ಕನ್ನಂಬಾಡಿ ಹಿನ್ನೀರಿನಿಂದ ಹೊರಬಂದ ಶ್ರೀ ವೇಣುಗೋಪಾಲ ಸ್ವಾಮಿ
ಮೈಸೂರು ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅರಮನೆ, ಮೃಗಾಲಯ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟು. ರಾಜ್ಯದ ಪ್ರಸಿದ್ಧ ಪ್ರವಾಸೀ ತಾಣಗಳಲ್ಲಿ ಮೈಸೂರು ಅಗ್ರಸ್ಥಾನವನ್ನು ಪಡೆದಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಅತ್ಯಂತ ತಂಪಾದ ವಾತಾವರಣದೊಂದಿಗೆ ಅಗಲವಾದ ರಸ್ತೆಗಳೊಂದಿಗೆ ಸುಸಜ್ಜಿತವಾದ ಸಾರಿಗೆಯ ವ್ಯವಸ್ಥೆಯನ್ನೊಳಗೊಂಡು ದೇಶದ ಪ್ರಥಮ ಅತ್ಯಂತ ಸ್ವಚ್ಛ ನಗರವೆಂಬ ಖ್ಯಾತಿಯೊಂದಿಗೆ ಇಲ್ಲಿನ ಸಂಸ್ಕೃತಿ ಪ್ರವಾಸಿಗರನ್ನು ಸರ್ವ ಋತುಗಳಲ್ಲೂ ತನ್ನೆಡೆಗೆ ಕೈ ಬೀಸಿ ಕರೆಯುತ್ತದೆ.
ಕೃಷ್ಣರಾಜಸಾಗರ ಅಣೆಕಟ್ಟನ್ನು ಸರ್.ಎಂ ವಿಶ್ವೇಶ್ವರಯ್ಯರವರ ನೇತೃತ್ವದಲ್ಲಿ ಕಟ್ಟಲಾಗಿದ್ದು, ಇದು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ನೀರುಣಿಸುವ ಜೀವನಾಡಿಯಾಗಿದೆ. ಅಣೆಕಟ್ಟೆಗಳು ನಿರ್ಮಾಣವಾದ ನಂತರ ಅಲ್ಲಿನ ನೀರಿನ ಒಳಹರಿವಿನ ಮಟ್ಟ ಹೆಚ್ಚಿದಂತೆಲ್ಲ ಜಲಾಶಯಗಳು ಅವುಗಳ ಹಿನ್ನೀರು ಪ್ರದೇಶಗಳಲ್ಲಿರುವ ಸರ್ವಸ್ವವನ್ನೂ ತನ್ನ ಒಡಲೊಳಗೆ ಸೇರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ರೀತಿ ಹೊಯ್ಸಳರ ಕಾಲದಲ್ಲಿ ಕನ್ನಂಬಾಡಿ ಗ್ರಾಮದಲ್ಲಿ ನಿರ್ಮಾಣವಾಗಿದ್ದ 700 ವರ್ಷಗಳ ಇತಿಹಾಸವಿರುವ ಪುರಾತನವಾದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವೂ ಈ ಜಲಾಶಯದ ಒಡಲೊಳಗೆ ಸೇರಿಕೊಂಡು ಬಿಟ್ಟಿತ್ತು.
ಮೈಸೂರಿಗೆ ಪ್ರವಾಸ ಹೊರಟಿರಿ ಎಂದಾದರೆ ಈ ಅಣೆಕಟ್ಟೆಯ ಹಿನ್ನೀರಿನ ದಡದಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೊಮ್ಮೆ ಭೇಟಿ ನೀಡುವುದನ್ನು ಮರೆಯದಿರಿ. ಏಕೆಂದರೆ ಈ ಪ್ರದೇಶ ಅತ್ಯಂತ ಪ್ರಶಾಂತವಾಗಿದ್ದು ನೋಡಲು ಅತ್ಯಂತ ಮನೋಹರವಾಗಿದೆ. ದೇವಾಲಯದ ತಟದಲ್ಲಿ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ಜಲರಾಶಿಯಷ್ಟೇ ಕಾಣುತ್ತದೆ. ದೂರದಲ್ಲಿ ಅಣೆಕಟ್ಟೆಯ ವಿಹಂಗಮ ನೋಟವು ಪ್ರವಾಸಿಗರನ್ನು ಉನ್ಮಾದಗೊಳಿಸುತ್ತದೆ.
