ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 36

ಹಿಂದಿನ ಸಂಚಿಕೆಯಿಂದ….

ರಟ್ಟಾ ಮತ್ತು ಚಿತ್ರಕ ಮೇಲಕ್ಕೆ ಹೋಗಲು ಅರ್ಧ ಗಂಟೆ ಹಿಡಿಯಿತು. ಅದು ಸಂಘವೆಂದು ರಟ್ಟಾ ಗುರುತಿಸಿದಳು. ಕಲ್ಲನ್ನು ಕಡಿದು ನಿರ್ಮಿಸಿರುವ ಕೆಲವು ಕೊಠಡಿಗಳು. ಎದುರಿಗೆ ಸಮತಲವಾದ ಒಂದು ಜಗಲಿ. ಜಗಲಿಯ ಮಧ್ಯದಲ್ಲಿ ತಥಾಗತನ ಶಿಲಾಮೂರ್ತಿ. ತಪ್ಪಲಿನ ಕಡೆಯಿಂದ ಕಾಣಿಸಿದ ಕಿಟಕಿಗಳು ಸಂಘದ ಹಿಂಭಾಗದ್ದು.

ರಟ್ಟಾ ಮೊದಲು ಬುದ್ಧನ ಧ್ಯಾನ ಮುದ್ರೆಯಲ್ಲಿದ್ದ ಮೂರ್ತಿಯ ಮುಂದೆ ಹೋಗಿ ನಿಂತಳು. ಚಿತ್ರಕನೂ ಪಕ್ಕದಲ್ಲಿ ಬಂದು ನಿಂತನು. ರಟ್ಟಾ ಕೈ ಜೋಡಿಸಿ ಭಕ್ತಿ ನಮ್ರ ಧ್ವನಿಯಲ್ಲಿ-ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ’
ಎಂದು ಹೇಳಿದಳು. ಜೋಡಿಸಿದ ಕೈಗಳನ್ನು ಹಣೆಗೆ ಮುಟ್ಟಿಸಿಕೊಂಡು ಚಿತ್ರಕನಿಗೆ ‘ತಾವೂ ಕೂಡ ಭಗವಂತನಿಗೆ ನಮಸ್ಕರಿಸಿರಿ. ‘ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ- ‘ಎಂದು ಹೇಳಿರಿ’ ಎಂಬುದಾಗಿ ಸೂಚಿಸಿದಳು.

ಚಿತ್ರಕನು ರಟ್ಟಾಳನ್ನು ಅನುಸರಿಸಿ ಅವಳು ಮಾಡಿದಂತೆಯೇ ತಾನೂ ಕೂಡ ಭಗವಂತನಿಗೆ ಪ್ರಣಾಮಗಳನ್ನು ಸಲ್ಲಿಸಿದನು. ಅನಂತರ ಸ್ವಲ್ಪ ವಿಸ್ಮಯದಿಂದ ರಟ್ಟಾಳ ಕಡೆ ತಿರುಗಿ ‘ತಾವು ಈ ಮಂತ್ರವನ್ನು ಎಲ್ಲಿ ಕಲಿತಿರಿ?’ ಎಂದು ಪ್ರಶ್ನಿಸಿದನು.

ರಟ್ಟಾ- ನಮ್ಮ ತಂದೆಯವರ ಹತ್ತಿರ.

ಇಲ್ಲಿಯವರೆಗೂ ಅಂಗಳದಲ್ಲಿ ಯಾರೂ ಇರಲಿಲ್ಲ. ಈಗ ಕೋಣೆಯೊಳಗಿಂದ ಹಳದಿ ವಸ್ತçಧರಿಸಿದ ಒಬ್ಬ ಶ್ರಮಣ ಹೊರಗೆ ಬಂದರು. ಬೋಳುತಲೆ; ಬಡಕಲು ಶರೀರ; ಮುಖದಲ್ಲಿ ಪ್ರಸನ್ನ ವೈರಾಗ್ಯ. ಅವರು ನಗು ಮುಖದಿಂದ ಎರಡು ಕೈಗಳನ್ನೆತ್ತಿ ‘ಆರೋಗ್ಯ’ ಎಂದರು.

