ಹಣತೆಯ ಅಹಂಕಾರ
ಹಣತೆಯು ಮನೆ ಮನಗಳನ್ನು ಬೆಳಗುತ್ತದೆ. ಅದೇ ರೀತಿ ಹಣತೆಯೊಂದು ಉರಿಯುತ್ತಾ ಮನೆಯನ್ನು ನಿತ್ಯ ಬೆಳಗುತ್ತಿತ್ತು.
ಒಂದು ದಿನ ತಡರಾತ್ರಿ ಆ ಮನೆಯಲ್ಲಿ ಉರಿಯುತ್ತಿದ್ದ ಹಣತೆಯು ತನ್ನಿಂದಲೇ ಕೋಣೆಯಲ್ಲಾ ಬೆಳಕು ಬೀರುತ್ತಿದೆ ಎಂಬ ಗರ್ವದಿಂದ ‘ನನ್ನಿಂದಲೇ ದೀಪವು ಉರಿಯುತ್ತಿದೆ, ಆದ್ದರಿಂದ ಈ ಬೆಳಕು ನನ್ನದೇ’ ಎಂದು ಕೂಗಿ ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿ ಹಾಕಿದ್ದ ಎಣ್ಣೆಯು ‘ಈ ದೀಪ ಮತ್ತು ಬೆಳಕಿಗೆ ನಾನೇ ಜೀವಾಳ. ನಾನೇ ಇಲ್ಲವಾದರೆ ದೀಪವೂ ಇರುವುದಿಲ್ಲ, ಬೆಳಕೂ ಇರುವುದಿಲ್ಲ ಆದ್ದರಿಂದ ಈ ಬೆಳಕು ನನ್ನದೇ’ ಎಂದು ಅಬ್ಬರಿಸಿತು.
ಇದನ್ನು ಕೇಳಿದ ಹಣತೆಯೊಳಗೆ ಉರಿಯುತ್ತಿದ್ದ ಬತ್ತಿಯು ‘ಅಯ್ಯಾ ಮಂಕು ತಿಮ್ಮಗಳಿರಾ, ನಾನು ನೋವನ್ನೆಲ್ಲಾ ತಿನ್ನುತ್ತಾ ಹೊತ್ತಿ ಉರಿಯುತ್ತಿರುವುದರಿಂದಲೇ ದೀಪವು ಉರಿಯುತ್ತಿದೆ ನೆನಪಿರಲಿ, ಆದ್ದರಿಂದ ಇಲ್ಲಿ ಹೊರಹೊಮ್ಮುತ್ತಿರುವ ಬೆಳಕು ನನ್ನದೇ’ ಎಂದು ಕಿರುಚಾಡಿತು.
ಹಣತೆ, ಎಣ್ಣೆ ಮತ್ತು ಬತ್ತಿಯ ಕಿತ್ತಾಟವನ್ನು ದೂರದಲೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗಾಳಿಯು ‘ನಾನು ಸಮರ್ಪಕವಾಗಿ ಹಿತ ಮಿತವಾಗಿ ಬೀಸದೇ ಇದ್ದರೆ ದೀಪವು ಉರಿಯಲು ಸಾಧ್ಯವಿಲ್ಲ. ನಾನಿಲ್ಲವಾದರೆ ಹಣತೆ, ಎಣ್ಣೆ ಮತ್ತು ಬತ್ತಿಗೆ ಯಾವ ಮೌಲ್ಯವೂ ಇಲ್ಲ ನೆನಪಿರಲಿ. ನಾನು ಕಡಿಮೆಯಾದರೂ ನೀವ್ಯಾರೂ ಇಲ್ಲ, ಸ್ವಲ್ಪ ನಾನು ಜೋರಾಗಿ ಬೀಸಿದರೂ ದೀಪವು ನಂದಿ ಹೋಗುತ್ತದೆ. ನಾನಿದ್ದರಷ್ಟೇ ನಿಮ್ಮೆಲ್ಲರ ಅಸ್ತಿತ್ವವಿರುತ್ತದೆ, ಆದ್ದರಿಂದ ಈ ಬೆಳಕು ನನ್ನದೇ’ ಎಂದು ತನ್ನ ವಾದವನ್ನು ಮಂಡಿಸಿತು.
ನಾನೇ, ನನ್ನಿಂದಲೇ ಮತ್ತು ನನ್ನದೇ ಎಂಬ ಕೂಗಾಟ ಚೀರಾಟದಲ್ಲಿ ಹಣತೆಯು ಕೆಳಕ್ಕೆ ಬಿದ್ದು ಚೂರು ಚೂರಾಗಿ ಒಡೆದೇ ಹೋಯಿತು. ಹಣತೆಯ ಒಳಗೆ ಸುಖವಾಗಿದ್ದ ತೈಲವು (ಎಣ್ಣೆ) ನೆಲಕ್ಕೆ ಬಿದ್ದು ಹರಿದು ಹೋಯಿತು. ಆಗ ಬತ್ತಿಯ ತುದಿಗೆ ದೊರೆಯುತ್ತಿದ್ದ ತೈಲದ ಕೊರತೆಯಾಗಿ ಪೂರ್ತಿ ಕುಸಿದು ಬಿದ್ದು, ವಿಲವಿಲನೆ ಒದ್ದಾಡಲು ಪ್ರಾರಂಭಿಸಿತು.
ಅದುವರೆಗೂ ಸುಪ್ತವಾಗಿ ಬೀಸುತ್ತಿದ್ದ ಗಾಳಿಯು ಜೋರಾಗಿ ಬೀಸಲಾರಂಭಿಸಿತು. ಇದರಿಂದ ಉರಿಯುತ್ತಿದ್ದ ದೀಪವು ನಂದಿಹೋಯಿತು. ಈಗ ಹಣತೆ, ಬತ್ತಿ, ಎಣ್ಣೆ ಯಾವುದರ ಅಸ್ತಿತ್ವವೂ ಇಲ್ಲ. ಇವೆಲ್ಲವೂ ಒಟ್ಟಾಗಿ ಸಹಬಾಳ್ವೆಯನ್ನು ಮಾಡುತ್ತಿದ್ದರೆ ಎಲ್ಲರೂ ಸುಖವಾಗಿದ್ದು, ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಿಗೆ ಇರುತ್ತಿತ್ತು.
ನಾನೇ, ನನ್ನದೇ, ನನ್ನಿಂದಲೇ, ನನಗೊಬ್ಬನಿಗೇ ಎಂಬ ಅಹಂಕಾರದ ಭಾವನೆಯಿಂದ ಬದುಕೆಲ್ಲಾ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿರಲು ಸಾಧ್ಯವಿಲ್ಲ. ವ್ಯವಸ್ಥೆಯೊಳಗೆ ನಾವು, ನಮ್ಮದು, ನಮ್ಮಿಂದ, ನಮ್ಮೆಲ್ಲರದೂ ಎಂಬ ಭಾವನೆಯಿಂದ ಬದುಕಿದಾಗ ಎಲ್ಲರಿಂದಲೂ ಉತ್ತಮ ಸಾಧನೆ ಮೂಡಿಬರಲು ಸಾಧ್ಯ. ಪ್ರತ್ಯೇಕವಾಗಿ ಬದುಕುವುದಕ್ಕಿಂತ ಸಮಗೌರವ ಮತ್ತು ಸಹಬಾಳ್ವೆಯ ತತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದಾಗ ಬದುಕು ಸುಂದರ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ – 574198
ದೂ: 9742884160