ಮಾರ್ಕೋಲು – ಚಿಂತನಾರ್ಹ ಕಾದಂಬರಿ
ಕಾದಂಬರಿ : ಮಾರ್ಕೋಲು
ಲೇಖಕರು : ಆಶಾ ರಘು
ಪ್ರಕಟಣೆ : ಉಪಾಸನ ಪ್ರಕಾಶನ

ಪ್ರಸಿದ್ಧ ಕಾದಂಬರಿಗಾರ್ತಿ ಆಶಾ ರಘು ಅವರ ಇತ್ತೀಚಿನ ಕಾದಂಬರಿ ’ಮಾರ್ಕೋಲು’. ಈಗಾಗಲೇ ಹಲವಾರು ಅರ್ಥಪೂರ್ಣ-ಸ್ವಾರಸ್ಯಕರ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಆಶಾ ರಘು ಅವರು ತಮ್ಮ ಪ್ರಯೋಗಶೀಲತೆಯಿಂದ, ಸೊಗಸಾಗಿ ಕಥೆ ಕಟ್ಟುವ ಸಂವಿಧಾನ ಕೌಶಲದಿಂದ, ಜಾನಪದದಿಂದ ಹಿಡಿದು ಕಾಲ್ಪನಿಕ-ಐತಿಹಾಸಿಕ-ಸಾಮಾಜಿಕ-ಪೌರಾಣಿಕದವರೆಗೆ ಹರಿದಾಡುವ ತಮ್ಮ ಕಾದಂಬರಿಗಳ ವಸ್ತುವೈವಿಧ್ಯದಿಂದ; ಪೌರಾಣಿಕದ ಅತಿ ಶಿಷ್ಟಭಾಷೆಯಿಂದ ಸಾಮಾಜಿಕದ ಆಡುಮಾತು ಹಾಗೂ ಕಸಿಗೊಂಡ ಗ್ರಾಮ್ಯ ಭಾಷಾ ಪ್ರಯೋಗದವರೆಗಿನ ಪ್ರಭೇದಗಳ ಸಮಯ- ಸಂದರ್ಭೋಚಿತ ಬಳಕೆಯಿಂದ ವಿಶೇಷವಾಗಿ ಗಮನ ಸೆಳೆದಿರುವ ಲೇಖಕಿ. ’ನೀನು ಬರೆಯೋದು ಹಾಳೆ ಮೇಲೆ; ನಾನು ಬರೆಯೋದು ಹಣೆ ಮೇಲೆ’, ’ಹಣೇಬರಾನ ಬದಲಾಯ್ಸಕ್ಕೆ ಆದ್ರೂ ಆಗಬೈದು, ಒಟ್ನಲ್ಲಿ ಎದುರಿಸಿ ನಿಲ್ಲುವಂತ ಗುಂಡಿಗೆ ಬೇಕು. ಆಗ ಆ ವಿಧಿಗೆ ಮಾರ್ಕೋಲು ತಕ್ಕಂಡು ಬಡಿಬೋದು’ – ಇವು ಕಾದಂಬರಿಯ ಕಾಡುವ ಸಾಲುಗಳು, ಒಂದು ರೀತಿಯಲ್ಲಿ ಇತ್ಯಾತ್ಮಕವಾಗಿ ಲೇಖಕಿಯ ಧೋರಣೆ- ಮನೋಧರ್ಮಗಳಿಗೂ ಕನ್ನಡಿ ಹಿಡಿಯಬಲ್ಲಂಥ ಸಾಲುಗಳು.
ಅನೇಕ ಕಥೆ-ಉಪಕಥೆಗಳು, ಸ್ವಾರಸ್ಯಕರ ಪಾತ್ರಗಳು-ಸನ್ನಿವೇಶಗಳು ಕಾದಂಬರಿಯ ಹೂರಣದಲ್ಲಿ ಅಡಕಗೊಂಡಿವೆ. ಒಂದು ಓದಿಗೆ ದಕ್ಕದಷ್ಟು ವಿವರಗಳು ದಟ್ಟವಾಗಿ ಕೃತಿಯ ಹರಹಿನಲ್ಲಿ ತುಂಬಿಕೊಂಡಿವೆ. ಕೃತಿಯನ್ನು ಕಟ್ಟಿಕೊಟ್ಟಿರುವ ಕುಶಲತೆಗೆ, ಸೂಕ್ಷ್ಮ ಸಂವೇದನಾಶೀಲ ಕಥಾಭಿತ್ತಿಯೊಂದನ್ನು ಸಮರ್ಥವಾಗಿ ಕಡೆದು ಕೊಟ್ಟಿರುವ ಜಾಣ್ಮೆಗೆ, ಭಾಷಾ-ವಸ್ತುಗಳ ವೈವಿಧ್ಯತೆ ಹಾಗೂ ಪ್ರಯೋಗಶೀಲತೆಗಳಿಗೆ, ಖಚಿತ-ಆರೋಗ್ಯಕರ ನಿಲುವುಗಳಿಗೆ ಲೇಖಕಿ ಆಶಾ ರಘು ಅವರನ್ನು ಮನಸಾರೆ ಅಭಿನಂದಿಸುತ್ತೇನೆ.

