ಮಾರ್ಕೋಲು – ವಿಧಿಯಾಟದ ಕಾದಂಬರಿ
ಪುಸ್ತಕ – ಮಾರ್ಕೋಲು
ಲೇಖಕರು – ಆಶಾ ರಘು
ಪ್ರಕಟಣೆ : ಉಪಾಸನ ಬುಕ್ಸ್
ಮಾರ್ಕೋಲು’ ಆಶಾ ರಘು ಅವರು ರಚಿಸಿದ ಒಂದು ಜಾನಪದ ಆಧಾರಿತ ಕಾದಂಬರಿ. ಅವರೇ ತಿಳಿಸಿರುವಂತೆ. ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ಗೆ ಸಮಾನವಾದ ಕಥಾವಸ್ತುವನ್ನು ಹೊಂದಿರುವ ಈ ಕಥೆಯ ನಡು ನಡುವೆ ಲೇಖಕರು ‘ಸಂತಾಲಿ’, ‘ಮರಾಠಿ’, ತಮಿಳು ಕನ್ನಡ ಮೊದಲಾದ ಭಾಷೆಯ ಜನಪದ ಕಥೆ- ಉಪಕಥೆಗಳನ್ನೂ ಬಳಸಿದ್ದಾರೆ. ಇದು ಕಾದಂಬರಿಗೆ ವಿಶೇಷ ಮೆರಗು ನೀಡುವಂತಿದೆ.

ಬಾಲ್ಯದಲ್ಲಿ ಲೇಖಕಿಗೆ ಸಂಪಿಗೆ ಲಕ್ಷ್ಮಮ್ಮನವರು ಹೇಳುತ್ತಿದ್ದ ವಿಧಿಯಮ್ಮನ ಕಥೆಗಳಿಂದ ಸ್ಪೂರ್ತಿ ಪಡೆದು ಅವರು ಈ ಕಾದಂಬರಿ ರಚಿಸಿದ್ದಾರೆ. ವಿಧಿಯಮ್ಮನ ಜನಪದ ಕಥೆಗಳನ್ನು ಆಧರಿಸಿದ ಈ ಕೃತಿಯು, ವಿಧಿಗೆ ಮರುಬಾಣ ಎಂಬ ಅರ್ಥದಲ್ಲಿ ಬಾರುಕೋಲು ಎಂಬ ಸಂಕೇತದೊಂದಿಗೆ ಮಾನವನ ಪ್ರಯತ್ನ ಮತ್ತು ಯಕ್ತಿಗಳಿಂದ ಹಣೆಬರಹವನ್ನು ಬದಲುಸಬಹುದು ಎಂಬುದನ್ನೂ, ಬದಲಿಸಲಾಗದು ಎಂಬಂತಹ ಎರಡೂ ಭಾವಗಳನ್ನು ನಾವು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ವಿಧಿಯಮ್ಮ ಮಗುವಿನ ಹಣೆ ಬರೆಹ ಬರೆಯುವುದು ಆ ಮಗುವಿನ ಪೂರ್ವಜನ್ಮದ ಕರ್ಮಾನುಸಾರ ಮತ್ತು ಅದನ್ನು ಆ ದೇವರೇ ಅವಳಿಂದ ಬರೆಸುವುದೆಂದೂ ಅವಳು ನುಡಿಯುuತ್ತಾಳೆ. ಮನುಷ್ಯ ಪ್ರಯತ್ನ, ಅವನ ಯುಕ್ತಿ ಮತ್ತು ವಿಧಿಯ ನಡುವೆ ನಡೆಯುವ. ಸಂಘರ್ಷವನ್ನು ಈ ಕಾದಂಬರಿ ನಮ್ಮೆದುರು ತೆರೆದಿಡುತ್ತಾ ಹೋಗುತ್ತದೆ.
