ಹಾವು ಕಡಿತ – ಮಿಥ್ಯ – ಸತ್ಯ – ಚಿಕಿತ್ಸೆಗಳು

ಹಾವು ಕಡಿತ – ಮಿಥ್ಯ – ಸತ್ಯ – ಚಿಕಿತ್ಸೆಗಳು

ಇತ್ತೀಚೆಗೆ ಪುತ್ತೂರಿನಲ್ಲಿ ವಿಷಪೂರಿತ ಹಾವಿಂದ ಕಚ್ಚಲ್ಪಟ್ಟ ತಾಯಿಯ ದೇಹಕ್ಕೆ ವಿಷವೇರುವ ಮುನ್ನ ತನ್ನ ಬಾಯಿಯಿಂದ ಆ ವಿಷವನ್ನು ತೆಗೆದು ತಾಯಿಯ ಜೀವ ಉಳಿಸಿದ ಮಗಳಿಗೆ ಅನೇಕ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿ ಸನ್ಮಾನ ಇತ್ಯಾದಿಗಳು ನಡೆದಿವೆ. ಆದರೆ ಈ ರೀತಿಯ ಚಿಕಿತ್ಸೆಗಳು ವೈಜ್ಞಾನಿಕವಾಗಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ? ಎನ್ನುವುದನ್ನು ನೋಡಲು ಹೋದಾಗ ಅನೇಕ ವಿಷಯಗಳು ತಿಳಿಯುತ್ತವೆ.

ಹಾವು ಕಡಿದ ಜಾಗದಲ್ಲಿ ಬಾಯಿಂದ ವಿಷವನ್ನು ಹೀರುವುದು ಕೇವಲ ಸಿನಿಮಾಗಳಲ್ಲಿ ತೋರಿಸುವ ದೃಶ್ಯವೇ ಹೊರತು ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಸಮರ್ಥನೆಗಳಿಲ್ಲ. ಬದಲಿಗೆ ಇದೊಂದು ಅಪಾಯಕಾರಿ ವಿಧಾನ. ಬಾಯಿಯಲ್ಲಿ ಹುಣ್ಣು, ಗಾಯ ಇದ್ದಲ್ಲಿ ಅಲ್ಲಿಂದ ವಿಷ ಶರೀರಕ್ಕೆ ಏರಿ ಹೀರಲು ಹೋದವರೇ ಸಾವನ್ನಪ್ಪುವ ಸಾಧ್ಯತೆ ಇದೆ. ಹಾವು ಕಡಿತವಾದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆಯ ಅರಿವನ್ನು ಎಲ್ಲರಿಗೂ ಮೂಡಿಸುವುದು ಅವಶ್ಯ.

ಪ್ರಪಂಚದಲ್ಲಿ 5.8 ಮಿಲಿಯನ್ ಜನ ಹಾವು ಕಡಿಯುವ ಸಾಧ್ಯತೆ ಹೊಂದಿದ್ದು, ಪ್ರತಿದಿನ 7400 ಜನ ಒಂದಲ್ಲ ಒಂದು ಹಾವಿನಿಂದ ಕಡಿಸಿಕೊಳ್ಳುತ್ತಾರೆ ಮತ್ತು ಇವರಲ್ಲಿ 220 – 380 ಜನರು ಸಾಯುತ್ತಾರೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ. ಪ್ರತಿ ವರ್ಷ ಹಾವು ಕಡಿಸಿಕೊಂಡು ಸಾಯುವವರ ಸಂಖ್ಯೆ ಸುಮಾರು 81000 – 138000. 2005 ರ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಹಾವು ಕಡಿತದ ಸಾವಿನ ಸಂಖ್ಯೆ 46,000 ಇರುತ್ತಿದ್ದು ಅತ್ಯಂತ ಜಾಸ್ತಿ ಇರುವುದು (97%) ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಇದರ ಪ್ರಮಾಣ ಬಹಳ ಕಡಿಮೆ (3%). ಅತ್ಯಂತ ಹೆಚ್ಚಿನ ಸಾವಿನ ಸಂಖ್ಯೆ ಆಗಿರುವುದು ಉತ್ತರ ಪ್ರದೇಶದಲ್ಲಿ (8700) ಯಾಗಿದ್ದರೆ ನಂತರದ ಸ್ಥಾನ ಅಂಧ್ರಪ್ರದೇಶದ್ದು (5200) ಮತ್ತು ತದನಂತರದ ಸ್ಥಾನ ಬಿಹಾರದ್ದು (4500). ಭಾರತದಲ್ಲಿ 18 ಕ್ಕೂ ಹೆಚ್ಚಿನ ವಿಷದ ಹಾವುಗಳಿವೆ. ಕರ್ನಾಟಕದಲ್ಲಿ ಶೇ 26 ರಷ್ಟು ಆಸ್ಪತ್ರೆಯಲ್ಲಿನ ಸಾವುಗಳು ಅದರಲ್ಲಿಯೂ ವಿಷರಹಿತ ಹಾವುಗಳಿಂದ ಕಡಿತಕ್ಕೊಳಗಾದರೂ ಸಾವಿಗೊಳಗಾಗುವುದು ಅತಂಕಕಾರಿ ಎನ್ನುತ್ತದೆ ಅಂಕಿ ಅಂಶ.

