“ಲೇಕ್ ಜಿನೀವಾ” – ಸಾಗರವಲ್ಲ ಇದು ಮಹಾಸರೋವರ

ಲೇಕ್ ಜಿನೀವಾ

ಸ್ಫಿಡ್ಜರ್‌ಲ್ಯಾಂಡ್ ಎಂದರೆ ಸಾಕು ಎಲ್ಲರಿಗೂ ಥಟ್ಟನೆ ಅನ್ನಿಸುವುದು ಓಹ್ ಅದು ಪ್ರವಾಸಿಗರ ಸ್ವರ್ಗ ಎಂದು. ಹೌದು ಆ ನೆಲವೇ ಹಾಗೆ, ಸದಾ ಹಸಿರು ಮಂಜಿನ ನಡುವೆ ಪ್ರವಾಸಿಗರನ್ನು ತನ್ನೆಡೆಗೆ ಕೈಬೀಸಿ ಕರೆಯುವ ಸ್ವಿಡ್ಜರ್‌ಲ್ಯಾಂಡ್ ತನ್ನಲ್ಲಿ ಅನೇಕ ರಮಣೀಯ ಪ್ರವಾಸಿ ತಾಣಗಳನ್ನು ಅಡಗಿಸಿಕೊಂಡಿದೆ.

ರಮಣೀಯ ಪ್ರವಾಸಿ ತಾಣಗಳಲ್ಲಿ ಸ್ವಿಡ್ಜರ್ ಲ್ಯಾಂಡಿನ ರಾಜಧಾನಿ ಜಿನೀವಾದ ಹೃದಯ ಭಾಗದಲ್ಲಿರುವ “ಲೇಕ್ ಜಿನೀವಾ” ಅಥವಾ ಜಿನೀವಾ ಸರೋವರ ಸಹ ಕೂಡ ಒಂದು. ಸಮುದ್ರ ಅಥವಾ ಸಾಗರವನ್ನು ನೋಡದವರೇನಾದರೂ ಈ ಸರೋವರವನ್ನು ನೋಡಿದರೆ ಇದನ್ನೇ ಸಮುದ್ರವೆಂದುಕೊಂಡಾರು ಹಾಗಿದೆ ಇದರ ಅಘಾದತೆ, ಈ ಮಹಾಸರೋವರದ ದಕ್ಷಿಣ ದಂಡೆಯ ಮೇಲೆ ಜಿನೀವಾ ನಗರವಿದೆ. ರೋಮನ್ನರ ಕಾಲದಲ್ಲಿ ಲ್ಯಾಕಸ್ ಲೆಮಾನಸ್ ಎಂದು ಕರೆಯಲ್ಪಡುತ್ತಿದ್ದ ಇದು ಜಿನೀವ ನಗರ ಉದಯವಾದ ಮೇಲೆ ಜಿನೀವಾ ಸರೋವರ ಎಂದು ಪ್ರಖ್ಯಾತವಾಗಿದೆ. ಆಲ್ಪ್ಸ್ ಪರ್ವತಗಳಲ್ಲಿ ಕರಗುವ ಹಿಮರೋನೆ ಕಣಿವೆಯಲ್ಲಿ ಹರಿದು ರೋನ್ ನದಿಯಾಗಿ ಈ ಸರೋವರದ ಪೂರ್ವ ಭಾಗದಲ್ಲಿ ಸರೋವರನ್ನು ಸೇರುತ್ತದೆ. ಅರ್ಧ ಚಂದ್ರಾಕೃತಿಯಲ್ಲಿರುವ ಈ ಸರೋವರ ಸ್ವಿಡ್ಜರ್ ಲ್ಯಾಂಡಿನಲ್ಲಿರುವ ಅತ್ಯಂತ ಸಿಹಿನೀರಿನ ಸರೋವರವಾಗಿದ್ದು ಉತ್ತರಕ್ಕೆ 95 ಕಿಮೀ ಹಾಗೂ ದಕ್ಷಿಣಕ್ಕೆ 72 ಕೀಮಿ ಚಾಚಿಕೊಂಡಿದೆಯೆಂದರೆ ಈ ಸರೋವರ ಎಷ್ಟು ದೊಡ್ಡದಿರಬಹುದೆಂದು ಊಹಿಸಿಕೊಳ್ಳಿ.

ಆಲ್ಪ್ಸ್ ಪರ್ವತ ಹಾಗು ಸರೋವರ

ಸರೋವರದ ದಕ್ಷಿಣದ ಹಾಗೂ ಉತ್ತರದ ದಂಡೆಯುದ್ದಕ್ಕೂ ಹರಡಿರುವ ಹಿಮಚ್ಚಾದ್ದಿತ ಆಲ್ಪ್ಸ್ ಪರ್ವತ ಶ್ರೇಣಿ ಸರೋವರದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಪರ್ವತದ ತಪ್ಪಲ್ಲಿನಲ್ಲಿರುವ ಚಿಕ್ಕ ಚಿಕ್ಕ ಹಳ್ಳಿಗಳು, ನೀಲ ಸರೋವರ , ಹಿಮಚ್ಚಾದ್ದಿತ ಪರ್ವತ ಶ್ರೇಣಿ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ. ಈ ಸರೋವರದ ಇನ್ನೊಂದು ವಿಶೇಷತೆ ಏನೆಂದರೆ ಈ ಸರೋವರ ಶೇಕಡಾ 60 ಭಾಗ ಸ್ವಿಡ್ಜರ್‌ಲ್ಯಾಂಡ್‌ ನಲ್ಲಿದ್ದರೆ ಶೇಕಡಾ 40 ಭಾಗ ಫ್ರಾನ್ಸ್ ದೇಶದಲ್ಲಿದೆ. ಪಶ್ಚಿಮ ಯೂರೋಪಿನಲ್ಲೇ ಇದು ಅತ್ಯಂತ ದೊಡ್ಡ ಸರೋವರವಾಗಿದೆ. 18ನೇ ಶತಮಾನದಲ್ಲಿ ಜಿನೀವಾ ಶಕ್ತಿಯುತ ರಾಷ್ಟವಾದ ಮೇಲೆ ಇದು ಲೇಕ್ ಜಿನೀವಾ ಆಯಿತು. ಈ ಸರೋವರದ ಸೌಂದರ್ಯಕ್ಕೆ ಮನಸೋಲದವರೆ ಇಲ್ಲಾ. ಇದಕ್ಕೆ ಮನಸೋತ ಅನೇಕ ಪ್ರಸಿದ್ದ ವ್ಯಕ್ತಿಗಳು ತಮ್ಮ ನಿವಾಸವನ್ನು ಈ ಸರೋವರದ ದಂಡೆಯ ಮೇಲೆ ಮಾಡಿಕೊಂಡಿದ್ದರು, ಅವರಲ್ಲಿ ಮುಖ್ಯವಾಗಿ “ವಾಲ್ಡಿಮರ್ ಲೆನಿನ್, ಚಾರ್ಲಿ ಚಾಪ್ಲಿನ್” ತಮ್ಮ ಜೀವನದ ಕೊನೆಯ ವರ್ಷಗಳನ್ನು ಇಲ್ಲಿಯೇ ಕಳೆದಿದ್ದರು.