ಶ್ರೀನಿವಾಸ ಪ್ರಭು
ಆವರ್ತ ಕಾದಂಬರಿಯ ಮೂಲಕ ಓದುಗರ ಗಮನ ಸೆಳೆದಿದ್ದ ಶ್ರೀಮತಿ ಆಶಾ ರಘು ಅವರು, ‘ಈಡಿಪಸ್ ಕಾಂಪ್ಲೆಕ್ಸ್’ ಪರಿಕಲ್ಪನೆಯ ವಿಧಿಯಮ್ಮನ ಕುರಿತ ಜಾನಪದ ಕಥೆಯನ್ನು ಕಾದಂಬರಿಯಾಗಿಸುವ ತಮ್ಮ ಕನಸನ್ನು ಈ ಕೃತಿಯ ಮೂಲಕ ನನಸು ಮಾಡಿಕೊಂಡಿದ್ದಾರೆ. ಹಾಗೆ ಮಾಡುವಾಗ ವಿಧಿಗೆ ಸಂಬಂಧಿಸಿದ ಮತ್ತಷ್ಟು ಕಥೆಗಳನ್ನೂ ಸಂಗ್ರಹಿಸಿ ಅವುಗಳನ್ನೆಲ್ಲ ಸೇರಿಸಿ ಒಂದು ಸುಂದರ ಕಥನಮಾಲೆಯಾಗಿಸಿದ್ದಾರೆ. ಇದರಲ್ಲಿನ ಪ್ರತಿಯೊಂದು ಬಿಡಿ ಕಥೆಗೂ ತನ್ನದೇ ಒಂದು ಚೆಲುವಿದೆ. ಅಂತೆಯೇ, ಅವೆಲ್ಲ ಸೇರಿ ಉಂಟಾದ ಈ ಕಥಾಗುಚ್ಛರೂಪೀ ಕಾದಂಬರಿಗೂ ಮತ್ತೊಂದು ಬಗೆಯ ವಿಶಿಷ್ಟ ಚೆಲುವು ಪ್ರಾಪ್ತವಾಗಿದೆ. ಕರ್ಮ ಸಿದ್ಧಾಂತದ ಮರುನಿರೂಪಣೆ ಮಾತ್ರವೇ ಆಗಬಹುದಾದ ಅಪಾಯದಿಂದ ಕೃತಿಯನ್ನು ಪಾರುಗಾಣಿಸುವ ಉದ್ದೇಶದಿಂದ, ಮೂಲಕಥೆಗೆ ತಮ್ಮ ಕಲ್ಪನೆಯ ಮತ್ತೊಂದು ಕ್ಲೈಮ್ಯಾಕ್ಸ್ ಅನ್ನು ಬರೆದು, ವಿಧಿಗೆ ಸೆಡ್ಡು ಹೊಡೆಯುವ ಸಾಧ್ಯತೆ ಮೇಲೆ ಬೆಳಕು ಚೆಲ್ಲಿದ್ದಾರೆ.