ರಟ್ಟಾ ಕೈ ಜೋಡಿಸಿ ‘ಆರ್ಯ, ನಾವಿಬ್ಬರೂ ಹಸಿದ ದಾರಿ ಹೋಕರು. ಬುದ್ಧನ ಪ್ರಸಾದವನ್ನು ಬೇಡುತ್ತೇವೆ’ ಎಂದಳು.

ಭಿಕ್ಷು- ‘ರಟ್ಟಾ ಯಶೋಧರಾ, ಬುದ್ಧ ನಿಮ್ಮ ಬಗ್ಗೆ ಪ್ರಸನ್ನನಾಗಿದ್ದಾನೆ. ಬನ್ನಿ, ನೀವಿಬ್ಬರೂ ಒಳಗೆ ಬನ್ನಿ’.

ಭಿಕ್ಷು ಆಕೆಯ ಗುರುತುಹಿಡಿದುದನ್ನು ಕಂಡು ರಟ್ಟಾಳ ಮುಖ ಆನಂದದಿಂದ ಅರಳಿತು. ಆಕೆ ಭಿಕ್ಷುವನ್ನು ಕುರಿತು ‘ಆರ್ಯ,
ತಾವು, ನನ್ನನ್ನು ಹೇಗೆ ಗುರುತು ಹಿಡಿದಿರಿ? ಈ ಮೊದಲು ಎಲ್ಲಿಯಾದರೂ ನೋಡಿದ್ದಿರಾ?’ ಎಂದು ಕೇಳಿದಳು.

ಭಿಕ್ಷು- ‘ಎಲ್ಲಿಯೂ ನೋಡಿಲ್ಲ. ನಿಮ್ಮ ವೇಷಭೂಷಣಗಳನ್ನು ನೋಡಿ ಊಹೆ ಮಾಡಿದೆ. ಮಹಾರಾಜ ಧರ್ಮಾದಿತ್ಯರ ಬಳಿಗೆ ಹೋಗುತ್ತಿದ್ದೀರೇನು?’

‘ಹೌದು. ಇವರು ನಮ್ಮ ಸಹಚರರು. ಮಗಧದ ರಾಜದೂತ’
ಭಿಕ್ಷು ಒಂದು ಸಲ ಚಿತ್ರಕನ ಕಡೆ, ಮುಗುಳು ನಗುತ್ತ, ನೋಡಿದರು. ಏನೂ ಮಾತಾಡಲಿಲ್ಲ. ಅನಂತರ ‘ಸಂಘ’ದ ಒಳಗೆ ಹೋಗಿ ಕೈಕಾಲು- ಮುಖ ತೊಳೆದುಕೊಂಡು ಆ ಇಬ್ಬರು ಪಥಿಕರೂ ಒಂದು ಕೊಠಡಿಯಲ್ಲಿ ಕುಳಿತರು. ಭಿಕ್ಷು ಅವರಿಗೆ ಖಾದ್ಯ ಪದಾರ್ಥವನ್ನು ತಂದುಕೊಟ್ಟರು. ಅವುಗಳು ಸ್ವಲ್ಪ ಬೇಯಿಸಿದ ಬೇಳೆ, ಸ್ವಲ್ಪ ನನೆಸಿದ ಅವಲಕ್ಕಿ, ಸ್ವಲ್ಪ ಒಣದ್ರಾಕ್ಷಿ ಮತ್ತು ಖರ್ಜೂರ, ಹಸಿದ ಹೊಟ್ಟೆ ಅವರು ಅದನ್ನೇ ಬಹಳ ತೃಪ್ತಿಯಿಂದ ಅಮೃತವೆಂದು ಭಾವಿಸಿ ಭುಂಜಿಸಿದರು.

ಭೋಜನದ ವೇಳೆ ಮಾತುಕತೆ ನಡೆದಿತ್ತು.

