ಹೀಗೊಂದು ಅನ್ನದಾಸೋಹ (ಅನಾಜ್ ಬ್ಯಾಂಕ್)

ಹೀಗೊಂದು ಅನ್ನದಾಸೋಹ (ಅನಾಜ್ ಬ್ಯಾಂಕ್)

ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತ ದೇಶವೂ ಒಂದು. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಂಚೂಣಿಯಲ್ಲಿರುವ ದೇಶವೇನೋ ಹೌದು, ಆದರೆ ಇಲ್ಲಿನ ಕೆಲವೊಂದು ಜ್ವಲಂತ ಸಮಸ್ಯೆಗಳನ್ನು ಕಂಡರೆ ಎಂತವನಿಗೂ ಆಶ್ಚರ್ಯವಾಗದೇ ಇರಲಾರದು.

ಇವುಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಹಾಹಾಕಾರ ಹಾಕುವಂತಹ ಆಹಾರದ ಸಮಸ್ಯೆ. ಭಾರತದ ದೇಶದ ಒಟ್ಟು ಮಕ್ಕಳಲ್ಲಿ ಆರನೇ ಒಂದು ಭಾಗ ಮಕ್ಕಳು ಅಪೌಷ್ಠಿಕತೆಯಿಂದ, ಆಹಾರದ ಕೊರತೆಯಿಂದಾಗಿ ಬಳಲುತ್ತಿದ್ದಾರೆ ಹಾಗೂ ಇವರಲ್ಲಿ ನಾಲ್ಕರಲ್ಲಿ ಒಂದು ಮಗು ತೀರಾ ಅಪೌಷ್ಠಿಕತೆಯಿಂದ ಬಳಲುತ್ತಿದೆ. ಪ್ರತಿದಿನ ದೇಶದಲ್ಲಿ ಸುಮಾರು ಮೂರು ಸಾವಿರ ಮಕ್ಕಳು ಅಪೌಷ್ಠಿಕತೆ ಸಂಬಂಧಿತ ಖಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ. ದೇಶದ ಒಟ್ಟು ವಾರ್ಷಿಕ ಮರಣ ಪ್ರಮಾಣದಲ್ಲಿ 24% ರಷ್ಟ್ಲು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಸಾಯುತ್ತಿದ್ದಾರೆ ಹಾಗೂ ಪ್ರಪಂಚದಲ್ಲಿ ಒಟ್ಟು ಇಪ್ಪತ್ತು ಸಾವಿರ ಮಕ್ಕಳು ಪ್ರತಿನಿತ್ಯ ಅಪೌಷ್ಠಿಕತೆ ಸಂಬಂಧಿತ ರೋಗಗಳಿಂದ ಮರಣ ಹೊಂದುತ್ತಿದ್ದಾರೆ. ಇನ್ನು ಭಾರತ ದೇಶದಲ್ಲಿ ಪ್ರತಿ 9 ಮಂದಿಯಲ್ಲಿ ಒಬ್ಬ ವ್ಯಕ್ತಿ ಪ್ರತಿನಿತ್ಯ ರಾತ್ರಿ ಹಸಿವಿನಿಂದಲೇ ಮಲಗುತ್ತಾನೆ.

ಪ್ರಪಂಚದ ಬಡತನದಲ್ಲಿ 64% ರಷ್ಟು ಬಡತನದ ಪ್ರಮಾಣ ಕಾಂಗೋ, ಚೀನಾ, ಭಾರತ, ಬಾಂಗ್ಲಾದೇಶ ಹಾಗೂ ನೈಜೀರಿಯಾದಲ್ಲೇ ಅಡಗಿದೆ ಎಂದರೆ ಎಂತವರಿಗೂ ಆಶ್ಚರ್ಯವಾಗದೇ ಇರಲಾರದು. “ಭಾರತವು ಅತೀ ಹೆಚ್ಚು ಆಹಾರೋತ್ಪಾನ್ನಗಳನ್ನು ಉತ್ಪಾದಿಸುವ ದೇಶಗಳಲ್ಲೊಂದಾಗಿದ್ದರೂ ಬಹುತೇಕ ಭಾರತೀಯರು ಹಸಿವಿನಿಂದ ನರಳುತ್ತಿದ್ದಾರೆ…..!” ಇದಕ್ಕೆ ಬಹಳ ಮುಖ್ಯವಾದ ಕಾರಣವೆಂದರೆ ಆಹಾರ ನಿರ್ವಹಣೆ ಸಂಬಂಧಿತ ಅಸಮರ್ಪಕ ಕಾನೂನು ನೀತಿ ನಿಯಮಗಳು ಹಾಗೂ ಸ್ಥಳೀಯ ಸರ್ಕಾರಗಳ ಆಡಳಿತ ನಿರ್ಲಕ್ಷ್ಯ ಎಂದರೆ ತಪ್ಪಾಗಲಾರದು.

