ಹಿಂದಿನ ಸಂಚಿಕೆಯಿಂದ….
ಚಿತ್ರಕನ ಕಣ್ಣುಗಳಿಗೆ ಬೆಳುದಿಂಗಳ ಬೆಳ್ಳಿ ಬೆಳಕು ರಕ್ತ ವರ್ಣವಾಗಿ ಕಂಡಿತು.
ರಟ್ಟಾಳಿಗೆ ತಾನು ಅಪಾಯದ ಸ್ಥಿತಿಯಲ್ಲಿ ಇರುವ ಬಗ್ಗೆ ಅರಿವಿಲ್ಲ. ಆಕೆ ತನ್ನ ಪಾಡಿಗೆ ತಾನು ನಿರ್ಭಯವಾಗಿ ಗೋಡೆಯ ಮೇಲೆ ಕುಳಿತಿದ್ದಾಳೆ. ಚಿತ್ರಕನು ಒಂದು ರೀತಿಯ ಕಟಕಿ ನಗೆ ನಕ್ಕು ‘ರಾಜಕುಮಾರಿ, ತಾವು ಕುಳಿತಿರುವ ಸ್ಥಳದಿಂದ ಒಂದು ಸಲ ಬಗ್ಗಿ ನೋಡಿರಿ. ಅಲ್ಲಿಂದ ಏನಾದರೂ ಕೆಳಗೆ ಬಿದ್ದರೆ ಜೀವಂತವಾಗಿ ಉಳಿಯುವಿರಾ?’ ಎಂದು ಎಚ್ಚರಿಸಿದನು.
ರಟ್ಟಾ ತಿರಸ್ಕಾರ ಭಾವದಿಂದ ಒಂದು ಸಲ ಕೆಳಗೆ ಬಗ್ಗಿ ನೋಡಿ ‘ಭಯವಿಲ್ಲ. ನಾನೇನೂ ಬೀಳುವುದಿಲ್ಲ. ಇರಲಿ. ತಾವು ನಕ್ಕಿದ್ದು ಏಕೆ?’ ಎಂದು ಕೇಳಿದಳು.
ಸಿಟ್ಟಿನಿಂದ ತುಟಿಕಚ್ಚಿದ ಚಿತ್ರಕನು ‘ಕ್ಷಮಿಸಬೇಕು. ನಾನು ಕುತೂಹಲದಿಂದ ನಗಲಿಲ್ಲ. ಮುಂದೇನಾಗುವುದೆಂದು ನೋಡದೆ ನಿರ್ಭೀಕರಾಗಿರುವ ತಮ್ಮ… ಅದು ಇರಲಿ ಬಿಡಿ. ರಾಜನಂದಿನಿ ತಾವು ತಪ್ಪು ತಿಳಿಯದಿದ್ದರೆ, ತಮ್ಮಲ್ಲಿ ಒಂದು ಪ್ರಶ್ನೆ ಕೇಳಬಹುದೆ?’ ಎಂದನು.
‘ಏನು ಪ್ರಶ್ನೆ?’
‘ತಾವು ಹೂಣ- ದುಹಿತೆ. ತಮಗೆ ಆರ್ಯಜಾತಿಗಿಂತಲೂ ಹೂಣ ಜಾತಿಯ ಮೇಲೆ ಹೆಚ್ಚು ಅಭಿಮಾನವೆಂದು ಕಾಣುತ್ತದೆ’.
ಸ್ವಲ್ಪ ಹೊತ್ತು ಮೌನವಾಗಿ ಮನನ ಮಾಡಿದ ನಂತರ ರಟ್ಟಾ ನಿಧಾನವಾಗಿ ‘ಆರ್ಯ-! ಹೂಣ-! ನಮ್ಮ ತಾಯಿ ಆರ್ಯಜಾತಿಯವಳು. ತಂದೆ ಹೂಣ ಜಾತಿಯವರು. ಹಾಗಾದರೆ ನಾನು ಯಾವ ಜಾತಿಯವಳು? ತಿಳಿಯದು.
ಮನುಷ್ಯ ಜಾತಿ ಎಂದು ಹೇಳಬಹುದಲ್ಲವೆ?’ ರಟ್ಟಾ ಸ್ವಲ್ಪ ನಕ್ಕಳು. ‘ಮತ್ತೆ ಅಭಿಮಾನ? ದೂತ ಮಹಾಶಯರೆ, ಹಾಗೆ ನೋಡಿದರೆ ಈ ಆರ್ಯಭೂಮಿ ಯಲ್ಲಿ ವಾಸಿಸುವ ಎಲ್ಲರ ಮೇಲೂ ಅಭಿಮಾನವೇ! ಕಾರಣವೇನೆಂದರೆ, ಅವರನ್ನು ಬಿಟ್ಟು ಬೇರೆ ಜನರನ್ನು ನಾನು ನೋಡಿಯೇ ಇಲ್ಲ.’
‘ಎಲ್ಲರಲ್ಲಿಯೂ ತಮಗೆ ಒಂದೇ ತೆರನಾದ ನಂಬಿಕೆ ಸಾಧ್ಯವೆ?’
