ಹೆಣ್ಣು ನೋಡಲು ದಂಡಯಾತ್ರೆ!

ಗೌತಮ್ ಇದೀಗ ಹೆಣ್ಣು ನೋಡಲು ಪುನರಪಿ ಹೊರಡುವವನಿದ್ದಾನೆ. ಆದರೆ, ಈ ‘ಗೌತಮ’ನ ವಿಷಯಕ್ಕೆ ನಂತರ ಹೊರಳಿ ಬರೋಣ. ಪ್ರಸ್ತುತ ಹೀಗೆ ಹೆಣ್ಣು ನೋಡಲು ಹೋಗುವ ಪದ್ಧತಿಯನ್ನು ಯಾರು, ಯಾವ ಶತಮಾನದಲ್ಲಿ ಹುಟ್ಟುಹಾಕಿದರೋ ನಾನಂತೂ ಕಾಣೆ. ಅಂಥದ್ದರ ಬಗ್ಗೆ ಅಕಸ್ಮಾತ್ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖ ಏನಾದರೂ ಇದ್ದರೆ, ಅದರ ಬಗ್ಗೆ ಸಹ ನಾ ಓದಿದ ಜ್ಞಾಪಕ ಇಲ್ಲ, ಹಾಗಾಗಿ ನಾನರಿಯೆ. ಹಾಗೂ, ಈ ತರಹ ಒಂದು ‘ಉನ್ನತ ನಾಗರಿಕ’ ಪದ್ಧತಿ ಹೊರದೇಶಗಳಲ್ಲೂ ಇದ್ದರೆ, ಅದರ ಬಗ್ಗೆ ಸಹ ಜ್ಞಾನವಿರದವನು ನಾನು. ಇಂಥ ಒಂದು ಜಿಜ್ಞಾಸೆಯ ಅಂತರಂಗ ಶೋಧಿಸುವಷ್ಟು ಸಮಯದ ಅಭಾವ ಕೂಡ ನನಗಿದೆ. ಆದರೆ ಈ ಮಹತ್ತರವಾದ ಪ್ರಕ್ರಿಯೆಯಲ್ಲಿ ನನ್ನ ಅರಿವಿಗೆ ಇದುವರೆಗೂ ಅನರ್ಥವಾಗಿಯೇ ಉಳಿದಿರುವುದೇನು ಅಂದರೆ, ಏಕೆ ಯಾವಾಗಲೂ ‘ಹೆಣ್ಣು ನೋಡುವ’ ಸಂಪ್ರದಾಯ ಮಾತ್ರ ಇದೆ? ‘ಗಂಡು ನೋಡುವ’ ಸಂಪ್ರದಾಯ ಕೂಡ ಇದ್ದು, ಹೆಣ್ಣು ಮತ್ತು ಹೆಣ್ಣಿನ ಕಡೆಯವರು ಹೋಗುವ ಪದ್ಧತಿ ಏಕಿಲ್ಲ ಎಂಬ ಕಠಿಣ ಯಕ್ಷಪ್ರಶ್ನೆ!

ಇನ್ನು ಈ ಗೌತಮ! ಇವನ ಹೆಸರೂ ಸಹ ಗೌತಮ ಆದರೂ, ಆ ಗೌತಮ ಮಹೋನ್ನತನಿಗೂ ಈತನಿಗೂ ಹೆಸರೊಂದಲ್ಲದೆ ಉಳಿದೆಲ್ಲ, ಯಕಃಶ್ಚಿತ್ ಕಟ್ಟಿರುವೆಗೂ ಆನೆಗೂ ಇರುವಷ್ಟೇ ವ್ಯತ್ಯಾಸ; ಅಥವ ಇನ್ನೂ ಅಗಾಧ! ತನ್ನ ಪ್ರೀತಿಯ ಯಶೋಧರೆ ಮತ್ತು ರಾಹುಲನನ್ನೇ ತೊರೆದು ಜ್ಞಾನೋದಯ ಅರಸಿ ಹೊರಟ ಆ ಮಹಾತ್ಮನಿಗೆ ಖಂಡಿತ ಈ ಇವನನ್ನು ಹೋಲಿಸಕೂಡದು. ಏಕೆಂದರೆ ಈತ ಸ್ತ್ರೀಕೈ ಅರಸಿ, ಥೇಟ್ ‘ಘಸ್ನಿ ಮುಹಮ್ಮದ್’ ಥರ, ಅವನಷ್ಟು ಸಲ ಅಲ್ಲದಿದ್ದರೂ, ಆತನ ಸ್ಟೈಲಿನಲ್ಲೇ ಒಂದು ತೆರನಾದ ‘ಹೆಣ್ದಂಗೆ’ (ಹೆಣ್ಣು ಅರಸಿ ಹೊರಟ ದಂಗೆ)ಯತ್ತ ಸದ್ಯ ದಂಡಯಾತ್ರೆ ಕೈಗೊಳ್ಳುತ್ತಿರುವುದು, ನಿಖರವಾಗಿ ಇದು ಹನ್ನೆರಡನೇ ಬಾರಿ!