ನೀಲಾಂಬಿಕೆಯ ಪಾತ್ರ ಇಲ್ಲಿ ಪ್ರಮುಖವಾದುದು. ಅವಳು ಅವಳ ಪ್ರಿಯಕರ ಕಾಮರಾಯ, ಅವಳ ಅಕ್ಕ ಕನಕಾಂಬಿಕೆ ಇವರುಗಳ ಸರಳವಾದರೂ ಹಳ್ಳಿಯ ಸಡಗರದ ಜೀವನ. ಊರಿನ ಮಾಂಕಾಳಮ್ಮನ ಜಾತ್ರೆಯ ಸಂಭ್ರಮ, ಗುಣಸಾಗರಿ ನದಿಯ ಸ್ವರೂಪ, ಕೈಲಾಸನಾಥೇಶ್ವರ ದೇವಸ್ಥಾನದ ವಿವರಣೆ ಹೀಗೆ ಎಲ್ಲವೂ ಒಂದು ಸುಂದರ ಹಳ್ಳಿಯ ಚಿತ್ರಣವನ್ನು ಓದುಗರೆದುರು ತೆರೆದಿಡುತ್ತದೆ.
ತನ್ನ ಹೆತ್ತ ತಾಯಿಯಾದ ವಿಧಿಯಮ್ಮನೇ ತನಗೆ ಬರೆದ ಹಣೆಬರೆಹವಾದ ಮದುವೆಗೆ ಮೊದಲೇ ತಾಯಿಯಾಗುವುದು, ನಂತರ ತನ್ನ ಮಗನನ್ನೇ ಮದುವೆಯಾಗುವಳು ಎಂಬ ದುರಂತ ಬರೆಹವನ್ನು ಸುಳ್ಳು ಮಾಡಲೆಂದು ತನ್ನ ಪ್ರಿಯಕರನನ್ನು ಮದುವೆಯಾಗುವೆ ಎಂದಾಗ ನೀಲಾಳ ತಂದೆ ಒಪ್ಪದಿದ್ದಾಗ, ಅವಳ ತಾಯಿ ಹೇಳುವ “ಏನೋ ಹುಚ್ಚು… ನಾಲ್ಕು ದಿನ ಕುಣೀತವೆ ! ಕಾಲಿನಾಗಿನ ಗೆಜ್ಜೆ ಕಳ್ಕಂಡಾಗ ಕುಣಿತ ತಾನಾಗೇ ನಿಲ್ತದೆ” ಎನ್ನುವ ಮಾತು ಅವಳ ಜೀವನದಲ್ಲಿ ಮುಂದಾಗುವ ದುರಂತದ ಸೂಚನೆಯಂತಿದೆ.
ತೆಪ್ಪ ನಡೆಸುತ್ತಿದ್ದ ಕಾಮರಾಯ ವಿಧಿಯಾಟಕ್ಕೆ ಬಲಿಯಾಗಿ ನದಿಯ ಪಾಲಾದಾಗ, ತನ್ನ ಅಮ್ಮ ತನಗೆ ಬರೆದ ಹಣೆಬರಹವನ್ನು ಬದಲಾಯಿಸಬೇಕೆಂದು, ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗುವ ನೀಲಾಳ ಕಾಡಿನ ಜೀವನ, ಅಲ್ಲಿ ಅವಳು ಅನುಭವಿಸುವ ಕಷ್ಟಗಳನ್ನು ಓದಿದಾಗ ನಾವೇ ಕಾಡಿನಲ್ಲಿದ್ದಂತೆ ಅನಿಸದೇ ಇರದು.
ಕಾಡಿನಲ್ಲಿದ್ದ ಅಜ್ಜಿಯೊಬ್ಬಳ ಗುಡಿಸಲಿನಲ್ಲಿ ನೀಲಾಳು ಇರುವಾಗ ಅಲ್ಲಿಗೆ ಬಂದ ಒಬ್ಬ ಅಪರಿಚಿತನಿಂದ ಅತ್ಯಾಚಾರಕ್ಕೆ ಒಳಗಾಗಿ ಬಸುರಿಯಾಗುವ ನೀಲಾ ಗಂಡು ಮಗುವಿಗೆ ಜನ್ಮ ನೀಡುವುದು. ಆಮೇಲೆ ಆ ಮಗುವನ್ನು ತನ್ನದೊಂದು ಸೀರೆಯಲ್ಲಿ ಸುತ್ತಿ, ಕಾಡಂಚಿನಲ್ಲಿ ಬಿಟ್ಟು ಬೇರೊಂದೊಂದು ಊರಿಗೆ ಹೋದಾಗ ಅಲ್ಲಿ ಮಕ್ಕಳಿಲ್ಲದ ದಂಪತಿಗಳು ಇವಳನ್ನೇ ದೇವರು ತಮಗಿತ್ತ ಮಗಳೆಂದು ಭಾವಿಸಿ ಸಾಕುವುದು ಇದೆಲ್ಲಾ ವಿಧಿಯ ಆಟವೇ ಆಗಿರುವಂತೆ ಓದುಗರಿಗೆ ಭಾಸವಾಗುತ್ತದೆ.
