“ಕಣಿ ಏಳ್ತೀನಮ್ಮ ಕಣಿ” ಅಥವಾ “ಕೊಂಡಮಾಮ-ಕುರ್ರಮಾಮ” ಎಂದು ರಾಗವಾಗಿ ಭವಿಷ್ಯವನ್ನು ಹೇಳುತ್ತಾ ಊರು ಊರು ತಿರುಗುವುವರನ್ನು ನೋಡಿರುತ್ತೀರಿ. ಇವರುಗಳ ಚಟುವಟಿಕೆಗಳು “ನೀಲಿ ಹೊತ್ತಿಗೆ“ಎಂಬ ಜನಪದ ಕಲೆಯ ಭಾಗವಾಗಿದೆ. ಇವರುಗಳು ಹೇಳುವ ಭವಿಷ್ಯ ಹಾಗು ಅವಲಂಬಿಸುವ ಚಿತ್ರಗಳ ಬಗ್ಗೆ ಒಂದು ಅವಲೋಕನ
ನೀಲಿ ಹೊತ್ತಿಗೆ:
ಜನನ-ಮರಣ, ಹಬ್ಬ-ಹರಿದಿನ, ಜಾತ್ರೆ-ಉತ್ಸವ, ಮದುವೆ- ದಿಬ್ಬಣದಂತದ ಸಂದರ್ಭಗಳಲ್ಲಿ, ಕೂರಿಗೆ ಹೂಡಿ, ಬಿತ್ತನೆ ಮಾಡುವ, ಬೆಳೆ ಕೊಯ್ಯುವ, ಗೂಡು ಹಾಕುವ, ಕಣ ಮಾಡುವ, ಹೀಗೆ ಹಲವು ಹಲವಾರು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಹೂರ್ತ ನೋಡುವಂತಹ ನೇಮವನ್ನು ಜನಪದರು ಬೆಳೆಸಿಕೊಂಡು ಬಂದಿದ್ದಾರೆ. ಎಲ್ಲರೂ ನಿತ್ಯದ ಬದುಕು ಸುಖಮಯವಾಗಿರಬೇಕು ಎಂದು ಸಹಜವಾಗಿಯೇ ಬಯಸುತ್ತಾರೆ. ಕೈಗೊಂಡ ಕಾರ್ಯ ನಿರ್ದಿಷ್ಟವಾಗಿ ಸಾಗಿ ಫಲಪ್ರದವಾಗಬೇಕಾದರೆ ಜನಪದರು ನಮಗೆ ಬಂದೆರಗುವ ಕೇಡುಗಳನ್ನು ಮೊದಲೇ ತಿಳಿಯಬಯಸುವುದು ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯ ಸಂಗತಿ. ಈ ಮುಹೂರ್ತ ನೋಡುವ ಹಾಗೆಯೇ ದೇವರನ್ನು ಕೇಳುವುದು, ದೇವರಿಂದ ಹೇಳಿಕೆ ಪಡೆದುಕೊಳ್ಳುವುದು, ಕೊರವಂಜಿಯವರಿಂದ, ಕೊಂಡಮಾಮ ರಿಂದ ಕಣಿ ಕೇಳುವುದು ಮೊದಲಾದವು ಪರಂಪರಾನುಗತವಾಗಿ ಉಳಿದುಕೊಂಡು ಬಂದ ನಂಬಿಕೆಗಳು. ಈ ಒಳಿತು ಮತ್ತು ಕೆಡುಕುಗಳ ಬಗ್ಗೆ ಮುನ್ನೆಚ್ಚರಿಕೆ ಭಾಗವಾಗಿ ತಿಳಿದು ಅವುಗಳನ್ನು ನಿಯಂತ್ರಿಸುವ ಸಲುವಾಗಿ ಕೆಲವು ನಂಬಿಕೆಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಯಾವುದೇ ಕೆಲಸಗಳಿಗೆ ತೊಡಗಿಸಿ ಕೊಳ್ಳುವ ಮುನ್ನ ಶುಭ ವಾರ, ಶುಭ ತಿಥಿ, ಶುಭ ಮುಹೂರ್ತಗಳನ್ನು ನೋಡುವ, ತಮಗೆ ತೋರದಿದ್ದರೆ ತಿಳಿದವರನ್ನು ಹೇಳುವ ಪರಿಪಾಠವನ್ನು ಬೆಳೆಸಿಕೊಂಡು ಬಂದರು ಇದಕ್ಕೆ ಅವರು ನಂಬಿಕೊಂಡು ಬಂದಿರುವ ದೇವ-ದೈವ, ಭೂತ, ಪಿಶಾಚಿ ಮೊದಲಾದ ಅಗೋಚರ ಶಕ್ತಿಗಳು ಕಾರಣವಾಗಿವೆ. ಇಂಥ ನಂಬಿಕೆಗಳಲ್ಲಿ “ನೀಲಿ ಹೊತ್ತಿಗೆ” ನೋಡುವುದು ರೂಢಿಯಲ್ಲಿದೆ.
ಕೆರೆ, ಕೋಟೆ, ಹುಡೆ, ಬಾವಿ ಇತ್ಯಾದಿ ಕಟ್ಟಡಗಳ ಸಮುದಾಯಿಕ ನಿರ್ಮಾಣಗಳಲ್ಲಿಯೂ ತೊಂದರೆಗಳು ಎದುರಾದರೆ, ಸಾಮೂಹಿಕವಾಗಿ ನೀಲಿ ಹೊತ್ತಿಗೆ ನೋಡುವ ಪರಿಪಾಠವಿದೆ. ಜೀವನದಲ್ಲಿ ನೊಂದ, ಸಂಸಾರದಲ್ಲಿ ವೈರಾಗ್ಯ ಮನೋಭಾವ ಪಡೆದ ಜನರೂ ನೋಡುತ್ತಾರೆ. ಅಪ್ರಾಪ್ತ ವಯಸ್ಕರಿಗೆ ಈ ಹೊತ್ತಿಗೆ ನೋಡಲು ಅವಕಾಶವಿಲ್ಲ. ನೀಲಿ ಹೊತ್ತಿಗೆಯ ಕಾರ್ಡುಗಳಲ್ಲಿ ಜನಪದ ಚಿತ್ರಕಲಾವಿದರು ರಚಿಸಿರುವ ವಿವಿಧ ನಮೂನೆಯ ಚಿತ್ರಗಳಿರುತ್ತವೆ. ಈ ಚಿತ್ರಗಳು ತಿಳಿಸಿಕೊಡುವ ಸಾಂಕೇತಿಕ ಭಾವವನ್ನು ಶುಭ ಅಶುಭಕ್ಕೆ ತಿರುಗಿಸಿಕೊಂಡು ಜನಪದರು ಮುನ್ನೆಚ್ಚರಿಕೆ ವಹಿಸುತ್ತಾರೆ.