ಇವೆಲ್ಲಕ್ಕಿಂತಲೂ ವಿಶೇಷವಾಗಿ ಇಲ್ಲಿ ನಿರ್ಮಿಸಲಾಗಿರುವ ದೇವಾಲಯವು ನಮ್ಮನ್ನು ಮತ್ತಷ್ಟು ಆಕರ್ಷಿಸುತ್ತದೆ. ಏಕೆಂದರೆ ಕ್ರಿ.ಶ 13ನೇ ಶತಮಾನದಲ್ಲಿ ಹೊಯ್ಸಳರು ಸೊಮನಾಥಪುರ ದೇವಾಲಯವನ್ನು ನಿರ್ಮಿಸಿದ ಕಾಲದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವನ್ನು ಕನ್ನಂಬಾಡಿ ಗ್ರಾಮದಲ್ಲಿ ಕಾವೇರಿ ನದಿಯ ತಟದದಲ್ಲಿ ನಿರ್ಮಿಸಿದರೆಂದು ಇತಿಹಾಸ ತಿಳಿಸುತ್ತದೆ. 1909 ರಲ್ಲಿ ಸರ್.ಎಂ ವಿಶ್ವೇಶ್ವರಯ್ಯರವರ ನೇತೃತ್ವದಲ್ಲಿ ಕನ್ನಂಬಾಡಿ ಅಣೆಕಟ್ಟು ರಚನೆಯ ಮೊದಲ ಹಂತದ ನಿರ್ಮಾಣದ ಸಂದರ್ಭದಲ್ಲಿ ಸುತ್ತಮುತ್ತಲಿನ ಆಯಕಟ್ಟು ಪ್ರದೇಶವೆಲ್ಲ ಮುಳುಗಡೆಯಾದಾಗ ಈ ದೇವಾಲಯದ ಜೊತೆಗೆ ಕನ್ನೇಶ್ವರ (ಈಶ್ವರ) ದೇವಾಲಯ ಮತ್ತು ಕಾಳಮ್ಮ (ಗ್ರಾಮ ದೇವತೆ) ಗುಡಿಯು ಸಂಪೂರ್ಣವಾಗಿ ಮುಳುಗಡೆಯಾಯಿತು. ಆಗಿನ ಮೈಸೂರಿನ ರಾಜರಾದ ನಾಲ್ಕನೆಯ ಕೃಷ್ಣರಾಜ ಒಡೆಯರ್ ರವರು ಆಣೆಕಟ್ಟು ಹಿನ್ನೀರು ಪ್ರದೇಶದ ನಿರಾಶ್ರಿತರಿಗೆ ‘ಹೊಸ ಕನ್ನಂಬಾಡಿ’ ಗ್ರಾಮವನ್ನು ನಿರ್ಮಿಸಿ ಕೊಟ್ಟರು ಎನ್ನಲಾಗಿದೆ.
ಸುಮಾರು 1909 ನೇ ಇಸವಿಯಲ್ಲಿ ಕನ್ನಂಬಾಡಿ ಆಣೆಕಟ್ಟು ನಿರ್ಮಾಣವಾಗಿ 1930 ರಲ್ಲಿ ಪೂರ್ತಿ ನೀರಿನಿಂದ ತುಂಬಿದಾಗ ಈ ದೇವಾಲಯವು ಸಂಪೂರ್ಣವಾಗಿ ಜಲಾಶಯದ ಹಿನ್ನೀರಿನಲ್ಲಿ ಜಲಸಮಾಧಿಯಾಗುವುದರೊಂದಿಗೆ ಈ ದೇವಾಲದ ಮೇಲೆ ಸುಮಾರು ಅರುವತ್ತು ಅಡಿಯಷ್ಟು ಎತ್ತರಕ್ಕೆ ನೀರು ನಿಂತಿತ್ತು. ನಂತರದಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದಾಗ ನೀರಿನ ಮಟ್ಟ ಕೆಳಗಿಳಿದಾಗ ಈ ದೇವಾಲಯದ ಗೋಪುರ ಆಗಿಂದಾಗ್ಗೆ ಗೋಚರಿಸಿ ಮತ್ತೆ ನೀರಿನಲ್ಲಿ ಮುಳುಗುತ್ತಿತ್ತು. 