ಇದುವರೆಗೆ ನೋಡಿದ್ದ ಡಜನ್ ಗೆ ಒಂದೇ ಒಂದು ಕಮ್ಮಿ ಪೈಕಿ, ಗೌತಮ ಇಷ್ಟ ಪಟ್ಟ ಹುಡುಗಿ ಅವನಮ್ಮನಿಗೆ ಆಗದು, ಅವರಿಬ್ಬರಿಗೂ ಒಪ್ಪಿದ್ದು ಆತನ ಇನ್ನಿಬ್ಬರು ಗಯ್ಯಾಳಿ ಸಹೋದರಿಯರಿಗೆ ಆಗಿ ಬರುವುದೇ ಇಲ್ಲ! ಇದೆಲ್ಲದರ ಮಧ್ಯೆ ಅಪ್ಪ ಎಂಬ ಪಾಪದ ಕೂಸಿಗೆ ‘ಒಪೀನಿಯನ್ನೇ’ ಇಲ್ಲ. ಇದ್ದರೂ, ಚಂಡು ಹಿಡಿದು ಆಟದ ಮೈದಾನದೊಳಗೆ ಎಸೆವವರ ಬಗ್ಗೆ ಯಾರಿಗೆ ತಾನೆ ಆಸಕ್ತಿ, ಅಲ್ಲವೇ? ಹಾಗೆ ಈ ಅಪ್ಪ ಎಂಬ ಅಶ್ವತ್ಥಪ್ಪನವರ ಬಾಲ್ ಪಿಕ್ಕರ್ ಪರಿಸ್ಥಿತಿ! ಅವರು ಬಾಯಿಯೇ ಬಿಡುವುದಿಲ್ಲ; ಬಿಟ್ಟರೂ ಕೇಳುವ ಕಿವಿ ಬೇಕಲ್ಲ! ಹೀಗೆ “ಅವರ್ಬಿಟ್ಟು ಇವರ್ಬಿಟ್ಟು ಅವಳೆಲ್ಲಿ ಇಹಳು”? ಅನ್ನುವ ಆಟದಲ್ಲಿ ಎಲ್ಲರೂ ಮಗ್ನ.
ಆದರೆ, ಬಡಪಾಯಿ ಹೆಣ್ಣು ಮತ್ತು ಆ ಹೆಣ್ಣು ಹೆತ್ತ ಆ ‘ಪಾಪ’ದ ಜೀವಿ! ಅಂಥ ಅನೇಕ ಜೀವಿಗಳು! ಅವರ ಗತಿ? ಗೌತಮನಿಗೂ ಒಬ್ಬಳು ‘ಸಹೋದರಿ’ ಇರುವುದು ತಕ್ಷಣಕ್ಕೆ ಆತನಿಗಾಗಲೀ, ಆತನ ಮನೆಯವರಿಗಾಗಲೀ ಅವರ ಅನುಕೂಲಕ್ಕೆ ತಕ್ಕ ಥರ ಮರೆತಿದೆ! ಇಂಥ ಮರೆವಿನ ಖಾಯಿಲೆ ಅನೇಕಾನೇಕ ಮನೆಗಳಲ್ಲಿ ಮನೆಮಾಡಿದೆ! ಸದ್ಯ ಅದು ಬೇರೆ ವಿಚಾರ.

