ಪರಾಭವ ಭಾವನಾ – 4 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ

ಅಪ್ಪುವಿನ ಅನುಮಾನ ನಿಂತಿಲ್ಲ. ಯಾರು ಗುರುಗಳನ್ನು ಕೊಂದವರು ? ಜೋಶಿ ಮಠದಲ್ಲಿನ ಅನುಭವಗಳನ್ನು ಚಿಂತಿಸುತ್ತಾ ಮದುರೈ ಗೆ ಬಂದ ಅಪ್ಪು ಸುಂದರ ಚತುರ್ಬುಜ ನಾರಾಯಣ ವಿಗ್ರಹವನ್ನು ಕಂಡ ಮುಂದೆ ?

ನಾಲ್ಕು‌

ಅಳಗರ್‌ ಕೋವಿಲ್‌ (ಸುಂದರನ ದೇವಸ್ಥಾನ)ದ ವಿನ್ಯಾಸ ನೋಡಿ ಬೆರಗಾಗಿದ್ದ ಅಪ್ರಮೇಯ. ಬಲು ಚೆನ್ನಾದ ಗುಡಿಯದು. ಗುಡಿಯ ಹಿಂದೆ ಹಸಿರು ಬೆಟ್ಟ. ವೃಕ್ಷಸಮೂಹ ಗುಡಿಯ ಸುತ್ತಲೂ ಇತ್ತು.

ಆರು ಕಂಬಗಳ ಪುಟ್ಟ ಮಂಟಪ ಪ್ರವೇಶಿಸಿದೊಡನೆ ಸುಮಾರು ಹದಿನೈದು ಕಂಬಗಳ ದೊಡ್ಡ ಪ್ರಾಂಗಣ. ಅದನ್ನು ದಾಟಿ ವಿಶಾಲವಾದ ಮತ್ತು ಎತ್ತರವಾದ ರಾಜಗೋಪುರ. ಪಕ್ಕದಲ್ಲೊಂದು ಪುಷ್ಕರಣಿ ಕೊಳ.

ಒಳಗೆ ಹೋಗಿ ಮುಖ್ಯ ದೇವನಾದ ಸುಂದರಬಾಹು ಪೆರುಮಾಳ್‌ಗೆ ನಮಸ್ಕರಿಸಿ ಬಂದರು ಐವರೂ.

ಅಳಗಪ್ಪ ಚೆಟ್ಟಿಯಾರು ಅವನ ಮಾತಿನಂತೆ ಗುಡಿಯ ಹೊರಗಡೆಯ ಹಜಾರದಲ್ಲಿ ಒಂದು ಚಿಕ್ಕ ವೇದಿಕೆ ಇಡಿಸಿದ್ದ. ಒಂದು  ಸ್ಪೀಕರ್‌ ಇತ್ತು. ಹೊರಗಡೆಗೆ ಒಂದೆರಡು ಮೈಕ್‌ಗಳಿದ್ದವು.

ನಾಲ್ವರು ಶಿಷ್ಯರೊಂದಿಗೆ ಅಪ್ರಮೇಯ ಆಸೀನನಾದ ನಂತರ ಅಳಗಪ್ಪ ಚೆಟ್ಟಿಯಾರ್‌ ಅಲ್ಲಿಗೆ ಬಂದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ, “ಇಂದು ಇಲ್ಲಿಗೆ ಬಂದಿರುವ ಶ್ರೀ ಅಪ್ರಮೇಯ ಸ್ವಾಮಿಗಳು ಬಹುಭಾಷಾ ಪಂಡಿತರು. ಒಂದರ‍್ಧ ಗಂಟೆ ಇವರ ಮಾತುಗಳನ್ನು ಕೇಳೋಣ” ಎಂದ.

ಜನರು ಕುತೂಹಲಕ್ಕೋ ಏನೋ ಬಂದು ಕುಳಿತರು.

“ಭಕ್ತಾದಿಗಳಿಗೆ ನಮಸ್ಕಾರ” ಎಂದು ತಮಿಳಿನಲ್ಲಿ ಆರಂಭಿಸಿದ ಅಪ್ಪು. “ನನ್ನ ತಮಿಳು ನಿಮಗೆ ಬೇರೆ ರೀತಿ ಕೇಳಿಸಬಹುದು. ನಿಮ್ಮ ಹಾಗೆ ನಾನು ಶಾಲೆಯಲ್ಲಿ ತಮಿಳು ಕಲಿತವನಲ್ಲ. ಆಳ್ವಾರ್‌ಗಳ ನಾಲಾಯಿರ ದಿವ್ಯ ಪ್ರಬಂಧಗಳನ್ನು ಅರ‍್ಥ ಮಾಡಿಕೊಳ್ಳಲು ನಾನು ಕಲಿತಿದ್ದು ತಮಿಳು ಭಾಷೆಯನ್ನು. ನಿಮಗೆ ಅರ್ಥವಾಗದಿದ್ದರೆ ದಯವಿಟ್ಟು ಹೇಳಿ” ಎಂದ.

“ನಮಗೆ ನಿಮ್ಮ ಭಾಷೆ ಅರ್ಥವಾಗುತ್ತಿದೆ” ಎಂದರು ಕೆಲವರು ಒಟ್ಟಿಗೇ.