ಇತ್ತ ವಿಧಿಯಮ್ಮನ ಬರೆಹದಂತೆ ನೀಲಾಳ ಅಕ್ಕ ಕನಕಳನ್ನು ಶ್ರೀಮಂತ ವ್ಯಾಪಾರಿಯೊಬ್ಬ ಮದುವೆಯಾಗಿ ಅವಳು ಸುಖವಾಗಿರುವುದನ್ನೂ ನಾವು ಈ ಕಥೆಯಲ್ಲಿ ಕಾಣಬಹುದು. ಹಾಗೆಯೇ ಅವಳ ಜೀವನದಲ್ಲಿ ನಡೆಯುವ ಅನೇಕ ಘಟನೆಗಳೂ ಇಲ್ಲಿವೆ.

ಇದರ ನಡುವೆ ಬರುವ ಗುರುವಿನ ಮಕ್ಕಳ ಹಣೆಬರಹ ಬದಲಿಸುವ ಶಿಷ್ಯನ ಉಪಕಥೆ ವಿಶೇಷವಾಗಿದೆ. ಗುರುವಿನ ಮಗನ ಹಣೆಬರಹದಂತೆ ಅವನು ದೊಡ್ಡವನಾದ ಮೇಲೆ ಅವನಿಗೆ ದಿನಕ್ಕೊಂದು ಮೂಟೆ ಅಕ್ಕಿ, ಒಂದು ಎಮ್ಮೆ ಮಾತ್ರ ಸಿಗುವುದೆಂದೂ ಮತ್ತು ಗುರುವಿನ ಮಗಳು ಮುಂದೆ ವೇಶ್ಯೆಯೇ ಆಗುವಳೆಂದು ತಿಳಿದ ಶಿಷ್ಯ ಮುಂದೆ ಆ ಹುಡುಗ ದೊಡ್ಡವನಾದಾಗ ಅವನ ಮನೆಗೆ ಹೋಗಿ ಅವನ ಬಳಿಯಿದ್ದ ಅಕ್ಕಿಯ ಮೂಟೆ ಮತ್ತು ಎಮ್ಮೆಯನ್ನು ಮಾರಿಸಿ ಊರಿನವರಿಗೆಲ್ಲಾ ಊಟ ಹಾಕಿಸುತ್ತಾನೆ, ಮತ್ತೆ ಮಾರನೆಯ ದಿನ ಅವನ ಮನೆಯ ಮುಂದೆ ಒಂದು ಅಕ್ಕಿ ಮೂಟೆ ಮತ್ತು ಒಂದು ಒಂದು ಎಮ್ಮೆ ಪ್ರತಕ್ಷವಾಗಿರುತ್ತದೆ ದಿನವೂ ಆತ ಅವುಗಳನ್ನು ಮಾರಿ ಊರಿನವರಿಗೆ ಊಟ ಹಾಕಿಸುವಂತೆ ಹೇಳಿ ಊರಿನವರೆಲ್ಲಾ ಅವನನ್ನು ಹೊಗಳುವಂತೆ ಮಾಡುತ್ತಾನೆ. ಇನ್ನು ಗುರುಗಳ ಮಗಳು ಒಬ್ಬ ವೇಶ್ಯೆಯಾಗಿರುವುದನ್ನು ತಿಳಿದು ಮನನೊಂದು ಅವಳ ಮನೆಗೆ ಹೋಗಿ, ಅವಳ ಮನೆಗೆ ಯಾರೇ ಬಂದರೂ ಒಂದು ಬೊಗಸೆ ಮುತ್ತುಗಳನ್ನು ತಂದು ಕೊಟ್ಟವರಿಗೆ ಮಾತ್ರ ಬಾಗಿಲು ತೆರೆಯುವಂತೆ ತಿಳಿಸಿ, ದಿನವೂ ಒಬ್ಬನೇ ವ್ಯಕ್ತಿ ಮುತ್ತುಗಳನ್ನು ತಂದು ಅವಳ ಮನೆಗೆ ಬರುವಾಗ, ಅವಳಿಗೆ ಎಷ್ಟು ಬೇಕೋ ಅಷ್ಟನ್ನೇ ಇಟ್ಟುಕೊಂಡು ಮಿಕ್ಕಿದ್ದನ್ನೆಲ್ಲಾ ಮಾರಿ ಬಡವರಿಗೆ ಸಹಾಯ ಮಾಡುವಂತೆ ಮಾಡಿ ಅವಳೂ ಎಲ್ಲರಿಂದಲೂ ಒಳ್ಳೆಯ ಹೆಸರು ಗಳಿಸುವಂತೆ ಮಾಡುತ್ತಾನೆ. ಇಲ್ಲಿ ಶಿಷ್ಯ ವಿಧಿಗೇ ಸವಾಲೆಸೆಯುವುದನ್ನು ನಾವು ನೋಡಬಹುದು. ಇದರ ಕೊನೆಯಲ್ಲಿ ಒಬ್ಬ ಮನುಷ್ಯ ಒಂದು ಎಮ್ಮೆ ಮತ್ತು ಒಂದು ಚೀಲ ಅಕ್ಕಿ, ಒಂದು ಬೊಗಸೆ ಮುತ್ತು ಹೊತ್ತು ಹೊಗುವುದನ್ನು ನೋಡಿ ಆ ಶಿಷ್ಯ ಅವನ ಬಳಿ ಹೋಗಿ ವಿಚಾರಿಸಿದಾಗ ಆತನೇ ಬ್ರಹ್ಮನೆಂದೂ ಅವನು ಬರೆದ ವಿಧಿ ಬರೆಹವನ್ನು ಉಳಿಸಲು ಅವನು ಕಷ್ಟ ಪಡುತ್ತಿರುವನೆಂದು ಓದಿದಾಗ ಓದುಗರ ಮೊಗದಲ್ಲಿ ನಗೆಯುಕ್ಕದೇ ಇರದು.
ನೀಲಾ ತನ್ನ ಮಗುವನ್ನು ಕಾಡಿನಲ್ಲಿ ಬಿಟ್ಟು ಬಂದು ಹತ್ತೊಂಬತ್ತು ವರ್ಷಗಳ ತರುವಾಯ ಅವಳಿಗೇ ತಿಳಿಯದಂತೆ ತನ್ನ ಮಗನನ್ನೇ ಮದುವೆಯಾಗುತ್ತಾಳೆ. ಪ್ರಥಮ ರಾತ್ರಿ ಕಳೆದ ನಂತರ ಅಟ್ಟದಲ್ಲಿ ತೊಟ್ಟಿಲಿಗೆ ಕಟ್ಟಿದ್ದ ತನ್ನದೇ ಹಳೆಯ ಸೀರೆಯೊಂದನ್ನು ನೋಡಿ, ತನ್ನ ಮಗುವನ್ನು ಅದೇ ಸೀರೆಯಲ್ಲಿ ಸುತ್ತಿಟ್ಟಿದ್ದು ನೆನಪಾಗಿ ಅವಳು ತನ್ನ ಅತ್ತೆಯಲ್ಲಿ ವಿಚಾರಿಸಿದಾಗ, ಅವಳ ಗಂಡ ಅವರ ಸ್ವಂತ ಮಗ ಅಲ್ಲವೆಂದೂ ಅವರಿಗೆ ಕಾಡಿನಲ್ಲಿ ಸಿಕ್ಕವನೆಂದೂ, ಅದೇ ಸೀರೆಯಲ್ಲಿ ಸುತ್ತಿ ಇಟ್ಟಿದ್ದರೆಂದು ಹೇಳಿದಾಗ ಅವಳಿಗಾಗುವ ಆಘಾತವೇ ಓದುಗರಿಗೂ ಆಗುತ್ತದೆ, ಮುಂದೇನಾಯಿತು?. ವಿಧಿ ಬರಹದಂತೆ ಅವಳು ಸಾವಿಗೀಡಾದಳೇ, ಅಥವಾ ಕತೆಗಾರ್ತಿಯ ಆಶಯದಂತೆ ಅವಳು ಬದುಕುಳಿದಳೇ ? ತಿಳಿದುಕೊಳ್ಳಲು ನೀವು ಈ ಕಾದಂಬರಿಯನ್ನು ಓದಬೇಕು.
ಇಲ್ಲಿ ಬರುವ ಉಪಕಥೆಗಳಾದ ಇಂದ್ರಾಣಿಯ ಗಿಣಿಯ ಕಥೆ, ವಿಧಿ ಬರೆಹದಂತೆ ತನ್ನ ಹೆಂಡತಿ ಕೆಲಸದವನೊಡನೆ ಓಡಿ ಹೋಗುವುದನ್ನು ತಪ್ಪಿಸಿದವನ ಕಥೆ ಹೀಗೆ ಅನೇಕ ರೋಚಕ ಕಥೆಗಳನ್ನು ಓದುಗರು ಇಲ್ಲಿ ಸವಿಯಬಹುದಾಗಿದೆ. ಹಾಗೆಯೇ ರಾಜನಿಗೆ ಬರುವ ತಲೆಶೂಲೆ, ಅದರ ನಿವಾರಣೆಯಾಗಬೇಕಾದರೆ ಅವನಿಂದ ಜನ್ಮ ಪಡೆದ ಮಗನೇ ಅವನ ಹಣೆ ಮುಟ್ಟಬೇಕೆನ್ನುವುದು, ಮೂರು ಮದುವೆಯಾದರೂ ಮಕ್ಕಳಾಗದಿರುವುದು, ಅಪರಿಚಿತ ಯುವಕನೊಬ್ಬನಿಂದ ಅವನ ತಲೆಬೇನೆ ವಾಸಿಯಾಗುವುದು ಎಲ್ಲವೂ ಈ ಕಾದಂಬರಿಯಲ್ಲಿ ಒಂದಕ್ಕೊಂದು ಸಂಬಂಧವಿರುವಂತೆ ಕಥೆ ಹೆಣೆದಿರುವ ರೀತಿ ಇಷ್ಟವಾಗುತ್ತದೆ.
ಕಥೆಯ ನಡುವೆ ಬರುವ ದ್ಯಾಮವ್ವ ಅವಳಿಗೆ ಬಾವಿಯಲ್ಲಿ ದೊರೆತ ಮಾಯಾಕನ್ನಡಿ. ಅದರಿಂದ ಕಳೆದು ಹೋದ ತನ್ನ ಗಂಡನನ್ನು ಅವಳು ಹುಡುಕಿಕೊಂಡಿದ್ದು. ಅದೇ ಕನ್ನಡಿಯಿಂದ ಕಿನ್ನರಿಯ ಗುಹೆಯಲ್ಲಿ ಬಂಧಿಯಾದ ಸುಂದ್ರಿಯ ಗಂಡ ತಿಮ್ಮರಾಯನನ್ನು ಕಾಪಾಡಿದ್ದು, ಅದೇ ಕಿನ್ನರಿಯ ಮಂತ್ರದಂಡದಿಂದ ಬೆಕ್ಕಿನ ಮರಿಯ ರೂಪ ತಾಳಿದ್ದ ಕನಕಳ ಮಗ ನಿಜಗುಣನನ್ನು ಮತ್ತೆ ಬಾಲಕ ರೂಪಕ್ಕೆ ತಂದಿದ್ದು. ದುರಂತ ಕಥೆಯನ್ನೇ ಬದಲಿಸಿ ಬರೆದ ಕತೆಗಾರ್ತಿ. ಹೀಗೆ ಇದೊಂದು ಕಾಲ್ಪನಿಕವಾದರೂ ಅತಿ ರಮ್ಯ ಕಾದಂಬರಿಯಾಗಿದೆ.