ಜನಪದ ಕಥೆಗಳ ಈ ಮರುನಿರೂಪಣೆಯ ಭಾಷೆಯು- ಮೂಲ ಜನಪದ ಕಥೆಗಳಂತೆಯೇ ನಿರಾಡಂಬರವಾದ ಸಹಜತೆಯಲ್ಲಿ ಮತ್ತು ಮುಗ್ಧ ಗ್ರಾಮ್ಯ ಶೈಲಿಯಲ್ಲಿ ಚಿತ್ರವತ್ತಾಗಿದೆ. ಹಾಗೆ ಈ ಕೃತಿಯಲ್ಲಿ ವಸ್ತುವಿನಷ್ಟೇ ಮಹತ್ವ ಅದರ ಭಾಷೆಗೂ ಪ್ರಾಪ್ತವಾಗಿದೆ. ಗತ ಮತ್ತು ಪ್ರಸ್ತುತಗಳನ್ನು ಲೋಲಕದ ಮಾದರಿಯಲ್ಲಿ ಸ್ಪರ್ಶಿಸುತ್ತ ಸಾಗುವ ಇದರ ನಿರೂಪಣಾ ಕ್ರಮವು ಕೆಲವೆಡೆ ಮೇಲ್ನೋಟಕ್ಕೆ ಏಕರೇಖಾತ್ಮಕವೆನ್ನಿಸಿದರೂ, ಅಗತ್ಯಕ್ಕನುಗುಣವಾಗಿ ಅಲ್ಲಲ್ಲಿ ತಂತು ಮಾದರಿ ನಿರೂಪಣೆಯನ್ನೂ ಬಳಸಿಕೊಂಡಿದೆ. ನಡಿಗೆಯ ಈ ವಿಧಾನವು ಅಲ್ಲಲ್ಲಿ ವಡ್ಡಾರಾಧನೆಯ ಜನ್ಮಾಂತರದ ಕಥೆಗಳನ್ನು ನೆನಪಿಸುತ್ತದೆ.
ಆದರೆ ಶೀರ್ಷಿಕೆಯ ವಾಚ್ಯತೆ ಮತ್ತು ಶೀರ್ಷಿಕೆಯ ಗುರಿಸಾಧನೆಗೇ ಎಂಬಂತೆ ಸೇರಿಸಿರುವ- ಆದರೆ ಕಥನದ ಒಟ್ಟು ಪರಿಪ್ರೇಕ್ಷ್ಯದಿಂದ ಹೊರಗೇ ಉಳಿದಂತಿರುವ- ಬ್ರಹ್ಮನ ಕುರಿತ ಕಥೆಗಳ ಸೇರ್ಪಡೆ.. ಇವೆರಡೂ ಕಾದಂಬರಿಯ ಓಘಕ್ಕೆ ಒಂದು ಸಣ್ಣ ಭಂಗವನ್ನು ತಂದಂತೆನಿಸುತ್ತಿದೆ. ಇದರ ಹೊರತಾಗಿಯೂ ಆಸಕ್ತಿಕರ ವಸ್ತು ಮತ್ತು ಆಕರ್ಷಕ ನಿರೂಪಣೆಗಳ ಈ ಕಾದಂಬರಿಯು ದೊಡ್ಡವರಷ್ಟೇ ಅಲ್ಲದೆ ಯುವಕರು ಮತ್ತು ಮಕ್ಕಳೂ ಓದಿ ಆಸ್ವಾದಿಸುವಂತೆ ರಚಿತವಾಗಿದೆ.

-ಡಾ. ಚಿದಾನಂದ ಸಾಲಿ
ಶ್ರೀಮತಿ ಆಶಾ ರಘು ಅವರ ’ಮಾರ್ಕೋಲು’ ಒಂದು ವಿಶಿಷ್ಟ ಸ್ವರೂಪದ ಕಾದಂಬರಿ. ಇವರ ಕುಟುಂಬದಲ್ಲಿ ಒಬ್ಬರಾಗಿ ಬೆರೆತು ಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ವಿಧಿಯಮ್ಮನ ಜನಪದ ಕತೆಯನ್ನು ಹೇಳಿದ್ದನ್ನು ಸಾಹಿತ್ಯಾಸಕ್ತಿ ಬೆಳೆದ ಮೇಲೆ ಹೊಸ ಆಯಾಮದಲ್ಲಿ ಅರ್ಥ ಮಾಡಿಕೊಂಡ ಪ್ರತಿಭಾನ್ವೇಷಣೆಯ ಫಲವಾಗಿ ಈ ಕಾದಂಬರಿಯು ಮೂಡಿ ಬಂದಿದೆ. ಲಕ್ಷ್ಮಮ್ಮನವರು ಹೇಳಿದ್ದ ಕತೆಗೂ ಸೊಫೋಕ್ಲಿಸ್ಸನ ’ಈಡಿಪಸ್ ರೆಕ್ಸ್ ನಾಟಕದ ವಸ್ತುವಿಗೂ ಇರುವ ಸಾಮ್ಯತೆಯನ್ನು ಕಂಡಕೊಂಡ ಲೇಖಕಿ ಕುತೂಹಲಿಯಾಗುತ್ತಾರೆ. ಸಿಗ್ಮಂಡ್ ಫ್ರಾಯ್ಡ್ ನಿರೂಪಿಸಿದ ’ಈಡಿಪಸ್ ಕಾಂಪ್ಲೆಕ್ಸ್’ ಪರಿಕಲ್ಪನೆಯನ್ನು ವಿಧಿಯಮ್ಮನ ಕತೆ ಮತ್ತು ಸೊಫೊಕ್ಲಿಸ್ಸನ ನಾಟಕಗಳಲ್ಲಿ ಕಂಡ ಲೇಖಕಿ ಅಪಾರ ಅಧ್ಯಯನ ಮಾಡುತ್ತಾರೆ. ತಾಯಿಯೇ ಮಗನನ್ನು ಮದುವೆಯಾಗುವ ಪ್ರಸಂಗವು ಆ ಜಾನಪದ ಕತೆ ಮತ್ತು ನಾಟಕ – ಎರಡರಲ್ಲೂ ಇದ್ದದ್ದು ವಿಸ್ಮಯಕಾರಿ ವಿಷಯವಾಗಿದ್ದು ಆಶಾರಘು ಅವರು ಅದರ ಎಳೆ ಹಿಡಿದು ಅನೇಕ ಜನಪದ ಕತೆಗಳ ಅಧ್ಯಯನ ಮಾಡಿ, ತನ್ನೊಳಗೆ ತಂದುಕೊಂಡು ಸೃಜನಶೀಲ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಅಧ್ಯಯನದ ಅರಿವನ್ನು ಅಂತರಂಗದ ಸಂವೇದನೆಯಾಗಿಸಿಕೊಳ್ಳುವುದು ಸುಲಭದ ಪ್ರಕ್ರಿಯೆಯಲ್ಲ. ಇದು ಚಿಂತನಶೀಲತೆ ಮತ್ತು ಸಂವೇದನಾಶೀಲತೆಗಳನ್ನು ಒಂದಾಗಿಸುವ ಸವಾಲು. ಈ ಸವಾಲನ್ನು ಸ್ವೀಕರಿಸಿರುವ ಲೇಖಕಿ, ವಾಸ್ತವಿಕತೆ ಮತ್ತು ಕಲ್ಪಕತೆಗಳೊಂದಾದ ಕಾದಂಬರಿಯನ್ನು ಆಡುಭಾಷೆಯಲ್ಲಿ ನಿರೂಪಿಸಿ ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾಗಿಸಿದ್ದಾರೆ. ಸರಳವೆಂಬಂತೆ ಆರಂಭವಾಗುವ ಕಥನವು ಜನಪದೀಯತೆ ಮತ್ತು ಆಧುನಿಕತೆಗಳು ಒಂದೇ ಎಂಬಂತೆ ನಿರೂಪಿಸುವ ಸಂಕೀರ್ಣ ಕಥಾನಕವಾಗಿದೆ. ಕತೆಯೊಳಗೆ ಕತ್ಗಳು ಸೇರುತ್ತ, ಬೆಳೆಯುತ್ತ, ಇದೊಂದು ಸಂಯುಕ್ತ ಕಥನಕವೂ ಆಗುತ್ತದೆ. ಇಲ್ಲಿ ವಿಧಿಯಮ್ಮನ ಪಾತ್ರವೇ ನಂಬಿಕೆಗಳ ಒಂದು ಪ್ರತಿಮಾ ರೂಪ. ಈಕೆ ಹಣೆ ಬರಹವನ್ನು ಬರೆಯುವ ಕಲ್ಪಕತೆಗೆ ಕಾದಂಬರಿಯ ಕೊನೆಯಲ್ಲಿ ಬರುವ ದ್ಯಾವಮ್ಮ ಹೇಳುವ ’ಮನುಷ್ಯ ಪ್ರಯತ್ನದಿಂದ ಹಣೆಬರಹವನ್ನು ಮೀರಬೌದು; ಆ ಬ್ರಮ್ಮನಂಥ ಬ್ರಮ್ಮಂಗೇ ತಿದ್ದಿ ಬರೆಯೋವಂಗೆ ಮಾಡಬೌದು’ ಎಂದು ಮಾತು ಕಾದಂಬರಿಯ ಆಶಯವೇ ಆಗಿದೆ. ಹೊಟ್ಟೆಯಲ್ಲಿ ನಾಲ್ಕು ಕತೆಗಳಿರುವುದು, ಕನ್ನಡಿಯಲ್ಲಿ ಎಲ್ಲೋ ಇರುವ ವ್ಯಕ್ತಿಗಳನ್ನು ಕಾಣಿಸುವುದು, ವಿಧಿಯಮ್ಮ ಹಣೆ ಬರಹ ಬರೆಯುವುದು – ಮುಂತಾದ ಪ್ರಸಂಗಗಳು ಜನಪದ ಕತೆಗಳ ನೆಲೆಯಲ್ಲಿ ನಿರೂಪಿತವಾಗುತ್ತ ಒಟ್ಟು ಕೃತಿಯ ಒಡಲಲ್ಲಿ ವಾಸ್ತವವೂ ಹರಿಯುವ ವೈರುಧ್ಯವನ್ನು ಆಶಾ ರಘು ಅವರು ನಿಭಾಯಿಸಿದ್ದಾರೆ. ವಸ್ತು ಮತ್ತು ವಿನ್ಯಾಸದ ದೃಷ್ಟಿಯಿಂದ ಕನ್ನಡಕ್ಕೆ ಚಿಂತನಾರ್ಹ ಕೃತಿಯೊಂದನ್ನು ಕೊಟ್ಟಿದ್ದಾರೆ.