ಪ್ರಪಂಚದ ಒಟ್ಟು ಅಪೌಷ್ಠಿಕತೆಯಲ್ಲಿ 25% ಅಪೌಷ್ಠಿಕತೆ ಭಾರತದಲ್ಲಿಯೇ ಇದೆ. ಏಕೆಂದರೆ “ಭಾರತದ ಒಟ್ಟು ಅಹಾರೋತ್ಪಾದನೆಯಲ್ಲಿ 52% ಆಹಾರ ಧಾನ್ಯಗಳು ಆಹಾರ ಮಳಿಗೆಗಳಲ್ಲಿಯೇ ಹಸಿವಿನಿಂದ ನರಳುತ್ತಿರುವವರಿಗೆ ತಲುಪದೆ ಆರಂಭಿಕ ಹಂತದಲ್ಲಿಯೇ ಆಹಾರವು ಪೋಲಾಗುತ್ತಿದೆ ಹಾಗೂ 40% ಹಣ್ಣು ತರಕಾರಿಗಳು ಮತ್ತು 20% ಆಹಾರ ಧಾನ್ಯಗಳು ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಸರಿಯಾದ ಸಮಯಕ್ಕೆ ಅವಲಂಬಿತರಿಗೆ ತಲುಪುವಲ್ಲಿ ವಿಫಲವಾಗಿ ನಿರುಪಯುಕ್ತವಾಗುತ್ತಿದೆ”.

ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿಕೊಂಡು ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಕಾಶಿಯಲ್ಲಿ 9 ಮಂದಿ ಹುಡುಗಿಯರು “ವಿಶಾಲ ಭಾರತ ಸೇವಾ ಸಂಸ್ಥಾನ” ಎಂಬ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಅನಾಜ್ ಬ್ಯಾಂಕ್ (ಆಹಾರ ಧಾನ್ಯಗಳ ಬ್ಯಾಂಕ್)ನ್ನು ಪ್ರಾರಂಭಿಸಿರುತ್ತಾರೆ. ಎಲ್ಲಾ ಬ್ಯಾಂಕುಗಳಂತೆ ಈ ಬ್ಯಾಂಕು ಹಣಕಾಸಿನ ವ್ಯವಹಾರವನ್ನು ಮಾಡುವ ಬದಲಾಗಿ ಆಹಾರ ಧಾನ್ಯಗಳ ವ್ಯವಹಾರವನ್ನು ಮಾಡುತ್ತದೆ. ಈ ಬ್ಯಾಂಕ್‌ನ ಘೋಷ ವಾಕ್ಯವೇ “ಕೊಹಿ ಭೀ ಭೂಕಾನಾ ಸೋಯೇ” (ಯಾರೊಬ್ಬರೂ ಹಸಿವಿನಿಂದ ಮಲಗಬಾರದು) ಆಗಿದ್ದು, ಇದು ಹಸಿವಿನಿಂದ ನರಳುತ್ತಿರುವವರಿಗೆ ಆಹಾರ ಧಾನ್ಯಗಳನ್ನು ಒದಗಿಸುವ ಬ್ಯಾಂಕ್ ಆಗಿ ಕೆಲಸ ನಿರ್ವಹಿಸುತ್ತಿದೆ.
ಈ ಬ್ಯಾಂಕ್ ಸದ್ಯಕ್ಕೆ ಉತ್ತರ ಪ್ರದೇಶ ಜಿಲ್ಲೆಯ ವಾರಣಾಸಿ ಜಿಲ್ಲೆಯ ಕಾಶಿಯಲ್ಲಿ ಮಾತ್ರ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಬ್ಯಾಂಕ್‌ನ ಕಾರ್ಯ ವಿಧಾನಗಳು ಈ ಕೆಳಕಂಡಂತಿದೆ:


 ಈ ಬ್ಯಾಂಕ್‌ನಲ್ಲಿ ಆಹಾರ ಧಾನ್ಯವನ್ನು ನೀಡುವವರು ಹಾಗೂ ಪಡೆದುಕೊಳ್ಳುವವರು ಮಾತ್ರ ಅನಾಜ್ ಬ್ಯಾಂಕ್ ಆಹಾರ ಖಾತೆಯನ್ನು ತೆರೆಯಬಹುದಾಗಿದೆ. ಇವರಿಗೆ ಅನಾಜ್ ಬ್ಯಾಂಕ್ ಪಾಸ್ ಪುಸ್ತಕವನ್ನು ನೀಡಲಾಗುತ್ತದೆ.
 ಆಹಾರ ಧಾನ್ಯವನ್ನು ನೀಡುವವರು ಕನಿಷ್ಠ 5 ಕೆ.ಜಿ ಆಹಾರ ಧಾನ್ಯವನ್ನು ಪ್ರತಿ ತಿಂಗಳು ಠೇವಣಿಯಾಗಿ ನೀಡಬೇಕಾಗುತ್ತದೆ. ಹಾಗೂ ಗರಿಷ್ಟ ಮಿತಿ ಇರುವುದಿಲ್ಲ.
 ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವ ಅವಲಂಬಿತರ ಆಯ್ಕೆಯನ್ನು ಖುದ್ದಾಗಿ ವಿಶಾಲ ಭಾರತ ಸೇವಾ ಸಂಸ್ಥಾನದ ಸದಸ್ಯರು ಅವರ ಬಡತನದ ಮಟ್ಟವನ್ನು ಪರಿಶೀಲಿಸಿ ಆಯ್ಕೆ ಮಾಡುತ್ತಾರೆ.
 ಆಹಾರ ಧಾನ್ಯಗಳ ಠೇವಣಿದಾರರು ಹಾಗೂ ಪಡೆದುಕೊಳ್ಳುವವರು ದ್ರಢೀಕರಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯಲ್ಲಿ ಯಾವುದಾದರೊಂದನ್ನು ಕಡ್ಡಾಯವಾಗಿ ನೀಡಬೇಕಾಗಿರುತ್ತದೆ.
 ಅರ್ಹ ಫಲಾನುಭವಿಗಳ ಆಯ್ಕೆಯ ಸಂದರ್ಭದಲ್ಲಿ ಹಾಗೂ ಪ್ರತಿ ತಿಂಗಳಿಗೊಂದಾವರ್ತಿಯಂತೆ ಫಲಾನುಭವಿಗಳ ತೂಕವನ್ನು ಸದ್ರಿ ಯೋಜನೆಯು ಸದುಪಯೋಗವಾಗುತ್ತಿರುವುದನ್ನು ಖಾತ್ರಿ ಪಡಿಸುವ ಉದ್ದೇಶದಿಂದ ಮಾಡಲಾಗುತ್ತದೆ.
 ಆಹಾರ ಧಾನ್ಯ ನೀಡುವವರು ಗುಣಮಟ್ಟದ ಆಹಾರ ಧಾನ್ಯಗಳನ್ನೇ ನೀಡಬೇಕಾಗಿದ್ದು ಪಡೆದುಕೊಳ್ಳುವ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ.
 ಸದ್ರಿ ಬ್ಯಾಂಕ್ ಸರ್ವ ಧರ್ಮ ಸಹಿಷ್ಣುತೆಯ ಕೇಂದ್ರವಾಗಿ ಕೆಲಸ ನಿರ್ವಹಿಸುತ್ತಿದೆ.
 ಸದ್ರಿ ಯೋಜನೆಯಲ್ಲಿ ಪ್ರತಿ ತಿಂಗಳು ಆಯ್ದ ಫಲಾನುಭವಿಗಳಿಗೆ 4 ಕೆ.ಜಿ ಅಕ್ಕಿ, 1 ಕೆ.ಜಿ ಗೋದಿ ಹಿಟ್ಟು ಮತ್ತು 1 ಕೆ.ಜಿ ಅಯೋಡಿನ್ ಯುಕ್ತ ಉಪ್ಪನ್ನು ಒಂದು ವರ್ಷದವರೆಗೆ ನೀಡಲಾಗುತ್ತದೆ.

