ಮನೆ-ಕಟ್ ಮಾಡಿ ಬಾಡಿಗೆ ಕೊಡಿ – ಕಥೆ – 10
ಪಾರು ಅಂದು ಶಾಲೆಯಿಂದ ಸಾಕಾಗಿ ಬಂದಿದ್ದಳು. ನಲ್ಲಿ ತಿರುಗಿಸಿದರೆ ನೀರಿಲ್ಲ, ಬೆಳಗ್ಗೆ ಯಿಂದ ಸರಿಯಾಗಿ ಕರೆಂಟ್ ಇಲ್ಲಾ, ಮಕ್ಕಳು ‘ ಅಮ್ಮಾ, ನಮ್ಮ ಬೀದಿಯಲ್ಲಿ ಎಲ್ಲಾ ಕಡೆ ಕರೆಂಟ್ ಇದೆ ನಮ್ಮ ಮನೆಯಲ್ಲಿಯೇ ಇಲ್ಲಾ’ ಎಂದರು. ನೀರು ಅಷ್ಟೇ ಯಾವಾಗಲೂ ನಿಂತು ಹೋಗಿರುತ್ತಿತ್ತು. ತುಂಬಿಟ್ಟು ಕೊಳ್ಳಲು ಊರಿನಲ್ಲಿರುವ ಹಾಗೆ ಹಂಡೆ, ತೊಟ್ಟಿ ಯಾವುದು ಇಲ್ಲಿ ಇಲ್ಲವಲ್ಲಾ! ಪಾರುವಿನದು ಬೆಂಗಳೂರಿನಲ್ಲಿ ಒಂದು ಇಕ್ಕಟ್ಟಾದ ಪ್ರದೇಶದಲ್ಲಿರುವ ಬಾಡಿಗೆಮನೆ. ಅದಕ್ಕೆ ನೀರಿನ ಬಿಲ್ಲು, ಕರೆಂಟ್ ಬಿಲ್ಲು ಎಲ್ಲಾ ಸೇರಿ ಒಟ್ಟಿಗೆ ಬಾಡಿಗೆ ಕಟ್ಟುತ್ತಿದ್ದರು. ಆದರೆ ಅವರಿಗೆ ಆಗಾಗ ಸಿಗುತ್ತಿದ್ದುದು ಮಾತ್ರ ಕರೆಂಟ್ ಕಟ್, ನೀರು ಕಟ್. ಒಳಗೆ ರೂಮಿನಲ್ಲಿ ಕೂತರೆ, ಅಲ್ಲಲ್ಲಿ ಹಸಿಯಾದ ತೊಟ್ಟಿಕ್ಕುವ ಗೋಡೆ ಬೂಸ್ಟು ಎಲ್ಲಾ ಬಂದಿರುತ್ತಿತ್ತು. ಕಿಟಕಿ ಬಾಗಿಲುಗಳಾವು ಅವಳ ಮಾತನ್ನು ಕೇಳುತ್ತಿರಲಿಲ್ಲ. ಯಾವಾಗಲೂ ಕುಯ್ ಗುಡುತ್ತಿದ್ದವು. ಇಂತಹ ಮನೆಯಲ್ಲಿ ವಾಸಿಸುತ್ತಿದ್ದ ಪಾರುವಿಗೆ ಇದ್ದಕ್ಕಿದ್ದಂತೆ ಸ್ವಂತ ಮನೆಯ ಹುಚ್ಚು ಹಿಡಿಯಿತು. ನಾವು ಸ್ವಂತ ಮನೆ ಕಟ್ಟಬೇಕು ಎಂದುಕೊಂಡಳು. ಸರಿ ಯಾವುದೇ ಕಟ್ಟುತ್ತಿರುವ ಹೊಸಮನೆ ಕಂಡರು ಅದರ ಮುಂದೆ ನಿಂತು ಕನಸು ಕಾಣುತ್ತಿದ್ದಳು.