ನೀಲಿ ಹೊತ್ತಿಗೆಯ ಬಳಕೆ:
ಭವಿಷ್ಯವನ್ನು ತಿಳಿದುಕೊಳ್ಳುವ ಶಿಷ್ಟ ಜ್ಯೋತಿಷ್ಯ ಸಿದ್ಧಾಂತಗಳು ಅರಮನೆ ಗುರುಮನೆಗಳಲ್ಲಿ ಬೆಳೆದಂತೆ, ಪರಿಶಿಷ್ಠ, ಜನಪದರಲ್ಲಿಯೂ ಕಣಿ ಹೇಳುವುದು, ಸೋದಿ ಹೇಳುವುದು, ಕೊಂಡರಾಮರ ಶಾಸ್ತ್ರ, ಗಿಣಿ ಶಾಸ್ತ್ರ, ಹೀಗೆ ಹಲವಾರು ಪ್ರಕಾರಗಳಲ್ಲಿ ಬೆಳೆದಿದೆ. ಈ ನೀಲಿಹೊತ್ತಿಗೆ ಚಿತ್ರಗಳನ್ನು ಗಮನಿಸಿದರೆ, ನೀಲಿಹೊತ್ತಿಗೆ ನೋಡುವುದು ಹಾಗೂ ಕೇಳುವುದು ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ನಾವು ಗ್ರಹಿಸಬಹುದು. ಮಠ ಮಂದಿರಗಳಲ್ಲಿ ಭವಿಷ್ಯ ನೋಡುವವರ ಹಿನ್ನೆಲೆಯಲ್ಲಿ ‘ಹೊತ್ತಿಗೆ ಮಠ’ ಎಂಬ ಪದವು ಬಂದಿರಬೇಕೆನಿಸುತ್ತದೆ. ಹೊತ್ತಿಗೆ ಎಂದರೆ ಪುಸ್ತಕ, ಗ್ರಂಥವೆಂದು ಅರ್ಥ. ‘ನೀಲಿ ಹೊತ್ತಿಗೆ’ಯು ಚಿತ್ರಗಳ ಮೂಲಕ ಭವಿಷ್ಯ ಹೇಳುವ ಗ್ರಂಥ, ಬಹುಶಃ ನೀಲಿ ಬಣ್ಣದಿಂದ ಮಾತ್ರ ವಿವಿಧ ಚಿತ್ರಗಳನ್ನು ರಚಿಸಿಕೊಂಡು ಬಂದಿರುವ ದೀರ್ಘವಾದ ಕಾಲಘಟ್ಟವೊಂದಿರಬೇಕು. ಕಾಲಕ್ರಮದಲ್ಲಿ ವಿವಿಧ ಬಣ್ಣಗಳ ಅನ್ವೇಷಣೆಯಿಂದ ಆಕರ್ಷಿತರಾಗಿ, ಹಲವು ಬಣ್ಣಗಳನ್ನು ಸವರಿ ಚಂದದ ಚಿತ್ರ ತಯಾರಿಕೆ ಹಂತ ಮುಟ್ಟಿರಬೇಕು. ಚಿತ್ರಗಳು ಕಾಲ-ಕಾಲಕ್ಕೆ ವಿನ್ಯಾಸ ಸಂಯೋಜನೆಗಳಲ್ಲಿ, ಅಲಂಕೃತವಾಗಿ ಬದಲಾದರೂ ಮೂಲದಲ್ಲಿ ಬಿದ್ದ ‘ನೀಲಿ ಹೊತ್ತಿಗೆ’ ಎಂಬ ಹೆಸರು ಮಾತ್ರ ಹಾಗೆಯೇ ಉಳಿದುಕೊಂಡಿದೆ. ಅಂದು ಸ್ಥಳೀಯವಾಗಿ ದೊರೆಯುತ್ತಿದ್ದ ಕಾಕಿ ಗಿಡ, ನೇರಳೆ ಯಂತಹ ಗಿಡ, ಮರ, ಬಳ್ಳಿಗಳ ಎಲೆ, ಹೂ ಮತ್ತು ಕಾಯಿಗಳ ರಸಗಳಿಂದ ತಯಾರಿಸಿದ ನೀಲವರ್ಣವನ್ನು ಬಳಸುತ್ತಿದ್ದರು.‘ನೋಡಿದವರಿಗೆ ನೀಲಿ ಹೊತ್ತಿಗೆಯ ಚಿತ್ರಗಳು ಶುಭ, ಅಶುಭವನ್ನು ತಿಳಿಸುತ್ತವೆ. ಅಶುಭ ಪರಿಹಾರಕ್ಕೆ ಹೊತ್ತಿಗೆ ನೋಡುವ ಹೊತ್ತಿಗೆಕಾರರು ವಿಧಿ-ವಿಧಾನ ಹೇಳುವುದುಂಟು. ಹೀಗೆ ಇದೊಂದು ಬದುಕುವ ಹಾದಿ ಹುಡುಕಿದ ವೃತ್ತಿಯಾಗಿ ಕಂಡುಬರುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಬಹುಭಾಗದಲ್ಲಿ ನೀಲಿಹೊತ್ತಿಗೆ ಎಂಬ ಪುಸ್ತಕವು ಸನ್ಯಾಸ ಅಥವಾ ವಿರಕ್ತಿಗೆ ಪರಿವರ್ತಿಸುವ ಪುಸ್ತಕವೆಂಬ ಖ್ಯಾತಿ ಪಡೆದಿದೆ. ವೈರಾಗ್ಯ ಬೋಧನೆಯ ಗ್ರಂಥ ‘ಜ್ಞಾನಸಿಂಧು’ವಿನಲ್ಲಿ ‘ನೀಲಿಹೊತ್ತಿಗೆ’ಯ ಉಲ್ಲೇಖವಿದೆ’ . ಈ ಪುಸ್ತಕವನ್ನು ಮೊದಲಿಗೆ ಗದಗದಲ್ಲಿ ಮುದ್ರಣವಾಗುತ್ತಿದ್ದು ನಂತರದ ಕಾಲಘಟ್ಟದಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ಮುದ್ರಿಸಲ್ಪಟ್ಟವು ಆದರೆ ಹಸ್ತಪ್ರತಿಯ ಮಹತ್ವ ಮುದ್ರಿತ ಸಾಮಗ್ರಿಗೆ ಸಿಗಲಾರದೆಂದು ನನ್ನ ಅಭಿಪ್ರಾಯ.