ಇಷ್ಟಾದರೂ ಗಂಡು ಹಾಗೂ ಗಂಡಿನ ಬಳಗ ಹೆಣ್ಣು ನೋಡಲು ಹೋಗುವುದು, ಆಗ ಆ ಹೆಣ್ಣು ತಿಂಡಿ ಕಾಫಿ ಶಾಸ್ತ್ರ ಮಾಡಿ ಗಂಡನ್ನು ಕ್ಷಣವೊಂದು ಕ್ಷಣ ಮಾತ್ರ ನೋಡಿ, ಒಳ ಓಡಿ ಅಷ್ಟಕ್ಕೇ ತೃಪ್ತಿ ಪಡುವುದು; ಹಾಗೆಯೇ, ಅಷ್ಟರಲ್ಲೇ ಆ ಗಂಡು ಸಹ, ಆ ಹೆಣ್ಣಿನ ಎಲ್ಲ ಅಳತೆಗಳ ಒಂದು ಅಂದಾಜು ತೀರ್ಮಾನ ಮಾಡುವುದು; ಹಾಗೂ ಇಬ್ಬರೂ ತಂತಮ್ಮ ಬಾಳ ಸಂಗಾತಿ ಬೇಕೋ ಬೇಡವೋ ತಿಳಿಸುವುದು ಮುಂತಾಗಿ… ಅಥವ ಆಗಲೇ ಹೇಳಿದ ಹಾಗೆ, ಅಕಸ್ಮಾತ್, ಅಂಥದೊಂದು ವಿರುದ್ಧ ಸಂಪ್ರದಾಯ ಇದ್ದು, ಹೆಣ್ಣಿನ ಬಳಗ ಹೆಣ್ಣಿನ ಸಮೇತ ಗಂಡು ನೋಡಲು ಹೋಗುವುದು, ಮತ್ತು ಮೊದಲೇ ಅರುಹಿದ ಎಲ್ಲ ಪ್ರಕ್ರಿಯೆಗಳೂ ಪುನರಾವರ್ತಿತವಾಗುವುದು ಎಂದಾದರೆ, ಅಂಥ ಅದಲು-ಬದಲು ದೃಶ್ಯದಲ್ಲಿ, ಗಂಡು ಕಾಫಿ ತಿಂಡಿ ಕೊಡುತ್ತಾನೋ ಅಥವ ಆ ಮನೆಯ ಹೆಂಗಸರಲ್ಲಿ ಯಾರಾದರೂ ಆ ಸೀನ್ ನಲ್ಲಿ ಪಾರ್ಟ್ ಮಾಡುವರೋ ಎಂಬುದು, ಸದ್ಯ ಉತ್ತರ ಇರದ ಪ್ರಶ್ನೆ! ಅಥವ, ಇವೆಲ್ಲ ಬೇಡವೇ ಬೇಡ, ಬದಲಿಗೆ ಆಧುನಿಕವಾಗಿ ಎರಡೂ ಮನೆಯವರು ತೀರ್ಮಾನ ಕೈಗೊಂಡು, ಒಟ್ಟಿಗೆ ಯಾವುದಾದರೂ ಒಳ್ಳೆಯ ಹೋಟೇಲಲ್ಲಿ ತಿಂಡಿ ಅಥವ ಊಟ ಮಾಡುತ್ತಾ ಏಕೆ ನೋಡುವ, ಮಾತನಾಡುವ ಹಾಗಾದರೆ (ಗಂಡು ಹೆಣ್ಣು ಕೂಡ, ಎಲ್ಲ ಇಚ್ಛೆಪಟ್ಟರೆ, ಏಕಾಂತದಲ್ಲಿ ತಂತಮ್ಮ ಮನಸ್ಸುಗಳ ಸುತ್ತಿದ ಟೇಪ್ ಗಳನ್ನು ಬಿಚ್ಚಿಕೊಂಡು ಬಯಲಾಗಲೂ ಸಾಧ್ಯ!) ಅದಿನ್ನೂ ಉತ್ತಮ ಅಷ್ಟೇ ಅಲ್ಲ, ಹೆಣ್ಣು ಗಂಡಿನ ತಿಂಡಿ ತಟ್ಟೆ ಪೇಚಾಟ ಕೂಡ ತಪ್ಪುತ್ತದೆ! ಆದರಿಲ್ಲೊಂದು ಪ್ರಶ್ನೆ. ಆ ಹೋಟೆಲ್ ಬಿಲ್ ಯಾರ ‘ಸ್ವತ್ತು’? ಸದ್ಯ ಇಲ್ಲಿ ಅದು ಅಮುಖ್ಯ…)