‘ದೇವಾ (ಸ್ವಾಮಿ) ಇಲ್ಲಿ ತಾವು ಎಷ್ಟು ಮಂದಿ ಇದ್ದೀರಿ? ತಾವಲ್ಲದೆ ಮತ್ತೆ ಯಾರೂ ಕಾಣಿಸುತ್ತಿಲ್ಲ’ ರಟ್ಟಾ ಭಿಕ್ಷುವನ್ನು ಕೇಳಿದಳು.

ಭಿಕ್ಷು- ನಾವು ನಾಲ್ವರು ಇಲ್ಲಿದ್ದೇವೆ. ಇಬ್ಬರು ನೀರು ತರಲು ಹೋಗಿದ್ದಾರೆ. ಒಬ್ಬರಿಗೆ ಆರೋಗ್ಯವಿಲ್ಲ.

ರಟ್ಟಾ- ಆರೋಗ್ಯವಿಲ್ಲ? ಹಾಗಾದರೆ, ಯಾವ ರೋಗ?.

ಭಿಕ್ಷು- (ಸ್ವಲ್ವ ನಕ್ಕು) ಸಂಸಾರದ ರೋಗ. ಸಂಘದಲ್ಲಿದ್ದರೂ ಮಾಯೆಯಿಂದ ಅವರು ಬಿಡುಗಡೆ ಹೊಂದಿಲ್ಲ.
ಚಿತ್ರಕ- ತಾವುಗಳು ಇಲ್ಲಿ ನಿಃಸಂಗರಾಗಿದ್ದೀರಿ. ಹಗಲು- ರಾತ್ರಿ ಏನು ಮಾಡುತ್ತೀರಿ?

ಭಿಕ್ಷು- ಸಂಸಾರವನ್ನು ಮರೆಯುವ ಪ್ರಯತ್ನ ಮಾಡುತ್ತೇವೆ. ಊಟವಾದ ಮೇಲೆ ನೀರು ಕುಡಿದು, ರಟ್ಟಾ ಮತ್ತೆ ಬಂದು ಕುಳಿತು
‘ಆರ್ಯ, ಏನಾದರೂ ಉಪದೇಶ ನೀಡೋಣವಾಗಲಿ’ ಎಂದು ಪ್ರಾರ್ಥಿಸಿದಳು.

ಭಿಕ್ಷು- (ನಕ್ಕು) ನಾನೇನು ಉಪದೇಶ ಮಾಡುವುದು? ಸಾವಿರ ವರ್ಷಗಳ ಹಿಂದೆಯೇ ಶಾಕ್ಯಮುನಿಯ ಶ್ರೀಮುಖದಿಂದ ಹೊರಬಿದ್ದ ವಾಣಿಯನ್ನೇ ಕೇಳಿರಿ. ಮನಸ್ಸಿನಿಂದ ಪ್ರವೃತ್ತಿಯ ಉತ್ಪತ್ತಿ. ಮನಸ್ಸು ಪ್ರಸನ್ನವಾಗಿಯೂ ನಿಷ್ಕಲ್ಮಷವಾಗಿಯೂ ಇದ್ದರೆ ಸುಖವು ನೆರಳಿನಂತೆ ನಿಮ್ಮ ಬೆನ್ನ ಹಿಂದೆಯೇ ಇರುತ್ತದೆ.