ಒಮ್ಮೆ ಗಂಡ (ಮಾವ) ನ ಬಳಿ ಹೇಳಿ ಬೈಸಿ ಕೊಂಡಿದ್ದಳು ಸಹ. ‘ಏನು ಆಟ ಆಡ್ತೀಯಾ? ಬೆಂಗಳೂರಿನಲ್ಲಿ ಮನೆ ಕಟ್ಟುವುದು ಅಂದರೆ ತಮಾಷೆನಾ, ಏನೂ ಸರಿಯಾಗಿಲ್ಲದ ಈ ಮನೆಗೆ ಅಷ್ಟೊಂದು ಬಾಡಿಗೆ ಕೊಡ್ತೀವಿ ಸ್ವಂತ ಮನೆ ಅಂತೆ, ಇಲ್ಲಿ ಸೈಟ್ ಬೆಲೆ ಗೊತ್ತಾ?’ ಹಾಗೆ – ಹೀಗೆ ಎಂದೆಲ್ಲಾ ಉಗಿದು ಉಪ್ಪು ಹಾಕಿದ್ದ.
ಆದರೂ ಅಲ್ಲಿಗೇ ಸುಮ್ಮನಿರದ ಪಾರು ಅವಳಪ್ಪ ಬಂದಾಗಲೂ ತನ್ನ ಆಸೆ ಹೇಳಿದ್ದಳು. ಅಪ್ಪ ಅವಳ ಆಸೆಯನ್ನು ಟುಸ್ ಎನಿಸದೆ. ‘ಪಾರು ನಾನು ಯಾವಾಗಲೋ ನನ್ನ ಗೆಳೆಯ ಹೇಳಿದ ಎಂದು, ಬೆಂಗಳೂರಿನಲ್ಲಿ ಒಂದು ಸೈಟ್ ತೆಗೆದುಕೊಂಡಿದ್ದೆ. ಅದು ಈಗ ಎಲ್ಲಿದೆ? ಹೇಗಿದೆ ?ಏನು ಗೊತ್ತಿಲ್ಲಾ, ಮುಂದಿನ ಸಾರಿ ಬಂದಾಗ ಕಾಗದ ಪತ್ರ ತರ್ತೀನಿ,ನೋಡೋಣ ತಡಿ. ಅಲ್ಲೇನಾದ್ರೂ ಮನೆ ಕಟ್ಟಬಹುದಾ?’ ಎಂದರು. ಸರಿ ಪಾರುವಿನ ಕನಸಿಗೆ ಗರಿ ಬಂತು. ಮನೆ ಕಟ್ಟಿದಷ್ಟೇ ಸಂತಸವಾಯಿತು. ಅಪ್ಪಾ, ಹೇಳಿದ ಹಾಗೆಯೇ ಮುಂದಿನ ಸಲ ಬಂದಾಗ ಕಾಗದಪತ್ರಗಳ ಸಮೇತ ಬಂದಿದ್ದರು. ಜಾಗ ಕೊಡಿಸಿದ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಪಾರುವನ್ನು ಕರೆದುಕೊಂಡು ಜಾಗ ನೋಡಲು ಹೋದರು ಅವರ ಜಾಗ ಚಿಕ್ಕದಾದರೂ ಚೆನ್ನಾಗಿತ್ತು. ಅಲ್ಲಲ್ಲಿ ಮನೆಗಳೂ ಆಗಿದ್ದವು, ಮುಖ್ಯ ರಸ್ತೆಗೆ ಹತ್ತಿರವಿತ್ತು. ಅವಳ ಅಪ್ಪ ಜಾಗ ಕೊಡುತ್ತೇನಮ್ಮಾ, ಮನೆ ಕಟ್ಟಿಸಿಕೊಳ್ಳಿ, ಎಂದರು. ಸರಿ ಪಾರು ಗಂಡನನ್ನು ಗೋಗರೆದು ಒಪ್ಪಿಸಿದಳು. ಅವನು ‘ಈಗೇನು ಅವಸರ’ ಎಂಬ ಅರೆಮನಸ್ಸಿನಿಂದಲೇ ಒಪ್ಪಿಕೊಂಡು ಲೋನ್ ಮಾಡಲು ತಯಾರಾದ. ಮುಂದಿನದೆಲ್ಲಾ, ಸಿನಿಮೀಯ ರೀತಿಯಲ್ಲಿ ಆಯಿತು. ಪಾರುವಿನ ಕನಸಿನ ಮನೆ ತಯಾರಾಯಿತು. ಕಟ್ಟುವ ಬರದಲ್ಲಿ ಲೋನಿನ ಜೊತೆಗೇ ಎಷ್ಟೋ ಕೈಸಾಲಗಳಾಗಿದ್ದವು. ಮಕ್ಕಳು ಚಿಕ್ಕವು ಹೇಗೋ ತೀರಿಸಬಹುದು ಎಂಬ ಭಂಡ ಧೈರ್ಯದಿಂದ ಮುನ್ನುಗ್ಗಿದ್ದರು. ಮನೆ ಈಗ ಪೂರ್ತಿಯಾಗಿ ಗೃಹ ಪ್ರವೇಶವೂ ಆಯಿತು.