ಸದ್ರಿ ಯೋಜನೆಯಲ್ಲಿ ಸುಮಾರು 58 ಮಂದಿ ಮಹಿಳೆಯರು ಫಲಾನುಭವಿಗಳನ್ನು ಅನಾಜ್ ಬ್ಯಾಂಕ್ ಗುರುತಿಸಿ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ನೀಡುತ್ತಿದೆ. ಇವರಲ್ಲಿ 5 ಮಂದಿ ವಿಚ್ಛೇದಿತರು, ಹದಿಮೂರು ಮಂದಿ ವಿಧವೆಯರು, ಒಬ್ಬರು ಪತಿಯಿಂದ ಪರಿತ್ಯಕ್ತಳಾದ ಮಹಿಳೆ, 4 ಮಂದಿ ಅಂಗವಿಕಲರು ಹಾಗೂ 35 ಮಂದಿ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವವರು. ಹೀಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅನ್ನ ದಾಸೋಹವನ್ನು ಮಾಡುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಭಾರತದ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರು ಸದ್ರಿ ಬ್ಯಾಂಕ್‌ಗೆ ಕನಿಷ್ಠ 5 ಕೆ.ಜಿ ಆಹಾರ ಧಾನ್ಯವನ್ನು ದಾನವಾಗಿ ನೀಡುವ ಮೂಲಕ ಸದ್ಯದಲ್ಲೇ ಖಾತೆಯನ್ನು ತೆರೆಯಲಿದ್ದಾರೆ.

ಹಸಿದವರಿಗೆ ಅನ್ನ ಕೊಡಬೇಕೆಂಬ ಕಳಕಳಿ ಜನ ಸಾಮಾನ್ಯರಲ್ಲಿ ಇದ್ದರೂ ಸಂಘ-ಸಂಸ್ಥೆಗಳ, ಸರಕಾರದ ವಿವಿಧ ಕಾರ್ಯಕ್ರಮಗಳ ಮೂಲಕ ಸಹಾಯ ಹಸ್ತ ನೀಡಿದಾಗ ಆ ದಾನವು ಸದ್ಭಳಕೆಯಾಗುತ್ತಿದೆಯೇ ಎಂಬುದರ ಉತ್ತರ ಶೂನ್ಯ ಎಂಬ ಭಾವನೆ ಬಹುತೇಕ ಮಂದಿಯಲ್ಲಿ ಇದೆ. ಆದರೆ ಅನಾಜ್ ಬ್ಯಾಂಕ್ ಒಂದು ಮುಕ್ತ ಅವಕಾಶವಾಗಿದ್ದು ಪಾರದರ್ಶಕವಾಗಿ ಸಹಾಯ ಹಸ್ತ ನೀಡಲು ಒಂದು ಮುಕ್ತ ಅವಕಾಶ ಜೊತೆಗೆ ಸದ್ಭಳಕೆಯ ವಿವರವು ಸಮರ್ಪಕವಾಗಿ ತಿಳಿಯುವುದರಿಂದ ಬಹುತೇಕ ಜನರಲ್ಲಿ ಆಶಾಭಾವನೆ ನೀಡುತ್ತದೆ. ಒಂದು ಸಮಾಜದ ಆರೋಗ್ಯಕರ ಬೆಳವಣಿಗೆಗೆ ವೇದಿಕೆಯಾಗಿದೆ.