ಬ್ರೋಕರ್ ಪ್ರವೇಶವಾಗಿ ಆತನಿಗೆ “ತಷ್ರೀಫ್ ರಖೀಯೆ” ಅಂತ ಯಾರೂ ಹೇಳದೇ ಕೂಡ, ಆತ ಕೂತ ಸೋಫಾ ದಿಢೇರನೆ ಇಂಚುಗಟ್ಟಲೆ ಕೆಳಗಿಳಿದು ಆಗಿಹೋಗಿತ್ತು. ಇನ್ನೂ ಮನೆ ಜನರ ಮೇಕಪ್ ರೂಮಿನ ಕೆಲಸ ಜರುಗುತ್ತಲೇ ನಡೆದಿತ್ತು.
ಈತ ಹೊಸ ಬ್ರೋಕರ್. ಹಳಬರೆಲ್ಲ ಇವರಿಗೆ ಹೆಣ್ಣು ತೋರಿಸುವ ಕಾಯಕದಲ್ಲಿ ಹೈರಾಣಾಗಿ, ಒಬ್ಬೊಬ್ಬರಾಗಿ ಗುಡ್ ಬೈ ಹೇಳಿ ರಂಗದಿಂದ ನಿರ್ಗಮಿಸಿದ್ದರು!

“ನೀವೇನೇ ಅಂದ್ಕೊಳಿ ಅಸ್ವತ್ತಪ್ಪ, ನಿಮ್ಮುಡ್ಗ ಒಳ್ಳೆ ಸಿನ್ಮಾ ಈರೋ ತರ ಅವ್ರೆ…ಕೈ ತೊಳ್ಕೊಂಡ್ ಮುಟ್ಟೋ ಅಂಗೆ… ಅಂಗೇ ಅವ್ರತ್ರಾನೂ
ಏಳೂ ಆಗದೆ…” ಹೀಗೆ, ಆರಂಭಿಸಿದ ಬ್ರೋಕರ್, ಅದೂ ಇದು ಮಾತಾಡಿ, ಕೊನೆಗೆ, ತನಗೆ ಇನ್ನೂ ಮೂರ್ನಾಲ್ಕು ಕಡೆ ಈ ತರಹದ್ದೇ ಕೆಲಸ ಇದೆ ಅಂತ ಹೇಳ್ತಾ, ಪರೋಕ್ಷವಾಗಿ ವರಾತ ಆರಂಭಿಸಿದ.

