ಕುಂಭ ಮೇಳದಲ್ಲಿ ಒಂದು ಸುತ್ತು

ಕುಂಭ ಮೇಳದಲ್ಲಿ ಒಂದು ಸುತ್ತು

“ಕುಂಭಮೇಳ” ಈ ಪದ ನಮ್ಮ ಭಾರತದಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವದಾದ್ಯಂತ ಮನೆಮಾಡಿದೆ. ಹಾಗಾದರೆ ಏನಿದು ಕುಂಭಮೇಳ.‌ ಒಂದಷ್ಟು ವಿಚಾರಗಳನ್ನು ಓದಿ ಕೇಳಿ ತಿಳಿಯುತ್ತಿದ್ದೇವಾದರೂ ಈ ಮೇಳದ ಕುರಿತು ಒಂದಷ್ಟು ಮಾಹಿತಿಗಳು ಸರಳವಾಗಿ ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.

ಭರತ ವರ್ಷವೆಂಬ ನಮ್ಮ ಭಾರತ ದೇಶದ ನಾಲ್ಕು ಸ್ಥಳಗಳಲ್ಲಿ ಪ್ರಮುಖವಾಗಿ ಆಯೋಜಿಸುವ ಈ ಬೃಹತ್ತಾದ ಮೇಳದ ಬಗ್ಗೆ ಓದಿದ್ದೆವಾದರೂ, ಹಲವಾರು ಪ್ರಶ್ನೆಗಳು ಕಾಡುತ್ತಿದ್ದವು.

ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ 2025ರ ಮಹಾ ಕುಂಭಮೇಳ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಮೇಳ ಎಂದೇ ಹೆಸರಾಯಿತು.

ಸ್ವತಃ ನನಗೂ ಈ ಮೇಳದಲ್ಲಿ ಎರಡು ದಿನಗಳು ಭಾಗವಹಿಸುವ ಸೌಭಾಗ್ಯ ದೊರೆತದ್ದು ಸುಕೃತ.
ನನಗಾದ ಅನುಭವಗಳನ್ನು, ನಾ ಕಂಡು ಅನುಭವಿಸಿದ ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.

ಕುಂಭಮೇಳವನ್ನು ಆಯೋಜಿಸುವ ಮುಖ್ಯ ಉದ್ದೇಶವೇ ಸತ್ಸಂಗ ಮತ್ತು ಸದ್ವಿಚಾರಗಳ ವಿನಿಮಯಕ್ಕಾಗಿ. ಇದು ಹಬ್ಬಗಳ ಪರಿಕಲ್ಪನೆಯನ್ನು ಮೀರಿದ್ದು.

ಮುಖ್ಯವಾಗಿ ಇದು ಆತ್ಮಸಾಕ್ಷಾತ್ಕಾರ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನದ ಮಹತ್ವವನ್ನು ತಿಳಿಸಿಕೊಡುವ, ತನ್ಮೂಲಕ ವ್ಯಕ್ತಿಯಲ್ಲಿ ಚಿಂತನೆಯನ್ನು ರೂಪಿಸುವ ಆಧ್ಯಾತ್ಮಿಕ ಕಾರ್ಯಕ್ರಮ ಎಂದರೆ ತಪ್ಪಾಗಲಾರದು.

ಕುಂಭಮೇಳಕ್ಕೆ ಬರುವ ಯಾತ್ರಿಕರು ಆತ್ಮಜ್ಞಾನವನ್ನು ಪಡೆದ ಆಧ್ಯಾತ್ಮಿಕ ನಾಯಕರ ಮಾರ್ಗದರ್ಶನವನ್ನು ಪಡೆದರೆ ಆತ್ಮೋನ್ನತಿಗೆ ಸಹಕಾರಿಯಾಗುತ್ತದೆ ಎಂಬ ಉದ್ದೇಶವೂ ಇದರಲ್ಲಿ ಇರುತ್ತದೆ. ಮನುಷ್ಯ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಹೋದರೂ ಎರಡು ಮುಖ್ಯ ಉದ್ದೇಶಗಳು ಯಾತ್ರಿಕರ ಗುಂಪನ್ನು ಕುಂಭಮೇಳಕ್ಕೆ ಕರೆದೊಯ್ಯುತ್ತವೆ. ಸಾಧುಗಳ (ಪವಿತ್ರ ಪುರುಷರು) ಬೋಧನೆಗಳನ್ನು ಕೇಳುವುದು ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪವಿತ್ರ ಆಚರಣೆಯಲ್ಲಿ ಭಾಗವಹಿಸುವುದು.
ತನ್ಮೂಲಕ ಸತ್ ಚಿಂತನೆಯೆಡೆಗೆ ಸಾಗುವುದು…. .

ಕುಂಭಮೇಳವು ಶತ ಶತಮಾನಗಳಿಂದ ಆಚರಿಸಿಕೊಂಡು ಬಂದು, ಕಾಲಾಂತರದಲ್ಲಿ ವಿಕಸನಗೊಂಡು, ಆಧ್ಯಾತ್ಮಿಕ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿ ಮಾರ್ಪಟ್ಟಿದೆ.
ಪ್ರತಿ ಕುಂಭಮೇಳವು ಸಂತರು, ತಪಸ್ವಿಗಳು, ಸನ್ಯಾಸಿಗಳು ಮತ್ತು ಯಾತ್ರಿಕರ ಸಭೆಗೆ ಸಾಕ್ಷಿಯಾಗುವ ಒಂದು ಧಾರ್ಮಿಕ ಮೇಳ. ಇಲ್ಲಿ ಎಲ್ಲರೂ ಆಧ್ಯಾತ್ಮಿಕ ಜ್ಞಾನೋದಯದ ಅನ್ವೇಷಣೆಯಲ್ಲಿ ಒಂದಾಗಬೇಕು ಎನ್ನುವುದು ಉದ್ದೇಶ. ಹಾಗಾಗಿಯೇ ಈ ಕಾರ್ಯಕ್ರಮವು ಧಾರ್ಮಿಕ ಪ್ರವಚನಗಳು, ಭಕ್ತಿಗೀತೆಗಳು ಮತ್ತು ವಿವಿಧ ಅಖಾಡಗಳ ಸಾಧುಸಂತರಿಂದ ಪ್ರಭಾವಿಸಲ್ಪಟ್ಟಿದೆ.

ವರ್ತಮಾನದಲ್ಲಿಯೂ ಕೂಡಾ ಕುಂಭಮೇಳವು ನಂಬಿಕೆ ಮತ್ತು ಭಕ್ತಿಯ ನಿರಂತರ ಶಕ್ತಿಗೆ ಸಾಕ್ಷಿಯಾಗಿ ಗುರುತಿಸಲ್ಪಟ್ಟಿದೆ.
ಇದು ಜೀವನ, ಆಧ್ಯಾತ್ಮಿಕತೆ ಮತ್ತು ಅಮರತ್ವದ ಶಾಶ್ವತ ಅನ್ವೇಷಣೆಯ ಆಚರಣೆ ಎಂಬುದಂತೂ ಸತ್ಯ….

ಮುಂದುವರೆಯುವುದು…..

ಸುನೀಲ್ ಹಳೆಯೂರು

Related post