ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 4

ಪಯಣ

ಒಬ್ಬನೇ ನನ್ನ
ಗುರಿಯತ್ತ ಸಾಗುತಿದ್ದೆ
ದಾರಿಯಲ್ಲಿ ಜನ
ಎದುರು ಬರುತಿದ್ದರು
ಹಾಗೆಯೇ
ನೋವು ನಲಿವುಗಳೂ
ಕೂಡ ಜೊತೆಗೇ
ಸಾಗುತಿದ್ದವು!!

ಬಾಳಿನ ಅರ್ಥ

ಇಷ್ಟ ಪಟ್ಟವರು
ಸಿಗದಿದ್ದರೆ
ಸಿಕ್ಕವರನ್ನೇ ಇಷ್ಟಪಟ್ಟು
ಖುಷಿ ಖುಷಿಯಾಗಿ
ಬದುಕುವುದೇ
ನಿಜವಾದ
ಬಾಳಿನ ಅರ್ಥ

ನವ್ಯ

ಕೊನೆ ಎಲ್ಲಿದೆ
ಸಾಗುವ ದಾರಿಗೆ
ಸಾಗಿದಷ್ಟು ದಾರಿ ಇದೆ
ಮಾಗಿದಷ್ಟು ಜೀವನ ಇದೆ!
ಸಾಗಿ ಮಾಗಿದಷ್ಟೂ
ಬದುಕು ಭವ್ಯ
ನವ್ಯ ಎನಿಸುತ್ತದೆ!!

ಮನೆ

ಪ್ರೀತಿಯ ಮನೆ
ನಿನ್ನ ಮಡಿಲೆಂದರೆ ನನಗಿಷ್ಟ
ನಿನ್ನನ್ನು ನಿರ್ಮಿಸುವಾಗ
ಪಟ್ಟೆ ಅದೆಷ್ಟೋ ಕಷ್ಟ
ಚಳಿ ಮಳೆ ಬಿಸಿಲು
ಎದುರಿಸಿ ನೀನಾದೆ
ಗಟ್ಟಿಮುಟ್ಟು
ನೊಂದು ಬಂದಾಗ
ನೀಡುವೆ ತಣ್ಣನೆಯ ಆಶ್ರಯ

ಡಾII ಪರಮೇಶ್ವರಪ್ಪ ಕುದರಿ

Related post