“ಹಾಗಾದರೆ ಇಂದು ಕೆಲವು ವಿಷಯ ಹೇಳುತ್ತೇನೆ” ಎಂದು ಆರಂಭಿಸಿದ.

ಅವನಿಗೆ ತಿಳಿಯದ ವಿಷಯವೆಂದರೆ ನಾಯಕ್‌ನ ಕಡೆಯವರು ಇಬ್ಬರು ಜೇಬಿನಲ್ಲಿ ಪಿಸ್ತೂಲುಗಳೊಂದಿಗೆ ಅಲ್ಲಿ ಬಂದು ಪ್ರವಚನ ಕೇಳತೊಡಗಿದ್ದುದು! ಒಬ್ಬ ಅಪ್ಪುವಿನ ಶಿಷ್ಯನೊಬ್ಬನ ಕಡೆಗೆ ನೋಡಿ ಸನ್ನೆ ಮಾಡಿದ್ದು ಯಾರ ಕಣ್ಣಿಗೂ ಬೀಳಲಿಲ್ಲ.

“ಈ ಸುಂದರಬಾಹು ಎಂಬ ನಾರಾಯಣನೂ ೧೦೮ ದಿವ್ಯದೇಶಗಳಲ್ಲಿ ಒಂದು. ನಾರಾಯಣ ಎನ್ನುವ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ಎನ್ನುತ್ತಾರೆ ಕರ್ನಾಟಕದ ಮಹಾ ದಾಸ ಶಿರೋಮಣಿ ಪುರಂದರದಾಸರು” ಎಂದೊಡನೆ ಅವರ ಶಿಷ್ಯ ಪುರಂದರದಾಸ ತನ್ನ ಮೊಬೈಲ್‌ನಲ್ಲಿ ತಂಬೂರಿ ಶ್ರುತಿಯನ್ನು ಆನ್‌ ಮಾಡಿಕೊಂಡು “ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೇ, ನಾರಾಯಣ ಎಂಬೋ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ” ಎಂದು ರಾಗ, ತಾಳಬದ್ಧವಾಗಿ ಹಾಡಿದ.

ಹಾಡನ್ನು ಕೇಳುತ್ತಾ ಮೈ ಮರೆತಿದ್ದರು ಭಕ್ತರು.

ಹಾಡು ಮುಗಿದ ನಂತರ ಅಪ್ರಮೇಯ ಮಾತು ಮುಂದುವರೆಸುತ್ತಾ, “ಆಚಾರ‍್ಯತ್ರಯರಲ್ಲಿ ಒಬ್ಬರಾದ ಶಂಕರಾಚಾರ‍್ಯರನ್ನು ಈಶ್ವರನ ಅವತಾರವೆನ್ನುತ್ತಾರೆ. ಅವರು ಒಮ್ಮೆ ವೃದ್ಧರೊಬ್ಬರು ದೇವದೇವನ ಹೆಸರು ಹೇಳುವುದನ್ನು ಬಿಟ್ಟು ವ್ಯಾಕರಣ ಕಲಿಯುತ್ತಿದ್ದಾಗ ಗೋವಿಂದನ ನೆನೆ ಮೂಢಮನ ಎಂದಿದ್ದಾರೆ” ಎಂದು ಕನಕದಾಸನ ಕಡೆಗೆ ನೋಡಿದ.

“ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ

ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ” ಎಂದು ಹಾಡಿದ ಕನಕದಾಸ.

“ಅವರು ಸಾಕ್ಷಾತ್‌ ಶಂಕರನ ಅವತಾರವಾದರೂ ಗೋವಿಂದ ಅಂದರೆ ನಾರಾಯಣನ ಧ್ಯಾನ ಮಾಡಿದ್ದಾರೆ. ಹಾಗೆಯೇ ಮಧ್ವಾಚಾರ‍್ಯರು ಹನುಮನ ಅವತಾರವೆನ್ನುತ್ತಾರೆ. ಅವರು ಶ್ರೀ ವಿಷ್ಣು ಸಹಸ್ರನಾಮದ ಪ್ರತಿ ನಾಮವೂ ನೂರು ನೂರು ಅರ‍್ಥಗಳನ್ನು ಹೊಂದಿದೆ ಎಂದಿದ್ದಾರೆ. ಇನ್ನು ರಾಮಾನುಜಾಚಾರ‍್ಯರಂತೂ ರಾಮನ ಅನುಜ ಅಂದರೆ ಲಕ್ಷ್ಮಣ ಅವತಾರವೆನ್ನುತ್ತಾರೆ. ಅವರ ಗುರುಗಳೊಮ್ಮೆ ಅವರಿಗೆ ಮೋಕ್ಷಪ್ರಾಪ್ತಿಗೆ ಯಾವ ಶ್ಲೋಕ ಹೇಳಬೇಕೆಂದು ಹೇಳಿಕೊಟ್ಟರಂತೆ. ರಾಮಾನುಜರು ಆ ದೇವಸ್ಥಾನದ ಮೇಲೆ ಹತ್ತಿ ಇಡೀ ನಗರವು ಕೇಳಿಸಿಕೊಳ್ಳುವಂತೆ ಓಂ ನಮೋ ನಾರಾಯಣಾಯ ಎಂದು ಜೋರಾಗಿ ಹೇಳಿ, ಇದನ್ನು ಪಠಿಸಿ ನಿಮಗೆ ಮೋಕ್ಷಪ್ರಾಪ್ತಿ ಎಂದರಂತೆ. ಅವರ ಗುರುಗಳು ಹೀಗೆ ಮಾಡಿದ್ದರಿಂದ ನೀನು ನರಕಕ್ಕೆ ಹೋಗುವೆ ಎಂದಾಗ ನಾನೊಬ್ಬ ನರಕಕ್ಕೆ ಹೋದರೇನಂತೆ ಗುರುಗಳೇ, ಬಹಳ ಜನಕ್ಕೆ ಮೋಕ್ಷಪ್ರಾಪ್ತಿ ಆಗುತ್ತಲ್ಲಾ ಅಷ್ಟು ಸಾಕು ಎಂದರಂತೆ”