ಹಾವಿನ ಬಗ್ಗೆ ಜನರಿಗೆ ಇರುವ ಭಯದಿಂದಲೇ ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪುವುದು ಮನುಷ್ಯರಲ್ಲಿ ಬಹಳ ಸಾಮಾನ್ಯ. ಬಹಳಷ್ಟು ಸಾವುಗಳು ಹಳ್ಳಿಮದ್ದು ಮಾಡಿಸಿ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ತಡವಾಗಿ ಹಾಜರುಪಡಿಸುವುದರಿಂದ ಆಗುತ್ತದೆ ಎನ್ನುತ್ತದೆ ಭಾರತ ಸರ್ಕಾರದ ವರದಿ. ಗಂಡಸರು ಮತ್ತು ಮಕ್ಕಳು ಹಾವಿನ ಕಡಿತಕ್ಕೆ ತುತ್ತಾಗುವುದು ಬಹಳ ಸಾಮಾನ್ಯ. ಪ್ರಪಂಚದಲ್ಲಿ ಎಷ್ಟೆಲ್ಲಾ ಹಾವು ಕಡಿತಗಳಿದ್ದರೂ ಅವುಗಳಲ್ಲಿ ಶೇ 30 ರಷ್ಟು ಮಾತ್ರ ವಿಷಕಾರಿ ಸರ್ಪಗಳಿಂದ ಆಗುವುದು. ಶೇಕಡಾ 80 ರಷ್ಟು ಹಾವುಗಳು ವಿಷದ ಹಾವುಗಳಲ್ಲ. ಸುಮಾರು 3500 ರೀತಿಯ ಹಾವುಗಳಿದ್ದರೂ ಸಹ ಅವುಗಳಲ್ಲಿ ಕೇವಲ 400 ಹಾವುಗಳು ಮಾತ್ರ ವಿಷಕಾರಿ. ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಆಗದಿರುವುದು, ಹಳ್ಳಿ ಚಿಕಿತ್ಸೆ, ಹಾವಿನ ವಿಷ ಪ್ರತಿರೋಧಕ ಚುಚ್ಚುಮದ್ದು ಸಕಾಲದಲ್ಲಿ ದೊರಕದಿರುವುದು, ಹಾವಿನ ಬಗ್ಗೆ ಇರುವ ಭಯ ಇವೆಲ್ಲಾ ಹಾವಿನ ಕಡಿತದಿಂದ ಆಗುವ ಸಾವಿಗೆ ಕಾರಣ. ಹಾಗಿದ್ದಲ್ಲಿ ಹಾವು ಕಡಿದಿದೆ ಎಂದ ತಕ್ಷಣ ಮಾಡಬಹುದಾದ ಪ್ರಥಮ ಚಿಕಿತ್ಸಾ ಕ್ರಮಗಳು ಹೀಗಿವೆ.

