ಹನುಕಿಯಾ- ಆರಿ ಹೋಗದ ದೀಪ

ಹನುಕಿಯಾ- ಆರಿ ಹೋಗದ ದೀಪ

ಪುಸ್ತಕ: ಹನುಕಿಯಾ
ಲೇಖಕರು: ವಿಠಲ್ ಶೆಣೈ
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್
ಸಂಪರ್ಕ: 91-9945939436
ಬೆಲೆ: 425 /-

ಸೃಜನಶೀಲ ಲೇಖಕರಾದ ವಿಠಲ್ ಶೆಣೈ ರವರು ತಮ್ಮ “ಹನುಕಿಯಾ” (ಆರಿ ಹೋಗದ ದೀಪ) ಎಂಬ ಹೊಸ ಕಾದಂಬರಿಯನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಾಶಕರ ಮೂಲಕ ಹೊರತಂದಿದ್ದಾರೆ. ಖ್ಯಾತ ಲೇಖಕ ಸಂತೋಷ್ ಕುಮಾರ್ ಮೆಹಂದಳೆ ಯವರು ಪುಸ್ತಕಕ್ಕೆ ಬೆನ್ನುಡಿ ಬರೆದುಕೊಟ್ಟಿದ್ದಾರೆ.

ಲೇಖಕ ವಿಠಲ್ ಶೆಣೈಯವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿ ಬೆಂಗಳೂರಿನಲ್ಲಿ ನೆಲೆಸಿ ಹಲವು ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಕಳೆದೆರಡು ದಶಕಗಳಿಗಿಂದ ವೃತ್ತಿ ಪ್ರವೃತ್ತರಾಗಿದ್ದಾರೆ. ಕಳೆದ ಎಂಟು-ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯದ ತುಡಿತ ಪ್ರಾರಂಭವಾಗಿ ಕಥೆ ಕಾದಂಬರಿಗಳನ್ನು ಬರೆಯುವುದನ್ನು ಪ್ರವೃತ್ತಿಯನ್ನಾಗಿಸಿದ್ದಾರೆ.

ವೃತ್ತಿನಿಮಿತ್ತ ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬಲ್ಗೇರಿಯ, ಸಿಂಗಾಪುರಗಳಂತಹ ದೇಶಗಳಲ್ಲಿ ಯಾತ್ರೆಗೈದು, ವಿವಿಧ ಸ್ತರಗಳ ಜನರೊಡನೆ ಬೆರೆತು, ಅಲ್ಲಿನ ಸಾಮಾಜಿಕ, ಸಂಸ್ಕೃತಿಕ ಬದುಕಿನ ಬಗ್ಗೆ ಜಿಜ್ಞಾಸುವಾಗಿ, ಅವುಗಳನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಯಂಡಮೂರಿ ವೀರೇಂದ್ರನಾಥ್, ಪೂರ್ಣಚಂದ್ರ ತೇಜಸ್ವಿಯವರಂತಹ ಮಹಾನ್ ಲೇಖಕರ ಬರಹಗಳಿಂದ ಪ್ರೇರಿತರಾಗಿರುವ ಲೇಖಕರು ಸಾಫ್ಟ್‌ವೇರ್ ಕೋಡ್ ಜೊತೆಗೆ ಸಾಹಿತ್ಯಕೃಷಿಯನ್ನೂ ನಿಯತವಾಗಿ ಮಾಡುತ್ತಾರೆ. ಹುಲಿ ವೇಷ, (ಕಥಾಸಂಕಲನ), ನಿಗೂಢ ನಾಣ್ಯ, ನೂರಕ್ಕೆ ನೂರು, ತಾಳಿಕೋಟೆಯ ಕದನದಲ್ಲಿ, (ಕಾದಂಬರಿಗಳು) ಪಾರಿವಾಳಗಳು (ಲಲಿತ ಪ್ರಬಂಧಗಳು) ಇವಿಷ್ಟು ವಿಠಲ್ ಶೆಣೈ ರವರ ಪ್ರಕಟಿತ ಪುಸ್ತಕಗಳು ಹಾಗು ಡಾ. ಅಜಿತ್ ಹರೀಶಿ ಯವರ ಜೊತೆ ಕೂಡಿ ಹಲವಾರು ಲೇಖಕ ಲೇಖಕಿಯರು ಬರೆದ ಕಥೆಗಳನ್ನು ‘ಕಥಾಭರಣ’ ಎಂಬ ಪುಸ್ತಕದಲ್ಲಿ ಸಂಪಾದಿಸಿ ಹೊರತಂದಿದ್ದಾರೆ.