ಚಿತ್ರಕಾರರಿಗೆ ಬದುಕಾದ ನೀಲಿ ಹೊತ್ತಿಗೆ:
ಭವಿಷ್ಯ ಹೇಳುವುದನ್ನೆ ವೃತ್ತಿಯನ್ನಾಗಿ ಮಾಡಿಕೊಂಡ ಕುಶಲ ಚಿತ್ರಗಾರ, ಜಿನಗಾರರಿರುವ ಊರಿಗೋಗಿ ನೀಲಿ ಹೊತ್ತಿಗೆ ರಚಿಸಿಕೊಡಲು ಐದಾಣೆಯಿಂದ ಐದು ರೂಪಾಯಿ ವರೆಗೆ. ಎಲೆ, ಅಡಿಕೆ ಯೊಂದಿಗೆ ಕಾಣಿಕೆ ಕೊಟ್ಟು ಆಮಂತ್ರಣ ನೀಡುತ್ತಾರೆ. ಅದಕ್ಕೆ ನೀಲಿ ಹೊತ್ತಿಗೆ ವೀಳ್ಯ ವೆಂದು ಹೆಸರು. ವೀಳ್ಯ ಕೊಟ್ಟ ತರುವಾಯ ಎರಡು ಅಥವಾ ಮೂರು ತಿಂಗಳ ಅವಧಿಯಲ್ಲಿ ಚಿತ್ರಭವಿಷ್ಯಕಾರರು ಒಂದು ನಿಗಧಿತ ಪುಣ್ಯದಿನದಂದು ನೀಲಿ ಹೊತ್ತಿಗೆಯನ್ನು ತಮ್ಮ ಮನೆಗೆ ತರುತ್ತಾರೆ. ಜಿನಗಾರ ಕುಟುಂಬದ ಚಿತ್ರಕಾರರು ೫೦ ಇಲ್ಲವೇ ೬೦ ಎಲೆ ಅಥವ ಕಾರ್ಡುಗಳಲ್ಲಿ ಚಿತ್ರಗಳನ್ನು ರಚಿಸಿ ಬೇಡಿಕೆಯುಳ್ಳವರಿಗೆ ನೀಡುತ್ತಾ ತಮ್ಮ ಬದುಕಿನ ಆದಾಯದ ಮಾರ್ಗವನ್ನು ಕಂಡುಕೊಂಡಿದ್ದಾರೆ. ವಂಶ ಪಾರಂಪರ್ಯವಾಗಿ ಈ ಮನೆತನಗಳು ಚಿತ್ರರಚನಾ ಪದ್ಧತಿಯನ್ನು, ಮುಂದುವರೆಸಿಕೊಂಡು ಬಂದಿದ್ದು ಇದರೊಂದಿಗೆ ಕೆಲವು ಹೊಸ ಚಿತ್ರ ತಂತ್ರಗಳನ್ನು ಕೂಡ ಅವರು ಅಳವಡಿಸಿಕೊಂಡು ಚಿತ್ರಿಸುತ್ತಿದ್ದಾರೆ.
ನೀಲಿ ಹೊತ್ತಿಗೆ ಚಿತ್ರಕಾರರಿಗೆ ನೀಡುವ ಕಾಣಿಕೆಯನ್ನು ಚಿತ್ರಗಾರರು ವೀಳ್ಯ ಎಂದು ಸ್ವೀಕರಿಸಿದ ನಂತರ, ಅವರ ಬೇಡಿಕೆಯಂತೆ ಚಿತ್ರಗಳನ್ನು ಚಿತ್ರಿಸುತ್ತಾರೆ. ನಂತರ ತಾವು ಸಿದ್ದಪಡಿಸಿದ ವಿಷಯವನ್ನು ವೃತ್ತಿನಿರತ ಹೊತ್ತಿಗೆ ನೋಡುವವರಿಗೆ ನೋಡುವಂತೆ ಹೇಳುತ್ತಾರೆ. ಕೆಲವೊಮ್ಮೆ ಆ ಜ್ಯೋತಿಷಿಗಳು ಚಿತ್ರಗಾರರಲ್ಲಿ ಹೋಗಿ ತಮ್ಮ ಬೇಡಿಕೆಗಳಿಗೆ ತಕ್ಕ ಹಾಗೆ ಚಿತ್ರಗಳು ಸಿದ್ಧಗೊಂಡಿವೆಯೋ ಇಲ್ಲವೋ ಎಂದು ನೋಡಿ ಚಿತ್ರಗಳನ್ನು ಸಿದ್ದವಾಗಿಸುತ್ತಾರೆ, ಒಂದು ಶುಭದಿನ ನಿಗದಿಪಡಿಸಿ, ಅವರ ಮನೆಯಲ್ಲಿಯೇ ಆ ನೀಲಿ ಹೊತ್ತಿಗೆ’ ಪೂಜಿಸಿ, ಸಾಂಕೇತಿಕ ಸಂಭಾವನೆಯಾಗಿ ಐದು, ಹನ್ನೊಂದು, ಹದಿನೈದು, ಇಪ್ಪತ್ತೊಂಧೂ ಇಲ್ಲವೇ ನೂರ ಒಂದು ರೂಪಾಯಿ ಕೊಟ್ಟು, ಅದನ್ನು ಹೊಸ ಅರಿವೆಯಲ್ಲಿ ಕಟ್ಟಿಕೊಂಡು ನಮ್ಮ ಮನೆಗೆ ಬರುವರು. ಮನೆಗೆ ಬಂದು ಅದನ್ನು ಮತ್ತೆ ಪೂಜೆ ಮಾಡಿಯೇ ಭವಿಷ್ಯ ಹೇಳಲು ಹೊರತೆಗೆಯುತ್ತಾರೆ.
ನೀಲಿ ಹೊತ್ತಿಗೆ ಯಲ್ಲಿ ಚಿತ್ರ ನೋಡುವ ವಿಧಾನ ಹೊತ್ತಿಗೆ ಯಲ್ಲಿರುವ ಚಿತ್ರಗಳ ಕಾರ್ಡುಗಳ ಮಧ್ಯದಲ್ಲಿ ಭವಿಷ್ಯ ಕೇಳಬೇಕೆನ್ನುವವನಿಂದ ತಾಮ್ರ ಅಥವಾ ಬೆಳ್ಳಿಯ ಕಡ್ಡಿಯನ್ನು ಇರಿಸಿ, ಪ್ರಶ್ನೆಯನ್ನು ಕೇಳಿಸುತ್ತಾರೆ. ಅವರು ಯಾವ ಕಾರ್ಡಿನ ಮೇಲೆ ಆ ಕಡ್ಡಿ ಇಳಿಸುತ್ತಾರೆ ಎಂಬುದನ್ನು ಗಮನಿಸಿ ಹೊತ್ತಿಗೆಕಾರರು ಆ ಕಾರ್ಡಿನಲ್ಲಿನ ಚಿತ್ರವನ್ನು ನೋಡಿ, ಅದನ್ನು ತೋರಿಸುತ್ತ ಚಿತ್ರಕ್ಕೆ ಅನುಗುಣವಾಗುವಂತೆ ಕಥೆ ಕಟ್ಟಿ ಶುಭವನ್ನು, ಅಶುಭವನ್ನು ವಿವರವಾಗಿ ಹೇಳುತ್ತಾರೆ. ಹೊತ್ತಿಗೆಯಲ್ಲಿರುವ ಪ್ರತಿಯೊಂದು ಚಿತ್ರಕ್ಕೆ ಕಥೆ ಕಟ್ಟಿ ಹೇಳಿ ಕೇಳುಗನನ್ನು ತಮ್ಮ ವಶವರ್ತಿ ಮಾಡಿಕೊಳ್ಳಬಲ್ಲ, ಅವರು ಹೇಳುವ ಭವಿಷ್ಯ ವಿವರಣೆಯು ಕೇಳುಗರ ಭಾವನೆಗಳನ್ನು ಕೋಮಲವಾಗಿಸಿ ಕೊಡಲಿರುವ ಕಾಣಿಕೆ ಮೊತ್ತವನ್ನು ಹೆಚ್ಚುವಂತೆ ಮಾಡುತ್ತವೆ.