• ಹಾವಿನಿಂದ ಕಡಿಸಿಕೊಂಡ ವ್ಯಕ್ತಿಯನ್ನು ಕೂಡಲೇ ಬೇರ್ಪಡಿಸಬೇಕು. ಇದು ಪುನಃ ಹಾವು ಗಾಬರಿಯಿಂದ ಕಡಿಯುವುದನ್ನು ತಪ್ಪಿಸುತ್ತದೆ. ನೆನಪಿಡಿ; ಹಾವು ಮನುಷ್ಯರನ್ನು ಕಡಿಯುವುದು ಅದರ ಆಕಾಸ್ಮಾತ್ ತುಳಿತ ಇತ್ಯಾದಿ ಹೆದರಿಕೆಯಿಂದ. ಅದೆಂದೂ ದ್ವೇಷ ಸಾಧಿಸದು.
• ಕಡಿತದ ಜಾಗದಲ್ಲಿ ಆಭರಣ, ಬಳೆ, ಬಟ್ಟೆ ಇತ್ಯಾದಿ ಇದ್ದಲ್ಲಿ ಕೂಡಲೇ ಅದನ್ನು ತೆಗೆಯಬೇಕು. ವಿಷಭರಿತ ಹಾವಿನ ಕಡಿತ ಕೂಡಲೇ ನೋವುಭರಿತ ಊತವನ್ನುಂಟುಮಾಡುತ್ತದೆ.
• ಕಡಿಸಿಕೊಂಡ ವ್ಯಕ್ತಿಗೆ ಧೈರ್ಯವನ್ನು ಹೇಳಬೇಕು. ಯಾವುದೇ ಕಾರಣಕ್ಕೂ ಗಾಬರಿಪಡಿಸಿ ಆತನ ಚಲನವಲನವನ್ನು ಹೆಚ್ಚಿಸಬಾರದು. ಇದರಿಂದ ಆತನ ರಕ್ತ ಸಂಚಾರ ಹೆಚ್ಚಿ ವಿಷ ಬೇಗ ಶರೀರವನ್ನು ವ್ಯಾಪಿಸುವ ಸಾಧ್ಯತೆ ಜಾಸ್ತಿ. ಅನೇಕ ಸಾವುಗಳು ಹಾವಿನ ಕುರಿತ ಹೆದರಿಕೆಯಿಂದ ಆಗುವ ಹೃದಯಾಘಾತದಿಂದಲೇ ಆಗುತ್ತವೆ. ಸುತ್ತ ಮುತ್ತ ಜನರು ನೆರೆದು ತಲೆಗೊಂದು ಮಾತನಾಡಿ ಕಡಿತಕ್ಕೊಳಗಾದ ವ್ಯಕ್ತಿಯ ಧೈರ್ಯ ಕುಂದಿಸುವ ಸಾಧ್ಯತೆ ಇರುವುದರಿಂದ ಆದಷ್ಟು ಅವರನ್ನು ದೂರವಿಟ್ಟು ಗಲಾಟೆ ಗದ್ದಲ ಇರದ ಶಾಂತ ವಾತಾವರಣಕ್ಕೆ ಒಯ್ಯಬೇಕು.
• ಯಾವುದೇ ಕಾರಣಕ್ಕೂ ಕಡಿತದ ಜಾಗಕ್ಕೆ ಸಿನಿಮೀಯ ಮಾದರಿಯಲ್ಲಿ ಬಾಯಿ ಹಾಕಿ ವಿಷವನ್ನು ಹೀರುವ ಪ್ರಯತ್ನ ಬೇಡ. ಗಾಯವನ್ನು ಬ್ಲೇಡಿನಿಂದ ಕತ್ತರಿಸಿ “ಕೆಟ್ಟ” ರಕ್ತ ತೆಗೆಯುವ ಪ್ರಯತ್ನ ಬೇಡವೇ ಬೇಡ. ಇದರಿಂದ ಊತ ಮತ್ತು ಸೋಂಕು ಜಾಸ್ತಿಯಾಗುವ ಸಾಧ್ಯತೆ ಜಾಸ್ತಿ.
• ಹಾವು ಕಚ್ಚಿದ ಹಲ್ಲಿನ ಗುರುತು ಇರುವ ಸ್ಥಳವನ್ನು ಸೋಪಿನ ನೀರಿನಿಂದ ತೊಳೆದು ಅದರ ಸುತ್ತ ತೆಳುವಾದ ಬ್ಯಾಂಡೇಜ್ ಬಟ್ಟೆಯನ್ನು ಕಟ್ಟಬಹುದು.
• ಆರೋಗ್ಯ ಕಾರ್ಯಕರ್ತರು ಕಡಿತವಾದ ಜಾಗಕ್ಕೆ ಎಲುಬು ಮುರಿದಾಗ ಹೇಗೆ ಪಟ್ಟಿಕಟ್ಟುತ್ತಾರೋ ಹಾಗೆಯೇ ಪಟ್ಟಿಕಟ್ಟಿ ಕಾಲು ಅಲುಗಾಡದ ಹಾಗೆ ನಿಶ್ಚಲಗೊಳಿಸಬೇಕು.