‘ನಾನು ಧನ್ಯಳಾದೆ’ ಎಂದು ಹೇಳಿ ರಟ್ಟಾ ನಮಸ್ಕರಿಸಿದಳು. ಅನಂತರ ಭಿಕ್ಷುವಿನ ಪಾದದ ಬಳಿ ಒಂದು ಬಂಗಾರದ ‘ದೀನಾರ’ವನ್ನು ಇಟ್ಟು ‘ಇದು ಸಂಘದ ಸೇವೆಗಾಗಿ’ ಎಂದಳು.
ಭಿಕ್ಷು- ‘ಬಂಗಾರದಿಂದ ಏನೂ ಪ್ರಯೋಜನವಿಲ್ಲ. ಕಲ್ಯಾಣಿ ‘ಸಂಘ’ಕ್ಕೆ ಏನಾದರೂ ದಾನ ಮಾಡಬೇಕೆಂಬ ಇಚ್ಛೆ ಇದ್ದರೆ ಒಂದು ಆಢಕ (ಸುಮಾರು ಎರಡುಮಣ ತೂಕ) ಗೋಧಿ ಕೊಡಿರಿ. ಗೋಧಿಯನ್ನು ನೋಡಿ ಬಹಳ ದಿನಗಳಾಯಿತು. ಕಾಯಿಲೆ ಬಿದ್ದಿರುವ ಶ್ರಮಣರು ಗೋಧಿಗಾಗಿ ಹಂಬಲಿಸುತ್ತಿದ್ದಾರೆ’ ಎಂದು ಹೇಳಿ ಮಂದಹಾಸ ಬೀರಿದರು.

‘ಆದಷ್ಟು ಬೇಗ ಕಳುಹಿಸಿಕೊಡುತ್ತೇವೆ’ ಎಂದು ಹೇಳಿ ರಟ್ಟಾ ಮೇಲೆದ್ದಳು.

ಚಿತ್ರಕನೂ ಎದ್ದು ನಿಂತು ಶುಷ್ಕಧ್ವನಿಯಲ್ಲಿ ‘ಸ್ವಾಮಿ, ನನಗೂ ಸ್ವಲ್ಪ ಉಪದೇಶ ಮಾಡೋಣವಾಗಲಿ’ ಎಂದನು.

ಚಿತ್ರಕನ ಕಡೆ ಒಮ್ಮೆ ಪ್ರಶಾಂತವಾದ ದೃಷ್ಟಿ ಹಾಯಿಸಿ ಭಿಕ್ಷುವು ಗಂಭೀರ ಧ್ವನಿಯಲ್ಲಿ ‘ಶಾಕ್ಯಮುನಿಯ ಉಪದೇಶ ಕೇಳು; ‘ಇವನು ನನ್ನನ್ನು ನಿಂದಿಸುತ್ತಾನೆ, ನನಗೆ ಹೊಡೆಯುತ್ತಾನೆ, ನನ್ನನ್ನು ನಿರ್ಗತಿಕನನ್ನಾಗಿ ಮಾಡುತ್ತಾನೆ’ ಎಂದು ಸದಾ ಚಿಂತಿಸುತ್ತಿರುವವನ ಕ್ರೋಧವು ಎಂದಿಗೂ ಶಾಂತವಾಗುವುದಿಲ್ಲ. ವೈರಭಾವವು ಅವೈರ ಭಾವದಿಂದ ಮಾತ್ರ ಶಾಂತವಾಗುತ್ತದೆ. ಇದೇ ಚಿರಂತನ ಧರ್ಮ’ ಎಂದು ಹೇಳುತ್ತ ಹೋದರು.