ಉತ್ತರ ಪ್ರದೇಶದ ಅತ್ಯಂತ ಬರಪೀಡಿತ ಪ್ರದೇಶವಾದ ಉತ್ತರಖಾಂಡ್‌ನಲ್ಲಿ ಹಾಗೂ ಭಾರತ ದೇಶದಾದ್ಯಂತ ಅನಾಜ್ ಬ್ಯಾಂಕ್‌ನ್ನು ವಿಸ್ತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ವಿಶಾಲ್ ಭಾರತ್ ಸೇವಾ ಸಂಸ್ಥೆಯ ಸ್ಥಾಪಕರು ಹಾಗೂ ಅನಾಜ್ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಡಾ|| ರಾಜೀವ್ ಶ್ರೀವಾತ್ಸವ್ ರ ಪ್ರಕಾರ “ಈ ಬ್ಯಾಂಕ್ ಸಾಮಾಜಿಕ ಸಾಮರಸ್ಯ ಹಾಗೂ ಭ್ರಾತೃತ್ವವನ್ನು ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯಲ್ಲಿ ಸುಮಾರು 80 ಕುಟುಂಬಗಳು ಫಲಾನುಭವಿಗಳಾಗಿದ್ದು ಕೀನ್ಯಾ ಹಾಗೂ ಸಿಂಗಾಪುರದಂತಹ ವೀದೇಶಗಳಿಂದಲೂ ಆಹಾರ ಧಾನ್ಯಗಳು ಠೇವಣಿಯಾಗಿ ಬರುತ್ತಿದೆ.” ಎನ್ನುತ್ತಾರೆ ಹಾಗೂ ಅನಾಜ್ ಬ್ಯಾಂಕಿನ ಪ್ರಬಂಧಕಿಯಾದ ನಿಧಿ ತ್ರಿಪಾಠಿಯ ಹೇಳುವಂತೆ “ಸದ್ರಿ ಬ್ಯಾಂಕ್ ಮೂಲಕ ಆಹಾರ ಧಾನ್ಯಗಳ ಜೊತೆ ಜೊತೆಗೆ ಹಣ್ಣು ತರಕಾರಿಗಳು ಹಾಗೂ ಸಾಂಬಾರ ಪದಾರ್ಥಗಳನ್ನು ವಿತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ.” ಈ ಯೋಜನೆಯನ್ನು ವಿಶಾಲ್ ಭಾರತ್ ಸೇವಾ ಸಂಸ್ಥಾನವು ನವರಾತ್ರಿಯ ದಿನ ಉತ್ತರ ಪ್ರದೇಶದ ವರುಣಾನಗರ ಕಾಲೋನಿಯ ಹುಕುಲ್ ಗಂಜ್ ಪ್ರದೇಶದಲ್ಲಿ “ಪೇಟ್ ಭರೋ” (ಹೊಟ್ಟೆ ತುಂಬಿಸು) ಎಂಬ ಅಭಿಯಾನದ ಮೂಲಕ ಪ್ರಾರಂಭಿಸಿದ್ದು ಆ ಒಂದು ದಿನದಲ್ಲೇ 688 ಕೆ.ಜಿ ಆಹಾರ ಧಾನ್ಯವನ್ನು ಸಂಗ್ರಹಿಸಲಾಗಿತ್ತು. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರವು ಅತ್ಯಂತ ಪ್ರಮುಖವಾದ ಅತ್ಯವಶ್ಯಕತೆಯಾಗಿದ್ದು ಜಾಗತೀಕರಣದ ಧಾವಂತದಲ್ಲಿ ಸಂಪತ್ತು ಉಳ್ಳವರಲ್ಲೇ ಕ್ರೋಢಿಕರಣವಾಗುತ್ತಿದೆ. ಹಾಗೂ ಅದೆಷ್ಟೋ ಮಂದಿಗೆ ಅನ್ನದ ಮೇಲೆ ತಮ್ಮ ಹೆಸರನ್ನೇ ಬರೆದಿರದಂತಹ ಶೋಚನೀಯ ಸನ್ನಿವೇಶಗಳನ್ನು ಕಾಣಬಹುದಾಗಿದೆ. ಪೌಷ್ಠಿಕ ಆಹಾರ ಒದಗಣೆ ಒಂದು ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿಯಾಗಿದ್ದು ಇದನ್ನು ನಿರ್ವಹಿಸುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲದೇ ಸಂಘ ಸಂಸ್ಥೆಗಳು ಹಾಗೂ ಜನ ಸಾಮಾನ್ಯರಾಗಿ ನಮ್ಮೆಲ್ಲರ ಕರ್ತವ್ಯವೂ ಹೌದು. “ಅನ್ನದಾತೋ ಸುಖೀ ಭವ” ಎಂಬ ಮಾತಿನಂತೆ 9 ಮಂದಿ ಹುಡುಗಿಯರ ಮೂಲಕ ಸ್ಥಾಪಿತವಾದ ಅನಾಜ್ ಬ್ಯಾಂಕ್ ಹಸಿವು ಮುಕ್ತ ದೇಶವನ್ನಾಗಿಸಲು ಹೊರಟಿದೆ, ಈ ಮೂಲಕ ಬ್ಯಾಂಕ್‌ನ ಆಶಯವು ಈಡೇರಿಕೆಯಲ್ಲಿ ನಮ್ಮೆಲ್ಲರ ಸಹಕಾರವು ಅಗತ್ಯವಾಗಿದೆ. ಅನಾಜ್ ಬ್ಯಾಂಕಿನ ಪ್ರಯತ್ನಕ್ಕೆ ಶುಭವಾಗಲೆಂದು ಒಮ್ಮೆ ಹಾರೈಸೋಣ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ & ಅಂಚೆ,
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ:9742884160

Related post