ಚಿತ್ರ ರಚನಾ ವಿಧಾನಗಳು:
ನೀಲಿ ಹೊತ್ತಿಗೆ ಚಿತ್ರ ರಚಿಸುವ ಸಾಮಗ್ರಿಗಳು ತಾಳೆಗರಿ, ಕಾಗದ, ಕಡತ, ಕುಂಚ, ಕಂಠ, ಕಟ್ಟಿಗೆಯ ರಕ್ಷಾಫಲಕ, ರಟ್ಟು, ದಾರ, ಹುರಿ, ಅರಿವೆ ಹೀಗೆ ಸ್ಥಳೀಯವಾಗಿ ಸಿಗುವ ಈ ಸಾಮಗ್ರಿಗಳನ್ನು ಬಳಸಿಕೊಂಡು ಚಿತ್ರಕಾರರು ನೀಲಿಹೊತ್ತಿಗೆಯ ಚಿತ್ರ ತಯಾರಿಸುತ್ತಾರೆ. ನೀಲಿಹೊತ್ತಿಗೆ ನೋಡುವವರಲ್ಲಿ ವೃತ್ತಿ ಮೂಲದವರು ಹಾಗೂ ಹವ್ಯಾಸಿ ಮೂಲದವರೆಂದು ಎರಡು ಪ್ರಕಾರದವರಿರುತ್ತಾರೆ. ಗೊಂದಲಿಗರು, ಬುಡುಬುಡಿಕೆಯವರು, ರಾಮ್‌ಕೊಂಡಿಗಳು ವೃತ್ತಿ ಮೂಲದವರಾಗಿದ್ದಾರೆ. ವ್ಯಕ್ತಿ ಭವಿಷ್ಯ ಹಾಗೂ ಲೋಕ ಭವಿಷ್ಯ ನುಡಿಯುವವನು, ಬುಡುಬುಡಿಕೆಯವರ “ಜಯವಾಗತೈತಿ ಶುಭವಾಗತೈತಿ ಮನದಲ್ಲಿರುವುದು ನಿಜವಾಗತೈತಿ” ಎಂಬ ಪಲ್ಲವಿಯೊಂದಿಗೆ ನೀಲಿಹೊತ್ತಿಗೆ ಕೇಳಲು ಪ್ರಾರಂಭಿಸುತ್ತಾರೆ.ಭವಿಷ್ಯ ಹೇಳುವವರ ಮನೆ ದೇವರನ್ನು ನೆನೆದು, ನೀಲಿಹೊತ್ತಿಗೆ ಯಲ್ಲಿ ಹಾಕಿದ ಕಡ್ಡಿಯಿಂದ ಬರುವ ಚಿತ್ರವನ್ನು ನೆರೆದವರೆಲ್ಲ ತೋರಿಸಿ, ಆ ಚಿತ್ರದ ಒಳಿತು ಕೆಡುಕುಗಳನ್ನು ಸಾಂಕೇತಿಕವಾಗಿ ಹೊತ್ತಿಗೆಗಾರ ವಿವರಿಸುವನು, ಮುತ್ತಿನ ತನಿ, ಈಶ್ವರ, ಬಸವಣ್ಣ, ಋಷಿ, ತೊಟ್ಟಿಲು, ಸ್ವಸ್ತಿಕ ಚಿಹ್ನೆ, ಸೂರ್ಯ, ಚಂದ್ರ ಮುಂತಾದ ಚಿತ್ರಗಳು ಶುಭ-ಲಾಭ ಚಿತ್ರಗಳೆಂದು ರಾಕ್ಷಸ, ಕಸಬರಿಗೆ, ಗೋರಿ, ಹಣ, ಗೂಗಿ, ಹಲ್ಲಿ, ಬೆಕ್ಕು, ಇಲಿ, ಹೆಗ್ಗಣ, ಹುಲಿ, ಸಿಂಹ, ಬೀಸುವ ಕಲ್ಲು, ಮರ, ಚಕ್ರ, ಕರಗಸ, ಗ್ರಹಣ, ಮೋಡಿ ಆಟ, ನಾರದ, ಕಛೇರಿ ಮೊದಲಾದ ಚಿತ್ರಗಳು ಅಶುಭವಾಗುವುದನ್ನು ಸೂಚಿಸುವಂತಹ ಚಿತ್ರಗಳೆಂದು ಸಾಮಾನ್ಯ ಗ್ರಹಿಕೆ. ಅಶುಭ ನಿವಾರಣೆಗೆ ಪರಿಹಾರ ಶಾಂತಿ ಕ್ರಮಗಳನ್ನು ತಿಳಿಸಿ, ಇದಕ್ಕಾಗಿ ಕೇಳುಗರಿಂದ ಹಿರಿಯ ಮೊತ್ತದ ಹಣ, ಧಾನ್ಯ, ತೆಂಗಿನಕಾಯಿ, ಬಾಳೆಹಣ್ಣು, ದನ ಕರುಗಳನ್ನು ಹೊತ್ತಿಗೆಕಾರ ಪಡೆಯುತ್ತಾನೆ. ಹೀಗೆ ನೀಲಿ ಹೊತ್ತಿಗೆ ಅವರು ವ್ಯಕ್ತಿ ಭವಿಷ್ಯ ಹೇಳುವವರಾಗಿ ಕಂಡುಬರುತ್ತಾರೆ. ರಾಮ ಕೊಂಡಾಡು ಅಥವಾ ಕುರಕೊಂಡಾಡಿ-ಅವರು ಜನಸಂದಣಿ ಇರುವ ಸ್ಥಳಗಳಲ್ಲಿ ಕುಳಿತು ನೀಲಿ ಹೊತ್ತಿಗೆ ಭವಿಷ್ಯ ಹೇಳುತ್ತಾರೆ. ಅವರು ಹೇಳುವ ಭವಿಷ್ಯ ವಿಧಾನ ಬುಡಬುಡಿಕೆ ಅವರಂತೆಯೇ ಇರುತ್ತದೆ. ಗ್ರಾಮೀಣ ಪ್ರದೇಶದ ಗುರುಸ್ಥಳ, ಮಠಗಳಲ್ಲಿ ಹೇಳುವ ನೀಲಿ ಹೊತ್ತಿಗೆ ಭವಿಷ್ಯ ಹೆಚ್ಚಾಗಿ ಹವ್ಯಾಸಿ ಮೂಲದ್ದಾಗಿರುತ್ತದೆ. ಈ ಮಠಗಳಲ್ಲಿ ಕೆಲವು ವ್ಯಕ್ತಿಗಳು ಇದನ್ನು ಮೂಲ ವೃತ್ತಿಯಾಗಿ ಬೆಳೆಸಿಕೊಂಡು ಬಂದಿದ್ದಾರೆ.
ನೀಲಿ ಹೊತ್ತಿಗೆಯ ಶುಭ ಮತ್ತು ಅಶುಭ ಚಿತ್ರಗಳು:
ನೀಲಿ ಹೊತ್ತಿಗೆ ಚಿತ್ರಗಳು ವೃತ್ತಿಪರತೆಯನ್ನು ಹೊಂದಿವೆ. ಇದರಿಂದ ಜನಸಾಮಾನ್ಯರನ್ನು ನೇರವಾಗಿ ಮುಟ್ಟುತ್ತದೆ. ಚಿತ್ರ ವಿನ್ಯಾಸಕಾರರು ಆ ರಚನಾ ವೃತ್ತಿಪರಂಪರೆಯಿಂದ ಬಂದಿರಬೇಕಾಗುತ್ತದೆ. ಹೀಗಾಗಿ ಆ ಕಲಾವಿದರು ಜನಸಾಮಾನ್ಯರ ಮಾನಸಿಕ ಸ್ಥಿತಿಗತಿಗಳನ್ನು ಅರಿತು ಚಿತ್ರ ನಿರ್ಮಿಸುವರು. ಜನರ ಮೂಢನಂಬಿಕೆ, ಒಳಿತು-ಕೆಡಕುಗಳ ಬಗ್ಗೆ ಇರುವ ಕಾಳಜಿ, ದೇವರು-ಧರ್ಮದ ಬಗೆಗಿರುವ ಭಯ, ಗೌರವ ಮೊದಲಾದ ಅಂಶಗಳ ಹಿನ್ನೆಲೆಯಲ್ಲಿ ಶುಭ ಮತ್ತು ಅಶುಭ ಚಿತ್ರಗಳು ಆಕಾರ ಪಡೆದಿರುತ್ತವೆ. ಇಂಥ ಶುಭ ಚಿತ್ರಗಳಲ್ಲಿ ಎರಡು ಪ್ರಕಾರ ಗಳಿರುತ್ತವೆ.
೧. ರೇಖಾಚಿತ್ರ: ನೀಲಿ ಹೊತ್ತಿಗೆಯಲ್ಲಿ ಮೂಲತಃ ರೇಖಾಚಿತ್ರಗಳಿದ್ದು, ವರ್ಣಚಿತ್ರಗಳು ನಂತರದ ಕಾಲಘಟ್ಟದಲ್ಲಿ ಬಂದಂತೆ ಕಾಣುತ್ತದೆ. ತಾಳೆಗರಿಯ ನೀಲಿ ಹೊತ್ತಿಗೆಯಲ್ಲಿ ಕಾಗದ ಪ್ರತಿಯಲ್ಲಿ ರೇಖಾಚಿತ್ರಗಳು ಪ್ರಧಾನವಾಗಿರುವುದನ್ನು ಕಾಣುತ್ತೇವೆ. ದೇಸಿ ಸಂಸ್ಕಾರ ವೆಂಬಂತೆ ಇಲ್ಲಿಯ ರೇಖಾ ಚಿತ್ರಗಳು ಚಿಕ್ಕ ಮಕ್ಕಳು ಬರೆದ ಚಿತ್ರಗಳಂತೆ ಕಾಣುತ್ತವೆ. ತಾಳೆಗರಿ ಹಾಗೂ ಕಾಗದ ಹಸ್ತಪ್ರತಿ ಗಳಲ್ಲಿ ಈ ಅಶುಭ ಚಿತ್ರಗಳನ್ನು ಕೇವಲ ರೇಖೆಗಳ ಮೂಲಕ ಬಿಡಿಸಲಾಗಿದೆ. ಶುಭ, ಅಶುಭ ಚಿತ್ರಗಳನ್ನು ಪ್ರತ್ಯೇಕವಾಗಿ ಬರೆಯದೆ ಕೂಡಿಯೇ ರೇಖಿಸುತ್ತಾರೆ.
೨. ವರ್ಣಚಿತ್ರ: ರೇಖಾಚಿತ್ರಗಳಿಗೆ ಬಣ್ಣ ತುಂಬಿ ಹೆಚ್ಚು ಆಕರ್ಷಣೆಯಿಂದ ಕಾಣುವಂತೆ ಮಾಡುವ ಪ್ರಯತ್ನದಲ್ಲಿ ಈ ವರ್ಣಚಿತ್ರಗಳು ಮೂಡಿ ಬಂದಿರಬೇಕು. ಈ ಚಿತ್ರಗಳಿಗೆ ನಿರ್ದಿಷ್ಟವಾಗಿ ಇಂಥ ವರ್ಣವನ್ನು ಲೇಪನ ಮಾಡಬೇಕೆಂಬ ನಿರ್ಬಂಧವಿಲ್ಲ. ಹೀಗಾಗಿ ಇವುಗಳ ವರ್ಣಲೇಪನ, ವರ್ಣ ವಿನ್ಯಾಸಗಳಲ್ಲಿ ಸ್ವಚ್ಛಂದತೆ ಯನ್ನು ಕಾಣುತ್ತೇವೆ. ಇವು ಜನಪದ ಚಿತ್ರಕಲೆ ಲಕ್ಷಣಗಳನ್ನು ಹೊಂದಿದ್ದು ಬಣ್ಣಗಳ ಸಮತೋಲನವಾಗಲೀ ಪ್ರಮಾಣಬದ್ಧತೆಯಾಗಲೀ ಈ ಚಿತ್ರಗಳಲ್ಲಿ ಸಹಜವಾಗಿಯೇ ಕಂಡು ಬರುವುದಿಲ್ಲ. ನೀಲಿಹೊತ್ತಿಗೆ ಅಶುಭ ಚಿತ್ರಗಳಲ್ಲಿ ವರ್ಣಗಾರಿಕೆ ಶುಭ ಚಿತ್ರಗಳಿಗಿಂತ ಬೇರೆಯಾಗಿ ಬಳಕೆಯಾಗಿಲ್ಲವಾದರೂ ಭಯ, ಅಪಾಯ, ದುಃಖ, ಅಶಾಂತಿ ಸೂಚಕಗಳಿಗಾಗಿ ಕಪ್ಪು, ಕೆಂಪು ಬಣ್ಣಗಳನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಿದ್ದಾರೆ. ಕತ್ತರಿ – ಹಣ ನಿಲ್ಲುವುದಿಲ್ಲ, ರಾಕ್ಷಸ, ದೆವ್ವ-ಭೂತಗಳು – ಕೇಡು, ಕಸಬರಿಗೆ – ಮನೆ ನಾಶ, ಹೆಣ – ಅಶುಭ, ಕಾಡು, ಪ್ರಾಣಿ ಅದರ ಹಿಂದೆ ಒಂದು ಕೋಲು- ಎಚ್ಚರಿಕೆ, ಜೋಳದ ಚೀಲ ಮತ್ತು ಇಲಿ – ಧಾನ್ಯ ವ್ಯಯ, ಕುಸ್ತಿ -ಜಗಳ, ನಾರದ – ಜಗಳ, ಮೋಡಿ ಆಟ – ಜಗಳ ಸಿದ್ಧತೆ, ಜೈಲು – ಹೊಡೆ ದಾಟ ತೊಟ್ಟಿಲು – ಸಂತಾನ ಭಾಗ್ಯದ ಸಂಕೇತ, ಮೀನು-ವಂಶಾಭಿವೃದ್ಧಿಯ, ಬಾಸಿಂಗ – ಕಂಕಣ ಭಾಗ್ಯ, ಹೀಗೆ ಈ ಹೊತ್ತಿಗೆಯ ಚಿತ್ರಗಳು ಶುಭ-ಅಶುಭ ಪ್ರತಿಬಿಂಬಿತ ಚಿತ್ರಗಳಿಗೆ ಜನಪದರಲ್ಲಿ ನಿಶ್ಚಿತ ಅರ್ಥಗಳಿವೆ.