-ಡಾ. ಬರಗೂರು ರಾಮಚಂದ್ರಪ್ಪ
ಲೇಖಕಿ ಆಶಾ ರಘು, ಆವರ್ತ ಮುಂತಾದ ಕಥನಗಳನ್ನು ಸೃಷ್ಟಿಸಿ ಸಾಹಿತ್ಯ ಕೃಷಿಯಲ್ಲಿ ನಿರಂತರವಾಗಿ ತೊಡಗಿಕೊಂಡವರು. ಜಾನಪದ ಕಥೆಗಳಿಂದ ಸ್ಪೂರ್ತಿ ಪಡೆದು ಹುಟ್ಟಿದ ಈ ಮಾರ್ಕೋಲು ಕುತೂಹಲಭರಿತವಾಗಿ ಓದಿಸಿಕೊಂಡು ಹೋಗುವ ಕೃತಿ. ಜಾನಪದ ಸಾಂಪ್ರದಾಯಿಕ ಕಥೆಗಳಾದ ಇವುಗಳು ಸಂಸ್ಕೃತಿಯೊಳಗೆ ತಲೆಮಾರುಗಳ ಮೂಲಕ ಹರಡುತ್ತವೆ. ಇಂಥ ಅನಾಮಧೇಯ ಮೌಖಿಕ ಕತೆಗಳ ಭಿತ್ತಿಯಲ್ಲಿ ಬರುವ ಅತಿಮಾನುಷ ಕಥೆಗಳು ಹೆಚ್ಚಾಗಿ ಮಾಂತ್ರಿಕ ಜಗತ್ತಿನಲ್ಲೇ ನಡೆಯುವಂಥವು. ಅದಾಗ ಹುಟ್ಟಿದ ಕೂಸಿನ ಹಣೆಬರಹ ಬರೆವ ವಿಲಕ್ಷಣ ಸ್ತಿçà ವಿಧಿಯಮ್ಮ ಇಲ್ಲಿ ಹಲವು ಬೆರಗಿಗೆ ಕಾರಣವಾಗುತ್ತಾಳೆ. ನೀಲಾಂಬಿಕೆ ಇಲ್ಲಿ ಪ್ರಮುಖ ಪಾತ್ರವಾದಂತೆ ಗುಣಸಾಗರಿ ನದಿ ಒಂದು ಪ್ರಾದೇಶಿಕತೆಯನ್ನು ಹೇಳುವ ಜೊತೆಗೆ ಗ್ರಾಮ್ಯ ಭಾಷೆಯ ಕಥನ ಪರಿಸರವನ್ನೂ ನಿರ್ಮಿಸಿದೆ. ತಾಯಿ ವಿಧಿಯಮ್ಮನಿಂದಲೇ ಬರೆಸಿಕೊಂಡ ದುರಂತದ ಹಣೆಬರಹವನ್ನು ತಪ್ಪಿಸಲು ಮನೆ ತೊರೆದು ಹೋದ ನೀಲಾ ಹಲವು ಸಂಕಷ್ಟಕ್ಕೆ ತುತ್ತಾಗುತ್ತಾಳೆ. ಅತ್ಯಾಚಾರಕ್ಕೊಳಗಾಗಿ ಹುಟ್ಟಿದ ಮಗುವನ್ನು ಕಾಡಿನಲ್ಲಿ ಬಿಟ್ಟು, ಹತ್ತೊಂಬತ್ತು ವರ್ಷಗಳ ತರುವಾಯ ಅವಳ ಅರಿವಿಗೆ ಬಾರದೇ ಅವನನ್ನೇ ಮದುವೆಯಾಗುವ ಪ್ರಸಂಗ ಎದುರಾಗುತ್ತದೆ. ಪ್ರಥಮ ರಾತ್ರಿಯ ನಂತರ ಅಟ್ಟದಲ್ಲಿ ತೊಟ್ಟಿಲಿಗೆ ಕಟ್ಟಿದ್ದ ತನ್ನದೇ ಹಳೆಯ ಸೀರೆಯೊಂದನ್ನು ಗುರುತಿಸಿ ಅವಳು ಘಾಸಿಗೊಳ್ಳುತ್ತಾಳೆ. ಹಾಗೆಯೇ ದ್ಯಾಮವ್ವಳಿಗೆ ಬಾವಿಯಲ್ಲಿ ದೊರೆತ ಮಾಯಾಕನ್ನಡಿಯಲ್ಲಿ ತೋರಿದ ಗುಹೆಯೊಳಗಿನ ಯಜಮಾನಪ್ಪ, ಮಂತ್ರದAಡದ ಕಿನ್ನರಿಯೊಂದಿಗೆ ಸಿಕ್ಕಿಬಿದ್ದ ತಿಮ್ಮರಾಯ, ಅದೇ ಕಿನ್ನರಿಯಿಂದ ಶಾಪಗ್ರಸ್ತನಾಗಿ ಬೆಕ್ಕಿನ ಮರಿಯ ರೂಪ ತಾಳಿದ ಬಾಲಕ ನಿಜಗುಣ, ಗುರುವಿನ ಮಕ್ಕಳ ಹಣೆಬರಹ ಬದಲಿಸುವ ಪಣತೊಟ್ಟ ಶಿಷ್ಯ, ವಿಧಿಯ ಕಥೆಯನ್ನೇ ಬದಲಿಸಿ ಬರೆದ ಕತೆಗಾರ್ತಿ… ಹೀಗೆ ಕಾದಂಬರಿಗೆ ರಮ್ಯವಾದ ವಿಸ್ತಾರವಿದೆ. ಅನೇಕ ಅಲೌಕಿಕ ಘಟನೆಗಳ ಕುರಿತು ಅಧ್ಯಯನ ನಡೆಸಿದ ಆಶಾ ರಘು ಶೃದ್ಧೆಯಿಂದ ಹೆಣೆದು ಈ ಕೃತಿಯನ್ನು ಕಟ್ಟಿದ್ದಾರೆ. ಮನುಷ್ಯನ ಪ್ರಯತ್ನದಿಂದ ಯುಕ್ತಿಯಿಂದ ಹಣೇಬರವನ್ನೂ ಮೀರಬಹುದು ಎನ್ನುವ ದ್ಯಾಮವ್ವಳ ಮಾತು ಇಲ್ಲಿ ಹೆಚ್ಚು ಪ್ರಸ್ತುತ. ವಿಧಿಗೆ ಮರುಬಾಣವೇ ಬಾರುಕೋಲು, ಅದೇ ಮಾರ್ಕೋಲು. ವಾಸ್ತವವಲ್ಲದ ಇವನ್ನು ಸಾಮಾನ್ಯವಾಗಿ ನಾವೆಲ್ಲ ಕಾಲ್ಪನಿಕವೆಂದೇ ಅರ್ಥೈಸಿದರೂ ಸಾಂಕೇತಿಕವಾಗಿ ಕೆಲ ಅಂಶಗಳು ಇಲ್ಲಿ ಬರುತ್ತವೆ. ಅಂತೆಯೇ ಮನರಂಜನೆ ಅಥವಾ ನೀತಿಬೋಧನೆಗೂ ಇಂಥ ಕಥೆಗಳು ಸಹಕಾರಿಯಾಗಬಲ್ಲವು. ಆಸಕ್ತಿದಾಯಕವಾದ ಹಲವು ಸಂಗತಿಗಳನ್ನು ಇಲ್ಲಿ ರೋಮಾಂಚಕಾರಿಯಾಗಿ ಚಿತ್ರಿಸಿದ್ದಕ್ಕಾಗಿ ಲೇಖಕಿಗೆ ಸ್ನೇಹಪೂರ್ವಕ ನಮನಗಳು.

ಶ್ರೀಮತಿ ಸುನಂದಾ ಕಡಮೆ