2003 ನೇ ಇಸವಿಯ ನಂತರ ರಾಜ್ಯವು ಬರ ಪೀಡಿತವಾದಾಗ ಅಣೆಕಟ್ಟೆಯ ನೀರು ಖಾಲಿಯಾಗುತ್ತಾ ಬಂದು ನಿಧಾನವಾಗಿ ಈ ದೇವಾಲಯದ ಇರುವಿಕೆಯ ಸುಳಿವು ಸಿಕ್ಕಿದ್ದು, ನಂತರದಲ್ಲಿ ಈ ದೇವಾಲಯವು ಸಂಪೂರ್ಣವಾಗಿ ಗೋಚರವಾಗತೊಡಗಿತು. ಸರಿ ಸುಮಾರು 70 ವರ್ಷಗಳಿಂದ ಈ ದೇವಾಲಯ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿಯೇ ಇತ್ತೆಂದು ಇಲ್ಲಿನ ಹಿರಿಯರು ಅಭಿಪ್ರಾಯಪಡುತ್ತಾರೆ. ಇಂತಹ ಒಂದು ಐತಿಹಾಸಿಕ ದೇವಾಲಯ ಕಾಣಸಿಕ್ಕಿದ್ದೇ ತಡ ಊರವರ ಮತ್ತು ಪ್ರವಾಸಿಗರ ಭೇಟಿಯು ಅಧಿಕವಾಗತೊಡಗಿತು. ಊರವರ ಅಭಿಪ್ರಾಯದಂತೆ ಊರವರು ಮತ್ತು ಪರವೂರಿನ ದಾನಿಗಳ ಸಹಭಾಗಿತ್ವದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
‘ಕೋಡೈ ಫೌಂಡೇಶನ್’ನ ಶ್ರೀ ಹರಿ ಖೋಡೆ ರವರು ಪುರಾತತ್ವ ಇಲಾಖೆಯ ಮಾರ್ಗದರ್ಶಿ ಸೂತ್ರ ಹಾಗೂ ಸರಕಾರದ ಅನುಮತಿಯಂತೆ ಈ ದೇವಾಲಯವನ್ನು ಹಿನ್ನೀರಿನ ಪ್ರದೇಶದಿಂದ ಬಿಚ್ಚಿ ಬೇರೆ ಪ್ರದೇಶದಲ್ಲಿ ಜೋಡಿಸುವ ಕೆಲಸವನ್ನು ಕೈಗೆತ್ತಿಕೊಂಡಿರುತ್ತಾರೆ. ಈ ದೇವಾಲಯವನ್ನು ಮೂಲ ದೇವಾಲಯದ ಸ್ಥಳದಿಂದ ಉತ್ತರ ದಿಕ್ಕಿನೆಡೆಗೆ ಸುಮಾರು 1 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದ್ದು, ಈ ಯೋಜನೆಯ ಅಂದಾಜು ವೆಚ್ಚ ಸುಮಾರು 2.5 ಕೋಟಿ ಆಗಿರುತ್ತದೆ. ಹೊಸ ಕನ್ನಂಬಾಡಿಯಲ್ಲಿ ಈ ದೇವಾಲಯದ ನಿರ್ಮಾಣಕ್ಕಾಗಿ ಸುಮಾರು 4.5 ಎಕರೆಯಷ್ಟು ಭೂಮಿಯನ್ನು ನೀಡಲಾಗಿದ್ದು, ದೇವಾಲಯದ ಪಂಚಾಗವು ಸುಮಾರು 45 ಅಡಿ ಮತ್ತು 90 ಅಡಿ ಸುತ್ತಳತೆಯಿಂದ ಕೂಡಿದೆ.
