ಹನುಕಿಯಾ – ಯುದ್ಧಕಾಲದ ಪ್ರೇಮ ಗುಲಾಬಿ

ಹನುಕಿಯಾ – ಯುದ್ಧಕಾಲದ ಪ್ರೇಮ ಗುಲಾಬಿ

ಪುಸ್ತಕ : ಹನುಕಿಯಾ, ಲೇಖಕರು : ವಿಠಲ್ ಶೆಣೈ, ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್

ಮಿರಿಯಂ”ಅಪ್ಪನ ದನಿ ಕೇಳಿ ಮಿರಿಯಂ ತಿರುಗಿದಳು, ಇಬ್ಬರ ಮದ್ಯೆ ಮುಳ್ಳು ತಂತಿಯ ದೊಡ್ಡದಾದ ಬೇಲಿ, ಮಗಳನ್ನು ಅಪ್ಪ, ಅಪ್ಪನನ್ನು ಮಗಳು ತಬ್ಬಿ ಸಂತೈಸಲಾಗದಂತಹ ಪರಿಸ್ಥಿತಿ. “ಮಗಳೇ ಇಲ್ಲಿ ನಮ್ಮ ಆಟ ಎಷ್ಟು ದಿನ ಅಂತ ಗೊತ್ತಿಲ್ಲ, ನಮ್ಮಲ್ಲಿ ಯಾರು ಎಷ್ಟು ದಿನ ಬದುಕುತ್ತಾರೆಯೋ ದೇವರೇ ಬಲ್ಲ” “ಹಾಗೆಲ್ಲ ಯೋಚಿಸಬೇಡ ಅಪ್ಪ, ಛಲವಿದ್ದರೆ ನಾವು ನಾಲ್ಕು ಜನರು ಇಲ್ಲಿಂದ ಕ್ಷೇಮವಾಗಿ ಮನೆಗೆ ಹಿಂತಿರುಗಬಹುದು”. “ದಿನಕ್ಕೆ ಎರಡು ಸಾವಿರ ಹೆಣ ಸುಡುವ ನನಗೆ ಈಗ ಬರವಸೆಯೇ ಉಳಿದಿಲ್ಲ”

ಹನುಕಿಯಾ ಕಾದಂಬರಿಯಲ್ಲಿ ಬರುವ ಇದೊಂದು ಸನ್ನಿವೇಶ ಸಾಕು ಎರಡನೇ ವಿಶ್ವಯುದ್ಧದಲ್ಲಿ ಹಿಟ್ಲರ್ ಪಡೆ ನಿರ್ಮಿಸಿದಂತಹ ಸಾವಿನ ಶಿಬಿರದಲ್ಲಿ ಪ್ರಾಣಕ್ಕಾಗಿ, ಪ್ರೀತಿಗಾಗಿ, ಇನ್ನಿಲ್ಲದಂತೆ ಹಂಬಲಿಸುತ್ತಿದ್ದ ಯಹೂದಿಗಳ ಹಾಗು ಇನ್ನಿತರ ಸೆರೆಯಾಳುಗಳ ಕರುಣಾಜನಕ ಪರಿಸ್ಥಿತಿ. ಸಾವಿರಾರು ಎಕರೆಗಳ ಸಾವಿನ ಶಿಬಿರದಲ್ಲಿ ನಿತ್ಯ ತಮ್ಮದೇ ಜನರ ಹೆಣಗಳ ಸುಡುವ ಅಪ್ಪ, ತಾಯಿಯನ್ನು ಕಳೆದುಕೊಂಡ ಮಗಳು ಈ ಮೂರ್ವರನ್ನೂ ಕಳೆದುಕೊಳ್ಳುವ ಸಹೋದರ, ನಾಲ್ವರ ಮನದಲ್ಲೂ ಮರೀಚಿಕೆಯಾದ ಬದುಕಿನ ಭರವಸೆ, ಇವಿಷ್ಟು ದ್ವಿತಿಯಾರ್ದದಲ್ಲಿ ಶುರುವಾಗುವ ನಲಿವಿನ ಕಥೆಗೆ ದುಃಖದ ಪೀಠಿಕೆ.