ಈ ಮಾತು ಮುಗಿಯುತ್ತಿದ್ದಂತೆ ಆ ಇಡೀ ಸಭೆ ಮಂತ್ರಮುಗ್ಧವಾಗಿತ್ತು.

ಅಪ್ರಮೇಯ ನಸುನಕ್ಕು ಮಾತು ಮುಂದುವರೆಸಿದ. “ಇಂತಹ ಮಹಾನ್‌ ದೇವದೇವನ ಬಗ್ಗೆ ಕುಲಶೇಖರ ಆಳ್ವಾರರು ಹಾಡಿರುವ ಮುಕುಂದ ಮಾಲೆಯಿಂದ ಒಂದು ಶ್ಲೋಕದ ಬಗ್ಗೆ ತಿಳಿದುಕೊಳ್ಳೋಣ” ಎಂದ.

“ಹದಿನೆಂಟನೆ ಶ್ಲೋಕ” ಎಂದಾಗ ಪುರಂದರದಾಸ ಶ್ಲೋಕವನ್ನು ಉಚ್ಚರಿಸಿದ.

“ಹೇ! ಮರ್ತ್ಯಾಃ ಪರಮಂ ಹಿತಂ ಶೃಣುತ ವೋ ವಕ್ಷ್ಯಾಮಿ ಸಂಕ್ಷೇಪತಃ |

ಸಂಸಾರಾರ್ಣವಮಾಪದೂರ್ಮಿ ಬಹುಲಂ ಸಮ್ಯಕ್ಪ್ರವಿಶ್ಯ ಸ್ಥಿತಾಃ ||

ನಾನಾಽಜ್ಞಾನಮಪಾಸ್ಯ ಚೇತಸಿ ನಮೋ ನಾರಾಯಣಾಯೇತ್ಯಮುಂ |

ಮಂತ್ರಂ ಸಪ್ರಣವಂ ಪ್ರಣಾಮಸಹಿತಂ ಪ್ರಾವರ್ತಯಧ್ವಂ ಮುಹುಃ||” ಎಂದು ಹೇಳಿ ನಿಲ್ಲಿಸಿದ.

ಅಪ್ರಮೇಯ “ಅರ್ಥಾತ್‌, ಆಪತ್ತುಗಳೆಂಬ ಅಲೆಗಳಿಂದ ಕೂಡಿದ ಸಂಸಾರವೆಂಬ ಸಾಗರದಲ್ಲಿ ಮುಳುಗಿರುವ ಹೇ ಮಾನವರೇ, ನಿಮ್ಮನ್ನು ನಿಮ್ಮ ಹಲವಾರು ವಿಧದ ಚಿಂತೆಗಳಿಂದ ಮುಕ್ತಗೊಳಿಸುವ ಶಕ್ತಿಯಿರುವ, ಪ್ರಣವದಿಂದ ಓಡಿದ “ಓಂ ನಮೋ ನಾರಾಯಣಾಯ” ಎನ್ನುವ ಮಂತ್ರವನ್ನು ಸದಾಕಾಲ ನಿಮ್ಮ ಮನಸ್ಸುಗಳಲ್ಲಿ ಜಪಿಸಿರಿ. ಈ ಶುದ್ಧಭಕ್ತಿಯ ಮಾರ್ಗವನ್ನು ಲೋಕದ ಜನರ ಆತ್ಮೋದ್ಧಾರಕ್ಕಾಗಿ ನೀಡಿದ್ದಾರೆ ಶ್ರೀ ಕುಲಶೇಖರ ಆಳ್ವಾರರು” ಎಂದು ಹೇಳಿ ನಿಲ್ಲಿಸಿದ.

ಅಳಗಪ್ಪ ಚೆಟ್ಟಿಯಾರ್‌ ಅಲ್ಲಿಯೇ ಒಂದು ಕುರ್ಚಿಯ ಮೇಲೆ ಕುಳಿತು ಆಲಿಸುತ್ತಿದ್ದವನು, “ಯಾಕೆ ಸ್ವಾಮೀ, ನಿಲ್ಲಿಸಿಬಿಟ್ಟಿರಿ?” ಎಂದು ಕೇಳಿದ.