• ಬಹುತೇಕ ಹಾವು ಕಡಿತ ಕಾಲಿನಂತ ಅಂಗಕ್ಕೆ ಆಗುವುದರಿಂದ ಊತವಿರದಿದ್ದಲ್ಲಿ ಮಾತ್ರ ಗಾಯಕ್ಕಿಂತ ಮೂರು ಇಂಚಿನ ಮೇಲೆ ಕಡಿಸಿಕೊಂಡವರಿಗೆ ಯಾವುದೇ ತೊಂದರೆಯಾಗದಂತೆ ಹಿತಮಿತವಾಗಿ ಮೆತ್ತನೆಯ ಬಟ್ಟೆ ಅಥವಾ ದಾರದಿಂದ ಕಟ್ಟಬೇಕು. ಇದು ವ್ಯಕ್ತಿಗೆ ಮಾನಸಿಕ ಸಮಾದಾನ ನೀಡಲು ಮಾತ್ರ. ಇದರಿಂದ ಹೆಚ್ಚೇನೂ ಪ್ರಯೋಜನವಾಗುವುದಿಲ್ಲ.
• ಕಡಿಸಿಕೊಂಡ ವ್ಯಕ್ತಿಯನ್ನು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಒಯ್ದು ಪರಿಣಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕು. ಇದು ಅತ್ಯುತ್ತಮ ಮಾರ್ಗ. ಎಷ್ಟು ಬೇಗ ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆಯೋ ಬದುಕಿ ಉಳಿಯುವ ಸಾಧ್ಯತೆ ಅಷ್ಟು ಜಾಸ್ತಿ.
• ಯಾವುದೇ ಕಾರಣಕ್ಕೂ ಹಾವು ಕಡಿತಕ್ಕೆ ಹಳ್ಳಿ ಮದ್ದು ಮಾಡುತ್ತಾ ಸಮಯ ವ್ಯರ್ಥಮಾಡಬಾರದು. ಯಾವುದೇ ಹಳ್ಳಿಮದ್ದು ಹಾವು ಕಡಿತಕ್ಕೆ ಉತ್ತಮವೆಂದು ಈ ವರೆಗೂ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಇದರಿಂದ ತೊಂದರೆಯೇ ಜಾಸ್ತಿ. ಹಾವು ಕಡಿತಕ್ಕೆ ಹಳ್ಳಿಮದ್ದು ಮಾಡಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.
• ಕಡಿತಗೊಳಕ್ಕಾದ ವ್ಯಕ್ತಿಗೆ ಸಾಕಷ್ಟು ವಿಶ್ರಾಂತಿ ದೊರಕುವಂತೆ ನೋಡಿಕೊಳ್ಳಬೇಕು. ಆತ ನಿದ್ರೆ ಮಾಡದ ಹಾಗೆ ತಡೆಯುವುದು ವಿಹಿತವಲ್ಲ.
• ಹಾವನ್ನು ಸಾಯಿಸುವ ಯಾವುದೇ ಪ್ರಯತ್ನ ಬೇಡ. ಅದರ ಪೋಟೋವನ್ನು ತೆಗೆದುಕೊಳ್ಳಬಹುದು. ಯಾವುದೇ ಹಾವು ಉದ್ದೇಶಪೂರ್ವಕವಾಗಿ ಕಡಿಯುವುದಿಲ್ಲ. ಆಕಾಸ್ಮಾತ್ ಅದು ಸತ್ತಿದ್ದಲ್ಲಿ ಮಾತ್ರ ಅದನ್ನು ವೈದ್ಯರಲ್ಲಿ ಕೊಂಡೊಯ್ದಲ್ಲಿ ಅದು ವಿಷಕಾರಿಯೇ ಅಥವಾ ವಿಷರಹಿತವೇ ಎಂಬುದನ್ನು ಪತ್ತೆ ಹಚ್ಚಲು ಸಹಕಾರಿಯಾಗಬಹುದು. ಸತ್ತರೂ ಸಹ ಹಾವು ಕಡಿಯುವ ಸಾಧ್ಯತೆ ಇದೆ.
• ಹಾವಿನ ಆವಾಸಸ್ಥಾನ ಜಾಸ್ತಿ ಇರುವ ತೋಟ, ಕಾಡು ಇತ್ಯಾದಿ ಪ್ರದೇಶಗಳಿಗೆ ಹೋಗುವವರು ಗಮ್ ಬೂಟುಗಳು, ಉದ್ದತೋಳಿನ ಶರ್ಟ್ ಇತ್ಯಾದಿ ರಕ್ಷಕಗಳನ್ನು ತೊಟ್ಟುಕೊಂಡು ಹಾವಿನ ಇರುವಿಕೆಯಲ್ಲಿ ಎಚ್ಚರಿಕೆಯಲ್ಲಿ ಇರುವುದು ಒಳ್ಳೆಯದು.
• ಹಾವಿನ ದ್ವೇಷ ಹನ್ನೆರಡು ವರುಷ, ಪುಂಗಿಯ ನಾದದಿಂದ ಹಾವು ಸಂತಸಗೊಂಡು ತಲೆಯಾಡಿಸುತ್ತದೆ, ಹಾವುಗಳು ಹಾಲನ್ನು ಇಷ್ಟಪಡುತ್ತವೆ ಎಂಬದೆಲ್ಲಾ ಮಿಥ್ಯಗಳು.
• ವೈದ್ಯರು ಹಾವು ಕಡಿತಕ್ಕೆ ಸೂಕ್ತ ಪ್ರತ್ಯೌಷಧ, ನಂಜುನಾಶಕ ಔಷಧಿ, ನೋವು ನಿವಾರಕಗಳು, ಜೀವನಿರೋಧಕಗಳು, ಅಡ್ರಿನಾಲಿನ್, ಸ್ಟಿರಾಯ್ಡ್ಸ್, ರಕ್ತ ಹೆಪ್ಪುಗಟ್ಟಲು ಸೂಕ್ತ ಚುಚ್ಚುಮದ್ದುಗಳು, ಆಮ್ಲಜನಕದ ಚಿಕಿತ್ಸೆ ಇತ್ಯಾದಿಗಳನ್ನು ಬಳಸಿ ಜೀವರಕ್ಷಣೆಗೆ ಪ್ರಯತ್ನಿಸುತ್ತಾರೆ.