ನೀಲಿ ಹೊತ್ತಿಗೆ ಚಿತ್ರಗಳ ತಂತ್ರ ಮತ್ತು ಶೈಲಿ:
ಈ ಚಿತ್ರಗಳು ಮೊದಮೊದಲು ಸಹಜ ಪ್ರಾಕೃತಿಕ ಮೂಲವಸ್ತುಗಳಾದ ತಾಳೆಗರಿಯ ಮೇಲೆ ರಚನೆಗೊಳ್ಳುತ್ತಿದ್ದವು. ಆಗ ವರ್ಣ ವಿನ್ಯಾಸಕ್ಕಿಂತ ರೇಖಾವಿನ್ಯಾಸಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು. ಚಿತ್ರಕಾರನಿಗೆ ಚಿತ್ರ ಅಂಗಾಂಗಳಾಗಲಿ, ಪ್ರಮಾಣಬದ್ಧತೆಯಾಗಲಿ ಮುಖ್ಯವಾಗದೆ ಅವನಿಗೆ ಚಿತ್ರದ ವಸ್ತು ಅಥವಾ ಸಂಕೇತ ಮುಖ್ಯವಾಗಿತ್ತು. ನಿಗಧಿತ ಚಿತ್ರವನ್ನು ನೋಡುವವರಿಗೆ ಇದು ಇಂಥ ಅರ್ಥವಂತಿಕೆಯ ಚಿತ್ರ ಎಂಬುದು ಗುರುತಿಸುವಂತಿರಬೇಕೆಂಬ ಆಶಯ ಅವರದ್ದು. ಈ ಆಶಯ ಹಿನ್ನೆಲೆಯಲ್ಲಿ ರೇಖಾಚಿತ್ರ ಹಾಗೂ ಮುಂದೆ ಬಂದ ವರ್ಣರಂಜಿತ ವಿನ್ಯಾಸದ ಚಿತ್ರಗಳು ರಚನೆಯಾದಂತವು. ಸೂಕ್ಷ್ಮವಾಗಿ ಪರಿಶೀಲಿಸಿದರೆ ಕೆಂಪು, ಬಿಳಿ, ಕಪ್ಪು ವರ್ಣ ಗಳನ್ನು ಗಡುಸಾಗಿ ಲೇಪಿಸಿ ಅಶುಭ ಚಿತ್ರಗಳನ್ನು, ಪ್ರಸನ್ನಭಾವದ ತೆಳುವಾದ ವರ್ಣ ಗಳನ್ನು ಲೇಪಿಸಿ ಶುಭ ಚಿತ್ರಗಳನ್ನು ಸಿದ್ಧಗೊಳಿಸಿದುದನ್ನು ಕಾಣಬಹುದಾಗಿವೆ. ತಾಳೆಗರಿಯಲ್ಲಿರುವ ನೀಲಿಹೊತ್ತಿಗೆ ರೇಖಾಚಿತ್ರಗಳು ೨೦೦-೩೦೦ ವರ್ಷಗಳಷ್ಟು ಪ್ರಾಚೀನವಾಗಿರುತ್ತವೆ. ರೇಖಾಚಿತ್ರಗಳಿಗೆ ಬರೆದ ಒಳಿತು-ಕೆಡಕಿನ ಬರಹ ಗಮನಿಸುವಂಥದಾಗಿದೆ. ಸಾಮಾಜಿಕ, ನೈಸರ್ಗಿಕ ಸನ್ನಿವೇಶದ ಹಿನ್ನೆಲೆಗಳಲ್ಲಿ ಪ್ರತಿಯೊಂದು ಚಿತ್ರವೂ ತನ್ನದೇ ಆದ ಸಾಂಕೇತಿಕ ಅರ್ಥ ಹೊಂದಿರುತ್ತದೆ.
ನೀಲಿ ಹೊತ್ತಿಗೆ ಚಿತ್ರಕಾರರ ನೆಲೆಗಳು:
ಈ ನೀಲಿ ಹೊತ್ತಿಗೆ ಚಿತ್ರಕಾರರ ನೆಲೆಗಳಲ್ಲಿ ಪ್ರಮುಖವಾಗಿ ಇವರಿಗೆ ಈ ತರಹದ ಚಿತ್ರಗಳನ್ನು ರಚಿಸಿಕೊಡುವ ಕುಟುಂಬವೊಂದು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿದ್ದು, ಅವರನ್ನು ಚಿತ್ರಗಾರರ ಎಂದು ಕರೆಯುತ್ತಾರೆ. ಕೊಪ್ಪಳ ಜಿಲ್ಲೆಯ ಕಿನ್ನಾಳ, ಧಾರವಾಡ ಜಿಲ್ಲೆಯ ಕಲಘಟಗಿ, ಬೆಳಗಾವಿ ಜಿಲ್ಲೆಯ ಗೋಕಾಕ. ವಿಜಯಪುರ ಜಿಲ್ಲೆಯ ಮುತ್ತಿಗೆ ಗ್ರಾಮಗಳಲ್ಲಿರುವ ಚಿತ್ರಕಾರರು ಈ ನೀಲಿಹೊತ್ತಿಗೆ ಚಿತ್ರಗಳನ್ನು ರಚಿಸಿಕೊಡುತ್ತಿದ್ದುದಾಗಿ ತಿಳಿದುಬರುತ್ತದೆ. ಆದರೆ, ಈಗ ತಾಳಿಕೋಟೆ ಯಲ್ಲಿ ಮಾತ್ರ ಈ ಕಾರ್ಯವನ್ನು ನಿರ್ವಹಿಸಲು ಕಲಾವಿದರಿದ್ದಾರೆ. ಪ್ರಸ್ತುತ ತಾಳಿಕೋಟೆಯಲ್ಲಿ ಚಿತ್ರಗಾರ ಕುಟುಂಬದ ಕುಬೇರಪ್ಪ ರಾಮಪ್ಪ ಭೂಸಾರೆ ಅವರ ಹತ್ತಿರವಿರುವ ಒಂದು ನೀಲಿ ಹೊತ್ತಿಗೆಯ ಹಸ್ತಪ್ರತಿಯನ್ನು ಸಂಗ್ರಹಿಸಿದ್ದಾರೆ, ಇವರು ಮೂಲತಃ ತಾಳೀಕೋಟೆಯವರೇ ಆಗಿದ್ದು, ಈ ಚಿತ್ರಗಳ ವೃತ್ತಿಯನ್ನು ಅವರ ಕುಟುಂಬದವರು ತಲತಲಾಂತರದಿAದ ನಿರ್ವಹಿಸಿಕೊಂಡು ಬಂದಿರುವುದಾಗಿ ಹೇಳುತ್ತಾರೆ. ಅವರು ಸೋಮವಂಶ ಕತ್ತಿ ಮತಕ್ಕೆ ಸೇರಿದ ಜನಾಂಗದವರಾಗಿದ್ದು, ನಿಮಿಷಾಂಬಾ ಇವರ ಕುಲದೇವತೆ, ಅಂಬಾಭವಾನಿ ಇವರ ಆರಾಧ್ಯ ದೇವರು. ಅವರ ಕುಟುಂಬದ ಧರ್ಮಾಜಪ್ಪ ಚಿತ್ರಗಾರ, ರಾಮಪ್ಪ ಚಿತ್ರಗಾರ ಪ್ರಸಿದ್ಧ ಕಲಾವಿದರಾಗಿದ್ದಾರೆ. ವಯೋವೃದ್ಧ ಕುಬೇರಪ್ಪ ನೀಲಿ ಹೊತ್ತಿಗೆಯ ಚಿತ್ರಗಳನ್ನು ಅನೇಕ ವೃತ್ತಿ ಕಲಾವಿದರಿಗೆ ಮಾಡಿ ಕೊಟ್ಟಿರುವುದಾಗಿ ತಿಳಿಸುತ್ತ, ಈ ನೀಲಿಹೊತ್ತಿಗೆ ಚಿತ್ರಗಳಲ್ಲದೆ, ದುರುಗಮುರಗಿ ಪೆಟ್ಟಿಗೆಯ ಚಿತ್ರಗಳನ್ನು ಮತ್ತು ದ್ಯಾಮವ್ವ ದೇವತೆಯ ವರ್ಣಚಿತ್ರಗಳನ್ನು ಚಿತ್ರಿಸಿರುವುದಾಗಿ ಹೇಳುತ್ತಾರೆ. ಈ ದ್ಯಾಮವ್ವ, ಕಾಳಮ್ಮ, ಮರಗಮ್ಮ, ದುರ್ಗಾದೇವಿ ಮುಂತಾದ ದೇವತೆಗಳ ವಾಹನಗಳಾದ ಹುಲಿ, ಸಿಂಹ ಆನೆ, ಕುದುರೆ, ಗಂಗೆ, ಗೌರಿ, ಪಲ್ಲಕ್ಕಿ ಹೀಗೆ ಹಲವಾರು ವರ್ಣ ವಿನ್ಯಾಸಗಳನ್ನು ಮಣ್ಣು, ಮರ, ಲೋಹ ಇತ್ಯಾದಿ ಮಾಧ್ಯಮದಲ್ಲಿ ವೈವಿಧ್ಯಮಯವಾದ ಕಲಾಕೃತಿಗಳನ್ನು ಮಾಡಿಕೊಡುವ ವೃತ್ತಿಯವರಾಗಿದ್ದಾರೆ. ಇದುವೇ ಇವರ ಮನೆತನದ ಮುಖ್ಯ ಕಸುಬಾಗಿದೆ. ಮತ್ತು ಸುತ್ತಮುತ್ತಲಿನ ಪ್ರದೇಶದ ದೇವತಾ ಮೂರ್ತಿಗಳಿಗೆ ಜಾತ್ರೆಯ ಸಂದರ್ಭದಲ್ಲಿ ವರ್ಣವಿನ್ಯಾಸ ಮಾಡುವುದು ಈಗಲೂ ನಡೆದುಕೊಂಡು ಬಂದಿರುವ ಇವರ ಸಂಪ್ರದಾಯವಾಗಿದೆ. ಪ್ರಸ್ತುತ ದೊರಕಿರುವ ಈ ನೀಲಿ ಹೊತ್ತಿಗೆ ಯಲ್ಲಿ ಅರವತ್ತೆರಡು ಕಾರ್ಡುಗಳಿದ್ದು, ಪ್ರತಿ ಕಾರ್ಡಿಗೆ ಒಂದರAತೆ, ಅರವತ್ತೆರಡು ಎರಡು ಶುಭ ಮತ್ತು ಅಶುಭ ಚಿತ್ರಗಳಿವೆ. ವರ್ಣಚಿತ್ರಗಳಲ್ಲದೇ, ರೇಖಾಚಿತ್ರಗಳನ್ನೂ ಇಲ್ಲಿ ಕಾಣಬಹುದು.