ಇಬ್ಬರೂ ಮತ್ತೆ ಪ್ರಯಾಣ ಮುಂದುವರೆಸಿದರು. ಸೂರ್ಯನು ಅವರ ಎಡಭಾಗಕ್ಕೆ ವಾಲಿದ್ದನು. ಓರೆಯಾದ ಕಿರಣಗಳು ಅಷ್ಟು ತೀಕ್ಷ್ಣವಾಗಿರಲಿಲ್ಲ. ಇಬ್ಬರೂ ತಮ್ಮ ತಮ್ಮ ಭಾವನೆಗಳಲ್ಲಿ ಮಗ್ನರಾಗಿದ್ದರು. ಮಾತುಕತೆ ಅಷ್ಟಾಗಿ ಇಲ್ಲ. ಚಿತ್ರಕ ಕತೆ ಹೇಳುವ ಸಮಯದಲ್ಲಿ ರಾಜಕುಮಾರಿಯ ಬಗ್ಗೆ ತಾಳಿದ್ದ ಸುಮಧುರ ಭಾವನೆಗಳ ಮೇಲೆ ಮತ್ತೆ ಸಂಶಯದ ಕಾಡಿಗೆ ಆವರಿಸಿ ಅವನ ಮನಸ್ಸನ್ನು ಕಲುಷಿತಗೊಳಿಸಿತು.
ಭಿಕ್ಷು- ಹೇಳಿದ ಮಾತಿನ ಅರ್ಥವೇನು? ಮುಯ್ಯಿಗೆ ಮುಯ್ಯಿ. ಇದು ಸ್ವಾಭಾವಿಕ. ಅವೈರಭಾವದಿಂದ ಏನು ಪ್ರಯೋಜನ. ಭಿಕ್ಷುಗಳ ದೃಷ್ಟಿಯಲ್ಲಿ ಅದು ಸರಿ ಇರಬಹುದು. ಆದರೆ ಕ್ಷತ್ರಿಯರ ದೃಷ್ಟಿಯಲ್ಲಿ ಅದು ಎಂದಿಗೂ ಸಾಧ್ಯವಿಲ್ಲ. ಅದು ಅವರ ಧರ್ಮ. ಇದು ಇವರ ಧರ್ಮ. ಸೇಡು ತೀರಿಸಿಕೊಳ್ಳುವುದು ಕ್ಷತ್ರಿಯರ ಧರ್ಮ. ಅಷ್ಟೇ ಅಲ್ಲ. ಇದು ಚಿತ್ರಕನ ಪ್ರಕೃತಿಗತ ಸ್ವಧರ್ಮ. ಇದೇ ಅವನ ಸ್ವಭಾವ.

ಹೀಗಿದ್ದರೂ, ಇಂಥ ಸದವಕಾಶ ದೊರೆತರೂ ಅವನು ರಾಜಕುಮಾರಿಯ ಮೇಲೆ ಏಕೆ ಸೇಡು ತೀರಿಸಿಕೊಳ್ಳುತ್ತಿಲ್ಲ? ರಟ್ಟಾ ಸುಂದರ ಯುವತಿ! ಇದು ಕಾರಣವಿರಬಹುದೆ! ಸುಂದರ ಯುವತಿಯ ಮೇಲಿನ ಮೋಹದಿಂದ ಅವನು ಕ್ಷಾತ್ರ ಧರ್ಮವನ್ನು ಮರೆತಿರಬಹುದೆ! ತಂದೆಯನ್ನು ಕೊಂದವರ ಮೇಲೆ ಏಕೆ ಪ್ರತೀಕಾರ ಕೈಗೊಳ್ಳುತ್ತಿಲ್ಲ! ಮೋಡ ಕವಿದಿರುವ ಆಕಾಶದಲ್ಲಿ ಮಿಂಚು ಹೊಳೆದ ಹಾಗೆ ಚಿತ್ರಕನ ಮನಸ್ಸಿಗೆ ಒಂದು ಹೊಸ ವಿಚಾರ ಹೊಳೆಯಿತು. ಅವನು ಚಕಿತಗೊಂಡು ಕಣ್ಣರಳಿಸಿ ಆಕಾಶದ ಕಡೆ ನೋಡಿದನು. ಯಾವ ಬಲವಾದ ಜಾಲದಲ್ಲಿ ಅವನ ಮನಸ್ಸು ಇಲ್ಲಿಯವರೆಗೂ ಸಿಕ್ಕಿ ಬಿದ್ದಿತ್ತು? ಈ ವಿಷಯ ಅವನ ಮನಸ್ಸಿಗೆ ಇದುವರೆಗೂ ಏಕೆ ಗೋಚರವಾಗಲಿಲ್ಲ?