ಲೇಖಕರಾದ ವಿಠಲ್ ಶೆಣೈ ರವರು ರಚಿಸಿರುವ ಹನುಕಿಯಾ ಕಾದಂಬರಿಯಲ್ಲಿ ನೋವು ನಲಿವಿನ ಹಾಗು ಪ್ರೇಮ ಕಥೆಯಷ್ಟೇ ಅಲ್ಲದೇ ಎರಡನೇ ಮಹಾಯುದ್ಧದಲ್ಲಿ ಜರ್ಮನಿಯನ್ನು ಮಿತ್ರಪಡೆಗಳಾದ ಬ್ರಿಟನ್ – ಯುರೋಪ್ ಹೇಗೆ ಹಂತ ಹಂತವಾಗಿ ಸುತ್ತುವರೆದು ಸೋಲಿಸಿದವು, ಹಿಟ್ಲರ್ ನ ಅಂತ್ಯ ಹೇಗಾಯಿತು ಎಂಬ ಸಮಗ್ರ ಚಿತ್ರಣವನ್ನು ಸಹ ತಮ್ಮ ಆಳ ಅಧ್ಯಯನದ ಮೂಲಕ ಕೊಟ್ಟಿದ್ದಾರೆ. ಜೊತೆಗೆ ಅಮೇರಿಕಾ ಹೇಗೆ ಯುದ್ಧದ ಹಿನ್ನಲೆಯಲ್ಲೇ ಪೂರ್ವ ತಯಾರಿಯಲ್ಲಿ ತೊಡಗಿಕೊಂಡು ನಾಝಿಗಳಿಂದ ನೊಂದ ಯಹೂದಿಗಳನ್ನು ಒಟ್ಟಾಗಿಸಿ “ರಿಚ್ಚಿ ಬಾಯ್ಸ್ ” ಎಂಬ ದೊಡ್ಡ ಬೇಹುಪಡೆ ರಚಿಸಿ ನಾಝಿಗಳ ಮೇಲೆ ಅವರ ಸೇಡು ತೀರಿಸಿಕೊಳ್ಳುವಂತೆ ಮಾಡಿತು ಎಂಬ ಎಲ್ಲರಿಗೂ ಅಷ್ಟಾಗಿ ಗೊತ್ತಿರದ ವಿಶಿಷ್ಟ ಸಂಗತಿಯನ್ನು ಸಹ ತಿಳಿಸಿದ್ದಾರೆ.

ಕಾದಂಬರಿಯ ದ್ವಿತಿಯಾರ್ದ ರೋಚಕವಾಗಿ ಇತಿಹಾಸದ ಸಂಗತಿಗಳನ್ನು ಪೋಲ್ಯಾಂಡ್ ನಲ್ಲಿ ಚಿತ್ರಿಸುತ್ತಾ ಪ್ರೇಮ ಕಥೆ ಹಾಗು ಮಾನವೀಯತೆಯ ಬಹುಮುಖ್ಯ ನಿಜ ಘಟನೆಗಳು ನಮ್ಮ ಭಾರತದಲ್ಲಿ ಹೇಗೆ ನೆಡೆದವು ಎಂಬುದನ್ನು ಸೊಗಸಾದ ಪ್ರೇಮ ಕಥೆಯೊಡನೆ ರಚಿಸಿದ್ದಾರೆ ಲೇಖಕರು. ಆ ದಿನಗಳಲ್ಲಿನ ಎಷ್ಟೋ ಯುದ್ಧ ಸಂತ್ರಸ್ತರಿಗೆ ಶಾಂತಿಪ್ರಿಯವಾದ ನಮ್ಮ ಭಾರತ ಹೇಗೆ ನೆರವಾಯಿತು ಎಂಬ ಎಷ್ಟೋ ಜನರಿಗೆ ತಿಳಿಯದ ವಿಷಯಗಳನ್ನು ವಿಠಲ್ ರವರು ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದಲ್ಲಿನ ಬ್ರಿಟಿಷ್ ಸರಕಾರದ ನಿರ್ಲಕ್ಷವನ್ನು ಒಪ್ಪಿಕೊಳ್ಳಲಾರದೇ ಪೋಲ್ಯಾಂಡ್ ನ ಯುದ್ಧ ಸಂತ್ರಸ್ತ ಮಕ್ಕಳ ಮುಂದಿನ ಭವಿಷ್ಯದ ಜವಾಬ್ದಾರಿಯನ್ನು ನಮ್ಮ ದೇಶದ ಮಹಾರಾಜರಲ್ಲಿ ಒಬ್ಬರಾದ ರಾಜ ದಿಗ್ವಿಜಯ್ ಸಿಂಗ್ ತೆಗೆದುಕೊಂಡು ಬಾಲಚಡಿ ಎಂಬ ಪ್ರದೇಶದಲ್ಲಿ ಶಿಬಿರಗಳನ್ನು ನಿರ್ಮಿಸಿ ಸಂತ್ರಸ್ತ ಮಕ್ಕಳ ಮೇಲಾದ ಮಾನಸಿಕ ಯಾತನೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಬಾಪೂ ಎಂದೇ ಹೆಸರುವಾಸಿಯಾಗುವುದು ಮತ್ತು ಯುದ್ಧದ ನಂತರ ಮಹಾರಾಜರನ್ನು ಪೋಲ್ಯಾಂಡ್ ಸರಕಾರ ಗೌರವಿಸಿರುವುದು ಗಮನಾರ್ಹ ಸತ್ಯ ಸಂಗತಿ ಹಾಗು ಇದನ್ನು ಓದಿದ ಮೇಲೆ ಆ ರಾಜರ ಮೇಲಿನ ಅಭಿಮಾನ ದುಪ್ಪಟಾಗುವುದರಲ್ಲಿ ಸಂಶಯವಿಲ್ಲ.