“ಇದು ವೇದಾಂತ ಚೆಟ್ಟಿಯಾರರೇ, ಬಹಳ ಜನಕ್ಕೆ ರುಚಿಸೋದಿಲ್ಲ. ನಾನು ಯಾರ ಮೇಲೂ ಹೇರಲು ಇಷ್ಟ ಪಡುವುದಿಲ್ಲ” ಎಂದ ಮುಗುಳ್ನಕ್ಕು. ಅವನ ಗಮನವೆಲ್ಲಾ ಮುಂದಿದ್ದ ಶ್ರೋತ್ರುಗಳ ಕಡೆಗೇ ಇದ್ದಿತು.

“ಪರವಾಗಿಲ್ಲ ಹೇಳಿ” ಎಂಬ ಸ್ವರಗಳು ಅವರ ನಡುವಿನಿಂದ ಹೊರಟವು.

“ಈ ಜಗತ್ತಿನ ಸೃಷ್ಟಿಗೆ ಕಾರಣನಾದ ಓಂಕಾರ ಸಹಿತವಾಗಿ ನಮೋ ನಾರಾಯಣಾ ಎಂದು ಆ ದೇವದೇವನ ಜಪ ಮಾಡುತ್ತಿದ್ದರೆ ಸಂಚಿತ ಕರ್ಮಗಳನ್ನು ಸುಡುತ್ತಾ, ಹೊಸ ಕರ್ಮಗಳನ್ನು ಕಟ್ಟಿಕೊಳ್ಳದೇ ಮುಂದೊಂದು ದಿನ ಈ ಕರ‍್ಮಚಕ್ರದಿಂದ ಮುಕ್ತರಾಗಿ ಆನಂದದ ಸ್ಥಿತಿಗೆ ತಲುಪಬಹುದು ಎನ್ನುವ ಸೂತ್ರವನ್ನು ಹೇಳಿದ್ದಾರೆ ಶ್ರೀ ಕುಲಶೇಖರ ಆಳ್ವಾರರು. ನಮಗಿರುವುದು ಒಂದೇ ಸೂತ್ರ. ಓಂ ನಮೋ ನಾರಾಯಣಾಯ ಎಂಬ ಮಂತ್ರೋಚ್ಚಾರಣೆ” ಎಂದು ಹೇಳಿ, ಇನ್ನೂ ಅನೇಕ ವಿಷಯಗಳನ್ನು ವಿವರಿಸಿದ.

ನಂತರ ಅಳಗಪ್ಪ ಚೆಟ್ಟಿಯಾರರ ಕಡೆಗೆ ತಿರುಗಿ, ಇನ್ನು ಸಾಕೆಂಬಂತೆ ಸನ್ನೆ ಮಾಡಿ, “ಕಡೆಯದಾಗಿ ನಾನು ಆಳ್ವಾರರಲ್ಲಿ ಒಬ್ಬರಾದ ಶ್ರೀ ಆಂಡಾಳ್‌ ರಚಿಸಿದ ತಿರುಪ್ಪಾವೈಯಿಂದ ಕೊನೆಯ ಶ್ಲೋಕವನ್ನು ಹೇಳಿ ಈ ಪ್ರವಚನಕ್ಕೆ ಮಂಗಳ ಹಾಡುತ್ತೇನೆ” ಎಂದ ಅಪ್ಪು.

ಕಬೀರ್‌ದಾಸ “ವಂಗಕಡಲ್ ಕಡೈಂದ ಮಾಧವನೇ ಕೇಶವನೇ… ಎಂಗುಂ ತಿರುವರುಳ್‌ ಪೆಟ್ರು ಇನ್ಬುರುವರೆಂಬಾವಾ” ಎಂದು ಕೊನೆಯ ಪಾಶುರವನ್ನು ಹಾಡಿದ. ಅವನೊಂದಿಗೆ ಆ ಸಭೆಯಲ್ಲಿ ಬಹಳ ಜನ ದನಿಗೂಡಿಸಿದರು.

“ದೇವನಾದ ಮಾಧವ ಹಾಲ್ಗಡಲನ್ನು ಕಡೆದ. ಅವನು ಚಂದ್ರನಂತೆ ಮುಖವುಳ್ಳವನು. ಕೇಶಿಯೆಂಬ ರಾಕ್ಷಸನನ್ನು ಕೊಂದವನು. ಇವನು ಗೋಪಿಕೆಯರಿಂದ ಪೂಜಿಸಲ್ಪಟ್ಟವನು. ಯಾರು ಶ್ರೀವಿಲ್ಲಿಪುತ್ತೂರಿನ ಈ ಆಂಡಾಲ್‌ ಬರೆದ ಮೂವತ್ತು ಪಾಶುರಗಳನ್ನು ಹೇಳುವರೋ, ಚತುರ್ಭುಜನ, ಫಳಫಳನೆ ಹೊಳೆಯುವ ಕೆಂಪು ಕಣ್ಣುಳ್ಳವನ ಸ್ತುತಿಸುವರೋ ಆ ಎಲ್ಲರಿಗೂ ದೇವನ ಆಶೀರ್ವಾದ ಸದಾ ಇರುತ್ತದೆ. ಮತ್ತು ಅವರು ಯಾವಾಗಲೂ ಆನಂದದಿಂದ ಇರುತ್ತಾರೆ” ಎಂದು ಹೇಳಿ, “ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ” ಎಂದು ಮುಗಿಸಿ ಸಭೆಗೆ ನಮಸ್ಕರಿಸಿದ.

ಬಹಳ ಜನ ಭಕ್ತಾದಿಗಳು ಬಂದು ಅವನ ಪಾದ ಮುಟ್ಟಿ ನಮಸ್ಕರಿಸಿದರು. ಅನೇಕ ಪ್ರಶ್ನೆಗಳನ್ನು ಕೇಳಿದರು. ಕೆಲವು ಸಲ ಅವರ ತಮಿಳು ಅರ‍್ಥವಾಗದಿದ್ದಾಗ ಕಬೀರ್‌ ಮತ್ತು ಪುರಂದರರ ಕಡೆಗೆ ನೋಡುತ್ತಿದ್ದ. ಅವರು ಅವನಿಗೆ ಕನ್ನಡದಲ್ಲಿ ವಿವರಿಸುತ್ತಿದ್ದರು. ಆಗ ಅವನು ಉತ್ತರಿಸುತ್ತಿದ್ದ. ಅವನ ಭಾಷೆ ಅವರಿಗೆ ಸುಲಭವಾಗಿ ಅರ‍್ಥವಾಗುತ್ತಿತ್ತು. ಕೆಲವು ಕನ್ನಡದವರೂ ಇದ್ದರು. ಅವರು ಇವನ ಬಳಿ ಹೆಚ್ಚು ಸಮಯ ತೆಗೆದುಕೊಂಡು ಮಾತಾಡುತ್ತಿದ್ದರು.

ಶಿಷ್ಯರೆಲ್ಲೆಂದು ನೋಡಿದ. ಜನರ ತಲೆಗಳ ನಡುವೆ ಯಾರೆಲ್ಲಿರುವರೋ ಅರಿವಾಗಲಿಲ್ಲ.

ಅವರಲ್ಲೊಬ್ಬ ಹೊರಗೆ ಹೋದ.

ಅಲ್ಲಿ ಅವನ ಕೈ ಹಿಡಿದು ಒಂದು ಪಕ್ಕಕ್ಕೆ ಮರೆಯಾಗಿ ಕರೆದೊಯ್ದಿದ್ದ ಒಬ್ಬ.

“ಏನಾಯ್ತು?” ಎಂದು ಈ ಶಿಷ್ಯನನ್ನು ಕೇಳಿದ.

“ಅವರ ವಸ್ತುಗಳಲ್ಲಿ ಹುಡುಕ್ದೆ. ಸಿಗಲಿಲ್ಲ. ಬಹುಶಃ ಅವರ ಮೈಮೇಲೇ ಇವೆಯೇನೋ ಮೂರೂ ವಿಗ್ರಹಗಳು” ಎಂದ ಶಿಷ್ಯ.

“ಅಟ್ಯಾಕ್‌ ಮಾಡೋಣ್ವಾ?” ಎಂದ ನಾಯಕ್‌ನ ಕಡೆಯವನು.

“ಬೇಡ ಬೇಡ. ಒಂದು ವೇಳೆ ಆ ವಿಗ್ರಹಗಳು ಅವರ ಮೇಲಿಲ್ಲದಿದ್ರೆ ನಮ್ಮ ಕೆಲಸಕ್ಕೆ ಕಲ್ಲು ಬೀಳುತ್ತೆ. ಸ್ವಲ್ಪ ತಡೆದುಕೊಳ್ಳಿ” ಎಂದ ಶಿಷ್ಯ.

ನಂತರ ಅಲ್ಲಿಂದ ಟಕ್ಕನೆ ಮರಳಿ ಉಳಿದವರೊಂದಿಗೆ ಸೇರಿಕೊಂಡುಬಿಟ್ಟ.

ಅಳಗಪ್ಪ ಚೆಟ್ಟಿಯಾರ್‌ ಹಿಗ್ಗುತ್ತಿದ್ದ. ಏಕೆಂದರೆ ಬಹಳ ಜನ ಬಂದು “ಎಂಥಾ ಒಳ್ಳೆಯ ಪ್ರವಚನ ಇಡಿಸಿದ್ದಿರಿ. ಬಹಳ ಜನ ಬಂದು ಇಲ್ಲಿ ಪ್ರವಚನ ಮಾಡಿದ್ದಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿನ ಅಷ್ಟು ತೇಜಸ್‌ ಇರುವ ಸ್ವಾಮಿಗಳನ್ನು ನೋಡಿ, ಅವರ ಮಾತು ಕೇಳಿ ನಾವು ಧನ್ಯರಾದೆವು” ಎಂದಿದ್ದರು.

ಕಾರಿನಲ್ಲಿ ಅಳಗಪ್ಪ ಚೆಟ್ಟಿಯಾರ್‌ ಮನೆ ತಲುಪಿದರು ಎಲ್ಲರೂ.