ಈ ದೇವಾಲಯವನ್ನು ಮೂಲ ಸ್ಥಳದಿಂದ ಕಳಚುವ ಪೂರ್ವದಲ್ಲಿ ಇದರ ಸಂಪೂರ್ಣವಾದ ವೀಡಿಯೋ ಚಿತ್ರೀಕರಣವನ್ನು ಮಾಡಲಾಗಿ ಸುಮಾರು 16,000 ವಿವಿಧ ಕೋನಗಳ ಫೋಟೋಗಳನ್ನು ತೆಗೆಯಲಾಗಿತ್ತು. ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ದೇವಾಲಯವನ್ನು ಹೊಯ್ಸಳರ ವಾಸ್ತುಶಿಲ್ಪ ಶ್ಯೆಲಿಯನ್ನೇ ಅನುಸರಿಸಿಕೊಂಡು ಮತ್ತು ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಬಳಸಲಾದ ಕಲ್ಲುಗಳನ್ನೇ ದಡಕ್ಕೆ ತಂದು ಅವುಗಳನ್ನು ಬಳಸಿ ಈ ದೇವಾಲಯವನ್ನು ನಿರ್ಮಿಸಿರುವುದು ಇಲ್ಲಿನ ವಿಶೇಷತೆಯಾಗಿದೆ. ಈ ದೇವಾಲಯ ನಿರ್ಮಾಣದಲ್ಲಿ ಕುಶಲಕರ್ಮಿಗಳು ಮತ್ತು ಶಿಲ್ಪಿಗಳ ಜೊತೆಯಲ್ಲಿ ಸುಮಾರು ಅರ್ಧ ಡಜನ್ ಸಂಖ್ಯೆ ತಮಿಳುನಾಡಿನ ವಿಶೇಷ ತಜ್ಞರೂ ಇದರ ನಿರ್ಮಾಣದಲ್ಲಿ ಶ್ರಮಿಸಿದ್ದಾರೆ.
ಈ ಪ್ರದೇಶವು ಮುಳುಗಡೆಯಾದಾಗ ದೇವಾಲಯದ ಶ್ರೀ ವೇಣುಗೋಪಾಲ ಸ್ವಾಮಿಯ ಮುಖ್ಯ ವಿಗ್ರಹವನ್ನು ಹೊಸ ಕನ್ನಂಬಾಡಿ ಗ್ರಾಮದ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು. ಈ ದೇವಾಲಯವು ಎರಡು ಪ್ರಕಾರಗಳಿಂದ ಸುತ್ತುವರೆದಿದ್ದು, ಎರಡೂ ಭಾಗಗಳ ಮಹಾದ್ವಾರದಲ್ಲಿ ದೊಡ್ಡದಾದ ವೆರಾಂಡವಿದೆ ಹಾಗೂ ಯಾಗಶಾಲೆ ಮತ್ತು ಅಡುಗೆ ಮನೆಗಳಿಂದ ಸುತ್ತುವರೆದಿದೆ. ದೇವಾಲಯವು ಗರ್ಭಗೃಹ, ಮಧ್ಯದ ಹಾಲ್ ಮತ್ತು ಮುಖ್ಯ ಮಂಟಪವನ್ನು ಹೊಂದಿದೆ. ಕೋಣೆಯ ವಿರುದ್ಧ ದಿಕ್ಕಿನಲ್ಲಿ ಅಂದರೆ ದಕ್ಷಿಣದಲ್ಲಿ ಕೇಶವನ ವಿಗ್ರಹವಿದ್ದು ಇನ್ನೊಂದೆಡೆ ಗೋಪಾಲಕೃಷ್ಣನ ವಿಗ್ರಹವಿದೆ.
ಮೂಲ ದೇವಾಲಯದಲ್ಲಿ ಸುಮಾರು 46 ಗೋಪುರಗಳಿದ್ದು, ಇದರಲ್ಲಿ 17 ದಕ್ಷಿಣಾಭಿಮುಖವಾಗಿ, 12 ಪಶ್ಚಿಮಾಭಿಮುಖವಾಗಿ ಹಾಗೂ 17 ಉತ್ತರಾಭಿಮುಖವಾಗಿವೆ. ವಿಷ್ಣುವಿನ ಹತ್ತು ಅವತಾರಗಳ ಸುಮಾರು 24 ಮೂರ್ತಿಗಳನ್ನು ಮತ್ತು ಬ್ರಹ್ಮ, ಸರಸ್ವತಿ, ಹಯಗ್ರೀವ ಮತ್ತು ಹರಿಹರ ಮೂರ್ತಿಗಳನ್ನು ಈ ಗೋಪುರಗಳಲ್ಲಿ ಕಾಣಬಹುದಾಗಿದೆ. ಮೂಲ ದೇವಾಲಯದ ಕೆತ್ತನೆಯಲ್ಲಿ ಹೊನ್ನೆ ಮರದ ಕೆಳಗೆ ದನಗಾಹಿಗಳು ಮತ್ತು ಗೋಪಿಕೆಯರ ಜೊತೆ ನಿಂತಿರುವ ಗೋಪಾಲಕೃಷ್ಣನನ್ನು ಕಾಣಬಹುದಾಗಿದೆ. ಕನ್ನಂಬಾಡಿ ಕಟ್ಟೆಯ ಗರಿಷ್ಟ ಎತ್ತರ ಸುಮಾರು 12೪.80 ಅಡಿ ಆಗಿದ್ದು, ಜಲಾಶಯ ನೀರನಿಂದ ಭರ್ತಿಗೊಂಡಾಗ ಇದರ ಹಿನ್ನೀರು ಈಗಿನ ದೇವಾಲದ ತಟದ ವರೆಗೂ ತಲುಪುತ್ತದೆ. ಇಲ್ಲಿನ ಶಿಲ್ಪಕಲೆಯು ದ್ರಾವಿಡ ಮತ್ತು ಚಾಲುಕ್ಯ ಶೈಲಿಯನ್ನು ಹೋಲುತ್ತದೆ ಎಂದೂ ಹೇಳಬಹುದು.