ಸರೋವರದ ಮದ್ಯೆ ಇರುವ ಕಾರಂಜಿ

ಈ ಸರೋವರದ ಇನ್ನೊಂದು ಮುಖ್ಯ ಆಕರ್ಷಣೆ ಸರೋವರದ ಮಧ್ಯದಲ್ಲಿರುವ ನೀರಿನ ಕಾರಂಜಿ. ಇದು ಅಂತಿಂಥ ಕಾರಂಜಿಯಲ್ಲ! ವಿಶ್ವದಲ್ಲೇ ಅತಿ ದೊಡ್ಡ ಕಾರಂಜಿ ಎಂಬ ಹೆಗ್ಗಳಿಕೆ ಇದರದು. ಇಲ್ಲಿಗೆ ಬರುವ ಪ್ರವಾಸಿಗರ ಮೆಚ್ಚಿನ ತಾಣವಾದ ಇದು “ಜೆಟ್ ಡಿಯಾವ್” ಎಂಬ ಹೆಸರಿನಿಂದ ಸಹ ಕರೆಯಲ್ಪಪಟ್ಟಿದೆ. ಸರೋವರವು ರೋನ್ ನದಿಗೆ ಸೇರುವ ಜಾಗದಲ್ಲಿ ಇದನ್ನು ನಿರ್ಮಿಸಿದ್ದಾರೆ. ಈ ಕಾರಂಜಿಯಿಂದ 140 ಮೀಟರ್ ಅಂದರೆ ಸುಮಾರು 466 ಅಡಿ ಎತ್ತರಕ್ಕೆ ಚಿಮ್ಮುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸರೋವರದ ನೀರಿನೊಳಗೆ ಇರುವ ಪಂಪಿನ ಮನೆಯಿಂದ 500 ಕೀಲೋವ್ಯಾಟ್ಸ್ ಮೋಟಾರ್ ಗಳನ್ನು ಬಳಸಿ ನೀರನ್ನು ಚಿಮ್ಮಿಸಲಾಗುತ್ತದೆ. ಘಂಟೆಗೆ 200 ಕೀಮೀ ವೇಗದಲ್ಲಿ ಸುಮಾರು 7000 ಲೀಟರ್ ನೀರು ಈ ಕಾರಂಜಿಯಿಂದ ಚಿಮ್ಮುವ ದೃಶ್ಯ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.

1886 ರಲ್ಲೇ ಇಲ್ಲಿ ಒಂದು ಚಿಕ್ಕ ಕಾರಂಜಿಯನ್ನು ನಿರ್ಮಿಸಲಾಗಿತ್ತು, ಆದರೆ ಅದು ಕಾರಂಜಿಯಾಗಿರದೆ ಹತ್ತಿರವೇ ಇದ್ದ ಜಲವಿಧ್ಯುತ್ ಯೋಜನೆಯ ಸುರಕ್ಷಾ ಕವಾಟವಾಗಿತ್ತು. ವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ನಂತರ ಈ ಕವಾಟದಿಂದ 90 ಅಡಿಗಳಷ್ಟು ಮೇಲಕ್ಕೆ ಚಿಮ್ಮುತ್ತಿತ್ತು, ಇದನ್ನು ನೋಡಲು ಯಾವಾಗ ಪ್ರವಾಸಿಗರು ಬರುವುದು ಜಾಸ್ತಿಯಾಯಿತೋ ಆಗ ಖಾಯಂ ಆಗಿ ದೊಡ್ಡದೊಂದು ಕಾರಂಜಿಯನ್ನು ನಿರ್ಮಿಸುವ ಉದ್ದೇಶದಿಂದ 1891 ರಲ್ಲಿ ಜಿನೀವಾದಲ್ಲಿ ನೆಡೆದ ಜಿಮ್‌ನಾಸ್ಟಿಕ್ ಉತ್ಸವದ ನೆನಪಿನಲ್ಲಿ ಈಗಿರುವ ದೊಡ್ಡ ಕಾರಂಜಿಯನ್ನು ನಿರ್ಮಿಸಲಾಯಿತು. ಪ್ರಾರಂಭದಲ್ಲಿ 230 ಅಡಿ ಚಿಮ್ಮುವಂತೆ ನಿರ್ಮಿಸಿದ್ದ ಕಾರಂಜಿಯನ್ನು 1951ರಲ್ಲಿ ಈಗಿರುವ ಮಟ್ಟಕ್ಕೆ ತರಲಾಯಿತು. ಎಡಬಾಗದ ದಂಡೆಯಿಂದ ನೆಡೆದು ಈ ಕಾರಂಜಿಯ ಸಮೀಪದವರೆಗೂ ಹೋಗಬಹುದಲ್ಲದೇ ಗಾಳಿಯಲ್ಲಿ ಮಂಜಿನ ಹನಿಗಳಂತೆ ತೇಲಿಬರುವ ತುಂತುರು ಹನಿಯಲ್ಲಿ ಮಳೆಯ ಅನುಭವವನ್ನು ಪಡೆಯಬಹುದು.

ಈ ಸರೋವರದಲ್ಲಿ ವಾಟರ್ ಸ್ಫೋರ್ಟ್ಸ್, ದೋಣಿ ವಿಹಾರವಿದ್ದು ಸಮುದ್ರ ದಂತೆ ಅಲೆಗಳು ಬರುವುದರಿಂದ ಬೀಚ್‌ನ ಅನುಭವ ನೀಡುತ್ತದೆಯಾದ್ದರಿಂದ ಈಜುವ ಮರಳದಂಡೆಯಲ್ಲಿ ವಿರಮಿಸುವ ಪ್ರವಾಸಿಗರಿಗೇನು ಬರವಿಲ್ಲ. ನಿರ್ಭಯವಾಗಿ ಸರೋವರದಲ್ಲಿ ಈಜುವ ಪ್ರವಾಸಿಗರಿಂದ ಆಹಾರಗಿಟ್ಟಿಸಲು ಬರುವ, ದಡದಲ್ಲೇ ಗೂಡುಕಟ್ಟಿ ಮೊಟ್ಟೆಇಟ್ಟು ಕಾವು ಕೊಡುತ್ತಿರುವ ದೊಡ್ಡ ದೊಡ್ಡ ಬಿಳಿ ಬಾತುಕೋಳಿಗಳು ಮಕ್ಕಳ ಆಕರ್ಷಣೆಯ ಕೇಂದ್ರ. ಫ್ರಾನ್ಸ್ ನಿಂದ ಹೊರಡುವ ಪ್ರವಾಸಿ ಹಡಗುಗಳು ಈ ಸರೋವರದಲ್ಲಿ ಬರುತ್ತವೆಂದರೆ ಈ ಜಿನೀವಾ ಸರೋವರದ ಆಳ ಅಗಲವನ್ನು ನೀವೇ ಊಹಿಸಿಕೊಳ್ಳಿ!! ಕಣ್ಣು ಹಾಯಿಸಿದಷ್ಟುದ್ದಕ್ಕೂ ಕಾಣುವ ಆಲ್ಪ್ಸ್ ಪರ್ವತ ಶ್ರೇಣಿ, ನೀಲಾಕಾಶ, ಸಮುದ್ರದ ಅನುಭವ ನೀಡುವ ನೀಲಿ ನೀರಿನ ಸರೋವರ, ಮನಸೆಳೆವ ದೈತ್ಯ ಕಾರಂಜಿ, ಇನ್ನೂ ರಾತ್ರಿ ವೇಳೆಯಲ್ಲಿ ದೀಪಾಲಂಕಾರದಿಂದ ಜಗಮಗಿಸುವ ಈ ಸರೋವರದ ಸೌಂದರ್ಯವನ್ನು ಅಲ್ಲಿಯೇ ನಿಂತು ಆಸ್ವಾದಿಸಬೇಕೇ ಹೊರತು ವರ್ಣಿಸಿದರೆ ಅನುಭವಕ್ಕೆ ಬರುವಂತಹದಲ್ಲಾ!!

ಡಾ|| ಪ್ರಕಾಶ್.ಕೆ. ನಾಡಿಗ್
ತುಮಕೂರು

Related post

Leave a Reply

Your email address will not be published. Required fields are marked *