ಆ ಬ್ರೋಕರ್ ಏನೋ ಹೊಟ್ಟೆ ಪಾಡಿಗೆ ಹೇಳಿದ; ಹಾಗಂತ ಎಲ್ಲರೂ ಸಿನಿಮಾ ‘ನಕ್ಷತ್ರ’ಗಳೇ ಆಗಿಬಿಟ್ಟರೆ, ಮನುಷ್ಯರನ್ನು ಎಲ್ಲಿ ಅಂತ ಹುಡುಕೋದು? ಹೌದು, ಈ ರೀತಿ ಸಿನಿಮಾದವರಿಗೋ ಅಥವ ಇಂತಹ ಇನ್ನಾರಿಗೋ ಏಕೆ ಹೋಲಿಸುವ ವಾಡಿಕೆ! ಹಾಗಾದರೆ ಸಿನಿಮಾ ರಂಗ ಅಲ್ಲದೆ, ಹೊರಗೆ ಅವರಿಗಿಂತ ಸುಂದರಾಂಗರು ಇಲ್ಲವೇ? ಖಂಡಿತ ಅವರಿಗಿಂತ ಇನ್ನೂ ಅನೇಕ ಪಟ್ಟು ಚೆನ್ನಾಗಿ ಕಾಣುವವರೂ ಇದ್ದಾರೆ. ಆದರೆ ಸದವಕಾಶ ಎಲ್ಲರ ಮನೆ ಹೊಸ್ತಿಲು ತುಳಿಯುವುದೇ? ಅದೇ ರೀತಿ ಸಿನಿಮಾ ರಂಗದಲ್ಲಿ ಸಹ ಮತ್ತೆ ಇನ್ನೊಮ್ಮೆ ನೋಡಲೇ ಕೂಡದು ಅನ್ನುವವರೂ ಇಲ್ಲವೇ? ಗುನ್ನ ಮುಖ, ಮುಳ್ಳುಮುಖ, ವಕ್ರಮುಖ ಮುಂತಾದವರೂ ಇಲ್ಲವೇ? ಅಷ್ಟೇ ಏಕೆ, ಅವರವರ ಬಣ್ಣದ ವೈವಿಧ್ಯದ ಕಡೆ ಯೋಚಿಸದಿರುವುದೇ ಉತ್ತಮ.ಆದರೆ ಅವರ ಸಾಧನೆ, ಪ್ರತಿಭೆ ಯಾರದ್ದು?
ಅಥವ ಬೇರೆ ಇನ್ನಿತರ ವೃತ್ತಿಗಳಲ್ಲೂ ಮತ್ತೆ ಮತ್ತೆ ನೋಡಬೇಕೆನಿಸುವಂಥ ಜನರಿಲ್ಲವೇ…? ಅಥವ ಹಾಗೆ ಹೋಲಿಕೆ ಬೇಕೇ ಬೇಕೆಂದರೆ ದೇವೇಂದ್ರನಿಗೋ ಅಥವ ದೇವಗಣದ ಇನ್ನಾರೋ ಸ್ವಪ್ನ ಸುಂದರರಿಗೋ, ಹಾಗೆಯೇ ಹೆಣ್ಣನ್ನು ರಂಭೆ-ಊರ್ವಶಿಯರಿಗೋ ಮಹಾಲಕ್ಷ್ಮಿಗೋ ಏಕೆ ಹೋಲಿಸಿ ನೋಡಬಾರದು, ಅಲ್ಲವೇ? ಮನುಷ್ಯನನ್ನು ಮನುಷ್ಯರಿಗಷ್ಟೇ ಹೋಲಿಕೆ ಮಾಡಬೇಕೆಂಬ ಕಟ್ಟಳೆ ಏನೂ ಇಲ್ಲವಲ್ಲ! ಆ ದೇವತೆಗಳ, ಅಂಥ ರೂಪದರ್ಶಿಗಳ ಚಿತ್ರಗಳನ್ನೂ ಸಹ ಬಿಡಿಸಿದ್ದು ಕೂಡ ಮಾನವನೇ: ಅದು ಬೇರೆ ವಿಷಯ.
ನಾವೇನೋ ನಮ್ಮ ದೇಶದ ಸಿನಿಮಾದ ಹೀರೋಗಳಿಗೋ ಅಥವ ಹಾಲಿವುಡ್ ಸ್ಟಾರ್ ಗಳಿಗೋ ಹೋಲಿಕೆ ಮಾಡಬಹುದು; ಆದರೆ ಅಲ್ಲಿ ಸಹ ಬೇರೆ ರೀತಿ ಜನ ಇಲ್ಲವೇ. ಅದೇ ಹಾಲಿವುಡ್ ನಲ್ಲಿ ‘ಸಿಡ್ನಿ ಪಾಯ್ಟರ್’ ಅಂತಹ ಪ್ರಬುದ್ಧ ಆಫ್ರಿಕನ್ ನಟ ಇದ್ದ ಅಲ್ಲವೇ? ಈಗಲೂ ಅಂಥ ಕಪ್ಪು ಜನ, ಅನೇಕ ಸುಂದರಿಯರಿಗೆ ಬಹುಶಃ ಹಿಡಿಸದ, ಆದರೆ ನಟನೆಯಲ್ಲಿ ಅಪ್ರತಿಮರಾದ ಅನೇಕರಿಲ್ಲವೆ? ಇನ್ನು ಆಫ್ರಿಕಾದ ಇತರ ದೇಶಗಳಲ್ಲಿ ದಪ್ಪ ತುಟಿ ಮತ್ತು ಪ್ರಬಲ ಪಿರ್ರೆ ಇರುವವರೂ ಇಲ್ಲವೇ? ಅವರ ಕೂದಲೂ ಕೂಡ ನಮ್ಮ ರೀತಿ ಅಲ್ಲವೇ ಅಲ್ಲ. ಅಂಥವರಿಗೆ ಏಕೆ ಹೋಲಿಕೆ ಅಸಾಧ್ಯ?

ಅಷ್ಟೇ ಏಕೆ, ಆ ಗೊರಿಲ್ಲಗಳನ್ನು ಕೂಡ ನೋಡಲು ದುಡ್ಡು ತೆತ್ತು ಹೋಗುವ ನಮಗೆ, ಹೀಗೊಂದು ಸವಾಲು… ಅದೇ ಗೊರಿಲ್ಲ ಏನಾದರೂ ಮಾತನಾಡಲು ಕಲಿತಿದ್ದು ಮತ್ತು ನಮ್ಮ ಥರ ಹೆಣ್ಣು ನೋಡುವ ಸಂಪ್ರದಾಯ ರೂಢಿಸಿಕೊಂಡಿದ್ದೇ ಆದರೆ, ಹಾಗೂ ಅದರ ಮುಂದೆ ಹೆಣ್ಣು ಗೊರಿಲ್ಲಾಗಳನ್ನೇ ಅಲ್ಲದೆ ವಿಶ್ವ ಸುಂದರಿಯರನ್ನೂ ಸಾಲುಗಟ್ಟಿ ನಿಲ್ಲಿಸಿದ್ದರೆ ಏನಾಗಬಹುದಿತ್ತು? ಆ ಗೊರಿಲ್ಲಾ ಕೂಡ ಖಂಡಿತವಾಗಿ, ತನ್ನ ಕಣ್ಣಿನ ಬಯಕೆಯ, ತನ್ನದೇ ಜಗತ್ತಿನ “ಸುಂದರ” ಗೊರಿಲ್ಲಾವನ್ನು ಮಾತ್ರ ಆಯ್ಕೆ ಮಾಡುತ್ತಿತ್ತಲ್ಲದೆ, ನಮ್ಮ ವಿಶ್ವಸುಂದರಿಯನ್ನೋ ಅಥವ ಸಿನಿಮಾ ‘ಸ್ಟಾರಿಣಿ’ಯನ್ನೋ ಮೂಸಿ ಕೂಡ ನೋಡುತ್ತಿರಲಿಲ್ಲ! ನೋಡಿ ಇದು ಎಷ್ಟು ನಿಷ್ಠುರ ಸತ್ಯ! ಇದೇ ಜಗದೆಲ್ಲ ಜೀವಿಗಳ ವೈವಿಧ್ಯ!

“ಅಲ್ರೀ ಬ್ರೋಕರ್ ಸಾಹೇಬ್ರೇ…” ಅಶ್ವತ್ಥಪ್ಪ ಆರಂಭಿಸಿದ್ದನ್ನು ತಡೆದು, “ಅಲ್ಲಾ ಸಾರ್, ನಂಗೂ ಒಂದ್ ಎಸ್ರೈತೆ. ಚಲುವೇಶ್ ಸಾರ್, ಚಲ್ವೇಶ್!” ಅಂದ ಬ್ರೋಕರ್ ನನ್ನು ಉದ್ದೇಶಿಸಿ, “ನೋಡಿ ಅಲ್ಲೇ ಪ್ರಾಬ್ಲಂ ಇರೋದು. ಬರೀ ಚಲುವ, ಚೆಲುವಯ್ಯ, ಚಲುವಪ್ಪ ಅಂತೆಲ್ಲಾ ಇದ್ದಿದ್ದರೆ ಸುಲಭ ಇತ್ತು. ಈ ಚಲುವೇಶ್ ಸ್ವಲ್ಪ ರಸ್ತೆ ಬಿಟ್ಟಂಗೈತೆ ಅಲ್ವಾ? ಅಲ್ಲೇ ನನಗೆ ಕಷ್ಟ” ಅಷ್ಟರಲ್ಲಿ ಗಂಡು ರೆಡಿ. ಗ್ರೀನ್ ರೂಮಿಂದ ಒಬ್ಬೊಬ್ಬರ ಆಗಮನ ಆರಂಭ… “ಚಲುವಯ್ನೋರೆ, ಇವತ್ತೇ ಆ ಇನ್ನೊಂದ್ ಹೇಳಿದ್ರಲ್ಲ ಅದ್ನೂ ತೋರಿಸ್ಬುಡಿ…” ಅಶ್ವತ್ಥಪ್ಪ ಹೇಳಿದ್ದಕ್ಕೆ, “ನೀವ್ ಮದ್ಲೇ ಏಳ್ಬಾರ್ದಾ…ತಡ್ರಿ ಟೆಲಿಪೋನ್ ಮಾಡ್ನೋಡ್ತೀನಿ…”
ಎಲ್ಲ ಪಾತ್ರಧಾರಿಗಳ ಪ್ರವೇಶವೂ ಆಗಿ, ದಿಬ್ಬಣ ಹೊರ ಹೊರಟಂತೆಯೇ, ಬ್ರೋಕರ್ ಫೋನ್ ಕಿವಿಕಡೆ ಇಟ್ಟುಕೊಂಡೇ ನಡೆದ.

ಈಗಾಗಲೇ ಡಜನ್ ಹುಡುಗಿಯರ ಸಂದರ್ಶನ ಕೈಗೊಂಡಿರುವ ಕುಮಾರ ಕಂಠೀರವನಿಗೆ ‘ಆ ಇನ್ನೊಂದೂ ತೋರಿಸುವಂತೆ ಅಪ್ಪನೇ ಆದೇಶ ನೀಡುವಾಗ, ಯಾರನ್ನು ತಾನೇ ದೂಷಿಸಲಾದೀತು! ಬ್ರೋಕರ್ ತನ್ನ ಕಮಿಷನ್‌ ಕಡೆ ಗಮನ ಹರಿಸಿ, ಎಷ್ಟು ಬೇಕಾದರೂ ತೋರಿಸಲು ರೆಡಿ. ಆದರೆ, ಹೆತ್ತವರ ಒಡಲೊಳಗೆ ಕನಿಷ್ಠ ನೀತಿ ನಿಯಮ ಅಂತ ಬೇಡವೇ? ಗಂಡು ಹೆತ್ತಿದ್ದೇವೆಂಬ ಅಹಂಭಾವದ ಮದ ಹೀಗೆ ಮಾಡಿಸುತ್ತದೆಯೇ? ಅಷ್ಟೇ ಏಕೆ, ಹೆಣ್ಣಿನ ಮನೆಯವರೂ ಸಹ, ತಾವೂ ‘ಅಬಲ’ ಹೆಣ್ಣು ಹೆತ್ತಿದ್ದೇವೆ ಎಂಬ ‘ದೈನ್ಯತೆ’ಯಿಂದ ಎನ್ನಿಸುವಂತೆ ತೋರಿಸಿಕೊಳ್ಳುವ ಬದಲು, ಹೀಗೆ ಡಜನ್ನುಗಟ್ಟಲೆ ಹುಡುಗಿಯರ ಹೊಸ್ತಿಲುಗಳ ಎಡತಾಕಿದ್ದ ಗೌತಮನಂಥ ಅಯೋಗ್ಯ ಗಂಡುಗಳಿಗೆ ತಂತಮ್ಮ ಮನೆ ಬಾಗಿಲು ಮುಚ್ಚಬೇಕೆಂಬ ದಿಟ್ಟತೆ ಪ್ರದರ್ಶಿಸಬಹುದಲ್ಲವೇ? ಆರಂಭದಲ್ಲೇ ಬರುವ ಬ್ರೋಕರ್ ಇಂಥ ವಿಷಯ ಮೊದಲೇ ತಿಳಿಸಿರುವುದಿಲ್ಲವೇ? ಆದರೂ ತಮ್ಮ ಹೆಣ್ಣು ‘ಖರ್ಚಾದರೆ’ ಸಾಕು ಎಂಬ ಪೈಪೋಟಿ ಕತ್ತಿವರಸೆಯಲ್ಲಿ ‘ಗುಂಡಿ’ಗೆ ಬೀಳುವವರು ಈ ಯುಗದಲ್ಲೂ… ಹೌದು, ದಿಟವಾಗಿಯೂ ಇದ್ದಾರೆ ಮತ್ತು ಮುಂದೂ ಇರುತ್ತಾರೆ! ಆದರೆ, ಖರ್ಚಾಗಲು ಹೆಣ್ಣೇನು ಕಾಂಚಾಣಕ್ಕೆ ಅಥವ ಅಂಗಡಿಯ ಮಾರಾಟದ ವಸ್ತುವಿಗೆ ಸಮವೇ? ‘ಒಂದಾದರು ಹೆಣ್ಣು ಅಂತಿರಲಿ’ ಎಂದು ಹಂಬಲಿಸುವವರೂ, ಆ ಹೆಣ್ಣು ಬೆಳೆದು ನಿಂತಾಗ ಹಾಗೆಯೇ ಯೋಚಿಸುತ್ತಾರೆಯೇ?…ಇಷ್ಟೇ ಅಲ್ಲ, ಹೆಣ್ಣು ಮಕ್ಕಳು ಹೆಚ್ಚು ಓದಕೂಡದು ಎಂದು ಫರ್ಮಾನು ಹೊರಡಿಸುವಂಥ ದುರಂತ ಮನಸ್ಥಿತಿ ಇರುವ ಅನೇಕರು ಇನ್ನೂ ಈ ಧರೆಯಮೇಲೆ ಗೂಟ
ಹೊಡೆದುಕೊಂಡು ಇರುವರು. ಅಂಥವರನ್ನು ಏನಾದರೂ ಮಾಡಿ ಬೆಳಕಿನತ್ತ ಕೈ ಹಿಡಿದು, ಇಲ್ಲ ಎಳೆದು, ಕರೆತರಬೇಕೆಂಬ ಮನಸ್ಸೇ ಇಲ್ಲದ ಈ ಸಮಾಜದಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ!

