ಹೀಗೊಂದು ಪ್ರೇಮದ ಗಜ಼ಲ್
ಬಾಳಲಿ ನಿನ್ನಂತೆ ನಂಗೆ ಯಾರಿಲ್ಲ
ಹಾಗಾಗಿ ನಿನ್ನಲೇ ನನ್ನ ಮನಸೆಲ್ಲಾ..!
ಹೃದಯದ ತಂತಿಯ ನೀ ಮೀಟಿದೆ
ಆ ಕ್ಷಣದಿಂದ ನಿನ್ನಲ್ಲೇ ಮನ ನಾಟಿದೆ..!
ಮಳೆಬಿಲ್ಲಿನ ಬಣ್ಣವಿದೆ ನಿನ್ನ ಪ್ರೀತಿಯಲಿ
ಅದಕೇ ನಿನ್ನ ಹೆಸರಿದೆ ನನ್ನ ಉಸಿರಿನಲಿ..!
ಬುವಿಯಲಿ ಬಾನಲಿ ಎಲ್ಲೆಲ್ಲೂ ನೀನೇ
ಸವಿಪ್ರೀತಿಯ ಹೆಸರು ಮತ್ತೆ ಇದಕೇ ತಾನೆ..!
ಇಳಿಸಂಜೆಯ ಹೊತ್ತು ನೀ ಬರುವೆ ಕನಸಿನಲಿ
ಶಾಶ್ವತದಿ ನಿ ನೆಲೆಸಿಹೆ ನನ್ನ ಮನಸಿನಲಿ..!
ಅರಿವಾಗಿದೆ ಆತ್ಮಕೆ ನಿನ್ನ ಪ್ರೇಮದ ಬಂಧುರ
ನೀನಾಗಿಹೆ ನನ್ನ ಬಾಳಲಿ ನಗುವ ಸಿಂಧೂರ..!
ಚಿಗುರು ವೀಳ್ಯೆಯ ಸವಿ ನಿನ್ನ ಒಲವಲಿದೆ
ಸಂತಸವದು ನಿನ್ನ ಗುಳಿಕೆನ್ನೆಯ ಚೆಲುವಲಿದೆ..!
ಮನಸು ದ್ರವಿಸಿದೆ ನಿನ್ನ ಒಲವ ಸ್ಪಂದನಕೆ
ಹಾತೊರೆದಿದೆ ಮನ ಜೀವಾತ್ಮಬಂಧನಕೆ..!
ಜನುಮಗಳ ಕಾಯುವಿಕೆ ಫಲ ನೀಡಿದೆ
ಪ್ರೀತಿ ಅಮರವಾಗಿರಲೆಂದು ಮನಸು ಬೇಡಿದೆ..!
ನನಗೆ ಬೇಡ ಆ ಶಾಹಜಾನಿನ ಭವ್ಯ ತಾಜಮಹಲು
ನಿ ನನ್ನ ಬಾಳಲಿದ್ದರೆ ನನಗಿಲ್ಲ ಯಾವ ದಿಗಿಲು..!
ಏನಿರಲೇನಂತೆ ನಿನ್ನ ಪ್ರೇಮದ ಮುಂದೆಲ್ಲವೂ ಶೂನ್ಯ
ನನ್ನ ಬದುಕಿದು ನಿನ್ನಿಂದಲೇ ಆಗಿದೆ ಮಾನ್ಯ..!
ಸುಮನಾ ರಮಾನಂದ