ವೃತ್ತಿಯಲ್ಲಿ ಶಿಕ್ಷಕರು ಹಾಗು ಸಾಹಿತ್ಯ ಸೇವೆಯಲ್ಲಿ ಹಿರಿಯರಾದ ಡಾ. ಪರಮೇಶ್ವರಪ್ಪ ಕುದರಿ ಯವರು ನಮ್ಮ ಸಾಹಿತ್ಯಮೈತ್ರಿ ಪತ್ರಿಕೆಗೆ ವಿನಂತಿಸಿಕೊಂಡಾಗಲೆಲ್ಲ ಪ್ರೀತಿಯಿಂದ ತಮ್ಮ ಬರಹಗಳನ್ನು ಕಳುಹಿಸಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಪುಸ್ತಕ ಪ್ರಕಾಶನವೊಂದರ ಕೆಲಸಕ್ಕಾಗಿ ಚಿತ್ರದುರ್ಗ ದಿಂದ ಬೆಂಗಳೂರಿಗೆ ತಮ್ಮ ಆತ್ಮೀಯ ಮಿತ್ರರಾದ ಹುರಳಿ ಬಸವರಾಜ್ ಜೊತೆ ಆಗಮಿಸಿದಾಗ ವಿನಂತಿಸಿಕೊಂಡಿದ್ದಕ್ಕೆ ನಮ್ಮ ಮನೆಗೆ ಬಂದು ಪ್ರೀತಿಯಿಂದ ಆಶೀರ್ವದಿಸಿ ತಮ್ಮ ಕೆಲವು ಹನಿಗವಿತೆಗಳನ್ನು ಕೊಟ್ಟು ಖುಷಿಯಿಂದ ಹಾರೈಸಿದ್ದಾರೆ. ಅವುಗಳನ್ನು ಸಂಚಿಕೆ ರೂಪದಲ್ಲಿ ಪ್ರತಿ ವಾರ ಪ್ರಕಟವಾಗುತ್ತದೆ.
ಅಕ್ಷರ
ಅಂದು ನಮ್ಮ
ಸ್ನೇಹದ ನೆನಪಾಗಿ
ನೆಲದ ಮೇಲೆ
ನೀ ಕೆತ್ತಿದ
ಎರಡು ಅಕ್ಷರ
ಇಂದು ನನ್ನೆದೆಯ
ಒಲವನ್ನೇ
ಮಾಡಿದವು ನಶ್ವರ!
ಅಂತರಂಗದ ಪುಟ
ಒಮ್ಮೆ ನಿನ್ನಂತರಂಗದ
ಪುಟ ತೆರೆದು ನೋಡು
ಅಲ್ಲಿ ನನ್ನ ನೆನಪಿನ
ಚಿತ್ರವಿದೆ!
ಕಣ್ಣಲ್ಲೇ ಮಾತನಾಡಿಸು
ಖಂಡಿತ ನನ್ನ ನೆನಪು
ನಿನ್ನ ಸತಾಯಿಸದೇ
ಇರದು!!
ದಾವೆ
ಕನಸುಗಳು
ಮತ್ತೆ ಬಾಡಿವೆ
ನಿರಾಸೆಯ ದಾವೆ ಹೂಡಿವೆ
ಆಸೆಯೆಂಬ ನ್ಯಾಯಾಲಯದಲ್ಲಿ!
ನನಸಾಗಿಸಲು
ಹೋರಾಟ ನಡೆಸಿವೆ
ಹೃದಯದಂಗಳದಲ್ಲಿ
ಛಲವಿರಬೇಕು
ಉಳಿಸಿಕೊಳ್ಳಬೇಕೆಂದರೆ
ಪ್ರೀತಿಯನ್ನು
ಅಳವಡಿಸಿಕೊಳ್ಳಬೇಕು
ಹೊಂದಾಣಿಕೆಯ
ನೀತಿಯನ್ನು
ಇಬ್ಬರಿಗೂ ಕನಸುಗಳಿರಬೇಕು
ನನಸಾಗಿಸುವ ಛಲವಿರಬೇಕು!!

ಡಾ. ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ
1 Comment
ಸೊಗಸಾದ ಪುಟ್ಟ ಕವನಗಳು