ಅವನು ವಿಚಾರ ಮಾಡಿ ನೋಡಿದನು- ನಾನು ಕ್ಷತ್ರಿಯ. ಸೇಡು ತೀರಿಸಿಕೊಳ್ಳುವುದು ನನ್ನ ಸ್ವಧರ್ಮ. ಆದರೆ ರಾಜಕುಮಾರಿಯನ್ನು ನಾನೇಕೆ ದ್ವೇಷಿಸಬೇಕು. ಆಕೆ ನನಗೇನೂ ಕೇಡು ಬಗೆದಿಲ್ಲ. ಅವಳ ತಂದೆಯ ಅಪರಾಧಕ್ಕಾಗಿ ಆಕೆಯನ್ನು ಶಿಕ್ಷಿಸುವುದು ಕ್ಷತ್ರಿಯ ಧರ್ಮವಲ್ಲ. ಸೇಡು ತೀರಿಸಿಕೊಳ್ಳಲೇಬೇಕಾದರೆ ಆಕೆಯ ತಂದೆಯ ಮೇಲೆ ತೀರಿಸಿಕೊಳ್ಳಬೇಕು. ದಾರುಣವಾದ ಸಮಸ್ಯೆಗೆ ಸಮಾಧಾನಕರವಾದ ಪರಿಹಾರ ದೊರೆತ ಕಾರಣ ಅವನ ಮನಸ್ಸು ಹಗುರವಾಯಿತು. ಒಂದು ಕ್ಷಣದಲ್ಲಿ ಅವನ ಮನಸ್ಸಿನ ಮೇಲೆ ಕವಿದಿದ್ದ ಕಾಡಿಗೆ ತೊಲಗಿಹೋಗಿ ಆನಂದದ ದಿವ್ಯಜ್ಯೋತಿ ಪ್ರಕಾಶಮಾನವಾಗಿ ಬೆಳಗಿತು. ಅವನು ಆನಂದದಿಂದ ರಟ್ಟಾಳನ್ನು ನೋಡಿ ಜೋರಾಗಿ ನಕ್ಕನು.

ರಟ್ಟಾ- (ಚಕಿತಳಾಗಿ) ಏನಾಯಿತು?

ಚಿತ್ರಕ- ಭಿಕ್ಷು ಹೇಳಿದ್ದರಲ್ಲವೆ- ಸುಖವೆಂಬುದು ನೆರಳಿನ ಹಾಗೆ ತಮ್ಮ ಜೊತೆಗೇ ಇರುತ್ತದೆ- ಎಂದು ಅದೋ ನೋಡಿ ಅದೇ ನೆರಳು.

ರಟ್ಟಾ ಕುತ್ತಿಗೆ ತಿರುಗಿಸಿ ನೋಡುತ್ತಾಳೆ- ಚಲಿಸುತ್ತಿರುವ ಅಶ್ವಾರೋಹಿಗಳ ನೆರಳು ಕುಣಿಕುಣಿಯುತ್ತ ಅವರ ಜೊತೆಗೆ ಬರುತ್ತಿದೆ. ಇಬ್ಬರೂ ಒಟ್ಟಾಗಿ ನಕ್ಕರು. ನಾಲ್ಕೂ ಕಡೆ ವಿಸ್ತಾರವಾದ ಅಲೆಯಲೆಯಾಗಿ ಹಬ್ಬಿರುವ ಬೆಟ್ಟದ ತಪ್ಪಲು, ಬೆಟ್ಟ ದೂರ ಸರಿದು ಹೋಗಿದೆ. ಅವರ ನಗುವಿನ ಪ್ರತಿಧ್ವನಿ ಮತ್ತೆ ಇವರ ಕಡೆಗೆ ಬರುತ್ತಿದೆ- ಮಿಲನ ಮುಹೂರ್ತದಲ್ಲಿ ಲಜ್ಜಾ ಮಿಶ್ರಿತ ಪಿಸುಮಾತಿನಂತೆ!
ಕಿವಿಮಾತಿನಂತೆ!

ಮುಂದುವೆರೆಯುವುದು….

ಎನ್. ಶಿವರಾಮಯ್ಯ (ನೇನಂಶಿ)

Related post

Leave a Reply

Your email address will not be published. Required fields are marked *