ವಿವೆರಿಡೀ (Viverridae) ಕುಟುಂಬದ ಕಬ್ಬೆಕ್ಕುಗಳು ಬೆಕ್ಕುಗಳಿಗೆ ಹೋಲಿಕೆ ಕಂಡು ಬಂದರೂ ಮುಂಗುಸಿಗಳಿಗೆ ಹತ್ತಿರದವು, ಉದ್ದ ಶರೀರ ಗಿಡ್ಡ ಕಾಲು, ಪ್ರತಿ ಕಾಲಿಗೆ ಭಾಗಶಃ ಒಳ ಸೇರುವ ಉಗುರುಳ್ಳ ಐದು ಬೆರಳುಗಳಿವೆ, ನೀಳ ತಲೆ ಚೂಪಾದ ಮುಸುಡಿ ಇದೆ, ಇವು ಮಿಶ್ರಹಾರಿಗಳು.
ನಮ್ಮ ರಾಜ್ಯದಲ್ಲಿ ಮೂರು ಜಾತಿಯ ಕಬ್ಬೆಕ್ಕುಗಳನ್ನು ನೋಡಬಹುದು. ಇಂಗ್ಲೀಷಿನಲ್ಲಿ ಇವಕ್ಕೆ ‘Civet‘ ಎಂದು ಕರೆಯುತ್ತಾರೆ.
1) ಸಾಮಾನ್ಯ ಕಬ್ಬೆಕ್ಕು: ‘Asian palm civet‘ ಇದು ರಾಜ್ಯದೆಲ್ಲೆಡೆ ಕಂಡುಬರುತ್ತದೆ, ಮರ ಹಾಗು ನೆಲ ವಾಸಿ, ಮಿಶ್ರಹಾರಿ, ಸಾಮಾನ್ಯ ಮೈಬಣ್ಣ ಬಿಳಿ ಮಿಶ್ರಿತ ಕಪ್ಪು, ರಾತ್ರಿ ಸಂಚರಿಸುವ ಇವು ಪಾಳು ಮನೆ ಮರದ ಪೊಟರೆಯಲ್ಲಿ ವಾಸಿಸುತ್ತದೆ, ಕೆಲವು ಸಲ ಮನೆಗಳಿಗೂ ನುಗ್ಗಿ ದಾಂಧಲೆ ಮಾಡುತ್ತವೆ.
2) ಪುನುಗು ಬೆಕ್ಕು Small Indian civet : ಇದು ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತದೆ, 3 – 4 ಕಿಲೋ ತೂಗುತ್ತವೆ, ಹಳದಿ ಬೂದು ಅಥವಾ ಬೂದುಗಂದು, ಬೆನ್ನ ಮೇಲೆ 4-5 ಕಪ್ಪು ಪಟ್ಟೆಗಳು ಪಕ್ಕದಲ್ಲಿ ಚುಕ್ಕೆಗಳ ಸಾಲು ಇದೆ, ಬಾಲದುದ್ದಕ್ಕೂ ಕಪ್ಪು ಉಂಗುರಗಳಿವೆ. ಇವುಗಳಿಗೆ ದಟ್ಟ ಕಾಡಿಗಿಂತ ಹುಲ್ಲುಗಾವಲು, ಕುರುಚಲ ಕಾಡುಗಳು ಇಷ್ಟ, ಹಳ್ಳ ಹೊಳೆಗಳ ಅಕ್ಕಪಕ್ಕ ಕೃಷಿ ಭೂಮಿಯಲ್ಲೇ ಹೆಚ್ಚಾಗಿ ಕಾಣಿಸುತ್ತದೆ, ಕಪ್ಪೆ, ಏಡಿ, ಇಲಿ, ಹೆಗ್ಗಣ, ಕೀಟ ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ. ಕೆಲವು ಸಲ ಸಾಕಿದ ಕೋಳಿ ಗೂಡುಗಳ ಮೇಲೂ ದಾಳಿ ಮಾಡುತ್ತವೆ. ನೆಲವಾಸಿಗಳಾದ ಇವು ಮೈಯನ್ನು ನೆಕ್ಕಿ ನೆಕ್ಕಿ ಸ್ವಚ್ಚ ಮಾಡಿಕೊಳ್ಳುತ್ತವೆ. ಒಮ್ಮೆಗೆ 4-5 ಮರಿಗಳಿಗೆ ಜನ್ಮ ನೀಡುತ್ತವೆ. ಇವುಗಳ ಜನನಾಂಗದ ಬಳಿ ವಾಸನೆಯನ್ನು ಸುವಾಸನೆ ಸ್ರವಿಸುವ ಗ್ರಂಥಿಗಳಿದ್ದು ಆದರಿಂದ್ದ ಇವುಗಳನ್ನು ಬಂಧನದಲ್ಲಿಟ್ಟು ಪುನುಗನ್ನು ತೆಗೆಯುತ್ತಾರೆ. ಕೃಷಿಯಲ್ಲಿ ವಿಪರೀತ ಕ್ರಿಮಿನಾಶಕ ಹಾಗು ಗದ್ದೆಗಳಲ್ಲಿ ಏಡಿಯನ್ನು ಸಾಯಿಸಲು ಬಳಸುವ ವಿಷ ಇವುಗಳಿಗೆ ಮಾರಕವಾಗಿದ್ದು, ರಸ್ತೆ ಅಪಘಾತಗಳಲ್ಲೂ ಸಾಯುತ್ತವೆ.
