ಹಳದಿ ಕೊಕ್ಕಿನ ಕಾಗೆ

ನೀವು ಬದರಿಯಾತ್ರೆಯಲ್ಲಿದ್ದಾಗ ಇದ್ದಕ್ಕಿದ್ದಂತೆ “ಅರೆ! ಈ ಕಾಗೆಗೆ ಹಳದಿ ಕೊಕ್ಕಿದೆ!” ಎನಿಸಬಹುದು. ಹಾಗೆಯೇ, ಕಾಲು ಕೆಂಪಗಿದಯಲ್ಲಾ ಎಂದೂ ಎನಿಸಬಹುದು. ಹೌದು! ಆ ಪ್ರದೇಶಗಳಲ್ಲಿ ಹಳದಿ ಕೊಕ್ಕಿನ ಕಾಗೆ ಕಂಡುಬರುತ್ತದೆ. ಇಂಗ್ಲಿಷಿನಲ್ಲಿ ಇದನ್ನು Yellow-billed Chough Pyrrhocorax graculus ಎನ್ನುತ್ತಾರೆ. ಕಾಗೆಗಳ ಕುಟುಂಬಕ್ಕೇ ಸೇರುತ್ತವೆ. ಹಾಗೆಯೇ, ಕೆಂಪು ಕೊಕ್ಕಿನ ಕಾಗೆಯೂ ಕಂಡುಬರುತ್ತದೆ.

ಹಳದಿ ಕೊಕ್ಕು, ಕೆಂಪು ಕಾಲನ್ನು ಬಿಟ್ಟರೆ ಉಳಿದಂತೆ ಕಾಗೆಯಂತೆಯೇ ಕಾಣುತ್ತದೆ. ಬೇಸಿಗೆಯಲ್ಲಿ ಆ ಪ್ರದೇಶಗಳಲ್ಲಿ ಕಂಡುಬರುವ ಕೀಟಗಳನ್ನು ತಿಂದರೆ ಚಳಿಗಾಲದಲ್ಲಿ ಹಣ್ಣುಗಳನ್ನು ತಿನ್ನುತ್ತದೆ. ಒಂದು ಬಗೆಯ ಹೂವನ್ನು ತಿನ್ನುವ ದಾಖಲೆಯೂ ಇದೆ. ಹಿಮಾಲಯದ ಆ ಎತ್ತರದಲ್ಲಿ ಬದುಕಲು ಬೇಕಾಗುವ ಮಾರ್ಪಾಟುಗಳನ್ನು ವಿಕಾಸದ ಹಾದಿ ಮಾಡಿದೆ.  ಮೊಟ್ಟೆಗಳಿಗೆ ಅತಿಸಣ್ಣ ರಂದ್ರಗಳಿರುತ್ತವೆ. ಈ ರಂದ್ರಗಳು ಭ್ರೂಣದ ಉಸಿರಾಟಕ್ಕೆ ಸಹಾಯ ಮಾಡುತ್ತವೆ. ಕಾರ್ಬನ್ ಡೈ ಆಕ್ಸೈಡ್‍ ಹೊರಹೋಗಲು ಹಾಗೂ ಆಕ್ಸಿಜನ್ ಒಳಬರಲು ಇದು ಹಾದಿ. ಇದೇ ಹಾದಿಯಲ್ಲಿ ವಾತಾವರಣದಲ್ಲಿನ ನೀರಿನಂಶ (ಆರ್ದತೆ) ಸಹ ಮೊಟ್ಟೆಯೊಳಗೆ ಪ್ರವೇಶಿಸುತ್ತದೆ. ಇದು ಮೊಟ್ಟೆಯೊಳಗಿನ ಭ್ರೂಣದ ಬೆಳವಣಿಗೆಗೆ ಅವಶ್ಯಕ. ಆದರೆ, ಈ ಹಳದಿ ಕೊಕ್ಕಿನ ಕಾಗೆಯ ಮೊಟ್ಟೆಗಳಲ್ಲಿ (ಒಟ್ಟಾರೆ ಅತಿಎತ್ತರದಲ್ಲಿ ಮರಿಮಾಡುವ ಹಕ್ಕಿಗಳ ಮೊಟ್ಟೆಯಲ್ಲಿ) ಈ ಅತಿಸಣ್ಣ ರಂದ್ರಗಳು ಸಂಖ್ಯೆಯಲ್ಲಿ ಕಡಿಮೆಯಿರುತ್ತದೆ. ಆದ್ದರಿಂದ ಮೊಟ್ಟೆಯು ಹೆಚ್ಚು ನೀರನ್ನು ಕಳೆದುಕೊಳ್ಳುವುದಿಲ್ಲ. ಅಂತೆಯೇ ಎತ್ತರದಲ್ಲಿ ಆಕ್ಸಿಜನ್‍ ಕಡಿಮೆಯಿರುವುದರಿಂದ ಈ ಹಕ್ಕಿಗಳ ಭ್ರೂಣದ ರಕ್ತದಲ್ಲಿನ ಹಿಮೋಗ್ಲೋಬಿನ್ ಆಕ್ಸಿಜನ್‍ ಅನ್ನು ಹೆಚ್ಚು ಹಿಡಿಯುವಂತೆ ವಿಕಾಸಗೊಂಡಿದೆ. ಹಕ್ಕಿಗಳ ಜಗತ್ತಿನಲ್ಲಿ ಎಷ್ಟೆಲ್ಲ ವಿಜ್ಞಾನವಿದೆ, ನೋಡಿ! ಇವುಗಳ ಅಧ್ಯಯನದಿಂದ ಮಾನವ ಏನೇನನ್ನು ಕಲಿಯಬಹುದೋ!