ಪೋಲಂಡಿನ ಅನ್ವೇಷಕರಿಬ್ಬರು ಎರಡನೆಯ ವಿಶ್ವಯುದ್ಧ ಕಾಲದಲ್ಲಿ ನಾಜಿ ಅಧಿಕಾರಿಗಳು ಅಡಗಿಸಿ ಇಟ್ಟ ರೈಲೊಂದನ್ನು ಏಳು ದಶಕಗಳ ನಂತರ ಹುಡುಕಲು ಹೊರಟುತ್ತಾರೆ. ಆ ರೈಲಿನಲ್ಲಿ ಯಹೂದಿಯರಿಂದ ದೋಚಿದ ಚಿನ್ನ, ವಜ್ರ, ಬೆಳ್ಳಿ ಮತ್ತಿತರ ಬಿಲಿಯನ್ ಡಾಲರ್ ಬೆಲೆಬಾಳುವ ವಸ್ತುಗಳು ಇವೆ ಎಂದು ಶಂಕಿಸಲಾಗುತ್ತದೆ. ಅನ್ವೇಷಣೆ ಆರಂಭಿಸುವ ಕ್ಷಣಗಣನೆ ನಡೆಯುತ್ತದೆ, ಅಷ್ಟರಲ್ಲಿ ಬೆಂಗಳೂರಿನ ಮೀರಾ ಎಂಬ ತೊಂಬತ್ತು ವರ್ಷ ವಯಸ್ಸಿನ ಮಹಿಳೆಯ ಕರೆ ಅನ್ವೇಷಕರಿಗೆ ಬರುತ್ತದೆ. ಮೀರಾಳ ಪರಿವಾರದ ಹನುಕಿಯಾ ಆ ರೈಲಿನಲ್ಲಿ ಇದೆ ಹಾಗೂ ಅವಳ ಹತ್ತಿರ ರೈಲು ಇರುವ ಜಾಗದ ನಕ್ಷೆ ಕೂಡಾ ಇದೆ ಎಂದು ಅವಳು ಹೇಳುತ್ತಾಳೆ. ಆದರೆ ಅನ್ವೇಷಕರು ಅವಳ ಮಾತನ್ನು ನಂಬಬೇಕಾದರೆ ಅವಳ ಸಂಪೂರ್ಣ ಕತೆ ಕೇಳಲು ಪೋಲಂಡಿನ ಅನ್ವೇಷಣೆ ನಡೆಯುವ ಸ್ಥಳಕ್ಕೆ ಕರೆಯುತ್ತಾರೆ. ಮೀರಾ ಯಾರು? ಅವಳ ಕಥೆ ಏನು? ಅವಳು ಹೇಳುವ ವಿಶ್ವಯುದ್ಧದ ಕಥೆ ಏನು? ರೈಲು ಎಲ್ಲಿದೆ? ಹನುಕಿಯಾ ಸಿಕ್ಕಿತೇ?

ಎರಡನೆಯ ವಿಶ್ವಯುದ್ಧ ಕಾಲದ ಕೆಲವು ಕೇಳದ ರೋಚಕ ಘಟನೆಗಳನ್ನು ಒಂದು ಕಾಲ್ಪನಿಕ ಕಾದಂಬರಿಯ ಮೂಲಕ ಓದುಗರ ಮುಂದೆ ತೆರೆದು ಹಿಡಿಯುವ ಒಂದು ಪ್ರಯತ್ನವೇ “ಹನುಕಿಯಾ- ಆರಿ ಹೋಗದ ದೀಪ”. ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಕಾದಂಬರಿ.

ಪುಸ್ತಕ ಓದಲು ಆಸಕ್ತಿಯುಳ್ಳವರು ಪ್ರಕಾಶಕರಾದ ( ಸಾಹಿತ್ಯಲೋಕ ಪಬ್ಲಿಕೇಷನ್) ರಘುವೀರ್ ಸಮರ್ಥ್ ರವರನ್ನು 9945939436 ಫೋನ್ ನಂಬರ್ ಮೂಲಕ ಸಂಪರ್ಕಿಸಿದರೆ ಉಚಿತ ಅಂಚೆವೆಚ್ಚದಲ್ಲಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *