ಅಂಗವಿಕಲತೆ ಶಾಪವಲ್ಲ ಅದೊಂದು ಅವಕಾಶ – ಜೆಸ್ಸಿಕಾ ಕಾಕ್ಸ್

ಅಂಗವಿಕಲತೆ ಶಾಪವಲ್ಲ ಅದೊಂದು ಅವಕಾಶ – ಜೆಸ್ಸಿಕಾ ಕಾಕ್ಸ್

ಅಂಗವೈಕಲ್ಯ ಒಂದು ರೀತಿಯಲ್ಲಿ ವ್ಯಕ್ತಿಯ ಕೊರತೆಯಲ್ಲ ಎನ್ನಬಹುದು, ಬದಲಿಗೆ ಸಾಧನೆಯ ಹಸಿವು ಇರುವರಿಗೆ ಅದೊಂದು ಅವಕಾಶವೇ ಸರಿ. ವಿಕಲಚೇತನರೂ ಇಂದು ಮಹತ್ತರವಾದ ಸಾಧನೆಯನ್ನು ಮಾಡಿ ಪ್ರಾಪಂಚಿಕ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಅವರ ಪೈಕಿ ನಿಕ್ ವುಜಿಸಿಕ್, ಜೆಸ್ಸಿಕಾ ಕಾಕ್ಸ್, ಮಾನಸಿ ಜೋಶಿ, ಆಸ್ಕರ್ ಪಿಸ್ಟೋರಿಯಸ್ ಮೊದಲಾದವರು ಪ್ರಮುಖರು.

ಜೆಸ್ಸಿಕಾ ಕಾಕ್ಸ್ ಗರ್ಭಾವಸ್ಥೆಯಲ್ಲಿ ಕಂಡುಬರುವ ಅನುವಂಶಿಕ ರೋಗದ ಕಾರಣದಿಂದ ಹುಟ್ಟುವಾಗಲೇ ತೋಳುಗಳಿಲ್ಲದೆ ಹುಟ್ಟಿದಳು. ನನಗೇಕೆ ಎಲ್ಲಾ ಮಕ್ಕಳಿಗೂ ಇರುವಂತೆ ಎರಡು ತೋಳುಗಳು ಇಲ್ಲ ಎನ್ನುವುದು ಜೆಸಿಕಾ ಕಾಕ್ಸ್ ಳಿಗೆ ಆ ವಯಸ್ಸಿನಲ್ಲಿ ತಿಳಿದಿರಲಿಲ್ಲ. ಹುಟ್ಟುವಾಗಲೇ ಜೆಸ್ಸಿಕಾಗೆ ದೈಹಿಕವಾಗಿ ಇಷ್ಟೆಲ್ಲಾ ಕೊರತೆಗಳು ಇದ್ದರೂ, ಆಕೆ ದೈನಂದಿನ ವೈವಿಧ್ಯಮಯ ಚಟುವಟಿಕೆಗಳಾದ ಜಿಮ್ನಾಸ್ಟಿಕ್, ನೃತ್ಯ ಮತ್ತು ಹಾಡುಗಾರಿಕೆ ಹಾಗೂ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಉಪನ್ಯಾಸವನ್ನು ಯಾವುದೇ ಅಂಜಿಕೆಯಿಲ್ಲದೇ ಮಾಡುತ್ತಿದ್ದಳು. ಜೆಸ್ಸಿಕಾ ತನಗೆ ಕೈಗಳು ಇಲ್ಲವೆಂದು ಮನೆಯ ಮೂಲೆಯಲ್ಲಿ ಕುಳಿತುಕೊಳ್ಳುವ ಬದಲು ರಸ್ತೆಯಲ್ಲಿ ಸಾಗುವ ಜನರು ತನ್ನನ್ನು ನೋಡಿ ಆಶ್ಚರ್ಯಪಡುವಂತೆ ರಸ್ತೆಯ ಬದಿಯ ಅಂಗಡಿಗಳ ಮುಂಭಾಗದಲ್ಲಿ ಕುಳಿತು ತನ್ನ ಕಾಲುಗಳ ಮೂಲಕ ತಿಂಡಿಯನ್ನು ತಿನ್ನುತ್ತಿದ್ದಳು. ಈ ಮೂಲಕ ತಾನು ಕೈಗಳಿಲ್ಲದ ಅಂಗವಿಕಲೆಯಾಗಿ ನಿರರ್ಥಕ ಬದುಕನ್ನು ಬದುಕುವ ಬದಲು ಎಲ್ಲರಿಗೂ ಮಾದರಿಯಾಗಿ ಧನಾತ್ಮಕ ಶಕ್ತಿಯಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆಗಳನ್ನು ಇಟ್ಟಿದ್ದಳು.

ಜೆಸ್ಸಿಕಾಳು ತನ್ನ ಹೆತ್ತವರೇ ತನ್ನ ರೋಲ್ ಮಾಡೆಲ್‌ಗಳು ಮತ್ತು ತನ್ನ ಬದುಕಿನ ಆಧಾರ ಸ್ತಂಭಗಳೆಂದು ಹೇಳುತ್ತಾಳೆ. ಜೆಸ್ಸಿಕಾಳ ತಾಯಿಯು ನೀನು ಎರಡೂ ಕೈಗಳು ಇಲ್ಲದಿದ್ದರೂ ಕೈಗಳಿರುವ ಎಲ್ಲರಂತೆ ಎಲ್ಲಾ ಕೆಲಸಗಳನ್ನು ಮಾಡಬಲ್ಲೆ ಎಂದು ಪ್ರೇರಣೆಯನ್ನು ನೀಡುತ್ತಿದ್ದರು. ಇಂತಹ ಮಗಳು ಹುಟ್ಟಿದ್ದಕ್ಕಾಗಿ ನನ್ನ ತಂದೆಯು ಎಂದು ಬೇಸರಿಸಿಕೊಂಡಿಲ್ಲ ಮತ್ತು ಕಣ್ಣೀರು ಹಾಕಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾಳೆ ಜೆಸ್ಸಿಕಾ. ಅಂಗವಿಕಲ ಮಗಳನ್ನು ಒಪ್ಪಿಕೊಳ್ಳುವುದು ಯಾವುದೇ ಒಬ್ಬ ತಂದೆಗೆ ಅತ್ಯಂತ ಕಠಿಣ ಮತ್ತು ಸವಾಲಿನ ಕೆಲಸ. ತಂದೆಯ ಈ ತ್ಯಾಗದ ಕಾರಣದಿಂದಾಗಿಯೇ ನಾನು ಇಂದು ಇಂತಹ ಹೆಸರನ್ನು ಗಳಿಸಿದ್ದೇನೆ ಎನ್ನುತ್ತಾಳೆ ಜೆಸ್ಸಿಕಾ.

ಜೆಸ್ಸಿಕಾ ತನ್ನ 10ನೇ ವಯಸ್ಸಿನಲ್ಲಿ, ಸಿಯೆರಾ ವಿಸ್ಟಾ ನಗರದ ಶಾಲೆಯಲ್ಲಿ ಟೇಕ್ವಾಂಡೋದಲ್ಲಿ ತರಬೇತಿಯನ್ನು ಆರಂಭಿಸಿ 14ನೇ ವಯಸ್ಸಿನಲ್ಲಿ, ಬ್ಲಾಕ್‌ಬೆಲ್ಟ್ ಪದವಿ ಗಳಿಸಿದಳು. ನಂತರ ಅರಿಝೋನಾ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಕಾಕ್ಸ್ ಕ್ಯಾಂಪಸ್‌ನ ಅಮೆರಿಕನ್ ಟೇಕ್ವಾಂಡೋ ಅಸೋಸಿಯೇಷನ್ ಕ್ಲಬ್‌ನಲ್ಲಿ ತನ್ನ ಟೇಕ್ವಾಂಡೋ ತರಬೇತಿಯನ್ನು ಪುನರಾರಂಭಿಸಿ ಕೈಗಳ ಬದಲು ಮೊಣಕಾಲಿನ ಮೂಲಕ ಎದುರಾಳಿಗೆ ಸ್ಟ್ರೋಕ್ ನೀಡುವುದನ್ನು ಕಲಿತಳು. ಎ.ಟಿ.ಎಯಲ್ಲಿ ಕಾಕ್ಸ್ ತನ್ನ ಎರಡನೇ ಮತ್ತು ಮೂರನೇ ಬ್ಲಾಕ್‌ ಬೆಲ್ಟ್ ಪದವಿಯನ್ನೂ ಗಳಿಸಿದಳು. ಕಾಕ್ಸ್ 2014ರಲ್ಲಿ ಅರಿಜೋನ ರಾಜ್ಯ ಚಾಂಪಿಯನ್ ಎಂಬ ಬಿರುದನ್ನೂ ಪಡೆದಳು. ಅವಳು ಎಂದಿಗೂ ವಿಕಲಚೇತನರ ಸ್ಪರ್ಧೆಯ ರಿಂಗ್‌ನಲ್ಲಿ ಸ್ಪರ್ಧಿಸದೇ ಸಾಮಾನ್ಯ ಆಟಗಾರರ ಸ್ಪರ್ಧೆಯಲ್ಲೇ ಭಾಗವಹಿಸಿರುವುದು ವಿಶೇಷ.

ಜೆಸ್ಸಿಕಾ ಪ್ರಮಾಣೀಕೃತ ಸ್ಕೂಬಾ ಡೈವರ್ ಆಗಿಯೂ ಗುರುತಿಸಿಕೊಂಡಿದ್ದು, 2005ರಲ್ಲಿ ರೈಟ್ ಫ್ಲೆöಟ್ ಮೂಲಕ ಮೊದಲ ಬಾರಿಗೆ ಸಿಂಗಲ್ ಇಂಜಿನ್ ವಿಮಾನದಲ್ಲಿ ಹಾರಾಟ ನಡೆಸಿ ಮೂರು ವರ್ಷಗಳ ತರಬೇತಿಯ ನಂತರ 2008 ರಲ್ಲಿ ಪೈಲೆಟ್ ಪ್ರಮಾಣ ಪತ್ರವನ್ನು ಪಡೆದಳು. ಈ ಮೂಲಕ ತೋಳುಗಳಿಲ್ಲದೆ ಜನಿಸಿದ ಜೆಸ್ಸಿಕಾ ತನ್ನ ಪಾದಗಳಿಂದ ವಿಮಾನವನ್ನು ಹಾರಿಸಿದ ಮೊದಲ ಪರವಾನಗಿ ಪಡೆದ ಪೈಲಟ್ ಆಗಿದ್ದಾಳೆ. ಜೆಸ್ಸಿಕಾ 10,000 ಅಡಿ ಎತ್ತರದಲ್ಲಿ ಲಘು ಕ್ರೀಡಾ ವಿಮಾನವನ್ನು ಹಾರಿಸಲು ಅರ್ಹತೆಯನ್ನು ಪಡೆದಿದ್ದು, ಇದಕ್ಕಾಗಿ ಜೆಸ್ಸಿಕಾ ಏಬಲ್ ಫ್ಲೆöಟ್ ಸ್ಕಾಲರ್‌ಶಿಪ್‌ನ್ನೂ ಪಡೆದಿದ್ದಳು. ಸುಮಾರು 38 ವರ್ಷ ವಯಸ್ಸಿನ ಜೆಸ್ಸಿಕಾ ಕೇವಲ 1.55 ಮೀ ಎತ್ತರವಿದ್ದು, ಈಕೆ ಮಹಿಳಾ ವಿಭಾಗದಲ್ಲಿ ಕೈಗಳಿಲ್ಲದ ಪ್ರಥಮ ಮಹಿಳಾ ಪೈಲೆಟ್ ಆಗಿ ಇತಿಹಾಸ ನಿರ್ಮಿಸಿದ್ದಾಳೆ. ಒಂದಲ್ಲ ಒಂದು ಅಚ್ಚರಿಯನ್ನು ನಿರ್ಮಿಸುವುದರಲ್ಲಿ ಸದಾ ಮುಂದಿರುವ ಜೆಸ್ಸಿಕಾ ವಿಶ್ವ ತಾಯಂದಿರ ದಿನದಂದು ಸಹ ಪೈಲೆಟ್ ಅನುಪಸ್ಥಿತಿಯಲ್ಲಿ ಏಕಾಂಗಿಯಾಗಿ ವಿಮಾನವನ್ನು ಆಗಸಕ್ಕೆ ಹಾರಿಸಿ ಅಲ್ಲಿಂದ ‘ನೋಡಮ್ಮಾ ಆಕಾಶ ಮುಟ್ಟಿದ ನಿನ್ನ ಕೈಗಳಿಲ್ಲದ ಮಗಳನ್ನು’ ಎಂಬ ಘೋಷಣೆ ಇರುವ ಬಾವುಟವನ್ನು ವಿಮಾನದಿಂದ ಕೆಳಕ್ಕೆ ಎಲ್ಲರಿಗೂ ಕಾಣಿಸುವಂತೆ ಬಿಟ್ಟು ವಿಭಿನ್ನವಾಗಿ ತನ್ನ ತಾಯಿಗೆ ಗೌರವ ಸಲ್ಲಿಸಿದ್ದಳು. ಅಂದಿನ ದಿನಕ್ಕೆ ಜೆಸ್ಸಿಕಾ ಬರೋಬ್ಬರಿ 130 ಗಂಟೆಗಳ ವಿಮಾನದ ಹಾರಾಟವನ್ನು ಪೂರ್ಣಗೊಳಿಸಿದ್ದಳು.

ಜೆಸ್ಸಿಕಾ ಪ್ರಥಮ ಬಾರಿಗೆ ಕಾರನ್ನು ಕಲಿಯಬೇಕೆಂಬ ಹಂಬಲ ವ್ಯಕ್ತಪಡಿಸಿದಾಗ ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ಕಾರಿನಲ್ಲಿ ಆಕೆಗಾಗಿ ಒಂದಷ್ಟು ವಿಶೇಷ ಬದಲಾವಣೆಗಳನ್ನು ಮಾಡಿಕೊಟ್ಟಿತ್ತು. ತನ್ನ ಕಾಲಿನ ಮೂಲಕ ಸರಾಗವಾಗಿ ಜೆಸ್ಸಿಕಾ ಕಾರು ಚಲಾಯಿಸಲು ಕಲಿತ ನಂತರ ಕಾರಿನಲ್ಲಿ ಮಾಡಿದ್ದ ಎಲ್ಲಾ ಬದಲಾವಣೆಗಳನ್ನು ತೆಗೆಸಿ ಸಾಮಾನ್ಯ ಕಾರು ಚಾಲಕರು ಕಾರನ್ನು ಚಲಾಯಿಸುವಂತೆ ಆಕೆಯೂ ಚಲಾಯಿಸಲು ಪ್ರಾರಂಭಿಸಿ ಚಾಲನಾ ಪರವಾನಗಿಯನ್ನು ಪಡೆದುಕೊಂಡಳು. ನಂತರ 2005ರಲ್ಲಿ ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರದಲ್ಲಿ ಪದವಿಯನ್ನು ಪಡೆದ ನಂತರ ಆಕೆ ಪಟ್ಟಣದ ಗ್ಯಾಸ್ ಸ್ಟೇಷನ್‌ನಲ್ಲಿ ತನ್ನ ಕಾರಿಗೆ ಗ್ಯಾಸ್‌ನ್ನು ತಾನೇ ಖುದ್ದು ಹಾಕುವ ಮೂಲಕ ಸಾರ್ವಜನಿಕರಿಗೆ ಅಚ್ಚರಿಯ ಹುಡುಗಿಯಾಗಿ ಕಾಣಿಸಿಕೊಂಡಿದ್ದಳು. ಜೆಸ್ಸಿಕಾ ತನ್ನ ಕಾಲಿನ ಮೂಲಕ ನಿಮಿಷಕ್ಕೆ ಸುಮಾರು 25 ಶಬ್ದಗಳ ವೇಗದಲ್ಲಿ ಬರೆಯುತ್ತಾಳೆ. ಈಕೆಯ ಕಾಲುಗಳೇ ಕೈಗಳಾಗಿದ್ದು, ಕಾಲುಗಳಿಂದಲೇ ತಲೆಕೂದಲನ್ನು ಡ್ರೈ ಮಾಡಿಕೊಳ್ಳುತ್ತಾಳೆ, ಕಾಲಿನಿಂದಲೇ ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತಾಳೆ, ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಅನ್ನು ಕಾಲಿನ ಮೂಲಕವೇ ಹಾಕಿಕೊಳ್ಳುತ್ತಾ ಎಲ್ಲರಂತೆ ಆಕೆಯು ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ.

ಇಂದು ಜೆಸ್ಸಿಕಾ ಒಬ್ಬ ಅತ್ಯುತ್ತಮ ಪ್ರೇರಣಾತ್ಮಕ ಭಾಷಣಕಾರ್ತಿಯಾಗಿ ವಿಶ್ವಮಟ್ಟದಲ್ಲಿ ಹೊರಹೊಮ್ಮಿದ್ದಾಳೆ. ನನಗೆ ಕೈಗಳಿಲ್ಲವೇನೋ ನಿಜ ಆದರೆ ನಾನು ಸಾಗುವ ದೂರವನ್ನು ನನ್ನ ಕೈಗಳಿಲ್ಲದ ಕೊರತೆಯು ಎಂದಿಗೂ ತಡೆಯಲಾರವು ಎಂದು ಆತ್ಮವಿಶ್ವಾಸದಿಂದ ಜೆಸ್ಸಿಕಾ ಹೇಳುತ್ತಾಳೆ. ಕಾಕ್ಸ್ ಪ್ರಸ್ತುತ ಪ್ರೇರಕ ಭಾಷಣಕಾರರಾಗಿ ಕೆಲಸ ಮಾಡುತ್ತಿದ್ದು, 20 ವಿವಿಧ ದೇಶಗಳಲ್ಲಿ ತನ್ನ ಸಂದೇಶವನ್ನು ಹಂಚಿಕೊಂಡಿದ್ದಾರೆ. 2015 ರಲ್ಲಿ ತನ್ನ ಜೀವನದಲ್ಲಿ ಕಲಿತ ಪಾಠಗಳ ಮೂಲಕ ತಮ್ಮದೇ ಸವಾಲುಗಳನ್ನು ಜಯಿಸಲು ಜನರನ್ನು ಪ್ರೇರೇಪಿಸುವ ಸಲುವಾಗಿ ಕಾಕ್ಸ್ ತನ್ನ ಸ್ವಆತ್ಮಚರಿತ್ರೆಯ ಪುಸ್ತಕವನ್ನು ಬರೆದು ಪ್ರಕಟಗೊಳಿಸಿದ್ದಾಳೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
sonyp83@gmail.com

Related post