ಶಿಷ್ಯನೊಬ್ಬನಿಗೆ ತಲೆಯಲ್ಲಿ ವಿಗ್ರಹಗಳೆಲ್ಲಿರಬಹುದೆಂಬ ಯೋಚನಾ ಲಹರಿ ಹರಿಯುತ್ತಲೇ ಇತ್ತು.

“ಏನು ಬಹಳ ಯೋಚನೆ ಮಾಡ್ತಿದ್ದೀ?” ಎಂದು ಅಪ್ಪು ತೀಕ್ಷ್ಣ ದೃಷ್ಟಿ ಬೀರಿದಾಗ “ಏನಿಲ್ಲ ಗುರುಗಳೇ” ಎಂದು ಹೇಳಿ ತಪ್ಪಿಸಿಕೊಂಡ.

ವಿಗ್ರಹಗಳ ಬಗ್ಗೆ ಇದುವರೆಗೆ ಅಪ್ರಮೇಯ ಅವರು ನಾಲ್ವರೊಂದಿಗೆ ಇದುವರೆಗೆ ಮಾತಾಡಿರಲಿಲ್ಲ. ಆದರೆ ಅವನ ಮನಸ್ಸಿನಲ್ಲಿ ಇದನ್ನು ಜೋಷಿಮಠ ತಲುಪಿಸೋ ಬಗೆ ಯಾವುದೆಂದು ಮಾತ್ರ ಚಿಂತನೆ ಇತ್ತು.

“ಎಲ್ಲಾ ಸರಿಯಾಗಿದೆಯಾ ಸ್ವಾಮೀ?” ಎಂದು ಒಳಗೆ ಬಂದ ಅಳಗಪ್ಪ ಚೆಟ್ಟಿಯಾರ್.‌

“ಓಹೋ, ನಿಮ್ಮ ಆತಿಥ್ಯಕ್ಕೆ ನಮ್ಮ ಕೃತಜ್ಞತೆಗಳು. ನಾಳೆ ಬೆಳಗ್ಗೆ ಹೊರಡ್ತೇವೆ” ಎಂದ ಅಪ್ಪು.

“ಅದು ಹೇಗಾಗುತ್ತೆ ಸ್ವಾಮೀ? ನಿನ್ನೆ ಅಳಗು ಪೆರುಮಾಳ್‌ ಗುಡಿಗೆ  ಬಂದಿದ್ದವರಲ್ಲಿ ಕೂಡಲ್‌ ಅಳಗರ್‌ ಪೆರುಮಾಳ್‌ ದೇವಸ್ಥಾನದ ಒಬ್ಬರು ಟ್ರಸ್ಟೀ ಬಂದಿದ್ದರು. ಅವರು ನಿಮ್ಮ ಪ್ರವಚನ ಇಷ್ಟಪಟ್ಟಿದ್ದಾರೆ. ಅದಕ್ಕೇ ನಾಳೆ ಬೆಳಗ್ಗೆ ಅಲ್ಲೊಂದು ಪ್ರವಚನ… ಹೇಗೂ ನಾಳೆ ಭಾನುವಾರ” ಎಂದ ಅಳಗಪ್ಪ ಚೆಟ್ಟಿಯಾರ್‌ ಬೇಡಿಕೆಯ ಸ್ವರದಲ್ಲಿ.

ಅಪ್ಪು ನಕ್ಕು ಒಪ್ಪಿಗೆ ನೀಡಿದ.

ಮನಸ್ಸಿನಲ್ಲಿ ಎಲ್ಲಾ ಆ ದೇವನ ಇಚ್ಛೆ. ಇಲ್ಲದಿದ್ದರೆ ಈ ಪ್ರವಚನದ ಬಗ್ಗೆ ತಾನು ಕೇವಲ ಆಲೋಚಿಸಿದ್ದಕ್ಕೇ ಅದು ನಡೆಯುವಂತಾಗಿದೆ ಎಂದುಕೊಂಡ.

ನಗರದ ನಡುವೆ ಇತ್ತು ಕೂಡಲ್‌ ಅಳಗರ್‌ ಪೆರುಮಾಳ್.‌ (ಪೆರುಮಾಳ್‌ ಎಂದರೆ ದೇವರು ಎಂಬ ವಿಶಾಲಾರ‍್ಥ ಬರುವುದಾದರೂ, ನಾರಾಯಣ ಅಥವಾ ಶ್ರೀನಿವಾಸ ದೇವರಿಗೆ ಪೆರುಮಾಳ್‌ ಎನ್ನುತ್ತಾರೆ ತಮಿಳಿನವರು)

ಐದು ಗೋಪುರಗಳ ದೇವಸ್ಥಾನದ ಒಳಗೆ ಹೋದರೆ ಅದರ ಹಿಂದೆ ಕಂಬಗಳಿಂದ ಆವೃತವಾಗಿದ್ದ ಉದ್ದನೆಯ ಹಜಾರವೊಂದಿತ್ತು. ಅಲ್ಲಿ ಒಂದು ಚಿಕ್ಕ ವೇದಿಕೆ. ಅಲ್ಲಿಯೇ ಇಂದಿನ ಪ್ರವಚನ ಎಂದ ಅಳಗಪ್ಪ ಚೆಟ್ಟಿಯಾರ್.‌

ಸ್ವಲ್ಪ ಹೊತ್ತಿಗೆಲ್ಲಾ ಅಲ್ಲಿ ಭಕ್ತಾದಿಗಳ ಗುಂಪು ಬಂದಿತು. ಶಿಷ್ಯರಲ್ಲೊಬ್ಬ ಇದ್ದಕ್ಕಿದ್ದಂತೆ ಕಾಣದಂತೆ ಮಾಯವಾದ.