ಹಾವುಗಳು ನಮ್ಮಂತೆ ಭೂಮಿಯಲ್ಲಿ ಇರಬಹುದಾದ ಪ್ರಾಣಿಗಳಾಗಿದ್ದು ಯಾವತ್ತೂ ಸುಮ್ಮನೆ ಕಡಿಯುವುದಿಲ್ಲ. ಕಾರಣ ಅವುಗಳ ಕಡಿಯುವಿಕೆಗೆ ಒಳಗಾಗುವುದನ್ನು ಕಡಿಮೆಗೊಳಿಸಿ, ಇವುಗಳ ಬಗ್ಗೆ ಜನರಲ್ಲಿ ಇರುವ ಮೌಢ್ಯವನ್ನು, ತಪ್ಪು ಕಲ್ಪನೆಯನ್ನು ನೀಗಿಸಿ, ಪ್ರಥಮ ಚಿಕಿತ್ಸೆ ಮತ್ತು ಕೂಡಲೇ ವೈದ್ಯಕೀಯ ಸೌಲಭ್ಯ ದೊರಕುವೆಡೆ ಎಲ್ಲರ ಪ್ರಯತ್ನ ಬೇಕಾಗಿದೆ.

ಡಾ. ಎನ್.ಬಿ. ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

Related post

1 Comment

  • ಉತ್ತಮ ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಧನ್ಯವಾದಗಳು

Leave a Reply

Your email address will not be published. Required fields are marked *