತು ತುಕ್ಕಿನಿಂದ ಸಮೃದ್ಧವಾದ ಮರಳಿನಿಂದ ಹೊದಿಸಲ್ಪಟ್ಟ ಮಂದವಾದ ಸಮತಲಗಳನ್ನು ಒಂದು ಕಾಲದಲ್ಲಿ ಮಂಗಳದ ‘ಖಂಡ’ ಗಳು ಎಂದೆಣಿಸಿ ಅವುಗಳಿಗೆ ಅರೇಬಿಯಾ ಭೂಮಿ, ಅಮೆಜಾನ್ ಸಮತಳ ಮುಂತಾದ ಹೆಸರುಗಳನ್ನು ಕೊಡಲಾಗಿತ್ತು. ಗಾಢವಾದ ವಲಯಗಳನ್ನು ಸಾಗರಗಳೆಂದೆಣಿಸಿ ಅವುಗಳಿಗೆ ಎಂತ್ರಿಯಂ ಸಾಗರ, ಸೀರೇನಮ್ ಸಾಗರ, ಅರೋರೆ ಸೈನಸ್ ಮುಂತಾದ ಹೆಸರುಗಳನ್ನು ಕೊಡಲಾಗಿತ್ತು.

ಉಪಗ್ರಹಗಳು

ಫೋಬೋಸ್ ಮತ್ತು ಡೀಮೋಸ್

“ಅಸಾಫ್ ಹಾಲ್” ಎಂಬ ಖಗೋಳಶಾಸ್ತ್ರಜ್ಞ “ಫೋಬೋಸ್ ಮತ್ತು ಡೀಮೋಸ್” ಎಂಬ ಈ ಎರಡು ಉಪಗ್ರಹಗಳನ್ನು ಕಂಡು ಹಿಡಿದ. ಇವೆರಡು ಉಪಗ್ರಹಗಳು ಮಂಗಲವನ್ನು ಅತೀ ಸಮೀಪದಲ್ಲಿ ಪರಿಭ್ರಮಿಸುತ್ತಿರುತ್ತದೆ. ಇವೆರಡು ಮುಂಚೆ ಅಲೆದಾಡುವ ಆಕಾಶಕಾಯಗಳಾಗಿದ್ದವೆಂದು ಊಹಿಸಲಾಗಿದೆ. ಗ್ರೀಕ್ ಪುರಾಣದಲ್ಲಿ ಉಲ್ಲೇಖಿತವಾಗಿರುವ ಫೋಬೋಸ್ (ಭಯ) ಮತ್ತು ಡೀಮೋಸ್ (ಆತಂಕ) ಎಂಬ ಎರಡು ಪಾತ್ರಗಳ ಹೆಸರುಗಳನ್ನು ಈ ಉಪಗ್ರಹಗಳಿಗೆ ಇಡಲಾಗಿದೆ. ಗ್ರೀಕ್ ಪುರಾಣದ ಪ್ರಕಾರ ಇವರಿಬ್ಬರು ತಮ್ಮ ತಂದೆ ಹಾಗು ಯುದ್ಧದ ದೇವತೆಯಾದ ‘ಅರೆಸ್’ ನ ಜೊತೆ ಕದನಕ್ಕೆ ಹೋದರೆಂದು ನಂಬಿಕೆ. ಅರೆಸ್ ದೇವತೆಯನ್ನು ರೋಮನ್ನರು “ಮಾರ್ಸ್” ಎಂದು ಕರೆಯುತ್ತಾರೆ.

ಮಂಗಳನ ಮೇಲ್ಮೈನಿಂದ ನೋಡಿದಾಗ ಈ ಎರಡು ಉಪಗ್ರಹಗಳ ಚಲನೆಗಳು ನಮ್ಮ ಭೂಮಿಯ ಚಂದ್ರನ ಚಲನೆಗಿಂತ ಬಹಳ ಭಿನ್ನವಾಗಿ ಕಂಡುಬರುತ್ತವೆ. ‘ಫೋಬೋಸ್’ ಪಶ್ಚಿಮದಲ್ಲಿ ಉದಯವಾಗಿ ಪೂರ್ವದಲ್ಲಿ ಮುಳುಗುತ್ತದೆ. ಮುಳುಗಿ 11 ಘಂಟೆಗಳ ತರುವಾಯ ಮತ್ತೆ ಉದಯಿಸುತ್ತದೆ.
‘ಡೀಮೋಸ್’ ನಿರೀಕ್ಷೆಯಂತೆ ಪೂರ್ವದಲ್ಲಿ ಉದಯಿಸಿದರೂ ಬಹಳ ನಿಧಾನವಾಗಿ ಮೇಲೇರುತ್ತದೆ. ಇದರ ಪರಿಭ್ರಮ ಕಾಲ ಕೇವಲ 30 ಘಂಟೆಗಳಾಗಿದ್ದರೂ ಮಂಗಳದ ದೈನಂದಿನ ಚಲನೆಯ ಕಾರಣದಿಂದಾಗಿ 2.7 ದಿನಗಳ ಬಳಿಕ ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತದೆ. ಡೀಮೋಸ್ ಮತ್ತೊಮ್ಮೆ ಉದಯಿಸಲು ಇನ್ನು 2.7 ದಿನಗಳೇ ಬೇಕಾಗುತ್ತದೆ. ಫೋಬೋಸ್ ನ ಕಕ್ಷೆಯು ಸಮಕಾಲಿಕ ಕಕ್ಷೆಯ ಎತ್ತರಕ್ಕಿಂತ ಕೆಳಗಿರುವುದರಿಂದ ಮಂಗಳದ ಗುರುತ್ವ ಬಲವು ಫೋಬೋಸ್ ನನ್ನ ನಿಧಾನವಾಗಿ ತನ್ನೆಡೆಗೆ ಸೆಳೆಯುತ್ತದೆ ಅಥವಾ ಮಂಗಳದ ಸುತ್ತ ಉಂಗುರಾಕಾರದಲ್ಲಿ ಪುಡಿಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಕಳೆದ ಎರಡು ವರ್ಷಗಳಿಂದ ಮಾನವ ಮಂಗಳದ ಅಂಗಳದಲ್ಲಿ ಕಾಲಿಡುವ ಪ್ರಯತ್ನ ತೀವ್ರವಾಗಿ ಸಾಗುತ್ತಿದ್ದು “ಸ್ಪೇಸ್ ಎಕ್ಸ್” ಎಂಬ ಏರೋಸ್ಪೇಸ್ ಕಂಪನಿಯ ಮುಖ್ಯಸ್ಥನಾದ “ಎಲೋನ್ ಮಸ್ಕ್” ಭರವಸೆಯಂತೆ ಇನ್ನು ಐದು ವರ್ಷಗಳಲ್ಲಿ ಮಂಗಳ ಗ್ರಹದ ಪ್ರಯಾಣವು ಶುರುವಾಗಲಿದೆ. ನೋಡೋಣ ಈ ಪ್ರಯತ್ನ ಯಶಸ್ವಿಯಾದರೆ ಮಂಗಳಗ್ರಹದ ಬಗ್ಗೆ ಇನ್ನು ಹೆಚ್ಚು ಮಾಹಿತಿಗಳನ್ನು ಕುಳಿತಲ್ಲೇ ತಿಳಿಯಬಹುದು ಅಥವಾ ನಾವುಗಳು ಪ್ರಯಾಣಕ್ಕೆ ಸಜ್ಜಾಗಬಹುದೇನೋ? ಕಾದು ನೋಡೋಣ!

ಕನಸು

Related post

Leave a Reply

Your email address will not be published. Required fields are marked *