ಮೌನ ಸಂಭಾಷಣೆ
ಪ್ರೇಮ ಸಂಭಾಷಣೆಗೆ
ಭಾಷೆಯೇ ಬೇಕಿಲ್ಲ!
ಮೌನದಲ್ಲೂ
ನಡೆಯುತ್ತದೆ ಸಂಭಾಷಣೆ
ಕಣ್ಣಿನ ಕಾಗುಣಿತವೇ ಸಾಕಲ್ಲ
ನೋಟದಲ್ಲೇ
ಸವಿಯುತ್ತಾರೆ ಸಿಹಿ ಬೆಲ್ಲ!!
ಮೂರೇ ಗೇಣು
ಜೋಡಿ ಕಂಗಳ ಕಾಗುಣಿತ
ಹೆಚ್ಚಾಗಿದೆ
ಹೃದಯದಿ ಒಲವ ದೀಪ
ಬೆಳಗಿದಂತಿದೆ
ಪರಸ್ಪರ ಕಾಣಲು ಕಂಗಳು
ಹಾತೊರೆದಿವೆ!
ಮನದಲಿ ಪ್ರೀತಿ ಒಡಮೂಡಿ
ಬಂದಂತಿದೆ
ಅಪ್ಪುಗೆಯ ಒಪ್ಪಿಗೆಗಾಗಿ ಕಾತರ
ಹೆಚ್ಚಾಗಿದೆ
ಸ್ವರ್ಗ ಮೂರೇ ಗೇಣು
ಎಂಬಂತಾಗಿದೆ!!
ಹೃದಯ
ಒಲಿದು ಬಂದವರಿಗೆ ಮಾತ್ರ
ಹೃದಯ ಮಿಡಿಯುತ್ತದೆ!
ತನ್ನವರನ್ನು
ತನ್ನನ್ನು ಪ್ರೀತಿಸುವವರನ್ನು
ಹುಡುಕುತ್ತಿರುತ್ತದೆ!!
ಕನಸುಗಳನ್ನು
ಹೊಂಗನಸುಗಳನ್ನು
ಬಿತ್ತುತಿರುತ್ತದೆ!!!
ಬಾಳಪೂರ್ತಿ
ಹಂಚಿದಷ್ಟು ಕೆಲವು
ಖರ್ಚಾಗುತ್ತಲೇ ಹೋಗುತ್ತವೆ
ಪ್ರೀತಿ ಮಾತ್ರ
ಹಂಚಿದಷ್ಟೂ ಹೆಚ್ಚಾಗುತ್ತಲೇ
ಹೋಗುತ್ತದೆ!
ಹಂಚಿ ಹಂಚಿ ಬಾಳಿದರೆ ಪ್ರೀತಿ
ಕೊನೆಯಾಗುವುದೇ ಇಲ್ಲ
ಬಾಳಪೂರ್ತಿ!!

ಡಾII ಪರಮೇಶ್ವರಪ್ಪ ಕುದರಿ