ಗೌತಮನ ಪರಿವಾರ ಅಂತೂ ಮನೆ ಬಿಟ್ಟಾಗಿದೆ. ‘ಕಾಲ’ದ ಎಲ್ಲ ಥರ ಲೆಕ್ಕಾಚಾರ ಕರಾರುವಕ್ಕಾಗಿ ‘ಪ್ರತಿ ಬಾರಿ’ಯ ಹಾಗೆ ಈಗಲೂ ಹಾಕಿ ಆಗಿದೆ. ಮನೆಯ ‘ದಿವಾನಗಿರಿ ಪಟ್ಟ’ದ ಗೌತಮನ ತಾಯಿ ಖುದ್ದು ಜೋಯಿಸರಿಗೆ ಫೋನಾಯಿಸಿ ಆ ವಿಷಯದ ಬಗ್ಗೆ ತಿಳುವಳಿಕೆ ಪಡೆದದ್ದಾಗಿದೆ…ಇನ್ನು ಬಾಕಿ ಉಳಿದಿರುವುದು ಒಂದೇ ಒಂದು… ಹನ್ನೆರಡನೇ ಹೆಣ್ಣನ್ನಾದರೂ ಒಪ್ಪಿ ಬರುತ್ತಾರೋ ಅಥವ ಬರೀ ತಿಂಡಿ ತಿಂದು ಮರಳುತ್ತಾರೋ ಎಂಬ ಪ್ರಶ್ನಾರ್ಥಕ ಚಿಹ್ನೆ…!

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

2 Comments

  • ಕಥೆ ಬಹಳ ಚೆನ್ನಾಗಿದೆ. ಅಭಿನಂದನೆಗಳು ನೀಲಣ್ಣ

  • Superb ! Yes this is reality & should be modified.

Leave a Reply

Your email address will not be published. Required fields are marked *