ಚಿಂತನ ಮಂಥನ – ಕಲಾವಿದ ಬಾಬು ಜತ್ತಕರ್ ಅವರೊಂದಿಗೆ
ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಚಿತ್ರಕಲಾ ಶಿಲ್ಪಿ ಶ್ರೀ ಡಿ ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಈ ಟ್ರಸ್ಟಿನ ಮೂಲಕ ಹಾಲಭಾವಿ ಅವರ ಹೆಸರಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಹಾಲಭಾವಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಈಗ ಈ ಟ್ರಸ್ಟ್ ಮತ್ತೊಂದು ಹೆಜ್ಜೆ ಮುಂದಿಟ್ಟು ನಾಡಿನ ಶ್ರೇಷ್ಟ ಚಿತ್ರಕಲಾವಿದರನ್ನು ಆಹ್ವಾನಿಸಿ ಅವರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಈಗ ಮೊಟ್ಟ ಮೊದಲ ಬಾರಿಗೆ ನಾಡಿನ ಖ್ಯಾತ ಚಿತ್ರಕಲಾವಿದರು, ನಗುಮೊಗದ ಸಹೃದಯಿ ಪ್ರೊ.ಬಾಬು ಜತ್ತಕರ್ ಅವರನ್ನು ಆಹ್ವಾನಿಸಿದ್ದಾರೆ. ಇದೇ 2026 ರ ಆಗಸ್ಟ್ 20, 21 ಹಾಗೂ 22 ರಂದು ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ “ಸಾಧಕರೊಂದಿಗೆ ಚಿಂತನ ಮಂಥನ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ರಂಜಾನ್ ದರ್ಗಾ ಅವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಾಲಭಾವಿ ಟ್ರಸ್ಟಿನ ಅಧ್ಯಕ್ಷರಾದ ಬಿ ಮಾರುತಿ ಅವರು ವಹಿಸುತ್ತಾರೆ. ಪ್ರಾಸ್ತಾವಿಕ ನುಡಿಯನ್ನು ಟ್ರಸ್ಟಿನ ಸದಸ್ಯರಾದ ಸುರೇಶ್ ಹಾಲಭಾವಿ ಅವರು ಆಡಲಿದ್ದಾರೆ. ಟ್ರಸ್ಟಿನ ಸದಸ್ಯರೆಲ್ಲರೂ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಮೂರೂ ದಿನಗಳೂ ಜತ್ತಕರ್ ಅವರ ಕಲಾಕೃತಿಗಳ ಪ್ರದರ್ಶನವಿರುತ್ತದೆ. ಎರಡೂ ಮತ್ತು ಮೂರನೆಯ ದಿನಗಳಲ್ಲಿ ಸ್ಲೈಡ್ ಶೋ ಹಾಗೂ ಸಂವಾದಗಳು ನಡೆಯಲಿವೆ. ಈ ಅವಕಾಶವು ಬಾಬು ಜತ್ತಕರ್ ಅವರಲ್ಲಿನ ಕಲಾ ನೈಪುಣ್ಯತೆಗೆ ಸಿಕ್ಕ ಗೌರವವಾಗಿದೆ.
ಶ್ರೇಷ್ಟ ಕಲಾವಿದರ ಈ ಟ್ರಸ್ಟಿನ ಮೊದಲ ಅವಕಾಶ ತಮಗೆ ದೊರಕಿದ್ದು ತಮ್ಮ ಪುಣ್ಯವೆನ್ನುತ್ತಾರೆ.
ಕಲಾವಿದರ ಬಗ್ಗೆ:

ಸರಳ-ಸಜ್ಜನಿಕೆಯ ಸ್ನೇಹಮಯಿ ಹಿರಿಯ ಕಲಾವಿದ ಪ್ರೊಫೆಸರ್ ಬಾಬು ಜತ್ತಕರ್ ಅವರು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ದೃಶ್ಯಕಲಾ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರು.
ಅನ್ವಯಕಲಾ ವಿಭಾಗಕ್ಕೆ ಮುಖ್ಯಸ್ಥರಾಗಿದ್ದರು. ಸುಮಾರು ಮುವತ್ತು ವರ್ಷಗಳು ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಅನೇಕ ಜಾಹೀರಾತು ಸಂಸ್ಥೆ ಹಾಗೂ ನಾನಾ ಪತ್ರಿಕೆಗಳಿಗೆ ಕಲಾವಿನ್ಯಾಸಕರಾಗಿ ಶ್ರಮಿಸಿದ ಹೆಗ್ಗಳಿಕೆ ಇವರಿಗಿದೆ. ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಸಕ್ರಿಯರಾಗಿದ್ದು ಪ್ರಸ್ತುತ ಈ ಸಂಘದ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅನೇಕ ಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ.

ತುಂಕೂರ್ ಸಂಕೇತ್