ಇವು ಅಳಿವನಂಚಿನಲ್ಲಿರುವ ಹಕ್ಕಿಗಳೇನೂ ಅಲ್ಲ. ಆದರೆ, ಹವಾಮಾನ ಬದಲಾವಣೆ ಇವುಗಳ ದಾರಿಗೆ ಅಡ್ಡವಾಗುವ ಸಾಧ್ಯತೆಯಿದೆ. ಏರುವ ತಾಪಮಾನದಿಂದ ಹಿಮಕರಗಿ ಇವು ಇನ್ನೂ ಎತ್ತರದ ಪ್ರದೇಶಗಳನ್ನು ಹುಡುಕಿಹೋಗಬೇಕಾಗಬಹುದು. ಸಹಸ್ರಾರು ವರ್ಷಗಳಿಂದ ಒಂದು ಹವಾಮಾನಕ್ಕೆ ಒಗ್ಗಿಕೊಂಡಿರುವ ಹಕ್ಕಿಗಳು ಈಗ ಆಗುತ್ತಿರುವ ಬದಲಾವಣೆಗೆ ಹೇಗೆ ಸ್ಪಂದಿಸಬಹುದು ಹಾಗೂ ಅದರಿಂದ ಒಟ್ಟಾರೆಯಾಗಿ ಮಾನವನ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದು ವಿಜ್ಞಾನ ಹಾಗೂ ಈ ನಿಟ್ಟಿನಲ್ಲಿ ಮಾನವ ಕ್ರಿಯಾಶೀಲತೆ ಉತ್ತರಿಸಬೇಕಾದ ಪ್ರಶ್ನೆ.

ಇದನ್ನು ನೀವು ಕಂಡರೆ ಈ ಎಲ್ಲವನ್ನು ಯೋಚಿಸಿ. ಪರಿಸರ ಸಂರಕ್ಷಣೆಯನ್ನು ಕುರಿತಾಗಿ ಯೋಚಿಸಿ ಹಾಗೂ ನಮಗೆ ksn.bird@gmail.com ಗೆ ಬರೆದು ತಿಳಿಸಿರಿ.

ಕಲ್ಗುಂಡಿ ನವೀನ್

ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ ಹಾಗು Red Carpet Travel – Facebook page

Related post