ಸಾವಿನ ಶಿಬಿರದಿಂದ ಭಾರತದ ಆಸರೆಗೆ ಅಕಸ್ಮಾತಾಗಿ ಬರುವ ಮಿರಿಯಂಳ ಮಾನಸಿಕ ತಲ್ಲಣಗಳನ್ನು ಹಾಗು ಚಂದ್ರಕಾಂತ್ ನಿಗೆ ಅವಳ ಮೇಲಾಗುವ ಪ್ರೇಮಾಂಕುರವನ್ನು ಓದುಗರಿಗೆ ಮುಟ್ಟಿಸುವ ರೀತಿ ವಿಭಿನ್ನವಾಗಿ ಮೂಡಿ ಬಂದಿದೆ. ಹಿಟ್ಲರ್ ಪಡೆಯ ಮೆಂಗಲ ಎಂಬ ಕುಖ್ಯಾತ ವೈದ್ಯ ಸೆರೆ ಶಿಬಿರಗಳಲ್ಲಿನ ಮಕ್ಕಳು ಹಾಗು ವಯಸ್ಸಾದ ಹಿರಿಯರ ಮೇಲೆ ಮಾಡಿದ ಪ್ರಯೋಗಗಳು ಇಡೀ ಮನುಷ್ಯ ಸಂಕುಲವು ನಾಚಿಕೆಯಿಂದ ತಲೆ ತಗ್ಗಿಸುವಂತಹುದು, ಆ ವಿಷಯವನ್ನೇ ಲೇಖಕರು ಕಥೆಯಲ್ಲಿ ಹೆಣೆದಿರುವುದು ಅವರ ಕಥಾ ಕೌಶಲ್ಯವನ್ನು ತೋರಿಸುತ್ತದೆ. ಸುಭಾಷ್ ಚಂದ್ರ ಬೋಸ್ ಹಾಗು ಗಾಂಧೀಜಿಯವರ ಆಗಿನ ಸಿದ್ದಾಂತಗಳನ್ನು ಪ್ರೇಮಿಗಳಾದ ಚಂದ್ರಕಾಂತ್ ಹಾಗು ಮಿರಿಯಂ ರಿಗೆ ಸಮನಾಗಿ ಹಂಚಿರುವ ರೀತಿಯು ಕೂಡ ಕಥೆಗೆ ಪೂರಕವಾಗಿದೆ.

ನಾಝಿಗಳಿಂದ ಕಣ್ಮರೆಯಾದ ಕಥೆಯ ಮುಖ್ಯ ವಸ್ತು ಹನುಕಿಯಾ (ಯಹೂದಿಗಳ ಪವಿತ್ರ ದೀಪ) ಗಾಗಿ ಹುಡುಕಾಡುವ ಸಂಗತಿಗಳನ್ನು ರಚಿಸಿರುವ ರೀತಿ ಬಹಳ ರೋಚಕವಾಗಿದೆ. ಲೇಖಕರಾದ ವಿಠಲ್ ಈ ಕಾದಂಬರಿ ರಚಿಸಲು ಸುಧೀರ್ಘ ಕಾಲವನ್ನು ತೆಗೆದುಕೊಂಡಿರುವುದು ಅವರ ಪರೀಕ್ಷಣ ಹಾಗು ಸಂಶೋಧನಾತ್ಮಕ ಬುದ್ದಿಯನ್ನು ಎತ್ತಿ ತೋರುತ್ತದೆ.

ಚರಿತ್ರೆಯ ನೆರಳಿನಲ್ಲಿ ಅರಳಿರುವ ನೋವು ನಲಿವಿನ ಗುಲಾಬಿ “ಹನುಕಿಯಾ” ಪ್ರತಿಯೊಬ್ಬರೂ ಓದಬೇಕಾಗಿರುವ ಕೃತಿ. ಪುಸ್ತಕ ಓದಲು ಆಸಕ್ತಿಯುಳ್ಳವರು ಪ್ರಕಾಶಕರಾದ ( ಸಾಹಿತ್ಯಲೋಕ ಪಬ್ಲಿಕೇಷನ್) ರಘುವೀರ್ ಸಮರ್ಥ್ ರವರನ್ನು 9945939436 ಫೋನ್ ನಂಬರ್ ಮೂಲಕ ಸಂಪರ್ಕಿಸಿದರೆ ಉಚಿತ ಅಂಚೆವೆಚ್ಚದಲ್ಲಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.

ಚಂದ್ರಶೇಖರ್ ಕುಲಗಾಣ

Related post

Leave a Reply

Your email address will not be published. Required fields are marked *