ಇಲ್ಲಿನ ಆಡು ಭಾಷೆಯ ಪ್ರಯೋಗ ತುಂಬಾ ಆಪ್ತವೆನಿಸುತ್ತದೆ. ಇಲ್ಲಿ ಬರುವ ಕುದುರೆ ಆಡಿನ ಕಥೆ ಅತ್ಯಂತ ಸೊಗಸಾಗಿದೆ. ಹೇಗೆ ವಿಧಿ ತನ್ನ ಜಾಲವನ್ನು ಬೀಸುತ್ತದೆ ಎಂಬುದನ್ನು ನಾವಿಲ್ಲಿ ನೋಡ ಬಹುದು. ಒಂದು ಬಿಳಿಯ ಕುದುರೆ ಮತ್ತು ಆಡು ಕಾಡಿನಲ್ಲಿ ಸ್ನೇಹಿತರಾಗಿ ಇರುವಾಗ ಬರುವ ಅರಸನೊಬ್ಬ ಕುದುರೆಯನ್ನು ತನ್ನ ಅರಮನೆಗೆ ಕರೆದೊಯ್ಯುತ್ತಾನೆ. ಸ್ವಲ್ಪ ಸಮಯದ ನಂತರ ಆ ಕುದುರೆ ಅನಾರೋಗ್ಯದಿಂದ ಇರುವುದನ್ನು ತಿಳಿದ ಆಡು ಅರಮನೆಯ ಲಾಯಕ್ಕೆ ಬಂದು ಕುದುರೆಗೆ ಧೈರ್ಯ ಹೇಳಿ ಅದು ಬದುಕುವಂತೆ ಮಾಡುತ್ತದೆ.ಆ ವಿಷಯ ತಿಳಿದು ಲಾಯಕ್ಕೆ ಬಂದ ರಾಜ ” ಈ ಸಂತೋಷದಾಗೆ ಎಲ್ಲರಿಗೂ ಬಾಡೂಟ.. ಇಲ್ಲಿ ನಿಂತಿರೋ ಆಡನ್ನ ಕಡ್ದು ಹಬ್ಬ ಮಾಡೋಣ” ಅಂದಾಗ ಆಡು “ಅಲ್ಲಾ, ಕುದುರೆಗೆ ಆಯಸ್ಸು ಮುಗೀತದೆ ಅಂತಿದ್ರು. ಈಗ ನೋಡಿದ್ರೆ ಕುದುರೆ ನೆಗೀತಾದೆ! ಎಲ್ಲೋ ಇದ್ದವನು ಇಲ್ಲಿಗೆ ಬಂದ ನನ್ನ ಕಡಿಯಾಕೆ ಆಳುಗೋಳು ನಿಂತವರೆ! ಇದೆ ಅಲ್ಲವ ವಿಧಿ ಅಂದರೆ” ಎನ್ನುವುದನ್ನು ಓದಿದಾಗ ವಿಧಿಯ ಕ್ರೂರತೆ ಓದುಗರಿಗೆ ಅರಿವಾಗುತ್ತದೆ.
ಕಾದಂಬರಿಯ ಕೊನೆಯಲ್ಲಿ ದ್ಯಾವಮ್ಮ ಹೇಳುವ ‘ಮನುಷ್ಯ ಪ್ರಯತ್ನದಿಂದ ಹಣೆಬರಹವನ್ನು ಮೀರಬಹುದು; ಆ ಬ್ರಹ್ಮನಂಥ ಬ್ರಹ್ಮಂಗೇ ತಿದ್ದಿ ಬರೆಯೋವಂಗೆ ಮಾಡಬಹುದು’ ಎಂದು ಮಾತು ನೊಂದವರಿಗೆ ಆಶಾಕಿರಣದಂತಿದ್ದರೂ ಕೆಲವೊಮ್ಮೆ ನಮ್ಮ ಕಣ್ಣೆದುರಿನಲ್ಲಿ ನಡೆಯುವ ಘಟನೆಗಳನ್ನು ನೋಡಿದಾಗ ವಿಧಿಯಾಟ ಹೇಗಿದೆಯೋ ಅದನ್ನು ತಪ್ಪಿಸಲು ಯಾರಿಂದಲೂ ಆಗದು ಎಂಬ ಸತ್ಯವನ್ನೂ ನಾವು ವಿಧಿಯಿಲ್ಲದೇ ಒಪ್ಪಲೇ ಬೇಕಾಗುವುದೂ ಒಂದು ವಿಪರ್ಯಾಸವೇ ಸರಿ.
ಪುಸ್ತಕ ಕೊಳ್ಳಲು ಆಸಕ್ತಿ ಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.

ಶ್ರೀವಲ್ಲಿ ಮಂಜುನಾಥ