ಈ ದೇವಾಲಯದ ಜೀಣೋದ್ಧಾರ ಹಾಗೂ ಇದರ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದರೂ ಇಲ್ಲಿಗೆ ಪ್ರವಾಸಿಗರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದೇವಾಲಯದಲ್ಲಿ ಇನ್ನೂ ವಿಗ್ರಹದ ಪ್ರತಿಷ್ಠಾಪನೆ ಆಗದೇ ಇದ್ದರೂ ಪ್ರವಾಸಿಗರ ಭೇಟಿಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸ್ಥಳಿಯರ ಅಂದಾಜಿನಂತೆ ಇಲ್ಲಿ ಪ್ರತಿನಿತ್ಯ ಸರಾಸರಿ 500 ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ದೇವಾಲಯದ ಆವರಣದಲ್ಲಿ ನಿಂತು ಸೂರ್ಯಾಸ್ಥವನ್ನು ನೋಡುವುದೇ ಬಲು ಅಂದ. ಈ ದೇವಾಲಯದ ಸುತ್ತಮುತ್ತ ಜಲಾವೃತಗೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಲ್ಲಿನ ಆಸನಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಕನ್ನಂಬಾಡಿ ಕಟ್ಟೆಯ ದಾರಿಯಲ್ಲೇ ಸುಮಾರು 8 ಕಿ.ಮೀ ದೂರ ಸಾಗಿದಾಗ ಕಾಣಸಿಗುತ್ತದೆ.
ಈ ದೇವಾಲಯವು ಬೃಂದಾವನ ಉದ್ಯಾನವನದಿಂದ ಸುಮಾರು 9 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಜಲಾಶಯದ ಹಿನ್ನೀರಿಲ್ಲಿ ಮುಳುಗಡೆ ಮತ್ತು ಅಲ್ಲಿಂದ ಬೇರೆಡೆ ಸ್ಥಳಾಂತರಗೊಂಡು ಕಥೆಯಿಂದಾಗಿ ಈಗಾಗಲೇ ಪ್ರವಾಸಿಗರ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿಯೂ ಮಾರ್ಪಾಡಾಗಿದೆ. ಒಂದು ಪ್ರವಾಸೀ ತಾಣಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸೌಂದರ್ಯ ಮತ್ತು ಆಯಾಮಗಳೂ ಈ ದೇವಾಲಯಕ್ಕಿದ್ದು ಸರಕಾರವು ಮೀನಮೇಷ ಎಣಿಸದೇ ಪ್ರಮುಖ ಪ್ರವಾಸೀ ತಾಣವಾಗಿ ಘೋಷಿಸಿದಲ್ಲಿ ಕರ್ನಾಟಕ ಪ್ರವಾಸೋಧ್ಯಮಕ್ಕೊಂದು ಮುಕುಟಪ್ರಾಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಪ್ರದೇಶವನ್ನು ಮೈಸೂರಿನ ಪ್ರಮುಖ ಪ್ರವಾಸಿ ತಾಣವಾಗಿ ಘೋಷಿಸಿ ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿಕೊಡುವುದೂ ಅತೀ ಅಗತ್ಯವಾಗಿದೆ.
ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು
ದೂ: 9742884160
ಚಿತ್ರಗಳು: harikhoday.com ಹಾಗು ಲೇಖಕರು