‘ಸಾಧ್ಯ, ನಂಬಿಕೆಗೆ ಯೋಗ್ಯರಾದವರು ಆರ್ಯರೇ ಆಗಿರಲಿ, ಅಥವಾ ಹೂಣರೇ ಆಗಿರಲಿ ಖಂಡಿತ ನಂಬುತ್ತೇನೆ’ ಎಂದು ಹೇಳಿ ರಟ್ಟಾ ಗೋಡೆಯ ಮೇಲಿಂದ ಕೆಳಗಿಳಿದು, ಈಗ ಮತ್ತೆ ನಾನು ಅಂತಃಪುರಕ್ಕೆ ಹಿಂದಿರುಗಬೇಕು. ಇಲ್ಲದಿದ್ದರೆ ಆರ್ಯ ಕಂಚುಕಿ ಸಿಟ್ಟಾಗುತ್ತಾರೆ’ ಎಂದು ಹೊರಡಲು ಅನುವಾದಳು.
‘ನಡೆಯಿರಿ. ನಾನು ತಮ್ಮ ಬೆಂಗಾವಲಾಗಿ ಜೊತೆಗೆ ಬರುತ್ತೇನೆ’ ಎಂದು ಚಿತ್ರಕ ಹೇಳಿದನು.
‘ಬನ್ನಿರಿ-’ ಎಂದು ಹೇಳುತ್ತ ಯಾವುದೋ ಗುಟ್ಟನ್ನು ಒಳಗೆ ಇಟ್ಟುಕೊಂಡು ಹೊರಗೆ ರಟ್ಟಾ ನಕ್ಕಳು. ಬೆಳುದಿಂಗಳ ಬೆಳಕಲ್ಲಿ ಆ ನಗುವು ಅಲೆಯಲೆಯಾಗಿ ನಾಲ್ಕು ದಿಕ್ಕಿಗೂ ಪಸರಿಸಿತು.
ಚಿತ್ರಕ ಸ್ವಲ್ಪ ಕಸಿವಿಸಿಗೊಂಡು ‘ಏತಕ್ಕಾಗಿ ನಕ್ಕಿರಿ?’ ಎಂದು ರಟ್ಟಾಳನ್ನು ಪ್ರಶ್ನಿಸಿದನು.
ರಟ್ಟಾ ಈ ಸಲ ಓರೆಗಣ್ಣಿನಿಂದ ಅವನನ್ನು ನೋಡುತ್ತ, ಮುಖ ಮುಚ್ಚಿಕೊಂಡು ‘ಓ ಅದಾ? ಏನೂ ಇಲ್ಲ ಬಿಡಿ. ಹೆಣ್ಣಿನ ನಗುವಿಗಾಗಲಿ ಅಳುವಿಗಾಗಲಿ ಏನಾದರೂ ಅರ್ಥವಿರುತ್ತದೆಯೇ? ನಡೆಯಿರಿ’ ಎಂದಳು.
ಮಧ್ಯರಾತ್ರಿಯಲ್ಲಿ ರಟ್ಟಾ ಹಾಸಿಗೆ ಬಿಟ್ಟು ಎದ್ದು ಕುಳಿತಳು. ಆಕೆಯ ತಲೆದಿಸೆಯಲ್ಲಿ ಗೋಡೆಯಲ್ಲಿ ಒಂದು ಗೂಡು ಇದ್ದಿತು. ಅದರಲ್ಲಿ ಮಣಿಮಯವಾದ ಒಂದು ಚಿಕ್ಕ ಬುದ್ಧ ವಿಗ್ರಹವಿತ್ತು. ಸಿಂಹಳ ದ್ವೀಪದಲ್ಲಿ ತಯಾರಿಸಿದ ನೀಲಕಾಂತಮಣಿಯ ಹೆಬ್ಬೆರಳು ಗಾತ್ರದ ಬುದ್ಧನ ಪ್ರತಿಮೆಯನ್ನು ಮಹಾರಾಜ ರಟ್ಟ ಧರ್ಮಾದಿತ್ಯರು ತಮ್ಮ ಮಗಳಿಗೆ ಕಾಣಿಕೆಯಾಗಿ ಕೊಟ್ಟಿದ್ದರು.
ಹಾಸಿಗೆಯಿಂದೆದ್ದ ರಟ್ಟಾ ಒಂದು ದೀಪ ಬೆಳಗಿಸಿದಳು. ಧ್ಯಾನಾಸೀನನಾದ ಬುದ್ಧ ಪ್ರತಿಮೆಯ ಮುಂದೆ ದೀಪವಿಟ್ಟು, ಕೈಮುಗಿದು, ಒಂದೇ ಮನಸ್ಸಿನಿಂದ ಬಹಳ ಹೊತ್ತು ಆ ದಿವ್ಯ ಪ್ರತಿಮೆಯನ್ನೇ ನೋಡುತ್ತಿದ್ದಳು. ಸುಮಸದೃಶವಾದ ಅವಳ ತುಟಿಗಳು ಅಲ್ಪ ಸ್ವಲ್ಪ ಅದುರುತ್ತಿದ್ದವು. ಆ ಕನ್ಯಾ ಹೃದಯದ ಯಾವ ಏಕಾಂತ ಪ್ರಾರ್ಥನೆಯು ತಥಾಗತನ ಚರಣಗಳಲ್ಲಿ ನಿವೇದಿಸಲ್ಪಟ್ಟಿತೋ ಅದನ್ನು
ಆ ತಥಾಗತನೇ ಬಲ್ಲ.
ಅನಂತರ ದೀಪ ಆರಿಸಿ ರಟ್ಟಾ ಮತ್ತೆ ನಿದ್ದೆ ಹೋದಳು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)