ಬಣ್ಣಗಳ ತಯಾರಿ:
ನೀರು-ಬಣ್ಣಗಳಿಂದ ತಯಾರಿಸಿದ ಈ ನೀಲಿ ಹೊತ್ತಿಗೆಯ ಚಿತ್ರಗಳು ಅವರದೇ ಆದ ದೇಶೀಯ ವರ್ಣಗಳನ್ನು ಸಿದ್ದಪಡಿಸಿ ಇಟ್ಟುಕೊಂಡಿರುತ್ತಾರೆ. ತಾಳಿಕೋಟೆ ಸುತ್ತಲೂ ಸುಲಭವಾಗಿ ಸಿಗುವ ಬಿಳಿ ಬಳಪದ ಕಲ್ಲು ತಂದು ಸಾಣೆ ಕಲ್ಲಿನ ಮೇಲೆ ಅರೆಯುವರು. ಅದರಿಂದ ತಯಾರಾದ ಕಲ್ಲಿನ ದ್ರವಕ್ಕೆ ಬೇಕಾದಷ್ಟು ಚಾಲಿ ಅಂಟನ್ನು ಸೇರಿಸಿ ಚೆನ್ನಾಗಿ ಹದವಾಗಿ ಕಲಿಸುವರು. ಪೂರ್ಣಪ್ರಮಾಣದಲ್ಲಿ ಕೂಡಿದಾಗ ಬೂದುಬಿಳಿಬಣ್ಣ ತಯಾರಾಗುವುದು. ಇದನ್ನು ಒಂದು ಡಬ್ಬ ಅಥವ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವರು. ಇದು ಅವರಿಗೆ ಮೂಲ ಬಣ್ಣ, ಅನಂತರ ಅಂಗಡಿಯಲ್ಲಿ ದೊರೆಯುವ ಹುಡಿ ಬಣ್ಣಗಳನ್ನು ತಂದು ಮಣ್ಣಿನ ಅರಿವಾಣದಲ್ಲಿ ಅಥವಾ ತೆಂಗಿನ ಚಿಪ್ಪಿನಲ್ಲಿ ಮೊದಲು ತಯಾರಿಸಿಟ್ಟುಕೊಂಡು ಬಿಳಿ ಬಣ್ಣ ಹಾಕಿ, ಅದರಲ್ಲಿ ಅಂಗಡಿಯಿಂದ ತಂದ ಹುಡಿಬಣ್ಣ ನಮಗೆ ಬೇಕಾದ ಪ್ರಮಾಣದಲ್ಲಿ ಹಾಕಿ ಇತರ ಬಣ್ಣಗಳನ್ನು ತಯಾರಿಸುತ್ತಾರೆ. ಇವೆಲ್ಲ ಹೆಚ್ಚಾಗಿ ತಂಪು ವರ್ಣಗಳು ಆಗಿವೆ. ಕೆಲವೊಂದು ಸಾರಿ ಕಲ್ಲಿನಿಂದ ಅರೆದು ತಯಾರಿಸುವ ಬಿಳಿ ಬಣ್ಣಕ್ಕೆ ಗಟ್ಟಿಯಾದ ಅಂಟು ಹಾಕಿ ನೆರಳಲ್ಲಿ ಒಣಗಿಸಿ ಅದನ್ನು ಗಟ್ಟಿಮಾಡಿ ರಾಗಿಮುದ್ದೆ ಹದಕ್ಕೆ ತಂದೆ ಬಟ್ಟೆಯಲ್ಲಿ ಸುತ್ತಿಡುತ್ತಿದ್ದರು. ಬೇಕೆಂದಾಗ ಅದರಿಂದ ಚಿವುಟಿ ಕೊಂಡು ಪಾತ್ರೆಯಲ್ಲಿ ಹಾಕಿ ನೀರಿನಿಂದ ಕಲಿಸಿದರೆ ನೀರು ಬಣ್ಣ ತಯಾರಾಗುತ್ತದೆ. ಈ ವರ್ಣಗಳನ್ನು ಚಿತ್ರ ರಚನೆಯಲ್ಲಿ ಬಳಸಲಾಗುತ್ತದೆ.
ಧಾರವಾಡ ಜಿಲ್ಲೆಯ ಕಲಘಟಗಿಯ ಜನ ಶೇಡಿ ಮಣ್ಣು ಹದ ಮಾಡಿ ಅದಕ್ಕೆ ನೆನೆ ಹಾಕಿ ರುಬ್ಬಿ ಕುದಿಸಿದ ಹುಣಸೆ ಬೀಜದ ಮಿಶ್ರಣವನ್ನು ಸೇರಿಸಿ ದ್ರಾವಣವನ್ನು ತಯಾರಿಸುತ್ತಾರೆ. ಪ್ರಥಮ ಹಂತದ ಲೇಪನ ಮಾಡಿ, ಅದರ ಮೇಲೆ ಅರಗು ರಾಳ ವನಸ್ಪತಿಗಳ ವನಸ್ಪತಿಗಳ ಮಿಶ್ರಣ ಮಾಡಿ ಬೇಕಾದ ಬಣ್ಣವನ್ನು ಅದರಲ್ಲಿ ಬೆರಸಿ ಬಳಸಿದ್ದು ಚಿತ್ರಗಳ ಅಧ್ಯಯನದಿಂದ ತಿಳಿದುಬರುತ್ತದೆ. ಬೆಳಗಾವಿ ಜಿಲ್ಲೆಯ ಗೋಕಾಕದ ವರ್ಣ ತಯಾರಿಕೆ ಇನ್ನೊಂದು ಬಗೆ ಇದೆ. ಸುಣಬುರಲಿ ಹರಳಿನ ದ್ರಾವಣ ತಯಾರಿಸಿ, ಅದಕ್ಕೆ ಅಂಟು ಸೇರಿಸಿ ಮಿಶ್ರಣವನ್ನು ತಯಾರಿಸಿ ಕಲಾಕೃತಿಯ ಮೇಲೆ ನಾಲ್ಕುಬಾರಿ ಲೇಪನ ಮಾಡಿ ನಂತರ ತಯಾರಿಸಿದ ಬಣ್ಣಗಳಿಂದ ಬಿಡಿಸುವುದು ಪದ್ಧತಿ. ಅದೇ ರೀತಿ ಬಾಗೇವಾಡಿ ತಾಲ್ಲೂಕು ಮುತ್ತಿಗೆ ಗ್ರಾಮದಲ್ಲಿ ಗೊಂಬೆ ಅವರ ಮನೆಗಳಿವೆ. ಅವರೂ ಕೂಡಾ ನೀರು ಬಣ್ಣ, ತೈಲವರ್ಣಗಳಲ್ಲಿ ಪಳಗಿದವರು, ಹುಣಸೆ ಬೀಜದ ಸರಿ, ಬಿಳಿ ಕಾಜೀ ಚೂರು, ಬಂಗಾರವರ್ಣದ ಸುನೇರಿ ಪೇಪರು, ಮೇಣದ ಮಿಶ್ರಣಗಳನ್ನು ಬಳಸಿ ನೀರಿನಲ್ಲಿ ಮತ್ತು ಕೊಬ್ಬರಿ ಎಣ್ಣೆಯಲ್ಲಿ ಕೂಡಿಸಿ ಬಣ್ಣಗಾರಿಕೆ ಮಾಡುತ್ತಾರೆ.
ಇವಿಷ್ಟು ವಿವರಗಳನ್ನು ಮುಂದೆ ಎಂದಾದರೂ ನಿಮ್ಮ ಕಣ್ಣಿಗೆ ಕೊರವಂಜಿಗಳು ಅಥವಾ ಮುಂತಾದ ಭವಿಷ್ಯ ಹೇಳುವವರು ಕಾಣಿಸಿದರೆ ಮೆಲಕು ಹಾಕಿಕೊಳ್ಳಿ ಹಾಗು ಅವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿ.
ಬರಹ ಹಾಗು ಚಿತ್ರ ಸಂಗ್ರಹಣೆ : ಲಕ್ಷ್ಮೀನಾರಾಯಣ್ ಟಿ
9 Comments
Good message and subject
Good message subject
ನಮಗೆ ನಿಲಿಹೊತ್ತಿಗೆ ಪುಸ್ತಕ ಬೇಕು ,, ನಿಮ್ಮ ದೂರವಾಣಿ ಸಂಖ್ಯೆ ನಮಗೆ ಕಳುಹಿಸಿ
8951775955…. Rahul parmesha swamy
ಸರ ನಮಗೆ ನೀಲಿ ಹೊತ್ತಿಗೆ ಬೇಕು ಸರ ನಿಮ್ಮ ನಂಬರ ಕೋಡಿ
ನಮಗೆ ನೀಲಿ ಹೊತ್ತಿಗೆ ಪುಸ್ತಕ ಬೇಕು ನಿಮ್ಮ number ಕಳಿಸಿ
Sir I want a blue book, so plz help me now , plz give me now your contact number
Sir plz i request you
Nanage nili hottige beku sar
Book beku sigutta