ಪಾರುವಿನ ಖುಷಿಗೆ ಎಣೆಯೇ ಇಲ್ಲಾ, ಅಲ್ಲಿ ಇಲ್ಲಿ ಎಲ್ಲಾ, ಮನೆಯ ತುಂಬೆಲ್ಲಾ ,ಓಡಾಡಿದಳು. ಅವಳಿಗೆ ಎಷ್ಟು ಖುಷಿಯಾಗಿತ್ತು ಎಂದರೆ ಮಕ್ಕಳಂತೆ ಕುಣಿದಳು. ಕಟ್ಟಿದ ಶ್ರಮದ ಶೇಕಡ 80ರಷ್ಟು ಭಾಗ ಪಾರುವಿನದೇ ಆಗಿತ್ತು, ಅಪ್ಪನ ಸಹಾಯದಿಂದ ಸುಂದರ ಮನೆ ಕಟ್ಟಿ ಆಗಿತ್ತು, ಒಂದಷ್ಟು ಲೋನ್ ಮಾಡಿಕೊಟ್ಟಿದ್ದು ಬಿಟ್ಟರೆ ಗಂಡ ತಲೆಕೆಡಿಸಿಕೊಂಡಿರಲಿಲ್ಲ,( ಅವನು ಇದ್ದುದ್ದೇ ಹಾಗೆ) .
ಆದರೆ ಈ ಸಂತಸದಲ್ಲೇ ಇದ್ದ ಪಾರುವಿಗೆ ಮನೆ ಗೃಹಪ್ರವೇಶ ಆಗಿ ಒಂದು ತಿಂಗಳಾದ ಮೇಲೆ ನಿಜವಾದ ಪರಿಸ್ಥಿತಿಯ ಅರಿವಾಗಿತ್ತು. ಕೈ ಸಾಲದವರೆಲ್ಲಾ ಕೇಳುತ್ತಿದ್ದಾರೆ, ಮೇಸ್ತ್ರಿ ಇನ್ನು ಆ ಕೆಲಸ ಇದೆ. ಈ ಕೆಲಸ ಇದೆ. ಎನ್ನುತ್ತಿದ್ದರು. ದುಡ್ಡು ನೀರಿನಂತೆ ಖರ್ಚಾಗುತ್ತಿತ್ತು. ಅವಳಿಗೆ ಎಲ್ಲಾ ಆದಾಯದ ಮೂಲವೂ ನಿಂತಂತಾಯಿತು. ಮಾವ (ಗಂಡ) ನನ್ನು ಕೇಳಿದರೆ ನಾನು ಹೇಳಿದ್ದೆ ತಾನೇ ಮನೆಕಟ್ಟುವುದು ಕಷ್ಟಾ ಅಂತಾ, ಇಷ್ಟು ಬೇಗ ಬೇಡಾ ಅಂತ, ಕೇಳಿದಾ? ಏನಾರಾ ಮಾಡಿಕೋ ಎಂದುಬಿಟ್ಟ. ಈಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಪಾರುವಿನದು. ಆದರೂ ಪಾರು ವಿಚಲಿತಳಾಗಲಿಲ್ಲ, ಮಾವ (ಗಂಡ) ಹಾರಾಡುತ್ತಲೇ ಇದ್ದ. ಧೃಡ ನಿರ್ಧಾರಕ್ಕೆ ಬಂದಂತೆ ಇಡೀ ಮನೆಯನ್ನು ಒಮ್ಮೆ ನೋಡಿ ಬಂದಳು ಮೇಲೆ ಎರಡು ರೂಮ್ ಇದ್ಯಲ್ಲಾ, ಅದನ್ನು ಬಾಡಿಗೆ ಕೊಟ್ಟರೆ ಆಯ್ತು, ಕೆಳಗೆ ಹೇಗೋ ಅಡ್ಜೆಸ್ಟ್ ಮಾಡೋಣ, ‘ಮನೆ ಕಟ್ ಮಾಡಿ ಬಾಡಿಗೆ ಕೊಡಿ’ ಎಂದು ನೋವಿನಲ್ಲು ನಕ್ಕಳು,ಆದರೂ ಸಹ ಸ್ವಾಭಿಮಾನ ಹಾಗು ತೃಪ್ತಿ ಪಾರು ವಿನಃ ಮುಖದಲ್ಲಿ ರಾರಾಜಿಸುತ್ತಿತ್ತು. ನಮ್ಮ ಪಾರುವೇ ಹಾಗೇ.….
ಹೀಗೆ ಪಾರು ಹೇಳಿದ ಕತೆಗಳನ್ನು ನನ್ನ ಹತ್ತನೆಯ ಕಥೆಯೊಂದಿಗೆ ಮುಕ್ತಾಯ ಗೊಳಿಸುತ್ತಿದ್ದೇನೆ.
ಸಾಮಾನ್ಯವಾಗಿ ಕೆಳಮಧ್ಯಮ ವರ್ಗದ ಹೆಣ್ಣುಮಕ್ಕಳ ಬಾಳೆ ಹೀಗೆ ಹೋರಾಟದ ಬದುಕಾಗಿರುತ್ತದೆ. ಆಸೆ ಬೆಟ್ಟದಷ್ಟಿದ್ದರು ಅವರ ಆಸೆಗೆ ಕವಡೆ ಕಿಮ್ಮತ್ತು ಇರುವುದಿಲ್ಲ, ಒಮ್ಮೆ ನೋವು, ಒಮ್ಮೆ ನಲಿವು, ನಿರಾಸೆ, ಒಮ್ಮೆ ಸ್ವಾಭಿಮಾನದ ಭಾವನೆಗಳನ್ನು ಒಳಗೊಂಡಿರುತ್ತವೆ. ಪಾರುವಿನ ಪಾತ್ರದ ಮೂಲಕ ಪ್ರತಿಬಿಂಬಿಸುವ ಸಣ್ಣ ಪ್ರಯತ್ನ ಇಲ್ಲಿದೆ. ಸದಾ ಲವಲವಿಕೆಯ, ಚಿಟ್ಟೆಯಂತೆ ಸ್ವತಂತ್ರವಾಗಿದ್ದ ಪಾರು, ಸಂಸಾರ ತಾಪತ್ರಯಗಳಲ್ಲಿ ಬಂಧಿಯಾದರೂ ಮತ್ತೆ ಮತ್ತೆ ಲವಲವಿಕೆಯಿಂದ ಎಲ್ಲರ ಮನಸ್ಸುಗಳ ತಟ್ಟದೇ ಇರಳು.
ದಿವ್ಯ .ಎಲ್ .ಎನ್ .ಸ್ವಾಮಿ
1 Comment
Excellent agidey story mam