ಅವನಿಗೆ ದೂರದ ಪುಷ್ಕರಣಿಯ ಆ ಕಡೆಗೆ ನಿಂತ ನಾಯಕ್‌ನ ಶಿಷ್ಯನ ದರ‍್ಶನವಾಗಿತ್ತು.

ಅಲ್ಲಿಗೆ ಓಡಿದ್ದ.

“ಅವರೆಲ್ಲಿ ಬಚ್ಚಿಟ್ಟಿದ್ದಾರೋ ತಿಳಿಯದು. ಇನ್ನು ಮುಂದಿನ ರೈಲಿಗೆ ಹತ್ತಿದಾಗ ಯಾವಾಗಲಾದರೊಮ್ಮೆ ನನಗೆ ಅವಕಾಶ ಸಿಗುತ್ತದೆ. ಆಗ ಅದನ್ನು ಹುಡುಕಿ ನಿನಗೆ ಫೋನ್‌ ಮಾಡ್ತೀನಿ” ಎಂದು ಹೇಳಿ ಸರಕ್ಕನೆ ವಾಪಸ್‌ ಬಂದಿದ್ದ.

“ಎಲ್ಲಿ ಹೋಗಿದ್ದೆ ಕಬೀರ್?”‌ ಎಂದ ಅಪ್ಪು. ಅವನೇನು ಹೇಳಲಿದ್ದನೋ ಅಷ್ಟರಲ್ಲಿ “ನೀನೂ ಹೊರಗೆ ಹೋಗಿದ್ದೆಯಾ ಕನಕ?” ಎಂದ ಅಪ್ಪು.

ಕೊರಮ ಶಿಷ್ಯ ನಿಟ್ಟುಸಿರಿಟ್ಟ. ಆ ಇನ್ನೊಬ್ಬ ಶಿಷ್ಯನೂ ಅದೇ ಸಮಯಕ್ಕೆ ಕಾಣೆಯಾಗಿದ್ದುದು ಒಳ್ಳೆಯದಾಯಿತು ಎಂದುಕೊಂಡ.

“ಇಂದು ನಾವು ಭಜಗೋವಿಂದಂ ಬಗ್ಗೆ ಮಾತಾಡೋಣ. ಭಗವತ್ಪಾದ ಶ್ರೀ ಆದಿಶಂಕರರು ರಚಿಸಿದ್ದು ಕೆಲವು ಶ್ಲೋಕಗಳು. ಅವರ ಶಿಷ್ಯರು ಮತ್ತೆ ಕೆಲವನ್ನು ಸೇರಿಸಿದ್ದಾರೆ ಎಂದು ಪ್ರತೀತಿ ಇದೆ. ಒಟ್ಟಿನಲ್ಲಿ ಒಂದು ಉತ್ಕೃಷ್ಟ ಗ್ರಂಥ” ಎಂದು ತನ್ನ ಮಾತನ್ನಾರಂಭಿಸಿದ ಅಪ್ಪು.

“ಇದಕ್ಕೆ ಆರಂಭವಾಗಿ ನಾನು ಕನ್ನಡದ ಮಹಾನ್‌ ದಾರ‍್ಶನಿಕರೆಂದು ಹೆಸರಾದ ಡಾ.ಡಿವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಮುಕ್ತಕವೊಂದನ್ನು ಹೇಳುತ್ತೇನೆ” ಎಂದು ಹೇಳಿ ಮೊದಲು ಗುಂಡಪ್ಪನವರ ಬಗ್ಗೆ, ಅವರ ಕೃತಿಗಳ ಬಗ್ಗೆ ಒಂದಿಷ್ಟು ವಿವರಿಸಿದ. ಜನರು ಅತ್ಯಂತ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು.

ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ

ದೇವ ಸರ್ವೇಶ ಪರಬೊಮ್ಮನೆಂದು ಜನಂ

ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ

ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ

ಶ್ರೀ ವಿಷ್ಣು ಈ ವಿಶ್ವಕ್ಕೆ ಮೊದಲಿನವನು, ಕಾರಣಕರ್ತನಾದವನು, ತನ್ನ ಮಾಯೆಯಲ್ಲಿಯೇ ಲೋಲನಾಗಿ ನಲಿಯುತ್ತಿರುವವನು, ದೇವನು ಎಲ್ಲಕ್ಕೂ ಒಡೆಯನಾದವನು. ಯಾವುದನ್ನು ಕಾಣದಿದ್ದರೂ ಜನ ಅದನ್ನು ಪರಬ್ರಹ್ಮ ಎಂದು ಪ್ರೀತಿಯಿಂದ ನಂಬಿಕೊಂಡಿದ್ದಾರೆಯೋ ಆ ಆಶ್ಚರ್ಯಕರವಾದ, ಅನೇಕ ವಿಧವಾಗಿ ಕಾಣುತ್ತಿರುವ ಆ ವಿಚಿತ್ರಕ್ಕೆ ನಮಿಸು. ಗೋವಿಂದ, ನಾರಾಯಣ, ಮುಕುಂದ, ವಿಷ್ಣು ಎಲ್ಲವೂ ಒಂದೇ ದೇವರ ಅನೇಕ ಹೆಸರುಗಳು” ಎಂದು ಹೇಳಿ ಕನಕದಾಸನ ಕಡೆಗೆ ನೋಡಿ, “ಭಜಗೋವಿಂದಂ ಇಪ್ಪತ್ತಾರನೆಯ ಶ್ಲೋಕ” ಎಂದ.

ಕನಕದಾಸ ಸುಶ್ರಾವ್ಯವಾಗಿ ಹಾಡಿದ.

ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ ||”

“ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಸರ್ವತ್ರ ಆತ್ಮನೊಬ್ಬನೇ ಇದ್ದಾನೆಂದೂ ಅವನೇ ನಾನು ಎಂದೂ ತಿಳಿದು ಸೋsಹಂ ಎಂದೇ ನಿಶ್ಚಯಿಸುತ್ತಾನೆ. ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ನರಕದಲ್ಲಿ ಬಿದ್ದು ಯಾತನೆಗಳನ್ನು ಅನುಭವಿಸುತ್ತಾರೆ.” ಎಂದು ವಿವರಿಸಿದ ಅಪ್ರಮೇಯ.

ಅಪ್ರಮೇಯನ ಸೂಚನೆಯಂತೆ ತುಲಸೀದಾಸ,

“ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ|
ಸೇಂದ್ರಿಯಮಾನಸನಿಯಮಾದೇವಂ
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್ ||” ಎಂದು ಹಾಡಿದ.

“ಶ್ರೀಗುರುಚರಣಕಮಲದಲ್ಲಿ ದೃಢವಾದ ಭಕ್ತಿಯನ್ನಿಡು. ಆದಷ್ಟು ಬೇಗನೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದು.
ಇಂದ್ರಿಯಗಳನ್ನು ಮನಸ್ಸನ್ನು ಈ ಪ್ರಕಾರವಾಗಿ ನಿಗ್ರಹಿಸಿರು.
ಶೀಘ್ರದಲ್ಲಿಯೇ ನಿನ್ನ ಹೃದಯದಲ್ಲಿಯೇ ಇರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತೀಯೆ.” ಎಂದು ವಿವರಿಸಿದ ಅಪ್ರಮೇಯ.

ಅವನಿಗೆ ಸಹಾಯವಾಗುವಂತೆ ಅಲ್ಲಿ ಒಬ್ಬ ಕನ್ನಡ ತಮಿಳು ಚೆನ್ನಾಗಿ ಬಲ್ಲ ಒಬ್ಬ ಭಕ್ತನಿದ್ದ. ಅವನು ಅಲ್ಲಿನ ಜನಕ್ಕೆ ಅರ‍್ಥವಾಗುವಂತೆ ವಿವರಿಸಿದ.

ಶ್ರಿಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾ

ಶ್ರೀವೇಂಕಟ ನಿವಾಸಾಯ ಶ್ರೀನಿವಾಸಯಾ ಮಂಗಳಂ ಎಂದು ಮಂಗಳ ಹಾಡಿದ ಅಪ್ರಮೇಯ.

ನಂತರ ಕೂಡಲ್‌ ಪೆರುಮಾಳ್‌ ಗರ್ಭಗುಡಿಗೆ ಹೋಗಿ “ದೇವದೇವಾ, ನನ್ನ ಈ ಕರ್ತವ್ಯ ಮುಗಿಸುವುದಕ್ಕೆ ನನಗೆ ಶಕ್ತಿ ಕೊಡು” ಎಂದ.

ಹೌದು, ಅವನು ಶಕ್ತಿ ಕೇಳಿದ್ದು ಒಳ್ಳೆಯದೇ ಆಯಿತು. ಅವನ ಶಕ್ತಿ, ಯುಕ್ತಿ ಎಲ್ಲವೂ ಬೇಕಾಯಿತು ಅವನು ಜೋಷಿಮಠದ ಆಶ್ರಮವನ್ನು ತಲುಪಲು.

ಅವನ ಮೇಲೆ ಇನ್ನೂ ಅನೇಕ ದುರುಳರು ಆಕ್ರಮಣ ಮಾಡಲಿದ್ದರು!

(ಸಶೇಷ)

ಯತಿರಾಜ್‌ ವೀರಾಂಬುಧಿ

ಚಿತ್ರಕೃಪೆ: ಗೂಗಲ್

Related post

1 Comment

  • Very Good series it’s really thrilling eager to wait for next episode

Leave a Reply

Your email address will not be published. Required fields are marked *