3) ಕಂದು ಕಬ್ಬೆಕ್ಕು: Brown palm civet ನಮ್ಮಲ್ಲಿ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿದ್ದು, ಕಪ್ಪು ಮಿಶ್ರಿತ ಕಂದು ಮೈಬಣ್ಣ ಹೊಂದಿದ್ದು, ಬಿಳಿ, ಅಚ್ಚ ಬಿಳಿ ಬಣ್ಣದ ಜೀವಿಗಳನ್ನು ಸಹ ನೋಡಬಹುದು, ಮರವಾಸಿಗಳಾಗಿದ್ದು ಬಹುತೇಕ ಹಣ್ಣುಗಳನ್ನು ಬೀಜ ಸಮೇತ ತಿಂದು ವಿಸರ್ಜಿಸುತ್ತದೆ. ಕಾಡುಗಳಲ್ಲೇ ವಾಸಿಸುವ ಇವನ್ನು ಪಶ್ಚಿಮ ಘಟ್ಟದ ಸಸ್ಯ ವೈವಿಧ್ಯತೆಯ ಸಂರಕ್ಷಕ ಎಂದೇ ಹೇಳಬಹುದು, ಇವು ಹಣ್ಣು ತಿಂದು ವಿಸರ್ಜಿಸುವ ಬೀಜಗಳು ಮೊಳಕೆಯೊಡೆಯುವ ಪ್ರಮಾಣ ಶೇಕಡಾ ನೂರರಷ್ಟು ಇರುತ್ತದೆ. ಕಾಡಿನ ತುಂಬೆಲ್ಲ ಹಣ್ಣಿನ ಮರಗಳ ವೈವಿಧ್ಯತೆಗೆ ಈ ಕಬ್ಬೆಕ್ಕೂ ಪ್ರಮುಖ ಕಾರಣ.ಒಂದು ವೇಳೆ ಪಶ್ಚಿಮ ಘಟ್ಟಗಳಲ್ಲಿ ಇವುಗಳ ಸಂತತಿ ಕುಸಿದರೆ ಕಾಡಿಗೆ ಅಪಾಯ. ಕಾಫಿ ತೋಟಗಳಲ್ಲಿ ಕಾಫಿ ಹಣ್ಣನ್ನು ತಿಂದು ವಿಸರ್ಜಿಸಿದ ಬೀಜಗಳಿಂದ ಅದ್ಬುತ ಸ್ವಾದದ ಸಿವೆಟ್ ಕಾಫಿಯನ್ನು ಸಹ ತಯಾರಿಸುತ್ತಾರೆ. ಮಹರಾಷ್ಟ್ರದಲ್ಲಿ ಒಮ್ಮೆ ಬಿಳಿ ಮೈಬಣ್ಣದ white coated brown palm Civet ಪತ್ತೆಯಾಗಿದ್ದು https://www.researchgate.net/publication/270450056_A_record_of_a_white-coated_Brown_Palm_Civet_Paradoxurus_jerdoni ಲಿಂಕ್ ಬಳಸಿ ಓದಬಹುದು.
ನಮ್ಮ ರಾಜ್ಯದಲ್ಲಿಯೂ ಇವು ಇರುವುದನ್ನು ಕೆಲವರು ನೋಡಿದ್ದಾರೆ, ಆದರೆ ಅಧಿಕೃತವಾಗಿ ಯಾರು ದಾಖಲಿಸಿಲ್ಲ.
4) ಮಲಬಾರ್ ಸಿವೆಟ್: Malabar Civet ಕರಾವಳಿ ಭಾಗದ ಕಾಡುಗಳಲ್ಲಿ ಕಂಡು ಬರುತ್ತಿದ್ದ ಮಲಬಾರ್ ಸಿವೆಟ್ ಸಾಕು ನಾಯಿ ಗಾತ್ರದಲ್ಲಿ ಇರುತ್ತಿತ್ತು, ನೆಲ ವಾಸಿಯಾದ ಇದನ್ನು ಇತ್ತೀಚಿಗೆ ನೋಡಿ ದಾಖಲಿಸಿದವರು ಯಾರು ಇಲ್ಲದ್ದರಿಂದ ಇದರ ವಂಶ ನಾಶವಾಗಿದೆ (Extinct) ಎಂದು ತೀರ್ಮಾನಿಸಲಾಗಿದೆ. ಕೇರಳದ ಹಳ್ಳಿಯೊಂದರಲ್ಲಿ ಇದರ ಚರ್ಮವನ್ನು ವಶಪಡಿಸಿಕೊಂಡಿದ್ದು ಬಿಟ್ಟರೆ ಇದು ಇರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲ.
ಹೆಚ್ಚಿನ ಮಾಹಿತಿಗಳಿಗೆ ಕರ್ನಾಟಕ ಅರಣ್ಯ ಇಲಾಖೆಯ ವೆಬ್ಸೈಟ್ https://aranya.gov.in/aranyacms/(S(yqx5g5mziew0u3rqvheacar1))/Kannada/HomeKannada.aspx ಗೆ ಭೇಟಿ ಕೊಡಿ.
ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್